ಕೂ App ಮರಳಿ ಬರಲಿ, ಬಳಕೆದಾರರು ಬೆಂಬಲಿಸಲಿ

Upayuktha
0


ಸ್ಥಾಪನೆಗೊಂಡು ಕೇವಲ ನಾಲ್ಕೇ ವರ್ಷಗಳಲ್ಲಿ ಬಳಕೆದಾರರ ದೃಷ್ಟಿಯಿಂದ ಭಾರೀ ಜನಪ್ರಿಯತೆ ಗಳಿಸಿದ ದೇಸೀ ಟ್ವಿಟರ್ ಎಂಬ ಖ್ಯಾತಿಯ ಕೂ ಸಾಮಾಜಿಕ ಮಾಧ್ಯಮ ಸಂಸ್ಥೆ ಇಷ್ಟು ಬೇಗ ಕಣ್ಣು ಮುಚ್ಚುವಂತಾದುದು ನಿಜಕ್ಕೂ ದುಃಖದ ಸಂಗತಿ.


ಯಾವ್ಯಾವುದೋ ಕಂಪನಿಗಳು ಬಾಗಿಲು ಹಾಕಿದರೆ ಊರೇ ಮುಳುಗಿ ಹೋಯ್ತೇನೋ ಎಂಬಂತೆ ಬೊಬ್ಬಿರಿದು ಅಳುವ ನಮ್ಮ ಮಾಧ್ಯಮಗಳೂ ಕೂ ಕಾರ್ಯಾಚರಣೆ ನಿಲ್ಲಿಸಿದ್ದನ್ನು ಯಾರಿಗೂ ಗಮನಕ್ಕೆ ಬಾರದಷ್ಟು ಸಣ್ಣದಾಗಿ ಬಿತ್ತರಿಸಿ ಸುಮ್ಮನಾದವು. ಬಳಕೆದಾರ ಪ್ರಭುಗಳೂ ಸಹ ಒಂದು ವಿಷಾದ, ದುಃಖ, ಬೇಸರವನ್ನು ಬೇರೆ ಜಾಲತಾಣಗಳಲ್ಲಿ ತೋಡಿಕೊಂಡಿದ್ದು ಕಾಣಲಿಲ್ಲ.


ನಮ್ಮದೇ ಉದ್ಯಮ ಸಾಹಸಿಗಳಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಅಗ್ರವಾಲ್ ಸೇರಿಕೊಂಡು ಜನ್ಮನೀಡಿದ 'ಕೂ' ಹಕ್ಕಿಯ ಅಕಾಲಿಕ ಸಾವಿಗೆ ಮಿಡಿಯುವ ಮನಸ್ಸು ಯಾರಿಗೂ ಆಗಲಿಲ್ಲ. ಸ್ಟಾರ್ಟಪ್‌ಗಳಿಗೆ ಉತ್ತೇಜನ ಕೊಡಬೇಕಾದ ಸರಕಾರವೂ ಒಂದು ಹನಿ ಕಣ್ಣೀರನ್ನೂ ಹರಿಸದೆ 'ಕೂ' ಹಕ್ಕಿಯನ್ನು ಮರೆತೇ ಬಿಟ್ಟಿತು.


ಟ್ವಿಟರ್, ಫೇಸ್‌ ಬುಕ್‌ನಂತಹ ವಿದೇಶಿ ಜಾಲತಾಣಗಳನ್ನೇ ಸರಕಾರವೂ ಅವಲಂಬಿಸುವಂತಹ ಪರಿಸ್ಥಿತಿ ಯಾವತ್ತಿಗೂ ಒಳ್ಳೆಯದಲ್ಲ. ನಮ್ಮದೇ ಸ್ವದೇಶಿ ಸಂಸ್ಥೆಯೊಂದು ಹುಟ್ಟಿಕೊಂಡು, ನಾಲ್ಕು ವರ್ಷಗಳ ಕಾಲ ನಿರಂತರ ಕಷ್ಟ-ನಷ್ಟದಲ್ಲೂ ನಡೆದು ಬಂದಿರುವುದು ಸಣ್ಣ ಮಾತಲ್ಲ.



ಸಾಮಾಜಿಕ ಮಾಧ್ಯಮಗಳಲ್ಲಿ ಆದಾಯ ತಂದುಕೊಂಡು ಲಾಭದತ್ತ ಮುನ್ನಡೆಸುವುದು ಭಾರೀ ಹೋರಾಟವೇ ಸರಿ. ಕೊನೇ ಪಕ್ಷ ಹಳದಿ ಬಣ್ಣದ 'ಕೂ' ಹಕ್ಕಿಗೆ ಬಳಕೆದಾರರಾಗಲಿ, ಸರಕಾರವಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ ನೀಡಿದ ವಿದಾಯವೂ ಸರಿಯಾದುದಲ್ಲ.



'ಕೂ' ಆರಂಭವಾಗಿ ಬೆಳೆಯುವ ಹಂತದಲ್ಲಿದ್ದಾಗ ಕೆಲವೊಂದು ಮಾಧ್ಯಮಗಳು, ಸೆಲೆಬ್ರಿಟಿಗಳು, ಗಣ್ಯಾತಿಗಣ್ಯರು ಅದನ್ನು ಅದರ ಸ್ಥಾಪಕರನ್ನು ಹೊಗಳಿದ್ದುಂಟು. ಆದರೆ 'ಕೂ' ಕಣ್ಣು ಮುಚ್ಚಿದಾಗ ಅದನ್ನು ಮತ್ತೆ ಮೇಲೆದ್ದು ನಡೆಯುವಂತೆ ಮಾಡುವ ನಿಟ್ಟಿನಲ್ಲಿ ಯಾರೊಬ್ಬರೂ ಸಹಕರಿಸಲಿಲ್ಲ, ಬೆಂಬಲಿಸಲಿಲ್ಲ.



ಆತ್ಮನಿರ್ಭರತೆ ಎಲ್ಲ ರಂಗದಲ್ಲೂ ಬೇಕು. ಸಾಮಾಜಿಕ ಮಾಧ್ಯಮಗಳ ರಂಗದಲ್ಲಿ ಬೇಡವೆ...? ಕೇಂದ್ರ ಸರಕಾರದ ಹಲವು ಪ್ರಭಾವಿ ಸಚಿವರುಗಳೇ 'ಕೂ' ಮಾಡುತ್ತಿದ್ದರು ನಿಜ. ಅವರಿಗೂ ಈ ಸಂಸ್ಥೆಯ ದುಸ್ಥಿತಿಯಲ್ಲಿ ಏನಾದರೂ ಸಹಾಯ ಮಾಡಬೇಕೆಂದು ತೋರಲಿಲ್ಲವೆ? ಸರಕಾರಕ್ಕಂತೂ ಇಂಥವನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಿಲ್ಲ. ಆದರೆ ಭಾರ ಹೊತ್ತು ಮುನ್ನಡೆಯುವವರಿದ್ದಾಗ, ಅವರಿಗೆ ಭಾರವನ್ನು ತಾಳಲಾಗದ ಸಂದರ್ಭ ಬಂದಾಗ, ಸ್ವಲ್ಪವಾದರೂ ಹೆಗಲುಕೊಟ್ಟು ಒಂದಷ್ಟು ದೂರ ನಡೆಯುವುದು ಸಾಧ್ಯವಿತ್ತು. ಆದರೆ ಅಂತಹ ಯೋಚನೆ, ಮನಸ್ಸು ಯಾರೊಬ್ಬರಿಗೂ ಬಾರದಿರುವುದು ದುರಂತವೇ ಸರಿ.



'ಕೂ' ಕಾರ್ಯಾಚರಣೆ ನಿಲ್ಲಿಸುವ ಹಂತಕ್ಕೆ ಬಂದಾಗ ಅದರ ಸಂಸ್ಥಾಪಕರು ಭಾರವಾದ ಮನಸ್ಸಿನಿಂದ ನೀಡಿದ ಪ್ರಕಟಣೆ ಇಲ್ಲಿದೆ. ಕೊನೇಪಕ್ಷ ಅದಕ್ಕೊಂದು ಗೌರವಯುತ ವಿದಾಯವನ್ನಾದರೂ ಕೋರೋಣ, ಅಲ್ಲವೇ....?


================



ನಮಸ್ಕಾರ.

ಇದು ತುಂಬಾ ಭಾರವಾದ ಹೃದಯದಿಂದ, ಕೂ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ನಾವು ನಿಮಗೆ ತಿಳಿಸುತ್ತೇವೆ. ನಾವು ಜುಲೈ 3, 2024 ರಂದು ಕಾರ್ಯಾಚರಣೆಯನ್ನು ನಿಲ್ಲಿಸುತ್ತೇವೆ.

ಜನರನ್ನು ಅವರ ಮಾತೃಭಾಷೆಯ ಆಧಾರದ ಮೇಲೆ ಒಟ್ಟಿಗೆ ಸೇರಿಸುವ ಉದ್ದೇಶದಿಂದ ನಾವು ಕೂ ಅನ್ನು ಪ್ರಾರಂಭಿಸಿದ್ದೇವೆ. ಹೆಚ್ಚಿನ ಜಾಗತಿಕ ಉತ್ಪನ್ನಗಳು ಇಂಗ್ಲಿಷ್‌ನ ಮೇಲೆ ಕೇಂದ್ರೀಕರಿಸುತ್ತವೆ ಆದರೆ ಪ್ರಪಂಚದ 80% ಜನರು ಇಂಗ್ಲಿಷ್ ಹೊರತುಪಡಿಸಿ 1000 ಭಾಷೆಗಳನ್ನು ಮಾತನಾಡುತ್ತಾರೆ. ಈ ಬಳಕೆದಾರರನ್ನು ಹೆಚ್ಚು ಅರ್ಥಪೂರ್ಣ ರೀತಿಯಲ್ಲಿ ಸಂಪರ್ಕಿಸಲು ಮತ್ತು ಪರಸ್ಪರ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡಲು ನಾವು ಬಯಸುತ್ತೇವೆ. ಕೋವಿಡ್ ಲಾಕ್‌ಡೌನ್ ಪ್ರಾರಂಭವಾಗುವ ಮೊದಲು ನಾವು 4 ವರ್ಷಗಳ ಹಿಂದೆ ಮಾರ್ಚ್ 2020 ರಲ್ಲಿ Koo ಅನ್ನು ಪ್ರಾರಂಭಿಸಿದ್ದೇವೆ. ಕೂ ಕೋವಿಡ್ ಕಾಲದ ಮಗುವಾಗಿತ್ತು.


ಈ ನಾಲ್ಕು ವರ್ಷಗಳಲ್ಲಿ ಇದು ಬಳಕೆದಾರರು, ರಚನೆಕಾರರು, ಪ್ರಪಂಚದಾದ್ಯಂತದ ಪ್ರಖ್ಯಾತ ವ್ಯಕ್ತಿಗಳು ಮತ್ತು ಮಾಧ್ಯಮಗಳಿಂದ ಬಹಳಷ್ಟು ಪ್ರೀತಿಯನ್ನು ಪಡೆಯಿತು. ಇದು ಟ್ವಿಟರ್‌ಗೆ ಏಕೈಕ ನಿಜವಾದ ಪ್ರತಿಸ್ಪರ್ಧಿಯಾಗಿತ್ತು. ಇದು 60 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳು, 8000+ ವಿಐಪಿ ಖಾತೆಗಳು, 100 ಪ್ರಕಾಶಕರ ಖಾತೆಗಳನ್ನು ಪಡೆದುಕೊಂಡಿದೆ ಮತ್ತು ಪ್ರತಿಯೊಬ್ಬರೂ ವಿಷಯವನ್ನು ಸೇವಿಸುವ ಮತ್ತು ಸಮಯವನ್ನು ಕಳೆಯುವ ಮೂಲಕ ಲಕ್ಷಾಂತರ ಗಂಟೆಗಳನ್ನು ವ್ಯಯಿಸಿದ್ದಾರೆ.


ಈ ಪ್ಲಾಟ್‌ಫಾರ್ಮ್‌ನಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವ ಲಕ್ಷಾಂತರ ಬಳಕೆದಾರರಿಂದ ದೂರವಿರಲು ನಮಗೆ ತುಂಬಾ ದುಃಖವಾಗುತ್ತದೆ. ದುರದೃಷ್ಟವಶಾತ್ ಸಾಮಾಜಿಕ ಮಾಧ್ಯಮ ಕಂಪನಿಯನ್ನು ನಡೆಸುವುದು ಲಾಭದಾಯಕವಾಗುವ ಮೊದಲು ಕೆಲವು ವರ್ಷಗಳವರೆಗೆ ಭಾರೀ ವೆಚ್ಚವನ್ನು ತಾಳಿಕೊಳ್ಳಬೇಕಾಗುತ್ತದೆ. ನಮಗೂ ಆ ಹಂತಕ್ಕೆ ಬೆಳೆಯಲು ಇನ್ನೂ ಸ್ವಲ್ಪ ಸಮಯ ಬೇಕಿತ್ತು. ನಾವು ಕಳೆದ 2 ವರ್ಷಗಳಿಂದ ಹಣವನ್ನು ಸಂಗ್ರಹಿಸಲು ನೋಡುತ್ತಿದ್ದೇವೆ. ಆದರೆ ಫಂಡಿಂಗ್ ಮಾರುಕಟ್ಟೆಯು ಕೇವಲ ಕೂಗೆ ಮಾತ್ರವಲ್ಲ, 1000 ದಷ್ಟು ಸ್ಟಾರ್ಟ್‌ಅಪ್‌ಗಳಿಗೆ ಕಗ್ಗಂಟಾಯಿತು. ಇನ್ನು ಮುಂದೆ ಕೂ ಕಾರ್ಯಾಚರಣೆಯನ್ನು ಮುಂದುವರಿಸಲು ತುಂಬಾ ಕಷ್ಟವಾಗುತ್ತದೆ.


ಕೂ ಮೇಲೆ ನೀವು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ತುಂಬಾ ಧನ್ಯವಾದಗಳು. ಪುಟ್ಟ ಹಳದಿ ಹಕ್ಕಿಗೆ ವಿದಾಯ ಹೇಳುವ ಸಮಯ ಇದು.


ಅಪ್ರಮೇಯ ಮತ್ತು ಮಯಾಂಕ್

- ಸಹ ಸಂಸ್ಥಾಪಕರು, ಕೂ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top