ಡಾ. ಎಂ. ಶಾಂತಾರಾಮ ಶೆಟ್ಟಿ ಅವರ 'ಕ್ಯಾನ್ಸರ್-ಗಾಡ್ಸ್ ಗಿಫ್ಟ್ ಟು ಮಿ - ಎ ಟ್ರೂ ಸ್ಟೋರಿ' ಕೃತಿ ಬಿಡುಗಡೆ
ಬೆಂಗಳೂರು: 'ವೈದ್ಯಕೀಯ ವೃತ್ತಿಯಲ್ಲಿ ಅವಶ್ಯವಿರುವುದು ಜೀವನಪ್ರೀತಿ, ಸಹಾನುಭೂತಿ ಹಾಗೂ ಸೇವಾ ಮನೋಭಾವ. ಈ ಮೂರನ್ನೂ ಮೇಳವಿಸಿಕೊಂಡಿರುವ ವೈದ್ಯ ಸಮಾಜದ ಒಳಿತಿಗೆ ಸದಾ ಕಾಲ ಕೆಲಸ ಮಾಡಬಲ್ಲ. ರೋಗಿಗಳ ಆತ್ಮವಿಶ್ವಾಸ ವರ್ಧನೆಯಲ್ಲಿ ವೈದ್ಯ ಮಹತ್ವದ ಪಾತ್ರ ವಹಿಸುತ್ತಾನೆ ಎಂಬುದಕ್ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಅವರು ನಿದರ್ಶನ. ಅವರು ಸ್ವತಃ ಕ್ಯಾನ್ಸರ್ ಎಂಬ ಮಹಾಮಾರಿಯ ದಾಳಿಗೆ ತುತ್ತಾಗಿ ಬದು ಬಂದಿದ್ದೇ ಒಂದು ವಿಸ್ಮಯ ಎಂದು ಎಂದು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನುಡಿದರು.
ಅವರು ಪ್ರಸಿದ್ಧ ಎಲುಬುರೋಗ ತಜ್ಞ, ಸಾಹಿತಿ ಹಾಗೂ ಸಮಾಜ ಸೇವಕ ಡಾ. ಎಂ. ಶಾಂತಾರಾಮ ಶೆಟ್ಟಿ ಅವರು ರಚಿಸಿದ 'ಕ್ಯಾನ್ಸರ್-ಗಾಡ್ಸ್ ಗಿಫ್ಟ್ ಟು ಮಿ - ಎ ಟ್ರೂ ಸ್ಟೋರಿ' ಎಂಬ ಇಂಗ್ಲಿಷ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ, ಬೆಂಗಳೂರಿನ ಎಂಬೆಸಿ ಬೌಲೆವರ್ಡ್ ಸಭಾಂಗಣದಲ್ಲಿ ಮಾತನಾಡುತ್ತಿದ್ದರು.
'ರೋಗಿಗಳ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಅವರಲ್ಲಿ ದೃಢವಾದ ಆತ್ಮವಿಶ್ವಾಸ ತುಂಬಲು ಅಹರ್ನಿಶಿ ಶ್ರಮಿಸುತ್ತಿದ್ದ ಪ್ರಸಿದ್ಧ ಎಲುಬುರೋಗ ತಜ್ಞ ಡಾ. ಶಾಂತಾರಾಮ ಶೆಟ್ಟರು ಸ್ವತಃ ಕ್ಯಾನ್ಸರ್ ರೋಗದಿಂದ ಬಳಲಿ ಶಸ್ತ್ರಚಿಕಿತ್ಸೆ, ಕೀಮೊ ಥೆರಪಿ ಇತ್ಯಾದಿಗಳಿಗೆ ಈಡಾಗಿ ಯಶಸ್ವಿಯಾಗಿ ಗುಣಮುಖರಾದದ್ದು– ಅವರೊಳಗೆ ನೆಲೆಯೂರಿದ್ದ ನೈತಿಕತೆ, ಪ್ರಾಮಾಣಿಕತೆ, ಸೇವಾತತ್ಪರತೆ ಹಾಗೂ ಭಾರತೀಯ ನೆಲದ ತತ್ವಸಿದ್ಧಾಂತಗಳು ಬೀರಿದ್ದ ಅಪಾರ ಪ್ರಭಾವಗಳಿಂದ. ತಾವು ಕಂಡ ಏಳುಬೀಳುಗಳನ್ನು ದಾಖಲಿಸಲು ಸಾಹಿತಿಯಾಗಿ ಅವರು ಗ್ರಂಥಗಳನ್ನು ರಚಿಸಿರುವುದು ನಿಜಕ್ಕೂ ಶ್ಲಾಘನೀಯ. ಏಕೆಂದರೆ ಈ ಗ್ರಂಥಗಳು ಇಡೀ ವೈದ್ಯ ಸಮುದಾಯಕ್ಕೆ ಮಾರ್ಗದರ್ಶಿಗಳಂತಿವೆ' ಎಂದು ಅವರು ನುಡಿದರು.
'ಕೇವಲ ವೈದ್ಯ ಜಗತ್ತಿಗಷ್ಟೇ ತಮ್ಮ ಜ್ಞಾನ ಪಸರಿಸಿದರೆ ಸಾಲದು, ತಮ್ಮ ಜೀವನಾನುಭವ ಹಾಗೂ ತಜ್ಞ ಅನುಭವ ಜನಸಾಮಾನ್ಯರಿಗೂ ತಿಳಿಯಬೇಕು ಎಂದು ಶಾಂತಾರಾಮ ಶೆಟ್ಟರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿರುವುದು ಅವರ ಜನಪರ ಕಾಳಜಿಗೆ ದ್ಯೋತಕ', ಎಂದು ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.
ಇದೇ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಹೆಚ್. ಸುದರ್ಶನ್ ಬಲ್ಲಾಳ್ ಹಾಗೂ ಮಲ್ಲಿಗೆ ಆಸ್ಪತ್ರೆಯ ಅಧ್ಯಕ್ಷ ಡಾ. ಎ.ಸಿ. ಶ್ರೀರಾಂ ಅವರು ಎಂ. ಶಾಂತಾರಾಮ ಶೆಟ್ಟರ ಲೇಖನಿಯಿಂದ ಮೂಡಿಬಂದಿರುವ 'ಎಲುಬು ರೋಗಿಗಳು ಹಾಗೂ ಯೋಗ', 'ವೈದ್ಯ ವೃತ್ತಿಯ ನೀತಿ ಮತ್ತು ತತ್ವ' ಹಾಗೂ 'ಮೊಳಹಳ್ಳಿ - ಮೈ ಗೋಲ್ಡನ್ ವಿಲೇಜ್-– ಮೈ ಎನ್ಸೆಸ್ಟರಲ್ ಹೋಂ-ಪಟೇಲ್ಸ್ ದೊಡ್ಡಮನೆ' ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಹಿರಿಯ ವೈದ್ಯರು, ಶಿಕ್ಷಣ ತಜ್ಞರು ಹಾಗೂ ಸಾಹಿತ್ಯಾಸಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ