ಕಾದಿವ್ನಿ ನಿನಗಾಗಿ ಬಾರೋ ಅಣ್ಣಯ್ಯ
ಪ್ರೀತಿಲಿ ರಕ್ಷಾಬಂಧನ ತಂದೀವ್ನಿ ಅಣ್ಣಯ್ಯ
ತೌರ ದೊರೆಯನ್ನ ನಾ ಹ್ಯಾಂಗ ಮರೆಯಲಿ
ತೌರ ಹೊನ್ನ ಕಳಸ ನೀನೇ ಕೇಳಯ್ಯ
ಸ್ವಾತಿ ಮುತ್ತಂಗೆ ತೌರಿಗೆ ಅಣ್ಣಯ್ಯ
ಹೊತ್ತು ಮಾಡದೇ ಬೇಗನೇ ಬಾರಯ್ಯಾ
ಚಿತ್ತದೊಳಗ ನಿಂದೇ ನೆನಹು ಕಾಣಯ್ಯ
ಬತ್ತದೆ ಚಿಗುರಲಿ ಸೋದರಿಕೆಯ ಹೂ ಬಳ್ಳಿ!
ಅತ್ತಿಗವ್ವ ಮುನಿದಾರೆ ಮುನಿಯಲಿ
ಒಡಹುಟ್ಟು ನಾ ನಿನಗ ನೆನಪಿರಲಿ
ಬೆನ್ನ ಹಿಂದೆ ಬಿದ್ದವಳಿಗೆ ಬೆನ್ನ ತಿರುಗಿಸಬ್ಯಾಡ
ಅಪ್ಪಯ್ನ ಸ್ಥಾನ ನಿನದೀಗ ಮರಿಬ್ಯಾಡ
ಹಟ್ಟಿಯ ಬಾಗಿಲಲಿ ರಂಗವಲ್ಲಿ ನಗುತಾದೆ
ಮಾವಿನ ತೋರಣ ಹೋಳಿಗೆ ಹೂರಣ ಕಾದೈತೆ
ತೊಟ್ಟಿಲ ಕಂದ ಮಾವನ ಬಾ ಎಂದು ಕರೆದೈತೆ
ಬೆಳಗಾಗಿ ಶುಕುನದ ಹಕ್ಕಿ ಶುಭವ ನುಡಿದೈತೆ
ನಿಡಿದಾದ ಕೈಗೆ ರಕ್ಷಾ ಬಂಧನ ಕಟ್ಟುವೆ
ಮಡಿಮಾಡಿ ಶಿವನಿಗೆ ಕೈಮುಗಿದು ಕೇಳುವೆ
ಬೇಡುವೆನು ದ್ಯಾವರ ಹರಸೆನ್ನ ಅಣ್ಣಯ್ನ
ಕೇಡೆಲ್ಲ ದೂರಾಗಿ ತಣ್ಣಗಿರಲೆಂದು
ನೀಡೆಂದು ನೂರು ವರುಷದ ಸುಖ ಬಾಳು
- ಎಸ್.ಎಲ್.ವರಲಕ್ಷ್ಮೀ ಮಂಜುನಾಥ್.
ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ