ತಾಯಿ ಸ್ಥಾನದಲ್ಲಿರುವ ಗುರುಗಳೆಂದರೆ ಶ್ರೀ ರಾಘವೇಂದ್ರಸ್ವಾಮಿಗಳು. ಮಮತೆ, ಕರುಣೆ, ವಾತ್ಸಲ್ಯ ತೋರುವುದರಲ್ಲಿ ತಾಯಿಗಿಂತಲೂ ಒಂದು ಹೆಜ್ಜೆ ಮುಂದು ಶ್ರೀ ರಾಘವೇಂದ್ರಸ್ವಾಮಿಗಳು.
ಭಯ ಕಳೆದು ಅಭಯ ನೀಡುವುದರಲ್ಲಿ, ಅಜ್ಞಾನ ಕಳೆದು ಜ್ಞಾನ ನೀಡುವುದರಲ್ಲಿ, ಕಷ್ಟಗಳ ತರಿದು ನೆಮ್ಮದಿ ನೀಡುವಲ್ಲಿ ಸ್ಮರಿಸಿದ ಸಜ್ಜನರ ಸದಾ ರಕ್ಷಿಸುವವರು ಶ್ರೀ ರಾಘವೇಂದ್ರಸ್ವಾಮಿಗಳು.
"ರಾಘವೇಂದ್ರಾ" ಎಂದರೆ ಸಾಕು ಕರೆದಲ್ಲಿಗೆ ಬರುವರು, ಬಂದು ಬಳಿಯಲ್ಲಿ ನಿಲ್ಲುವರು, ನಿಂತು ಮನದ ಕಷ್ಟ, ನಷ್ಟ, ನೋವು, ಚಿಂತಾಸಂತಾಪ ಗಳೆಲ್ಲವನ್ನು ಕಳೆಯುವರು. ಮನದಭೀಷ್ಟೆಯನ್ನು ಪೂರೈಸುವ ಕರುಣಾಸಮುದ್ರರಾದ, ವೈಷ್ಣವಕುಲತಿಲಕರಾದ ನಮ್ಮ ಶ್ರೀರಾಘವೇಂದ್ರಸ್ವಾಮಿಗಳು.
ಹಾಲುಗಲ್ಲದ ಹಸುಕಂದನ ಮೊದಲ ತೊದಲ್ನುಡಿಯ ಮುದ್ದು ಮಂತ್ರವೇ “ಪೂಜ್ಯಾಯ ರಾಘವೇಂದ್ರಾಯ” ಪುಟ್ಟಹಸುಳೆಗೂ ಮಾತೃಹೃದಯದ ಗುರುರಾಘವೇಂದ್ರರು ಬೇಕು.
“ಹರಿ ಮುನಿದರೆ ಗುರು ತಾನು ಒಲಿವ, ಗುರು ಮುನಿದರೆ ಹರಿ ತಾನೆಂದೆಂದೂ ಒಲಿಯನು” ಎಂದು ದಾಸರು ಹೇಳುವ ಹಾಗೆ ಭಗವಂತ ನಮ್ಮೊಡನೆ ಮುನಿಸಿಕೊಂಡಾಗ ಗುರುಗಳು ಶಿಷ್ಯವಾತ್ಸಲ್ಯದಿಂದ ನಮ್ಮ ಮೇಲೆ ಪ್ರೀತಿಯನ್ನು ತೋರುತ್ತಾರೆ. ಭಗವಂತ ಕೈಬಿಟ್ಟರೂ ಗುರುಗಳು ಕೈಬಿಡುವುದಿಲ್ಲ. ಆದರೆ ಅಪ್ಪಿತಪ್ಪೀ ಗುರುಗಳೇನಾದರೂ ನಮ್ಮಿಂದ ನೊಂದುಕೊಂರೆ, ಕೋಪಗೊಂಡರೆ ಆ ಭಗವಂತ ಎಂದೆಂದಿಗೂ ನಮ್ಮ ತಪ್ಪನ್ನು ಮನ್ನಿಸುವುದಿಲ್ಲ. ಈ ಜಗತ್ತಿನಲ್ಲಿ ನಮ್ಮನ್ನು ಜನರು ಎಷ್ಟೇ ನಿಷ್ಕೃಷ್ಟವಾಗಿ ನೋಡಿದರೂ, ಎಷ್ಟೇ ಕೀಳರಿಮೆಯಿಂದ ಕಂಡರೂ, ನಾವೆಷ್ಟೇ ಕೆಳಮಟ್ಟದಲ್ಲಿದ್ದರೂ, ಹೀನಾಯ ಸ್ಥಿತಿಯಲ್ಲಿದ್ದರೂ, ಯಾರಿಗೂ ನಾವು ಬೇಡವಾಗಿದ್ದರೂ, ತಾಯಿ ತನ್ನ ಕಂದನನ್ನು ಬಿಗಿದಪ್ಪಿ ಸಲಹುವಂತೆ, ಗುರುಗಳು ನಮ್ಮ ಕೈಹಿಡಿದು ನಡೆಸುತ್ತಾರೆ. ಗುರುಗಳು ಯಾವತ್ತೂ ನಮ್ಮನ್ನು ಕೈಬಿಡುವುದೇ ಇಲ್ಲ. ಭರವಸೆಯ ಬೆಳಕಾಗಿ ನಮ್ಮೊಂದಿಗಿರುತ್ತಾರೆ. “ಗುರುಗಳಿಂತಧಿಕ ಇನ್ನಾರು ಆಪ್ತರು ನಮಗೆ, ಗುರುಗಳೆ ಪರಮ ಹಿತಕರು ನೋಡೋ” ಎನ್ನುವ ಹಾಗಿರುವ, ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಸಲಹುವ ಪರಮ ಗುರುಗಳು ಮಂತ್ರಾಲಯದ ಮಹಾ ಪ್ರಭುಗಳು.
ಅಂತಹ ರಾಯರನ್ನು ನೆನೆಯುವ ಮನವೇ ವೃಂದಾವನ. ರಾಯರನ್ನು ಸ್ಮರಿಸುವ ಸ್ಥಳವೇ ಮತ್ರಾಲಯ.
ಇಂದು ಕೋಟಿ ಕೋಟಿ ಭಕುತರ ಹೃದಯದಲ್ಲಿ ಭದ್ರವಾಗಿ ನೆಲೆಯೂರಿರುವ, ನೆನೆದಲ್ಲಿ ಬರುವ ಸಾಂಶರಾದ ರಾಘವೇಂದ್ರ ಸ್ವಾಮಿಗಳವರ ಆರಾಧನೆಯು, ದೇಶದ ಮೂಲೆ ಮೂಲೆಯಲ್ಲೂ, ದೇಶವಿದೇಶಗಳಲ್ಲೂ, ಜಾತಿಮತಬೇಧವಿಲ್ಲದೇ, ಅಬಾಲವೃದ್ಧರಾದಿಯಾಗಿ ಎಲ್ಲರೂ ಭಕ್ತಿಪರಾಕಾಷ್ಠತೆಯಿಂದ ಪಾಲ್ಗೊಂಡು ಸಂಭ್ರಮಿಸುವ ಆರಾಧನೆಯಾಗಿದೆ.
ಬ್ರಾಹ್ಮಣೇತರರು ಕೂಡಾ ರಾಯರ ಆರಾಧನೆಯನ್ನು ರಾಯರ ಫೋಟೋ ಮಾತ್ರವಿರಿಸಿಕೊಂಡೇ ರಾಯರ ಹೆಸರಿನಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನದಾನ ನಡೆಸಿ, ರಾಯರನ್ನು ಭಜಿಸಿ, ಯೋಗ್ಯತಾನುಸಾರ ಆರಾಧನೆ ಮಾಡುತ್ತಾರೆ. ದ್ವೇಷ, ಅಸೂಯೆ, ಜಗಳ, ರಂಪಾಟ, ಗಲಾಟೆಗಳಿಲ್ಲದೆ, ಅತ್ಯಂತ ಒಗ್ಗಟ್ಟಿನಿಂದ, ಭಕ್ತಿಯಿಂದ, ಏಕೋಭಾವದಿಂದ ಮನೆಮನದಲ್ಲೂ ನಡೆಯುವ ಆರಾಧನೆಯೆಂದರೆ ಜಗತ್ಪ್ರಸಿದ್ಧರಾದ, ವೈಷ್ಣವಯತಿವರೆಣ್ಯರಾದ ಶ್ರೀರಾಘವೇಂದ್ರಸ್ವಾಮಿಗಳ ಆರಾಧನೆಯೇ.
ಭುವನಗಿರಿಯಲ್ಲಿ ಭುವಿಗಿಳಿದ ವರಚಿಂತಾಮಣಿ
ವೈಕುಂಠದಲ್ಲಿ ಶಂಖುಕರ್ಣನೆಂಬ ಕರ್ಮಜ ದೇವತೆಯಾಗಿ, ಬ್ರಹ್ಮದೇವರ ಆಜ್ಞೆಯಂತೆ ಪ್ರಲ್ದಾದ ರಾಜರಾಗಿ, ದ್ವಾಪರದಲ್ಲಿ ಬಾಲ್ಹೀಕ ರಾಜರಾಗಿ, ಕಲಿಯುಗದಲ್ಲಿ ವ್ಯಾಸರಾಜರಾಗಿ, ಹಾಗೂ ರಾಘವೇಂದ್ರ ಸ್ವಾಮಿಗಳಾಗಿ ಅವತರಿಸಿದರು.
ತಿಮ್ಮಣ್ಣಭಟ್ಟ ಮತ್ತು ಗೋಪಿಕಾಂಬಾ ಎನ್ನುವ ಪರಮಸಾತ್ವಿಕ ದಂಪತಿಗಳು ಸಪ್ತಗಿರಿವಾಸನಿಗೆ ಮಾಡಿದ ಸೇವೆಯ ಫಲವಾಗಿ, ಲೋಕೋದ್ಧಾರ ಮಾಡಲು, ಭಗವತ್ಸಂಕಲ್ಪದಂತೆ, ತಮಿಳುನಾಡಿನ ಭುವನಗಿರಿಯಲ್ಲಿ, ಭುವನವನ್ನು ಪಾವನ ಮಾಡುವ ವರಚಿಂತಾಮಣಿಯೊಂದು ಜನಿಸಿತು. ವೆಂಕಟೇಶನ ವರಪ್ರಸಾದವಾದ್ದರಿಂದ ವೆಂಕಟನಾಥನೆಂಬ ನಾಮಕರಣವಾಯಿತು. ನಂತರದಲ್ಲಿ ಉಪನಯನ, ಅಧ್ಯಯನ, ಮುಂದೆ ಸರಸ್ವತಿಯೆಂಬ ಕನ್ಯೆಯೊಂದಿಗೆ ವಿವಾಹವೂ ನಡೆಯಿತು.
ಎಲ್ಲರಿಗೂ ಹದಿನೈದು ದಿನಕ್ಕೆ ಒಂದು ಏಕಾದಶಿ ಆದರೆ, ವೆಂಕಟನಾಥರಿಗೆ ವಾರವೆಲ್ಲ ಏಕಾದಶಿಯೇ ಇರುತ್ತಿತ್ತಂತೆ, ರಾಯರ ಪೂರ್ವಾಶ್ರಮದ ಸೋದರಳಿಯನವರು ರಚಿಸಿದ "ರಾಘವೇಂದ್ರ ವಿಜಯದಲ್ಲಿ" ರಾಯರು ಪಟ್ಟ ಪಾಡು ತಿಳಿಯುತ್ತದೆ. ವಾರಕ್ಕೊಮ್ಮೆ ಅರ್ಧ ಒಪ್ಪತ್ತು ಊಟ ಸಿಕ್ಕರೇ ಅದೇ ದೊಡ್ಡದಂತೆ. ಅಂತಹ ಬಟ್ಟಬಡತನದನದಲ್ಲಿ, ಕಡು ದಾರಿದ್ರ್ಯ ದಲ್ಲಿ ಗೃಹಸ್ಥಾಶ್ರಮದ ಗಂಧತೇಯುತ್ತಲೇ ಸದಾ ಭಗವಂತನ ಚಿಂತನೆ, ಅಧ್ಯಯನದಲ್ಲಿ ತೊಡಗಿರುತ್ತಿದ್ದ ವೆಂಕಟನಾಥರು, ಆಚಾರ್ಯರ ಶಾಸ್ತ್ರಗಳನ್ನು ಅಸ್ತಿಗತ ಮಾಡಿಕೊಂಡಿದ್ದ ಅವರು ಚಿಕ್ಕ ವಯಸ್ಸಿನಲ್ಲೇ "ಮಹಾಭಾಷ್ಯ ವೆಂಕಟನಾಥ" ಎಂಬ ಬಿರುದನ್ನೂ ಪಡೆದಿದ್ದರು. ಮಧ್ವಸಿದ್ಧಾಂತವನ್ನು ಜೀವನದಲ್ಲಿ ಯಾವರೀತಿ ಅನುಷ್ಠಾನ ಮಾಡಿಕೊಳ್ಳಬೇಕು? ಎಷ್ಟು ರೀತಿ ಅಳವಡಿಸಿಕೊಂಡು ನಡೆಯಬೇಕು? ಎನ್ನುವದನ್ನು ರಾಯರ ಜೀವನ ನೋಡಿ ತಿಳಿಯಬೇಕು. ಭೌತಿಕವಾಗಿ ಬಡವರಾಗಿದ್ದ ವೆಂಕಟನಾಥರು ಜ್ಞಾನದಲ್ಲಿ ಅತ್ಯಂತ ಶ್ರೀಮಂತರಾಗಿದ್ದರು.
ರಾಯರ ಮನಸ್ಸು ಎಷ್ಟು ಸರಳವಾಗಿತ್ತೆಂದರೆ ಊಟ, ತಿಂಡಿ ಹೊಟ್ಟೆತುಂಬ ಸಿಕ್ಕರೆ ಅಲ್ಲಿ ಊಟಕ್ಕೇ ವ್ಯರ್ಥಸಮಯ ಹೋಗುತ್ತಿತ್ತಲ್ಲ ಅಂತ ಅಂದುಕೊಳ್ಳುತ್ತಿದ್ದರಂತೆ, ಒಂದು ಬಾರಿ, ಮನೆಯಲ್ಲಿರುವ ಒಂದೇ ಒಂದು ಒಡಕು ತಂಬಿಗೆಯನ್ನೂ ಕದ್ದ ಕಳ್ಳನನ್ನು ನೆನೆಸಿಕೊಂಡು, ಪಾಪ ಕಳ್ಳನಿಗೆ ಅನ್ಯಾಯವಾಯಿತಲ್ಲ, ಅವನಿಗೆ ಏನೂ ಸಿಗಲಿಲ್ಲ ಎಂದು ಮರುಕಪಟ್ಟ ಅವರ ಮನಸ್ಸು ಅದೆಷ್ಟು ಮೃದು ಇರಬಹುದು. ಕಾರುಣ್ಯ ಅವರ ಹುಟ್ಟುಗುಣ.
ರಾಯರ ಮಂತ್ರದ ಮಂತ್ರಸಿದ್ಧಿಯ ಮಹಿಮೆ
ಒಮ್ಮೆ, ವೆಂಕಟನಾಥರು ಕಾವೇರಿನದಿತೀರದಲ್ಲಿದ್ದ ಸುಧೀಂದ್ರತೀರ್ಥರಲ್ಲಿಗೆ ಹೋಗುವ ಹಾದಿಯಲ್ಲಿ ತಿರುಕಾಟ್ಟಪಳ್ಳಿ ಎಂಬ ಊರಿನಲ್ಲಿ ಉಳಿಯಬೇಕಾಯಿತು. ದೊಡ್ಡವಿದ್ವಾಂಸರಾಗಿದ್ದ ಇವರಿಗೆ ಅಂದು ಭೋಜನಕ್ಕೆ ಬಂದ ಭಕ್ತಾದಿಗಳಿಗೆಲ್ಲ ಗಂಧತೇಯುವ ಕೆಲಸ ಹತ್ತಿತು. ಸ್ವಲ್ಪವೂ ಅಹಮಿಕೆ ಇರದ
ವೆಂಕಟನಾಥರು ಭಗವಂತನ ಸೇವೆಯೆಂದು ಗಂಧತೇಯ್ದರು. ಆ ಗಂಧವನ್ನು ಹಚ್ಚಿಕೊಂಡವರ ಮೈಯ್ಯೆಲ್ಲ ಬೆಂಕಿಯಂತೆ ಉರಿಯಲು ಶುರುವಾಗಿ, ಎಲ್ಲರೂ ಗಾಬರಿಯಾದಾಗ ಅಲ್ಲಿನ ದೊಡ್ಡವರು ಬಂದು ವೆಂಕಟನಾಥರನ್ನು ವಿಚಾರಿಸಿದರಂತೆ. ಅವರು ಅಗ್ನಿಸೂಕ್ತವನ್ನು ಹೇಳಿಕೊಂಡು ಗಂಧ ತೇಯ್ದಿದ್ದರು.ಚಿಂತಿಸಬೇಡಿ ಈಗಲೇ ವರುಣಸೂಕ್ತವನ್ನು ಪಠಿಸುತ್ತೇನೆ ಎಂದರು,
ಅವರು ವರುಣಸೂಕ್ತವನ್ನು ಪಠಿಸಿದಾಕ್ಷಣ ಎಲ್ಲರ ಉರಿಯೂ ನಿಂತು ದೇಹ ತಂಪಾಯಿತು. ಮಂತ್ರಗಳನ್ನು ಹೇಳುವ ರೀತಿಯಲ್ಲಿ ಹೇಳಿದಾಗ ಆಗುವ ಸಿದ್ಧಿಯನ್ನು ತೋರಿಸಲು ಇದು ಭಗವಂತ ಮಾಡಿದ ವಿಡಂಬನೆ ಅನಿಸುತ್ತದೆ.
ವೇದಾಂತಸಾಮ್ರಾಜ್ಯ ಬೆಳಗಿದ ಪರಿಮಳದ ಸನ್ಯಾಸ ಪುಷ್ಪ
ಪಾಠಕ್ಕಾಗಿ ಸುಧೀಂದ್ರತೀರ್ಥರಲ್ಲಿಗೆ ಬಂದಿದ್ದರೇ ಹೊರತಾಗಿ ಊಟಕ್ಕಾಗಿ ಬಂದಿರಲಿಲ್ಲ. ವೇದ, ಸಚ್ಛಾಸ್ತ್ರ, ಅಧ್ಯಯನ, ಪಾಠ ಮುಗಿದು, ತೀರ್ಥ ತೆಗೆದುಕೊಂಡು ಮಠದಲ್ಲಿ ಊಟಕ್ಕೆಂದು ಕೂಡದೇ ಯಾರಿಗೂ ತಿಳಿಯದೇ ಮನೆಗೆ ಹೊರಟುಬಿಡುತ್ತಿದ್ದರು. ಕಾರಣವಿಷ್ಟೇ, ಮನೆಯಲ್ಲಿ ಹೆಂಡತಿ ಮಗು ಉಪವಾಸವಿರುವಾಗ ತಾವು ಊಟಮಾಡಬಾರದೆಂಬ ಕಾರಣದಿಂದ.
ವೈರಾಗ್ಯದ ಖನಿಗಳಂತಿದ್ದ ವೆಂಕಟನಾಥರ ವಿದ್ಯೆ, ವಿನಯ, ಪಾಂಡಿತ್ಯಕ್ಕೆ ಸುಧೀಂದ್ರತೀರ್ಥರು ಅತ್ಯಂತ ಸಂತೋಷಭರಿತರಾಗಿದ್ದರು. ಮುಂದೆ ಆಶ್ರಮ ಸ್ವೀಕರಿಸಬೇಕಾದವರು ವೆಂಕಟನಾಥರೇ ಎಂದು ಶ್ರೀಗಳಿಗೆ ಸ್ವಪ್ನವಾಗುತ್ತದೆ. ಭಗವಂತನ ಸೂಚನೆಯಂತೆ, ಸುಧೀಂದ್ರತೀರ್ಥರು ವೆಂಕಟನಾಥರಲ್ಲಿ ಆಶ್ರಮದ ಬಗ್ಗೆ ಅರುಹುತ್ತಾರೆ, ಆಗ ವೆಂಕಟನಾಥರು, ನನ್ನನ್ನೇ ನಂಬಿಕೊಂಡ ಹೆಂಡತಿ, ಇನ್ನೂ ಉಪನಯನವಾಗದ ಪುತ್ರನಿದ್ದಾನೆ ಎಂದು ತಮ್ಮ ಗೃಹಸ್ಥ ಜೀವನದ ಜವಾಬ್ದಾರಿಯನ್ನು ಹೇಳುತ್ತಾರೆ. ಹೀಗೆ ಹೇಳಿ ಹೊರಟ ವೆಂಕಟನಾಥರು ಗೃಹಸ್ಥಾಶ್ರಮದ ಜವಾಬ್ದಾರಿಯಾ? ಗುರುಗಳ ಮಾತಿನಂತೆ ಸನ್ಯಾಸಾಶ್ರಮವಾ? ನಾನು ಪೀಠಕ್ಕೆ ಯೋಗ್ಯನಾ? ನಮಗೆ ತತ್ವಜ್ಞಾನದ ಪಾಠ ಮಾತ್ರಸಾಕು, ಪೀಠ ಬೇಡವೆಂದುಕೊಳ್ಳುತ್ತಾ, ಇಡೀ ರಾತ್ರಿ ಚಿಂತಿತರಾಗುತ್ತಾರೆ. ಅವರ ಚಿಂತೆ ಕಳೆಯಲು ನಸುಕಿನ ಜಾವದಲ್ಲಿ ಸಾಕ್ಷಾತ್ತಾಗಿ ಬ್ರಹ್ಮನರಾಣಿ ಸರಸ್ವತಿಯೇ ದರುಶನಕೊಟ್ಟು, ನೀನು ಲೋಕೋದ್ಧಾರಕ್ಕಾಗಿ ಸನ್ಯಾಸತೆಗೆದುಕೊಳ್ಳಬೇಕು, ನಿನ್ನಿಂದ ಅನೇಕಗ್ರಂಥಗಳ ರಚನೆಯಾಗಬೇಕು, ವಾದಿನಿಗ್ರಹವಾಗಬೇಕು. ತತ್ವಜ್ಞಾನ ಪ್ರಸಾರವಾಗಬೇಕು, ಅದಕ್ಕಾಗಿ ನಾನೂ ಕಾಯುತ್ತಿದ್ದೇನೆ. ನಿನ್ನಿಂದ ಮನುಕುಲದ ಉದ್ಧಾರವಾಗಬೇಕು, ಈ ಕಾರಣಕ್ಕಾಗಿಯೇ ಮತ್ತೆ ನಿನ್ನ ಜನನವಾದದ್ದು. ಈ ಅವತಾರದ ಕೆಲಸ ಪ್ರಾರಂಭವಾಗಬೇಕು ಇದೇ ಭಗವತ್ಸಂಕಲ್ಪ ಎಂದು ಹೇಳಿ ಅದೃಶ್ಯಳಾದಳಾಗುತ್ತಾಳೆ.
ತಾಯಿ ಸರಸ್ವತಿಯ ದರುಶನದಿಂದ ವೆಂಕಟನಾಥರ ಮನಸ್ಸು ಧೃಡವಾಯಿತು. ತಮ್ಮ ಜವಾಬ್ದಾರಿ ಯಾದ ಮಗನ ಉಪನಯನ ಮುಗಿಸಿ, ಮುಂದೆ ಭಗವತ್ಸಂಕಲ್ಪದಂತೆ ಸುಧೀಂದ್ರತೀರ್ಥರಿಂದ ಸನ್ಯಾಸ ಸ್ವೀಕಾರ, ಪಡೆದ ವೆಂಕಟನಾಥರು ಶ್ರೀರಾಘವೇಂದ್ರತೀರ್ಥರಾದರು.
ರಾಘವೇಂದ್ರತೀರ್ಥರು ಎಂಬ ಅನ್ವರ್ಥನಾಮ:
ಇದು ಭಗವಂತನಾದ ಶ್ರೀರಾಮನ ಹೆಸರು. "ರಾಘ" ಎಂದರೆ ಸರ್ವಸಮರ್ಥನಾದವ ಏಕೈಕ ವ್ಯಕ್ತಿ, ಶಕ್ತಿ, ಭಗವಂತ. "ವ" ಎನ್ನುವ ಶಬ್ದವು ಜ್ಞಾನವುಳ್ಳ ಲಕ್ಷ್ಮೀಯಿಂದ ಆರಂಭವಾಗಿ ಎಲ್ಲ ದೇವತೆಗಳ ಜೀವರಾಶಿಗಳಾಗಿವೆ. "ಇಂದ್ರ" ಎಂದರೆ ಒಡೆಯ. "ತೀರ್ಥ" ಎಂದರೆ ಶಾಸ್ತ್ರವೆಂಬ ಅರ್ಥವೂ ಇದೆ. ಹಾಗೆ ಎಲ್ಲದಕ್ಕೂ, ಎಲ್ಲರಿಗೂ, ಸಮಸ್ತ ಬ್ರಹ್ಮಾಂಡಕ್ಕೂ ಒಡೆಯನಾದವನು ಭಗವಂತ. ಅಂತಹ ಭಗವಂತನನ್ನು ಆಚಾರ್ಯರ ಶ್ರೇಷ್ಠವಾದ ಸಿದ್ಧಾಂತದಿಂದ, ಉತ್ಕೃಷ್ಟವಾದ ಶಾಸ್ತ್ರದ ರೀತಿಯಿಂದ ತಿಳಿಸಿಕೊಟ್ಟವರು ಶ್ರೀರಾಘವೇಂದ್ರತೀರ್ಥರು. ಇಲ್ಲಿಗೆ ಸುಧೀಂದ್ರತೀರ್ಥರು ಮಾಡಿದ ನಾಮಕರಣ ಸಾರ್ಥಕವಾಯಿತು.
ರಾಯರ ವೇದಾಂತ ವಾಙ್ಮಯ ಸೇವೆ:
ಅನಂತಗುಣಪರಿಪೂರ್ಣನಾದ ಭಗವಂತನೇ ಸತ್ಯ, ಧರ್ಮ. ಇಂತಹ ಭಗವಂತನನ್ನು ತಮ್ಮ ಹೃದಯಕಮಲದಲ್ಲಿ, ಸತ್ಯಧರ್ಮರತರಾಗಿ ಸದಾ ಚಿಂತನೆ ಮಾಡುತ್ತಿರುವವರು ರಾಘವೇಂದ್ರ ಸ್ವಾಮಿಗಳು. ತತ್ವಜ್ಞಾನದ ಮೂಲ ಆಕರಗ್ರಂಥಗಳಾದ, ಬ್ರಹ್ಮಸೂತ್ರ, ಭಗವದ್ಗೀತೆ, ಉಪನಿಷತ್ತುಗಳ ಸಾರಸಂಗ್ರಹವನ್ನು ಬಹು ಸುಲಭ ರೀತಿಯಲ್ಲಿ ಸರಳವಾಗಿ ಗ್ರಂಥರಚನೆಗಳ ಮೂಲಕ ತಿಳಿಸಿಕೊಟ್ಟರು. ಬ್ರಹ್ಮಸೂತ್ರಗಳಿಗೆ ನಾನಾಮುಖದ ಗ್ರಂಥಗಳು, ಉಪನಿಷತ್ತುಗಳಿಗೆ ಖಂಡಾರ್ಥಗಳನ್ನು ಬರೆದು ಅರ್ಥಚಿಂತನೆಗೆ ಅನುವು ಮಾಡಿಕೊಟ್ಟರು.
ರಾಮಾಯಣದ ಸಾರಸಂಗ್ರಹವನ್ನು ಹನ್ನೊಂದು ಪದ್ಯಗಳ ರಾಮಚಾರಿತ್ರ‍್ಯಮಂಜರಿ, ತತ್ವಮಂಜರಿ, ಭಾಗವತವನ್ನು, ಮಹಾಭಾರತವನ್ನು, ಆಚಾರ್ಯರ ಶಾಸ್ತ್ರಸಾರವನ್ನು ತಿಳಿಸುವ, ಪರಿಮಳ, ತಂತ್ರದೀಪಿಕೆ, ನ್ಯಾಯಮುಕ್ತಾವಳಿ, ಪ್ರಾತಃಸಂಕಲ್ಪ ಗದ್ಯ, ಕೃಷ್ಣಚಾರಿತ್ರ್ಯ ಮಂಜರಿ, ಮುಂತಾದ ಗ್ರಂಥಗಳು, ಹಾಗೂ ಉಡುಪಿಯಲ್ಲಿದ್ದಾಗ ಸಾಕ್ಷಾತ್ ಶ್ರೀಕೃಷ್ಣನನ್ನು ಕಣ್ಣಿನಿಂದ ನೋಡುತ್ತಲೇ ಆನಂದಪುಳಕಿತರಾಗಿ ಭಕ್ತಿಭಾವದಿಂದ, “ಧೀರ ವೇಣುಗೋಪಾಲ” ಅಂಕಿತದಿಂದ ರಚಿಸಿದ "ಇಂದು ಎನಗೆ ಗೋವಿಂದ" ಎನ್ನುವ ಕೃತಿ, ಮುಖ್ಯಪ್ರಾಣನ ಮಹಿಮೆ ತೋರುವ ಒಂದು ಸುಳಾದಿ, ಮುಂತಾದ ಮಹತ್ತರ ಗ್ರಂಥಗಳನ್ನು ರಚಿಸಿ ವೇದಾಂತವಾಙ್ಮಯಕ್ಕೆ ಅವರು ಸಲ್ಲಿಸಿದ ಸೇವೆ ಅನನ್ಯ.
ಅಪ್ಪಾವರ ಮಹಿಮೆ:
“ರಾಘವೇಂದ್ರಚಿತ್ತಜ್ಞ”ರೆಂದೇ ಪ್ರಖ್ಯಾತರಾದ ಇಭರಾಮಪುರದ ಅಪ್ಪಾವರು ಗುರುರಾಯರ ಪರಮಭಕ್ತರು. ಅವರು ರಾಘವೇಂದ್ರಸ್ವಾಮಿಗಳ ಪರಿಮಳ ಗ್ರಂಥವನ್ನು ಓದಿ ಓದಿ ಅಸ್ಥಿಗತ ಮಾಡಿಕೊಂಡಿದ್ದ ಇಭರಾಮಪುರದ ಅಪ್ಪಾವರು ಓಡಾಡುವಲ್ಲೆಲ್ಲಾ ಸುಗಂಧವಾದ ಪರಿಮಳ ಸೂಸುತ್ತಿದ್ದೆಂದು ಅವರ ಕಾಲದಲ್ಲಿದ್ದವರೇ ಹೇಳುತ್ತಾರೆ. ಹಾಗಿದ್ದಾಗ ರಾಯರ ಗ್ರಂಥಗಳ ಮಹಿಮೆ ಎಷ್ಟಿದೆ ಎನ್ನುವುದು ತಿಳಿಯಲಸಾಧ್ಯ.
ವೃಂದಾವನ ಮಹತ್ವ:
ವೃಂದ ಎಂದರೆ ಸಮೂಹ. ವನ ಎಂದರೆ ಗುಂಪು. ರಾಯರ ವೃಂದಾವನ ಬಹಳ ವಿಶೇಷವಾದದ್ದು. ವಿಶಿಷ್ಠವಾದದ್ದು. ತ್ರೇತಾಯುಗದಲ್ಲಿ ಸೀತಾನ್ವೇಷಣೆಯ ನಿಮಿತ್ತ ರಾಮಲಕ್ಷ್ಮಣರು ಈ ಮಾರ್ಗವಾಗಿ ಬಂದಾಗ ಶಿಲೆಯೊಂದರ (ಕಟ್ಟೆ) ಮೇಲೆ ಶ್ರೀರಾಮದೇವರು ಸ್ವಲ್ಪ ಸಮಯ ವಿಶ್ರಾಂತಿ ಮಾಡಿದ್ದರಂತೆ. ಅಷ್ಟೇ ಅಲ್ಲ ದ್ವಾಪರದಲ್ಲಿ ಕೃಷ್ಣಾರ್ಜುನರ ಚರಣಸ್ಪರ್ಶವಾಗಿತ್ತೆಂದೂ ಹೇಳಲ್ಪಡುತ್ತದೆ. ಪುಣ್ಯರಹಸ್ಯವನ್ನರಿತ ರಾಘವೇಂದ್ರ ಸ್ವಾಮಿಗಳು ತಮ್ಮ ಮೂಲವೃಂದಾವನ ಹಾಗೂ ಪ್ರಾಣಪ್ರತೀಕಗಳ ನಿರ್ಮಾಣಕ್ಕೆ ಉಪಯೋಗಿಸಲು ಶಿಷ್ಯರಿಗೆ ಹೇಳಿದ್ದರು. ಆ ಪುಣ್ಯಭರಿತವಾದ ಶಿಲೆಯಿಂದಲೇ ಗುರುಸಾರ್ವಭೌಮರ ವೃಂದಾವನ ನಿರ್ಮಾಣವಾದದ್ದು.
ರಾಯರು ಸಶರೀರರಾಗಿ ವೃಂದಾವನಸ್ಥರಾಗಿರುವ ಮಂತ್ರಾಲಯದ ವೃಂದಾವನದಲ್ಲಿ, ಸದಾ ಭಗವಂತನ ಚಿಂತನೆಯಲ್ಲಿ ಧ್ಯಾನಾಸಕ್ತರಾದ ಶ್ರೀರಾಘವೇಂದ್ರಸ್ವಾಮಿಗಳ ಜೊತೆಗೆ ನರಸಿಂಹದೇವರು, ಶ್ರೀರಾಮದೇವರು, ಶ್ರೀಕೃಷ್ಣದೇವರು, ವೇದವ್ಯಾಸರು, ಮೂರುಅವತಾರಗಳಿಂದ ಮುಖ್ಯಪ್ರಾಣದೇವರು, ಹಾಗೂ ದೇವತೆಗಳ ಪರಿವಾರವೇ ಆ ವೃಂದಾವನದಲ್ಲಿದೆ. ಬಂದ ಭಕುತರ ಅಭೀಷ್ಟವನ್ನು ರಾಯರು ಮುಖ್ಯಪ್ರಾಣರ ಮೂಲಕ ಭಗವಂತನಿಗೆ ತಲುಪಿಸುತ್ತಾರೆ. ಅವರವರ ಸೇವಾಫಲವಾಗಿ ಅಲ್ಲಿರುವ ದೇವತೆಗಳು ಅಭೀಷ್ಟಗಳನ್ನು ನೆರವೇರಿಸುತ್ತಾರೆ.
ಈ ವಿಷಯವನ್ನು ತ್ರಿಕಾಲಜ್ಞಾನಿಗಳಾದ, ಭಕ್ತಿಯಲಿ ಭಾಗಣ್ಣರೆಂದೇ ಪ್ರಸಿದ್ಧರಾದ ಗೋಪಾಲದಾಸರು "ಧರೆಯೊಳಗೆ ನಮ್ಮ ಗುರುರಾಘವೇಂದ್ರರಿನ್ನು ಇರುತಿಪ್ಪ ವಿವರವ ಅರಿತಷ್ಟೆ ವರ್ಣಿಸುವೆ" ಎನ್ನುವ ಮಂತ್ರಾಲಯ ಸುಳಾದಿಯಾದ ಗುರುರಾಘವೇಂದ್ರರ ವೃಂದಾವನದಲ್ಲಿ ಯಾರಯಾರ ಸನ್ನಿಧಾನವಿದೆ, ಹಾಗೂ ವೃಂದಾವನದ ಮಹಿಮೆಯನ್ನು ಬಹಳ ಸೊಗಸಾಗಿ ತಿಳಿಸಿದ್ದಾರೆ.
ರಾಯರ ಸ್ತೋತ್ರದ ಮಹಿಮೆ:
ಎಲ್ಲರನ್ನು ಉದ್ಧಾರ ಮಾಡುವ ಸ್ತೋತ್ರ ಇದಾಗಿದೆ. ಈ ಸ್ತೋತ್ರದ ರಚನೆಯ ಸಂದರ್ಭವೇ ವಿಶೇಷವಾದುದು. ಗುರುಶಿಷ್ಯರ ಮಹಿಮೆಯನ್ನು ಜಗತ್ತಿಗೇ ತೋರುವುದು ಭಗವಂತನ ಉದ್ದೇವಾಗಿತ್ತೇನೋ ಎಂಬಂತಿದೆ ಈ ಪ್ರಸಂಗ.
ಶ್ರಾವಣ ಮಾಸ, ಮಳೆಗಾಲ, ಎಲ್ಲೆಲ್ಲೂ ನದಿಗಳು ತುಂಬಿ ಹರಿಯುತ್ತಿದ್ದವು. ಅದಕ್ಕೆ ತುಂಗೆಯೇನೂ ಹೊರತಲ್ಲ. ರಾಯರು ವೃಂದಾವಸ್ಥರಾಗುತ್ತಿರುವ ವಿಷಯ ಕೇಳಿ ಕಂಗಾಲಾದ ರಾಯರ ಅಂತರಂಗದ ಪರಮಾಪ್ತಶಿಷ್ಯರಾದ ಅಪ್ಪಣ್ಣಾಚಾರ್ಯರು ತುಂಬಿ ಹರಿಯುತ್ತಿರುವ ತುಂಗೆಯ ಪ್ರವಾಹವನ್ನು ಲೆಕ್ಕಿಸದೆ, ನದಿಗೆ ಹಾರಿದರು, ಭಕ್ತಿಯ ಪ್ರವಾಹದ ಮುಂದೆ ನದಿಯ ಪ್ರವಾಹ ಕಾಣಲಿಲ್ಲ. ಅಪ್ಪಣ್ಣಾಚಾರ್ಯರಿಗೆ ಭಕ್ತಿಯಿಂದ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು. ತುಂಬಿದ ಪ್ರವಾಹದಲ್ಲಿ ಅದು ಹೇಗೆ ಈಸುತ್ತಿದ್ದರೋ ಅವರಿಗೇ ತಿಳಿಯುತ್ತಿಲ್ಲ, ಕಣ್ಣಮುಂದೆ ರಾಯರನ್ನು ನೋಡಬೇಕೆಂಬ ಒದ್ದಾಟ. ರಾಯರನ್ನು ಕಾಣುತ್ತೇನೋ ಇಲ್ಲವೋ ಎಂದು ಸಂಕಟದಿಂದ ಹೊಯ್ದಾಡುತ್ತಿರುವ ಮನಸು. ಅನನ್ಯ ಭಕ್ತ್ಯುದ್ರೇಕದಿಂದ "ಶ್ರೀಪೂರ್ಣಬೋಧ ಗುರು ತೀರ್ಥ ಪಯೋಬ್ಧಿಪಾರಾ" ಎಂದು ಮಂತ್ರವನ್ನು ಹೇಳಲು ಶುರುಮಾಡಿದವರು ಈಜುತ್ತಾ ಮಂತ್ರಾಲಯ ಸೇರುವುದರಲ್ಲೇ ರಾಯರು ಸಶರೀರವಾಗಿ ವೃಂದಾವನಸ್ಥರಾಗಿಬಿಟ್ಟಿದ್ದರು. ಗುರುಗಳ ದರುಶನವಾಗಲಿಲ್ಲಾ ಎಂದು ಕಂಠಗದ್ಗದಿತವಾಗಿ ಹೇಳುತ್ತಿದ್ದ ಸ್ತೋತ್ರ "ವಿಭೂತಿ ರತುಲಾ" ಎನ್ನುವಲ್ಲಿ ಅಪೂರ್ಣವಾಗಿ ನಿಂತುಬಿಟ್ಟಿತು. ತಮ್ಮ ಶಿಷ್ಯನ ಪ್ರೀತಿಯನ್ನರಿತಿದ್ದ ರಾಘವೇಂದ್ರಸ್ವಾಮಿಗಳು ವೃಂದಾವನದೊಳಗಿಂದಲೇ "ಸಾಕ್ಷೀ ಹಯಾಸ್ಯೊತ್ರ ಹಿ" ಎಂದು ಈ ಸ್ತೋತ್ರಕ್ಕೆ ಹಯಗ್ರೀವದೇವರ ಸಾಕ್ಷಿಯಿದೆ ಎಂದು ಹೇಳಿ ಆ ಸ್ತೋತ್ರವನ್ನು ಪೂರ್ಣಗೊಳಿಸಿದರು. ಅಲ್ಲಿ ನೆರೆದಿದ್ದವರೆಲ್ಲರಿಗೂ ಗುರುರಾಘವೇಂದ್ರರು ವೃಂದಾವನದೊಳಗಿಂದ ನಮ್ಮನ್ನು ನೋಡುತ್ತಿದ್ದಾರೆ ಎನ್ನುವ ವಿಷಯವೇ ಎಲ್ಲರನ್ನೂ ಆನಂದಭರಿತರನ್ನಾಗಿ ಮಾಡಿತು.
ಸಕಲ ಅಭೀಷ್ಠಸಿದ್ಧಿಗೆ ರಾಯರ ಅಷ್ಟಾಕ್ಷರವಾದ ಎಲ್ಲರೂ ಹೇಳಿಕೊಳ್ಳಬಹುದಾದ ಅತ್ಯಂತ ಸರಳವಾದ “ಶ್ರೀರಾಘವೇಂದ್ರಾಯನಮಃ” ಜಪವನ್ನು ದಿನಕ್ಕೆ ಕಮ್ಮಿಯೆಂದರೂ ನೂರಾಎಂಟು ಬಾರಿ ಜಪಿಸಿದರೆ ಮನದ ಇಚ್ಛೆಗಳು ನೆರವೇರುತ್ತವೆ. ನೆನೆಗುದಿಗೆ ಬಿದ್ದ ಕೆಲಸಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ. ಮನದ ಕ್ಲೇಶಗಳು ಪರಿಹಾರವಾಗುತ್ತವೆ. ಇರುವ ಸಮಸ್ಯೆಗಳಿಗೆ ಪರಿಹಾರ ತೋರುತ್ತದೆ. ಯಶಸ್ಸು ನಿಮ್ಮನ್ನು ಅರಸಿ ಬರುತ್ತದೆ. ಮಕ್ಕಳಿಗೆ ವಿದ್ಯೆಪ್ರಾಪ್ತಿಗಾಗಿ, ಆರೋಗ್ಯಭಾಗ್ಯಕ್ಕಾಗಿ, ಹಾಗೂ ಸಕಲಾಭೀಷ್ಟಗಳು ಈಡೇರುವುದರಲ್ಲಿ ಯಾವ ಸಂದೇಹವೂ ಇಲ್ಲ. ಇಲ್ಲಿಯವರೆಗೂ ಜಪಿಸಿಲ್ಲವೆಂದಾದರೆ ಈ ಕ್ಷಣದಿಂದಲೇ ದಿನನಿತ್ಯವೂ ಹೇಳಿಕೊಳ್ಳುವ ಸಂಕಲ್ಪಮಾಡಿ.ಈ ಅಷ್ಟಾಕ್ಷರದ ಬಗ್ಗೆ ಗುರುಜಗನ್ನಾಥದಾಸರು ಬಹಳ ಚೆನ್ನಾಗಿ ತಿಳಿಸಿದ್ದಾರೆ. ರಾಯರು ಪವಾಡಗಳನ್ನು ಮಾಡುವುದಿಲ್ಲ. ಅವರನ್ನು ನಂಬಿದವರಿಗೆ ಅಸಾಧ್ಯವಾದುದೆಲ್ಲವೂ ಪವಾಡವೆಂಂತೆ ತಾನಾಗಿಯೇ ನಡೆದು ಹೋಗುತ್ತವಷ್ಟೇ. ಸಂಕಲ್ಪಮಾಡಿ ಶುದ್ಧ ಮನಸ್ಸಿನಿಂದ ಅವರ ಸೇವೆ ಮಡಿದರೆ ಕನಸಲ್ಲಿ ಬಂದು ಮನದಲ್ಲಿ ನಿಲ್ಲುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಅಂತಹ ಮಹಿಮಾನ್ವಿತರು ರಾಘವೇಂದ್ರಸ್ವಾಮಿಗಳು.
ಭಿಕ್ಷಾಲಯ
ನೂರಾರು ಹರಿದಾಸರಿಗೆ, ಸಂತರು, ಸನ್ಯಾಸಿಗಳಿಗೆ ಆಶ್ರಯತಾಣವಾಗಿತ್ತು ಬಿಚ್ಚಾಲೆ ಗ್ರಾಮ. ಕಣ್ಮನ ತಣಿಸುವ ಹಸಿರು. ತುಂಗೆಯ ಜುಳುಜುಳು ನಾದ. ಜಪತಪಕ್ಕೆ ಹೇಳಿ ಮಾಡಿಸಿದಂತಿತ್ತು ಪ್ರಶಾಂತವಾದ ಆ ಸುಂದರ ಪರಿಸರ.
ರಾಯರನ್ನು ನೆನೆದರೆ ಸಾಕು ಕುಲಕೋಟಿ ಉದ್ಧಾರವಾಗುತ್ತದೆ. ಅಂತಹುದರಲ್ಲಿ ರಾಯರು ನಡೆದಾಡಿದ ಸ್ಥಳ, ಕೆಲಕಾಲ ಅಪ್ಪಣ್ಣಾಚಾರ್ಯರ ಶಿಷ್ಯವಾತ್ಸಲ್ಯಕ್ಕಾಗಿ ಇದ್ದ ಸ್ಥಳ. ರಾಯರ ಅಂತರಂಗದ ಶಿಷ್ಯರಾದ ಅಪ್ಪಣ್ಣಾಚಾರ್ಯರೊಂದಿಗೆ ಕೆಲಸಮಯ ರಾಯರು ಭಿಕ್ಷಾಲಯದಲ್ಲಿದ್ದಾಗ (ಈಗಿನ ಬಿಚ್ಚಾಲೆ ಗ್ರಾಮ) ರಾಯರು ಅಲ್ಲಿ ಧ್ಯಾನಾಸಕ್ತರಾಗಿ ಕುಳಿತು ಜಪ, ತಪ, ಪಾರಾಯಣ ಮಾಡುತ್ತಿದ್ದ ಜಪದಕಟ್ಟೆ, ಅಲ್ಲಿಯೇ ಅಪ್ಪಣ್ಣಾಚಾರ್ಯರಿಂದ ಪ್ರತಿಷ್ಠಾಪಿತವಾದ ಏಕಶಿಲಾವೃಂದಾವನ, ಶ್ರೀಪಾದರಾಜರಿಂದ ನೆಟ್ಟ ಅಶ್ವತ್ಥವೃಕ್ಷ, ನದಿಗೆ ಮುಖಮಾಡಿ ನಿಂತಿರುವ ಶ್ರೀಭೂಸಮೇತ ಶ್ರಿ ನಿವಾಸ ದೇವರು. ಜಿತಾಮಿತ್ರರಿಂದ ಪ್ರತಿಷ್ಠಾಪಿತವಾದ ಶೇಷದೇವರು, ವೃಂದಾವನದ ಬಳಿ ಹನುಂಮತದೇವರು, ಇರುವ ನರಸಿಂಹದೇವರು, ನಾಗರಕಟ್ಟೆ, ರಾಯರು ಮಲಗುತ್ತಿದ್ದ ಸ್ಥಳ, ಅಪ್ಪಣ್ಣಾಚಾರ್ಯರು ರಾಯರಿಗೆ ಪ್ರಿಯವಾದ ಕಡಲೇಬೇಳೆ ಚಟ್ನಿಯನ್ನು ಮಾಡುತ್ತಿದ್ದ ವರಳು ಮತ್ತು ಗುಂಡುಕಲ್ಲು, ವಾಸವಿದ್ದ ಮನೆ, ರಾಯರ ಆಜ್ಞೆಯಂತೆ ಶಾಶ್ವತವಾಗಿ ಶಿಲೆಯಾಗಿ ನೆಲೆನಿಂತ ಕೃಷ್ಣಸರ್ಪ, ಮಂತ್ರಾಲಯಕ್ಕೆ ಬರುವ ಹಾದಿಯಲ್ಲಿ ಇರುವ ಪಂಚಮುಖಿ ಮುಖ್ಯಪ್ರಾಣದೇವರು, ರಾಯರು ತಪಗೈದ ಸ್ಥಳ, ಸ್ವಲ್ಪ ದೂರದಲ್ಲಿ ಜಗನ್ನಾಥದಾಸರಿರುವ ಮಾನವಿ, ವಿಜಯದಾಸರಿರುವ ಚೀಕಲಪರ್ವಿ, ಗೋಪಾಲದಾಸರಿರುವ ಮೊಸರುಕಲ್ಲು, ಪುರಂದರದಾಸರು ಒಡಮೂಡಿರುವ ಪನ್ನೂರು, ಹೀಗೆ ಜ್ವಲಂತಸಾಕ್ಷಿಯಾಗಿ ನಿಂತ ಮಹಿಮಾನ್ವಿತ ಪುಣ್ಯಸ್ಥಳಗಳೂ ಮಂತ್ರಾಲಯಕ್ಕೆ ಹತ್ತಿರ ಇವೆ. ಎಲ್ಲ ಹರಿದಾಸರಿಗೂ ಮಂತ್ರಾಲಯವು ಗುರುಕ್ಷೇತ್ರವೇ ಆಗಿತ್ತು.
ಸರಿಸುಮಾರು ಐವತ್ತು ವರ್ಷಗಳ ಕಾಲ ಸನ್ಯಾಸ ಜೀವನವನ್ನು ನಡೆಸಿ, ಸನ್ಯಾಸ ಕುಲ ದೀಪಕರೆನಿಸಿ ದವರು ಶ್ರೀರಾಘವೇಂದ್ರಸ್ವಾಮಿಗಳು. ಈ ಕ್ಷಣದಲ್ಲೂ ಬೇಡಿಬಂದವರ ಭಾವಭಕುತಿಗೆ ಒಲಿದು ಮನದಭೀಷ್ಠೆಗಳನ್ನು ಪೂರೈಸುವ ರಾಘವೇಂದ್ರ ಗುರುಸಾರ್ವಭೌಮರು ಮಂತ್ರಾಲಯದ ಅಂಗಳದಲ್ಲಿ, ತುಂಗಭದ್ರೆಯ ಮಡಿಲಲ್ಲಿ, ಮಂಚಾಲಮ್ಮನ ನೆರಳಲ್ಲಿ, ಹಸುಕಂದನ ಬಿಗಿದಪ್ಪಿ ಲಾಲಿಸಿ ಪಾಲಿಸುವ ತಾಯಿಯಂತೆ ವೃಂದಾವನದಲ್ಲಿ ನೆಲೆಸಿದ್ದಾರೆ.
ಬಯಸಿದ್ದನ್ನೆಲ್ಲ ಕೊಡುವ ಕಾಮಧೇನು, ಕೇಳಿದ್ದನ್ನೆಲ್ಲ ಕೊಡುವ ಕಲ್ಪವೃಕ್ಷದಂತಿರುವ ಗುರುರಾಯರನ್ನು ತಂದೆ ಮಾತ್ರ ಎನ್ನದೇ, ತಾಯಿಯೂ ಎಂದು ಎರಡು ರೀತಿಯಲ್ಲೂ ಕರೆದ ದಾಸರು, ರಾಯರಲ್ಲಿ ಪ್ರೀತಿಯಿಂದ ಪೋಷಿಸುವ ತಂದೆಯನ್ನು ಕಂಡವರು, ಮಮತೆಯಿಂದ ಲಾಲಿಸುವ ತಾಯಿಯ ಪ್ರೀತಿಯನ್ನು ಕಂಡುಂಡವರು, ವಿಜಯದಾಸರರಿಂದ ಪಮಾನುಗ್ರಹೀತರಾಗಿ, ಗೋಪಲದಾಸರಿಂದ ಆಯುರ್ದಾನವನ್ನು ಪಡೆದ ಪರಮಭಾಗ್ಯಶಾಲಿಗಳಾಗಿ, ಹರಿಕಥಾಮೃತಸಾರವನ್ನು ಮನುಕುಲಕ್ಕೆ ನೀಡಿದ ಮಾನವಿಯ ಜಗನ್ನಾಥದಾಸರು, ಭಕ್ತವತ್ಸಲರಾದ ಗುರುರಾಘವೇಂದ್ರರನ್ನು ಕುರಿತು "ರಾಯ ಬಾರೋ ತಂದೆ ರಾಯಿ ಬಾರೋ" ಎಂದು ರಾಯರ ವಾತ್ಸಲ್ಯವನ್ನು ಹಾಡಿ ಹೊಗಳಿದ್ದಾರೆ.
ಮಂತ್ರಸಿದ್ಧಿಯ ಮಹಾಕ್ಷೇತ್ರವಾದ ಮಂತ್ರಾಲಯವು ಸಾಗರೋಪಾದಿಯಲ್ಲಿ ಹರಿದು ಬರುವ ಭಕ್ತರಿಂದ ತುಂಬಿ ತುಳುಕುತ್ತಿದೆ. ಕಲಿಯುಗದಲ್ಲಿ ಭೂಲೋಕದ ಈ ಸಂಭ್ರಮವನ್ನು ನೋಡಲು ದೇವಾನು ದೇವತೆಗಳು ಸಾಲುಗಟ್ಟಿ ನಿಂತಿರುವಂತಿದೆ. ಎಲ್ಲರನ್ನೂ ತನ್ನ ಮಡಿಲಲ್ಲಿ ಮಿಂದೇಳಿಸಲು, ತುಂಗೆ ತುಂಬಿ ಹರಿಯುತ್ತಿದ್ದಾಳೆ. ಕಣ್ಮುಚ್ಚಿ ಭಗವಂತನಲ್ಲಿ ಧ್ಯಾನಾಸಕ್ತರಾಗಿ, ಪ್ರತೀಕ್ಷಣವೂ ಬಿಡದೇ ಅಂತರಂಗದಿಂದ ನಮ್ಮನ್ನು ನೋಡಿ ಹರಸುತ್ತಿರುವ ರಾಯರು, ಆರಾಧನೆಯ ಈ ಪರ್ವಕಾಲದಲ್ಲಿ ಭಕುತರ ಸಂಭ್ರಮವನ್ನು ನೋಡಲು ಕಣ್ತೆರೆದು ಕಾಯುತ್ತಿರುತ್ತಾರೆ ಎನ್ನುವ ಅನುಭವ ಮನಸಿಗೆ ಬರುತ್ತದೆ.
ದೇಶದೆಲ್ಲೆಡೆ ರಾಯರ ಆರಾಧನೆಯಲ್ಲಿ ಲಕ್ಷೋಪಲಕ್ಷ ಜನರಿಗೆ ನಡೆಯುವ ಅನ್ನದಾನ ನೋಡಿದರೆ, ವ್ಯಾಸರಾಯರಾಗಿದ್ದಾಗ ಲಕ್ಷಲಕ್ಷಜನರಿಗೆ ಅನ್ನದಾನ ಮಾಡಲು ಅನೇಕ ಅಗ್ರಹಾರಗಳನ್ನು ಕಟ್ಟಿಸಿದ್ದು ನೆನಪಾಗದಿರದು.
ಇಂದು ದೇಶದೆಲ್ಲೆಡೆ 353 ನೆಯ ಆರಾಧನೆಯು ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ನಾಡಿನ ಸಮಸ್ತ ಜನತೆಗಿದು ನಾಡಹಬ್ಬದಂತೆ. ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯುವ ರಾಘವೇಂದ್ರಸ್ವಾಮಿಗಳ ಆರಾಧನೆಯಲ್ಲಿ ಪಾಲ್ಗೊಂಡು, ಹರಿಗುರುಗಳ ಅನುಗ್ರಹಕ್ಕೆ ಪಾತ್ರರಾಗೋಣ.
- ಡಾ. ವಿದ್ಯಾಶ್ರೀ ಗೋವಿಂದರಾವ್ ಕುಲಕರ್ಣಿ ಮಾನವಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ