ಪ್ರತಿಯೊಬ್ಬ ಮನುಷ್ಯನಿಗೆ ಗುರಿ ಸರಿಯಾಗಿ ಇರಬೇಕು. ಗುರಿ ಸರಿಯಾಗಿರಬೇಕಾದರೆ ಸರಿಯಾದ ಗುರುಗಳ ಆಶೀರ್ವಾದ ಸಜ್ಜನರ ಸಹವಾಸ ಇರಬೇಕು. ಗುರಿಯನ್ನು ತಲುಪಲು ಸಾಕಷ್ಟು ದಾರಿಗಳಿರಬಹುದು ಆದರೆ ಎಲ್ಲಿ ಹೋಗಬೇಕೆಂದು ಗುರಿ ಇರಬೇಕು. ರಾಮಾಯಣದ ಸಂದೇಶ ಕೇಳುತ್ತಿರುತ್ತೇವೆ, ಶ್ರೀರಾಮಚಂದ್ರನು ವಿದ್ಯಾರ್ಥಿಗಳಿಗೆ ಇರಬೇಕಾದ ಗುಣ ಹಿರಿಯರಿಂದ ಸರಿಯಾದ ಉಪದೇಶ ಪಡೆಯೋದು ಹಿರಿಯರ ಮಾತುಗಳನ್ನು ಕೇಳಿ ಮನನ ಮಾಡಿಕೊಳ್ಳುವುದು ಇಂತಹ ಗುಣಗಳು ಇದ್ದಾಗ ಉತ್ತಮ ಗುಣಗಳು ಬರುತ್ತವೆ ಎಂದು ತಿಳಿಸಿದ್ದಾನೆ. ಸಜ್ಜನರ ಸಹವಾಸದಿಂದ ಇಂತಹ ಗುಣಗಳು ಬರುತ್ತವೆ. ಶ್ರೀರಾಮಚಂದ್ರನು ಗುರುಕುಲದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದ ಎಂಬುದನ್ನು ವಾಲ್ಮೀಕಿ ಋಷಿಗಳು ಹೇಳುತ್ತಾರೆ.
ಜಗತ್ತಿಗೇ ಜ್ಞಾನವನ್ನು ಕೊಡುವ ಪರಮಾತ್ಮನಿಗೆ ಜ್ಞಾನ ಪಡೆಯುವುದು ಹೇಗೆ ಎಂದು ಜಗತ್ತಿಗೆ ತೋರಿಸಲು ವಸಿಷ್ಠರ ಆಶ್ರಮದಲ್ಲಿ ಅಸ್ತ್ರವಿದ್ಯೆಯನ್ನು ಪಡೆದಿದ್ದಾನೆ. ಅಸ್ತ್ರಗಳು ಎಂದರೆ ಮಾಡಿದ ಸಂಕಲ್ಪದಿಂದ ಮಂತ್ರ ಪ್ರಯೋಗ ಮಾಡಿದರೆ ಅವರ ಸಂಕಲ್ಪ ಈಡೇರುವ ಅಸ್ತ್ರಗಳಾಗಿವೆ. ಗುರುಕುಲದಲ್ಲಿ ದೇವರು ಅವನ್ನೆಲ್ಲ ಕಲಿತಿದ್ದಾನೆ. ಮನುಷ್ಯರಿಗೆ ಗುರುಕುಲದಲ್ಲಿ ಅಧ್ಯಯನ ಮಾಡಬೇಕೆಂಬುದು ಶ್ರೀರಾಮಚಂದ್ರನು ತೋರಿದ ಆದರ್ಶ. ಶಾಸ್ತ್ರಗಳ ಅಧ್ಯಯನ ಮಾಡುವಾಗ ಗುರುಕುಲದಲ್ಲಿ ಅನುಸರಿಸುವ ಆದರ್ಶವನ್ನು ಇಂದು ಯುವಕರು ದೃಢ ಸಂಕಲ್ಪ ಮಾಡಿ, ದೇಶದಲ್ಲಿ ಮುಗಿಲೆತ್ತರಕ್ಕೆ ಕೇಳುವ ಜೈ ಶ್ರೀರಾಮ ಎಂಬ ಘೋಷ ಕೇಳುವುದು ಸಂತಸದ ವಿಷಯ.
500 ವರ್ಷಗಳ ನಂತರ ಶ್ರೀರಾಮ ಚಂದ್ರನ ಮೂರ್ತಿಯ ಪ್ರತಿಷ್ಠಾಪನೆಯಾದದ್ದು ಸಂತಸದ ಸಂಗತಿ ಶ್ರೀರಾಮನನ್ನು ಸದಾ ಕಾಲ ನೆನೆಯುತ್ತಲೇ ಇರುಬೇಕು, ಇನ್ನೂ ಬೆಳೆಯಬೇಕು. ಶ್ರೀರಾಮನ ಪ್ರತಿಷ್ಠಾಪನೆ ಆದರೆ ಸಾಕು ಎಂಬ ತೃಪ್ತಿ ಇರಬಾರದು ಶ್ರೀರಾಮಚಂದ್ರನ ಪ್ರತಿಷ್ಠಾಪನೆ ಕೇವಲ ಮಂಗಳಾಚರಣೆ, ಪ್ರತಿಯೊಬ್ಬ ಭಾರತದ ಸಜ್ಜನರ ಮನದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಆಗಬೇಕು. ಶ್ರೀರಾಮಚಂದ್ರನ ಆದರ್ಶನಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಪಡಬೇಕು. ಗುಣಾತ್ಮಕನಾದ ಪರಮಾತ್ಮನ ಗುಣದ ಲೇಷ ನಮ್ಮಲ್ಲಿ ಬಂದರೆ ನಾವು ಧನ್ಯರು, ರಾಮದೇವರ ಪ್ರತಿಷ್ಠಾಪನೆ ನಮ್ಮ ಹೃದಯದಲ್ಲಿ ಆಗಬೇಕು. ನಮ್ಮ ಹೃದಯದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಬೇಕು ಅದರ ಮಹತ್ವ ಏನೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಸಂಘರ್ಷ ಅನಾದಿ ಕಾಲದಿಂದಲೂ ಇವೆ. ಏಕೆಂದರೆ ಮನದಲ್ಲಿ ಕೆಟ್ಟ ಮಾತು ಬುದ್ಧಿಗಳು ವಯಸ್ಸಿನ ಬೇಧಮಾಡದೇ ನಾವು ಎಣಿಸುವುದು ಜೀವದ ಲೆಕ್ಕವಲ್ಲ ದೇಹಕ್ಕೆ ಮಾತ್ರ. ಆ ವಯಸ್ಸು, ಒಳ್ಳೆಯತನದ ಗುಣವನ್ನು ಪಡೆಯಬೇಕು ಎಂದು ಪ್ರಯತ್ನ ಮಾಡಿದರೂ ಅದು ಬರುವುದು ಬಹಳ ಕಷ್ಟ, ನೋಡಬಾರದ್ದನ್ನು ನೋಡುವುದು ಕೇಳಬಾರದ್ದನ್ನು ಕೇಳುವುದು, ತಿನ್ನಬಾರದ್ದನ್ನು ತಿನ್ನುವುದು ಮನುಷ್ಯನ ಸಹಜ ಗುಣವಾಗಿದೆ. ಆದರೂ ಅಂತದ್ದು ಗೆದ್ದು ಬರುವುದು ಎಂದರೆ ದೊಡ್ಡ ವಿಜಯ.
ಉತ್ತಮ ಮಾತು ಕೇಳುವುದು ಸಜ್ಜನರ ಸಹವಾಸಕ್ಕೆ ಬರುವುದು ಕೂಡ ಶ್ರೀರಾಮನ ಪ್ರತಿಷ್ಠಾಪನೆಯಾಗಬೇಕು, ಇನ್ನು ಪೂಜೆ ಮಾಡಬೇಕು, ಶ್ರೀರಾಮಚಂದ್ರನ ಮೊದಲ ಆದರ್ಶ ಸಜ್ಜನರ ಸಹವಾಸ ಮಾಡುವುದು. ಅಸ್ತ್ರ ಶಸ್ತ್ರಗಳ ಅಭ್ಯಾಸದ ಮಧ್ಯದಲ್ಲಿ ವೃದ್ಧರು ಜ್ಞಾನಿಗಳ ಮಧ್ಯ ತನ್ನ ಸಮಯವನ್ನು ಕಳೆಯುತ್ತಿದ್ದನು ವಯೋ ವೃದ್ಧರು ಜ್ಞಾನ ವೃದ್ಧರನ್ನು ಕರೆಸಿ ಅವರ ಜೊತೆಗೆ ಸಮಯ ಕಳೆಯುತ್ತಿದ್ದನು ಎಂದು ವಾಲ್ಮೀಕಿ ಋಷಿಗಳು ಹೇಳುತ್ತಾರೆ. ಕೆಲವರು ಶುದ್ಧವಾದ ಚಾರಿತ್ರ್ಯ ಹೊಂದಿದವರಾಗಿರುತ್ತಾರೆ. ಶೀಲ ಎಂದರೆ ಸಜ್ಜನರ ಮಧ್ಯೆದಲ್ಲಿ ನಾನು ಇಂತಹ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುವ ಕೆಲಸ ಮಾಡುವವರು ಶೀಲವಂತರು. ಸಜ್ಜನರ ಶೀಲ ದಾನ ಮತ್ತು ಪ್ರೋತ್ಸಾಹ ಎರಡೂ ಕೂಡ ಶೀಲವೆನಿಸುತ್ತದೆ.
ಒಬ್ಬ ವ್ಯಕ್ತಿಯನ್ನು ಅವಮಾನ ಮಾಡಿ ಸಂಪತ್ತನ್ನು ಕಸಿದುಕೊಂಡು, ಮೋಸವನ್ನು ಮಾಡಿದರೆ ಅದನ್ನು ಯಾರೂ ಹೇಳಿಕೊಳ್ಳುವುದಿಲ್ಲ ಅದೇ ಚಾರಿತ್ರ್ಯ ಹೀನತೆ. ಪರಪುರುಷರನ್ನು ಪುರುಷನು ಕೆಟ್ಟ ದೃಷ್ಟಿಯಿಂದ ನೋಡಬಾರದು ಮನಸ್ಸಿನಲ್ಲಿ ಚಾಂಚಲ್ಯ ಬರಬಾರದು ಇದು ಅತೀ ದೊಡ್ಡ ಶೀಲ. ರಾಮಾಯಣದಲ್ಲಿ ಋಷ್ಯಶೃಂಗನು ಚಾರಿತ್ರ್ಯ ಮತ್ತು ಶೀಲದಿಂದ ಭ್ರಷ್ಠನಾಗಲಿಲ್ಲ. ಆದ್ದರಿಂದ ಋಷ್ಯಶೃಂಗರ ಮಹಿಮೆಯನ್ನು ತಿಳಿಯುವುದಾದರೆ ಮಳೆಯಿಲ್ಲದಿದ್ದಾಗ ಕರೆಸಿದರೆ ತಕ್ಷಣ ಸುವೃಷ್ಠಿ ಸುಭಿಕ್ಷವಾಯಿತು, ಋಷ್ಯಶೃಂಗರು ಶೀಲವೃದ್ಧರು. ಲಕ್ಷ್ಮಣನ ಚರಿತ್ರೆಯನ್ನು ಕೇಳಿರುತ್ತೀರಿ ಸೀತೆಯನ್ನು ಹುಡುಕುವಾಗ ಸೀತೆಯ ಆಭರಣಗಳನ್ನು ನೋಡಿದಾಗ ಲಕ್ಷ್ಮಣ ಗೊತ್ತಿಲ್ಲ ಎಂದು ಹೇಳುತ್ತಾನೆ. ವನವಾಸದಲ್ಲಿ ಸಾಕಷ್ಟು ವರ್ಷ ವನದಲ್ಲಿ ಓಡಾಡಿದಾಗ ನೋಡದ ಲಕ್ಷ್ಮಣನ ಬ್ರಹ್ಮಚರ್ಯ ಎಷ್ಟು ದೊಡ್ಡದು ಏಕೆಂದರೆ ಅವನು ಗುರುತಿಸಿದ್ದು ಕಾಲುಂಗುರ ಮತ್ತು ಗೆಜ್ಜೆಯನ್ನು ಮಾತ್ರ ಏಕೆಂದರೆ, ನಾನು ನಮಸ್ಕಾರ ಮಾಡುವಾಗ ನೋಡಿದ ಆಭರಣ ಮಾತ್ರ ಗೊತ್ತು ಎನ್ನುತ್ತಾನೆ.
ಬ್ರಹ್ಮ ಚರ್ಯ ಇಂದ್ರಿಯ ನಿಗ್ರಹ ಪರೋಪಕಾರ ಮೊದಲಾದ ಸತ್ಕರ್ಮಗಳನ್ನು ಹೇಳಿಕೊಳ್ಳಬಹುದಾದ ಸದ್ಗುಣಗಳು. ಇಂತಹ ಗುಣಗಳನ್ನು ಹೊಂದಿದ್ದ ಶೀಲವಂತರನ್ನು ಕರೆದು ಮಾತನಾಡಿಸುತ್ತಿದ್ದನು. ಅದರಂತೆ ನಾವು ಕೂಡ ಅಂತಹವರ ಜೊತೆಗೆ ಕುಳಿತು ನಮ್ಮ ಸಮಯವನ್ನು ಕಳೆಯಬೇಕು. ಹಿರಿಯರನ್ನು ಗುರುಗಳನ್ನು ಬೈಯ್ಯುವವರ ಜೊತೆಗೆ ಸಮಯ ಕಳೆಯಬಾರದು. ಪರನಿಂದನೆ ಮಾಡುವವರ ಸಹವಾಸ ಮಾಡಬೇಡಿ ಎಂದು ಶ್ರೀರಾಮಚಂದ್ರನು ಹೇಳುತ್ತಾನೆ, ಶೀಲವಂತರ ಜೊತೆಗೆ ಗುಣವಂತರ ಜೊತೆಗೆ ಸಹವಾಸ ಮಾಡಿದರೆ ನಿಮ್ಮ ಸ್ವಭಾವ ಅವರಂತೆಯೇ ಆಗುತ್ತದೆ ಎಂದು ಹೇಳುತ್ತಾನೆ.
ಪ್ರಾಮಾಣಿಕತೆಯನ್ನು ಬಿಡಬೇಕು ಎನ್ನುವವರ ಸಹವಾಸ ಮಾಡಬಾರದು, ಲಂಚಗುಳಿತನಕ್ಕೆ ಹಣದ ಆಮಿಷಕ್ಕೆ ಒಳಗಾಗಬಾರದು ಅಪ್ರಾಮಾಣಿತೆಗೆ ಪ್ರೋತ್ಸಾಹ ಮಾಡುವವರ ಸಹವಾಸ ಮಾಡಬಾರದು ಎಂಬುದನ್ನು ತಿಳಿಯಬೇಕು. ಕಾಮಕ್ರೋಧಾದಿಗಳು ಹೆಚ್ಚಿಗೆ ಇರುವವರಿಗೆ ದುಷ್ಟ ಬುದ್ಧಿಯೇ ರುಚಿಸುತ್ತದೆ. ನಾನಾ ರೀತಿಯ ದುರ್ಮಾರ್ಗಿದಿಂದ ಹಣಗಳಿಸುವ ಬುದ್ಧಿ ಬರುತ್ತದೆ. ಸಜ್ಜನರ ಸಹವಾಸ ಮಾಡಿದರೆ ಸುಳ್ಳು ಹೇಳಬಾರದು, ಮೋಸ ಮಾಡಬಾರದು ಎಂಬ ಉತ್ತಮ ಬುದ್ದಿ ಇರುತ್ತದೆ. ನಿಸ್ವಾರ್ಥದಿಂದ ಮಾಡುವ ಸಹಾಯ ಸಜ್ಜನರ ಸ್ವಭಾವ ಇಂತಹ ಸೇವೆಯಿಂದ ಮನ ಸಂತಸ ಪಡುತ್ತದೆ. ಹೀಗಾಗಿ ಕೊಟ್ಟು ಕೊಡುವ ಲೇವಾದೇವಿಯಂತೆ ಮಾಡುವ ಸಹಾಯ ಮಾಡದೇ ನಿಸ್ವಾರ್ಥ ಸೇವೆಯನ್ನು ಮಾಡಬೇಕು. ಉತ್ತಮ ಗುಣ ಚಾರಿತ್ರ್ಯ ಒಳ್ಳವರ ಸಹವಾಸ ಮಾಡಬೇಕು.
ಮೋಸ ವಂಚನೆ ದ್ರೋಹಗಳಿಂದ ಶಾಪದ ತಾಪ ಹತ್ತುತ್ತದೆ. ನಾವು ಮೋಸ ಮಾಡಿದವರ ಮನೆಯಲ್ಲಿ ಆಳಾಗಿ ನಾಯಿಯಾಗಿ ಋಣ ಮುಟ್ಟಿಸಬೇಕಾ ಗುತ್ತದೆ, ಅವರ ಮನೆಯಲ್ಲಿ ಇದ್ದು ಮುಟ್ಟಿಸಬೇಕಾಗುತ್ತದೆ. ಆ ಶಿಕ್ಷೆಯನ್ನು ದೇವರೇ ನೀಡುತ್ತಾನೆ. ಎಲ್ಲವೂ ಇದ್ದು ಭಯ, ಚಿಂತೆ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಂದು ಕೈಯಿಂದ ಮಾಡಿ ಇನ್ನೊಂದು ಕೈಯಿಂದ ಅನುಭವಿಸುವದು ದೇವರ ನಿಯಮ. ಉತ್ತಮ ರೀತಿಯಿಂದ ಬದುಕಬೇಕು. ಪರಮಾತ್ಮನ ಅನುಗ್ರಹ ಪಡೆದು ಶೀಲವಂತರಾಗಿ ಬಾಳಬೇಕು.
ನಮ್ಮನ್ನು ನೋಡಿ ಜನ ಯಾಕಪ್ಪ ಬಂದ ಎನ್ನುವಂತೆ ಬೇಸರ ಪಡದಂತೆ ಬಾಳಬೇಕು. ಸಜ್ಜನರಿಗೆ ಪ್ರೀತಿಯಿಂದ ಬಾಳುವ ಜೀವನ ನಡೆಸಬೇಕು ಎಂಬ ಗುರಿಯನ್ನು ಹೊಂದಿರಬೇಕು. ಹರಿನಾಮ ಶ್ರವಣಮಾಡಬೇಕು, ಸೇವೆಯನ್ನು ಮಾಡಬೇಕು ಹಿರಿಯರ ಮಾತನ್ನು ಕೇಳಬೇಕು ಯಾರಿಗೆ ಇಂತಹ ಸ್ವಭಾವ ಇರುದುದಿಲ್ಲವೋ ಅವರನ್ನು ಸನ್ಮಾರ್ಗಕ್ಕೆ ತಂದರೆ ಉತ್ತಮ ಕಾರ್ಯಗಳಲ್ಲಿ ತೊಡಗಿಸಿದರೆ ಅದು ಕೂಡ ದೊಡ್ಡ ಕಾರ್ಯ.
ಸಮಾಜದ ಒಳಗಿನ ಹೊರಗಿನ ಹೊಲಸನ್ನು ತೆಗೆಯುವ ಅಭ್ಯಾಸ ಮಾಡಿಕೊಂಡರೆ ಎಲ್ಲರ ಮನಸ್ಸಿನ ಹೊಲಸನ್ನು ಮಾಡುವ ಶಕ್ತಿಯನ್ನು ದೇವರು ಕೊಡುತ್ತಾನೆ. ಮೊದಲು ಹೊರಗಿನ ಪರಿಸರ ಸ್ವಚ್ಛವಾಗಿ ಮನವು ಕೂಡ ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯ. ದೊಡ್ಡ ದೊಡ್ಡ ಸಾಧಕರ ಬಗೆಗೆ ಕೇಳಿ ತಿಳಿದುಕೊಳ್ಳಬೇಕು ಅವರಿಂದ ಪ್ರೇರಣೆ ಪಡೆದು ಅವರ ಬಗೆಗೆ ಹಂಚಿಕೊಂಡರೆ ಸಮಾಜದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸುಲಭವಾಗುತ್ತದೆ.
ಅಕ್ಷರರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ