"ಇವು ರಾಖಿ ಹಬ್ಬದ ಹಾಸ್ಯ ಸಂಗತಿಗಳ ಆರು ಹನಿಗವಿತೆಗಳು. ಕಚಗುಳಿಯಿಡುತ ನಿಮ್ಮ ಮೊಗವರಳಿಸಿ ಮುದ ನೀಡುವ ಅಪ್ಪಟ ನಗೆಪ್ರಣತೆಗಳು. ಇಲ್ಲಿ ಹಾಸ್ಯವಿದೆ, ಲಾಸ್ಯವಿದೆ, ತುಂಟತನ ತರಲೆ ಕೀಟಲೆಗಳ ಲಹರಿಯಿದೆ, ಮುಗುಳ್ನಗೆಯ ಝರಿಯಿದೆ. ಜೊತೆಜೊತೆಗೆ ಸ್ವಲ್ಪ ವಿಡಂಬನೆ ವಾಸ್ತವವೂ ಇದೆ. ಮಳೆ ನಿಂತರೂ, ಮರದಡಿ ಮಳೆಹನಿ ಜಿನುಗುತ್ತಿರುವಂತೆ, ರಕ್ಷಾಬಂಧನ ಹಬ್ಬ ಮುಗಿದರೂ, ರಾಖಿಯ ನಗೆಯವಾಂತರಗಳು ಮಾರ್ದನಿಸುತ್ತಲೇ ಇರುತ್ತವೆ. ಏನಂತೀರಾ..?"
-ಎ.ಎನ್.ರಮೇಶ್. ಗುಬ್ಬಿ.
1. ಜೋಕೆ.!
ರೋಮಿಯೋಗಳೇ ಅಪ್ಪಿತಪ್ಪಿಯೂ
ಬೀಳದಿರಲಿ ಚೆಲುವೆಯರ ಕಣ್ಣಕಕ್ಷೆ
ಕಟ್ಟಿದರೆ ನಿಮ್ಮ ಕೈಗೆ ರಾಖಿಯ ರಕ್ಷೆ
ಮತ್ತೆಂದೂ ಬೇಡಲಾಗದು ಪ್ರೇಮಭಿಕ್ಷೆ.!
*******
2. ಚಕ್ಕರ್..!
ಗುಂಡನಿಗೆ ರಕ್ಷಾಬಂಧನ ಹಬ್ಬವೆಂದರೆ
ಅಕ್ಷರಶಃ ಬಂದಂತಾಗುವುದು ಬವಳಿ
ಕಾರಣ ಐದು ರುಪಾಯಿ ರಾಖಿ ಕಟ್ಟಿ
ಐನೂರು ರೂಪಾಯಿ ದೋಚುವ
ಅಕ್ಕಪಕ್ಕದ ಆಂಟಿಯರ ಹಾವಳಿ.!
*******
3. ತಪರಾಖಿ.!
ನನ್ನವಳು ಬೀದಿಯ ಚೆಲುವೆಯರನ್ನೆಲ್ಲ
ಕರೆಕರೆದು ಕಟ್ಟಿಸಿದಳು ನನ್ನಕೈಗೆ ರಾಖಿ
ಹಲ್ಕಿರಿಯಲೂ ಉಳಿಸಿಲ್ಲ ಯಾರನ್ನು ಬಾಕಿ.!
********
4. ದಿನವಿಶೇಷತೆ.!
ಪ್ರೇಮಿಗಳ ದಿನದಂದು ರೋಸು ಹಿಡಿದು
ಬೀದಿ ಬೀದಿಯಲಿ ಬೇಟೆಯಾಡುವುದು
ರೋಡು ರೋಮಿಯೋಗಳ ದಂಡು.!
ರಕ್ಷಾಬಂಧನ ಹಬ್ಬದಂದು ರಾಖಿ ಹಿಡಿದು
ಮನೆ ಮನೆಗೂ ಮುತ್ತಿಗೆ ಹಾಕುವುದು
ಬಲಿ ಹಾಕಲು ಹುಡುಗಿಯರ ಹಿಂಡು.!
******
5. ಖಿಲಾಡಿ..!
ರಾಖಿ ಕಟ್ಟಲು ಬಂತು ನನ್ನೆದುರಿಗೆ
ಅಪರಿಚಿತ ಮಹಿಳಾಮಣಿಗಳ ಮಂದೆ
ಆಶೀರ್ವಾದವೇ ಉಡುಗೊರೆ ಎಂದೆ
ಅದೇಕೋ ಕರ ಚಾಚಿದರೂ ರಾಖಿಗೆ
ಕಟ್ಟಲು ಬಾರಲಿಲ್ಲ ಯಾರು ಮುಂದೆ.!
********
6. ರಾಖಿಭಾಗ್ಯ.!
ಘೋಷಿಸಿದರು ಹೆಮ್ಮೆಯಲಿ ಮಂತ್ರಿ.
"ನನ್ನ ಆಸ್ತಿ-ಪಾಸ್ತಿ-ಹೆಸರು-ಕೀರ್ತಿ
ಎಲ್ಲವನ್ನು ಕೊಟ್ಟು ಬಾಳನೆ ಪೂರ್ತಿ
ಮೀಸಲಾಗಿಟ್ಟಿದ್ದೇನೆ ನಿತ್ಯ ರಾಖಿಗೆ"
ಸಭಿಕರು ಅಚ್ಚರಿಯಲಿ ಉದ್ಗರಿಸಿದರು..
"ಯಾರು ರಾಖಿಕಟ್ಟಿದ ಆ ಭಾಗ್ಯವತಿ?"
ಸಚಿವರು ಮುಗುಳ್ನಗುತ ನುಡಿದರು..
"ರಾಖಿಕಟ್ಟಿದವಳಲ್ಲ ತಾಳಿಕಟ್ಟಿಸಿಕೊಂಡ
ರಾಖಿ ಹೆಸರಿನ ನನ್ನಯ ಪ್ರಿಯಸತಿ"
- ಎ.ಎನ್.ರಮೇಶ್.ಗುಬ್ಬಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ