ಗೋಕರ್ಣ: ಕಾಲಕ್ಕೆ ಇರುವ ಶಕ್ತಿ ಅದ್ಭುತ, ಅನಂತ, ಅಪಾರ. ಅದು ನೀಡುವ ಪೆಟ್ಟನ್ನು ತಾಳಿ ಉಳಿದುಕೊಳ್ಳುವವರು ಯಾರೂ ಇಲ್ಲ. ಕಾಲವೇ ನಮ್ಮನ್ನು ಮುಗಿಸಲು ಮುಂದಾದರೆ ಕಾಪಾಡುವವರು ಯಾರೂ ಇಲ್ಲ. ನಾವು ಕಾಲಾತೀತರಾಗಬೇಕಾದರೆ ಭಗವಂತನ ಮೊರೆ ಹೋಗುವುದೊಂದೇ ದಾರಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 13ನೇ ದಿನ 'ಕಾಲ' ಪ್ರವಚನ ಸರಣಿಯನ್ನು ಮುಂದುವರಿಸಿ, "ಎಲ್ಲರೂ ಕಾಲವಶ. ಪ್ರಾಣ ಬಿಟ್ಟ ಬಳಿಕ ಮಾತ್ರ ಕಾಲವಶವಲ್ಲ. ಜೀವನದ ಪ್ರತಿ ಘಟ್ಟವೂ ಕಾಲವಶವೇ. ಕಾಲ ಕುಣಿಸಿದಂತೆ ನಾವು ಪ್ರತಿಯೊಂದು ಕೆಲಸಗಳನ್ನೂ ಮಾಡುತ್ತೇವೆ" ಎಂದು ವಿವರಿಸಿದರು.
ಜೀವನ ಸಮುದ್ರ. ಕಾಲ ಅಲೆಗಳು. ಅದು ಅಪ್ಪಳಿಸಿದ ಪರಿಣಾಮ ಸಂಸಾರದ ಎಲ್ಲ ಸಂಬಂಧಗಳೂ ಬೇರ್ಪಡುತ್ತವೆ. ಪ್ರತಿಯೊಂದೂ ಕಾಲಪ್ರಭಾವದಿಂದ ಘಟಿಸುತ್ತದೆ. ಕಾಲವನ್ನು ಮೀರಿ ಉಳಿದುಕೊಳ್ಳುವುದು ಭಗವಂತನ ವಿಭೂತಿ ಮಾತ್ರ. ಭಗವಂತ ಕಾಲಾತೀತ ಎಂದು ವಿಶ್ಲೇಷಿಸಿದರು.
ಸತ್ಯ ಎನ್ನುವುದು ನಿತ್ಯ. ಹಿಂದೆಯೂ ಇತ್ತು; ಈಗಲೂ ಇದೆ. ಮುಂದೂ ಇರುತ್ತದೆ. ಆದ್ದರಿಂದಲೇ ಇದು ಸತ್ಯಕ್ಕೆ ಮಾತ್ರ ಅನ್ವಯವಾಗುತ್ತದೆ. ನಾವೇ ನಮಗೆ ಮರೆತು ಹೋಗುವ ಕಾಲಘಟ್ಟದಲ್ಲಿ ಇಂದಿಗೂ ಒಬ್ಬ ಮಹಾಪುರುಷನನ್ನು ನೆನಪಿಸಿಕೊಳ್ಳುತ್ತೇವೆ ಎಂದರೆ ಆತ ಕಾಲಾತೀತ ಎಂದೇ ಅರ್ಥ. ಅಂಥ ರಾಮ ನಿತ್ಯಸತ್ಯ ಎಂದು ವಿವರಿಸಿದರು.
ಆತ್ಮಸಾಧನೆ ಮಾಡುವವರ ಆಯಸ್ಸು ವೃದ್ಧಿಯಾಗುತ್ತದೆ. ಅವರ ಮೇಲೆ ಕಾಲ ಬೀರುವ ಪ್ರಭಾವ ಕಡಿಮೆಯಾಗುತ್ತದೆ. ನವಗ್ರಹಕ್ಕಿಂತ ರಾಮನ ಅನುಗ್ರಹ ದೊಡ್ಡರು ಎಂದರು.
ಪುಣ್ಯಗ್ರಹಗಳು ವಕ್ರವಾದರೆ ಶುಭ ಫಲಗಳನ್ನು ನೀಡುತ್ತವೆ. ಪಾಪಗ್ರಹಗಳು ವಕ್ರವಾದರೆ ವ್ಯಸನ ಫಲಗಳನ್ನು ಕೊಡುತ್ತವೆ. ಅಂತೆಯೇ ನಮ್ಮ ರಾಶಿಯಿಂದ ಹನ್ನೊಂದನೇ ರಾಶಿಯಲ್ಲಿ ಎಲ್ಲ ಗ್ರಹಗಳೂ ಶುಭಫಲ ನೀಡುತ್ತವೆ. ಆಕಾಶವನ್ನು ಹನ್ನೆರಡು ಭಾಗಗಾಗಿ ಸಮಭಾಗ ಮಾಡಿದರೆ ಅದನ್ನು ರಾಶಿ ಎನ್ನುತ್ತೇವೆ. ನಾವು ಹುಟ್ಟಿದಾಗ ಚಂದ್ರ ಇದ್ದ ಭಾಗ ನಮ್ಮ ರಾಶಿ ಎನಿಸಿಕೊಳ್ಳುತ್ತದೆ ಎಂದು ವಿವರಿಸಿದರು.
ಮನುಷ್ಯ ಜನ್ಮ ನಮ್ಮ ಮೋಕ್ಷಕ್ಕೆ ಒಂದು ಅವಕಾಶ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಜನ್ಮದಲ್ಲಿ ಬಲವಾದ ಪ್ರಯತ್ನ ಮಾಡಿದರೆ ಮುಂದಿನ ಜನ್ಮದ ಸಾಧನೆಗೆ ಸೋಪಾನವಾಗುತ್ತದೆ ಎಂದರು. ರಾಶಿ, ನಕ್ಷತ್ರ, ಮಾಸಗಳ ಅರಿವು ನಮಗಿರಬೇಕು. ಗ್ರಹಗಳ ಮೂಲಕ ಬದುಕನ್ನು ಅರ್ಥ ಮಾಡಿಕೊಂಡರೆ ಅದು ಸಾಧನೆಗೆ ಪೂರಕ ಎಂದು ತಿಳಿಸಿದರು.
ಇಂದು ಶ್ರೀಮಠದ ಮಹತಿ ಅನಾವರಣಗೊಂಡಿದೆ. ಶ್ರೀಮಠ ಅತ್ಯಂತ ವೈಭವದಿಂದ ಕೂಡಿತ್ತು. ಇಂದಿಗೂ ತನ್ನ ಪ್ರಭಾವ ಉಳಿಸಿಕೊಂಡಿದೆ. ಸಹಸ್ರವರ್ಷಗಳಿಂದ ಬೆಳೆದು ಬಂದಿರುವ ಮಠಕ್ಕೆ ಮಹತಿ ಇದೆ. ಕಾಲಾತೀತರು ಎನಿಸಿದ ಶಂಕರರು ಸ್ಥಾಪಿಸಿದ ಮಠವನ್ನು ಕಾಲ ಏನೂ ಮಾಡಲಾರದು. ಬ್ರಿಟಿಷರು, ರಾಜ ಮಹಾರಾಜರು, ವಿಜಯ ನಗರ ಸಾಮ್ರಾಜ್ಯ ಎಲ್ಲವೂ ಬಂದು ಹೋಗಿವೆ. ಆದರೆ ಮಠ ಮಾತ್ರ ಚಿರಸ್ಥಾಯಿಯಾಗಿ ಮುಂದುವರಿದಿದೆ ಎಂದು ಬಣ್ಣಿಸಿದರು.
ಶ್ರೀಮಠದ ಶಾಖಾ ಮಠಗಳ ಐತಿಹಾಸಿಕ ದಾಖಲೆಗಳನ್ನು ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಗಣಪತಿ ಕೃಷ್ಣಯ್ಯ ಹೆಗಡೆ ಗೋಳಗೋಡು ಅನಾವರಣಗೊಳಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ, ಮಹಾಮಂಡಲ ಪ್ರಾಂತ ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ್ ಶಾಸ್ತ್ರಿ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಹೊಸಾಕುಳಿ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ