ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ 14ನೇ ಘಟಿಕೋತ್ಸವ
ಬೆಂಗಳೂರು: "ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕಡಾ 9.2 ರಷ್ಟು ಅಂದರೆ 700 ಮಿಲಿಯನ್ ಜನಗಳು ಬಡತನದ ಕನಿಷ್ಠ ಪರಿಮಿತಿಯಿಂದ ಕೆಳಗೆ ಜೀವಿಸುತ್ತಿದ್ದಾರೆ. ಅದರಿಂದ ಕಲಿತವರು ಮತ್ತು ಉಳ್ಳವರು ಈ ಅಗಾಧ ಪ್ರಮಾಣದ ಜನರ ಬದುಕನ್ನು ಮೇಲ್ಮಟ್ಟಕ್ಕೇರಿಸುವಲ್ಲಿ ಮಹತ್ವದ ಸಕ್ರಿಯ ಪಾತ್ರವಹಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಅತ್ಯಂತ ಸಣ್ಣ ಮತ್ತು ಸ್ವಾರ್ಥರಹಿತ ನಡೆ ಇಡೀ ಜಗತ್ತನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಬಲ್ಲವು ಎಂಬುದನ್ನು ಮರೆಯಬಾರದು" ಎಂದು ಅಮೆರಿಕದ ನಾರ್ತ್ ಡಕೋಟ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅನ್ವಯಿಕ ಅರ್ಥಶಾಸ್ತ್ರ ಹಾಗೂ ಕೃಷಿ ನಿರ್ವಹಣಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಅಧ್ಯಕ್ಷ ಡಾ. ವಿಲಿಯಂ ಗ್ಯಾಂಜೆ ನುಡಿದರು.
ಅವರು ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ 2022-2024ರ ಸಾಲಿನ 14ನೇ ಪಿ.ಜಿ.ಡಿ.ಎಂ ಸ್ನಾತಕೋತ್ತರ ಪದವೀಧರರ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು.
ದಶಕಗಳ ಹಿಂದೆ ನಾನೂ ಕೂಡ ಕಡು ಬಡವನಾಗಿದ್ದೆ. ಆದರೆ ನಿರಂತರ ಪರಿಶ್ರಮ, ಮುನ್ನಡೆಯಲೇಬೇಕೆಂಬ ಛಲ ಹಾಗೂ ದೇವರಲ್ಲಿನ ದೃಢ ನಂಬಿಕೆಗಳ ಕಾರಣ ನಾನು ಇಂದು ಈ ಮಟ್ಟ ತಲುಪಿದ್ದೇನೆ. ಯಶಸ್ಸು ಎಂದೆಂದಿಗೂ ಉಡುಗೊರೆಯ ರೂಪದಲ್ಲಿ ಬರುವಂಥದ್ದಲ್ಲ. ಅದು ನಮಗೆ ಲಭಿಸುವುದು ನಮ್ಮ ಕಠಿಣ ಪರಿಶ್ರಮದಿಂದ ಮಾತ್ರ. ಕಠಿಣ ಪರಿಶ್ರಮ ಇಲ್ಲದಿದ್ದರೆ ಮನುಕುಲಕ್ಕೆ ನೆರವಾಗುವ ಸಮೃದ್ಧ ಬೆಳೆಯನ್ನು ಕಾಣಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
‘ಯಶಸ್ಸು ಕಂಡ ತಕ್ಷಣ ಅದೇ ಅಂತಿಮ ಎಂದು ಭಾವಿಸಬೇಡಿ. ಅದೇ ರೀತಿ ವೈಫಲ್ಯ ಕೂಡ ಆಘಾತಕಾರಿ ಎಂದು ಪರಿಗಣಿಸಬೇಡಿ. ನೀವು ಸ್ಥೈರ್ಯದಿಂದ ಗುರಿ ತಲುಪುವುದಷ್ಟೇ ಇಲ್ಲಿ ಮುಖ್ಯ. ನಿಮ್ಮ ಕನಸು ನನಸಾಗುವುದು ನೀವು ವೈಫಲ್ಯಗಳನ್ನು ಛಲದಿಂದ ನಿಭಾಬಾಯಿಸಿದಾಗ ಮಾತ್ರ’ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ತಮ್ಮ ಭಾಷಣದಲ್ಲಿ ಅವರು – ‘ಒಳ್ಳೆಯ ಉದ್ಯಮ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಳ್ಳುವುದಷ್ಟೇ ನಿಮ್ಮ ಕನಸಾಗಬಾರದು. ನೀವು ಸ್ವತಃ ನಿಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಾಳಜಿಗಳಿಂದ ನಿಮ್ಮದೇ ಉದ್ಯಮವನ್ನು ಸ್ಥಾಪಿಸುವಂತಾಗಬೇಕು. ಆಗ ನೀವು ಉದ್ಯೋಗಿಗಳಾಗಿ ಉಳಿಯದೇ ಉದ್ಯೋಗಗಳ ಸೃಷ್ಟಿಕರ್ತರಾಗುತ್ತೀರಿ’ ಎಂದರು.
ಒಟ್ಟು 58 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಸ್ವೀಕರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು. ಪಿ.ಜಿ.ಡಿ.ಎಂ ವಿತ್ತೀಯ ನಿರ್ವಹಣೆ ವಿಭಾಗದ ಕು. ಪೃಥ್ವಿ ಪ್ರತಿಷ್ಠಿತ ನಿಟ್ಟೆ ಮೀನಾಕ್ಷಿ ಸ್ಮರಣಾರ್ಥ ಚಿನ್ನದ ಪದಕವನ್ನು ಸ್ವೀಕರಿಸಿದರು. ಜಸ್ಟಿಸ್ ಕೆ.ಎಸ್. ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕಗಳನ್ನು ಪಿ.ಜಿ.ಡಿ.ಎಂ ವಿತ್ತೀಯ ನಿರ್ವಹಣೆ ವಿಭಾಗದ ಕರ್ನಲ್ ವೈ.ಕೆ. ಚಂದನ್ ಹಾಗೂ ತ್ರಿದರ್ಶ್ ಡಿ.ಆರ್. ಪಡೆದರು.
ಪ್ರಾರಂಭದಲ್ಲಿ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಎಂ. ವೇಣುಗೋಪಾಲ್ ಸರ್ವರನ್ನೂ ಸ್ವಾಗತಿಸಿದರು. ಸಂಸ್ಥೆಯ ಪರೀಕ್ಷಾ ನಿಯಂತ್ರಕ ಪ್ರೊ. ಜಿ. ಕೋಟೇಶ್ವರ ರಾವ್ ಸಮಾರಂಭದ ನಿರ್ವಹಣೆಯ ಹೊಣೆ ಹೊತ್ತಿದ್ದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಹಿರಿಯ ಮಾನವಸಂಪನ್ಮೂಲ ತಜ್ಞ ಪ್ರೊ. ಜಿ. ಗಿರಿನಾರಾಯಣ್, ಸಂಸ್ಥೆಯ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ