ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ಕಾರಣಕ್ಕೆ ರಾಜ್ಯಪಾಲರ ವಿರುದ್ದ ಮಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಗೂಂಡಾ ರೀತಿಯಲ್ಲಿ ಪ್ರತಿಭಟನೆ ನಡೆಸಿ ಜನತೆಯಲ್ಲಿ ಭಯಭೀತ ವಾತಾವರಣ ಸೃಷ್ಟಿಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಬಸ್ಸಿಗೆ ಕಲ್ಲು ಹೊಡೆದ ಪರಿಣಾಮ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಸಾರ್ವಜನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಆರೋಪಿಗಳಿಗೆ ಪೊಲೀಸರು ಠಾಣೆಯಲ್ಲೇ ಜಾಮೀನು ನೀಡಿ ಮನೆಗೆ ಕಳಿಸುವ ಸಂಪ್ರದಾಯ ಆರಂಭಿಸಿದ್ದಕ್ಕೆ ನಾಚಿಕೆಯಾಗಬೇಕು. ನಾಳೆ ಮತ್ಯಾರೋ ಪುಂಡ ಪೋಕರಿಗಳು ಇದೇ ರೀತಿ ಬಸ್ಸಿಗೆ ನುಗ್ಗಿ ದಾಂಧಲೆ ಎಬ್ಬಿಸಿ ಕಲ್ಲು ಹೊಡೆದರೂ ಠಾಣೆಯಲ್ಲೇ ಜಾಮೀನು ನೀಡುತ್ತೀರಾ? ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಯಾವುದೇ ಪ್ರತಿಭಟನೆ ನಡೆದರೂ ಟಯರಿಗೆ ಬೆಂಕಿ ಹಾಕುವ ಜೊತೆಗೆ ಪ್ರತಿಕೃತಿ ದಹನ ಮಾಡಿದ ಉದಾಹರಣೆ ಇರಲಿಲ್ಲ. ಈಗ ಕಾಂಗ್ರೆಸ್ ಅದನ್ನೂ ಮಾಡಿರುವಾಗ ಪೊಲೀಸ್ ಇಲಾಖೆ ಯಾವ ಸೆಕ್ಷನ್ ಹಾಕಿದೆ? ಈ ಮೂಲಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳುಗೆಡಹುವ ವಾತಾವರಣವನ್ನು ಸೃಷ್ಟಿಸಲು ಕಾಂಗ್ರೆಸ್ಸಿನ ಜೊತೆಗೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದಂತಾಗಿದೆ. ತಾವೇ ಅಧಿಕಾರದಲ್ಲಿದ್ದು ಸಾರ್ವಜನಿಕ ಸ್ವತ್ತುಗಳನ್ನು ಹಾಳುಗೆಡಹುವ ಕಾಂಗ್ರೆಸಿನ ಹೀನ ಮನಸ್ಥಿತಿಗೆ ಇಡೀ ಜಿಲ್ಲೆಯ ಜನತೆ ಧಿಕ್ಕಾರ ಕೂಗುತ್ತಿದ್ದಾರೆ ಎಂದರು.
ದಲಿತರ ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ದಲಿತ ಸಮುದಾಯದಿಂದ ಬಹಳ ಕಷ್ಟದಿಂದ ಮೇಲೆ ಬಂದಂತಹ ರಾಜ್ಯಪಾಲರಿಗೆ ತೋರುತ್ತಿರುವ ಅಗೌರವ ಸಹಿಸಲಸಾಧ್ಯ. ಬಾಂಗ್ಲಾದಲ್ಲಿ ನಡೆಯುತ್ತಿರುವ ದಂಗೆಯಂತೆಯೇ ರಾಜ್ಯದಲ್ಲಿಯೂ ಹಿಂಸಾಚಾರ ನಡೆಸಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದಿರುವ ಐವನ್ ಡಿಸೋಜಾರ ಮೇಲೆ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು. ಬಾಂಗ್ಲಾದಂತೆಯೇ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಹಿಂದೂ-ಮುಸ್ಲಿಂ ಗಲಭೆ ನಡೆಸುವ ಹುನ್ನಾರವೇನಾದರೂ ಕಾಂಗ್ರೆಸಿನ ತಲೆಯಲ್ಲಿದ್ದರೆ ಕೂಡಲೇ ಅದನ್ನು ತಲೆಯಿಂದ ತೆಗೆದುಹಾಕಿ. ಕಳೆದ 70 ವರ್ಷಗಳಿಂದಲೂ ಕಾಂಗ್ರೆಸ್ ಅದನ್ನೇ ಮಾಡಿದ್ದರೂ ಈಗ ದೇಶಾದ್ಯಂತ ಬಲಿಷ್ಠವಾಗಿರುವ ಭಾರತೀಯ ಜನತಾ ಪಾರ್ಟಿ ಅದಕ್ಕೆ ಆಸ್ಪದ ನೀಡುವುದಿಲ್ಲ. ತಕ್ಕ ಉತ್ತರವನ್ನು ನೀಡಿಯೇ ನೀಡುತ್ತೇವೆ ಎಂದು ಸವಾಲೆಸೆದರು
ಪೊಲೀಸರು ಕಾಂಗ್ರೆಸ್ಸಿನ ಸೂಚನೆಯಂತೆ ಕಾರ್ಯನಿರ್ವಹಿಸದೇ ನ್ಯಾಯವಾಗಿ ನಡೆಯಬೇಕು. ಕೂಡಲೇ ಇಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ವತಿಯಿಂದ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ