ಕೊಪ್ಪಳ :ಪುರಾಣ ಪುರುಷ, ಸಕಲ ಗುಣ ಪರಿಪೂರ್ಣ ಶ್ರೀರಾಮಚಂದ್ರನ ನಿಜದೂತನಾದ ಶ್ರೀ ಹನುಮಂತ ದೇವರುಜಿಲ್ಲೆಯ ಅಗಳಕೇರಿ ಬಳಿಯ ಗುಡ್ಡದಲ್ಲಿ ಶ್ರೀ ಅಂದಿಗಾಲೀಶನ ಹೆಸರಿನಿಂದ ಪ್ರಸಿದ್ಧನಾಗಿದ್ದು, ಇದೇ ಆಗಸ್ಟ್ 31 ರಂದು ನಾಲ್ಕನೇ ಶ್ರಾವಣ ಶನಿವಾರ ವೈಭವದ ಜಾತ್ರೆ ಜರುಗಲಿದೆ. ಅಗಳಕೇರಿ ಗ್ರಾಮಸ್ಥರು ಶತಮಾನಗಳಿಂದಲೂ ಪ್ರತಿವರ್ಷ ಶ್ರಾವಣ ಮಾಸದ ಕೊನೆ ಶನಿವಾರದಂದು ಶ್ರೀ ಅಂದಿಗಾಲೀಶ ಸ್ವಾಮಿಯ ಜಾತ್ರೋತ್ಸವ ನೆರವೇರಿಸಿಕೊಂಡು ಬರುತ್ತಿದ್ದಾರೆ.
ಈ ಗುಡ್ಡದಲ್ಲಿ ಮೊದಲು ಮೆಟ್ಟಿಲುಗಳು ಇರಲಿಲ್ಲ. ಅಗಳಕೇರಿ, ಶಿವಪುರ, ಶಹಪುರ, ಹಿಟ್ನಾಳ, ಕಂಪಸಾಗರ ಒಳಗೊಂಡಂತೆ ಸುತ್ತಲಿನ ಗ್ರಾಮಸ್ಥರು ಮಾತ್ರ ಗುಡ್ಡ ಏರಿ ಅಂದಿಗಾಲೀಶನ ದರ್ಶನ ಪಡೆದು ಹಣ್ಣು, ಕಾಯಿ ಸಮರ್ಪಿಸಿ ಧನ್ಯತೆ ಹೊಂದುತ್ತಿದ್ದರು. ಇದೀಗ ಅಂದಿಗಾಲೀಶನ ಗುಡ್ಡಕ್ಕೆ ಮೆಟ್ಟಿಲುಗಳು ನಿರ್ಮಾಣವಾಗಿವೆ. ಮೆಟ್ಟಿಲು ಕಾರ್ಯ ಪೂರ್ಣಗೊಂಡ 10 ವರ್ಷದ ಹಿಂದಿನಿಂದಲೂ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಭಕ್ತರ ನೆರವಿನಿಂದ ಶ್ರೀ ಅಂದಿಗಾಲೀಶ ಗುಡ್ಡಕ್ಕೆ 956 ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದ್ದು, ಜಾತ್ರೋತ್ಸವ ಸಮಯ ಮಾತ್ರವಲ್ಲದೆ, ಪ್ರತಿ ಶನಿವಾರ ಭಕ್ತರು ಗುಡ್ಡಕ್ಕೆ ಆಗಮಿಸುತ್ತಿದ್ದಾರೆ.
ಜಾತ್ರೋತ್ಸವ ವೇಳೆ ಗುಡ್ಡಕ್ಕೆ ಆಗಮಿಸುವ ಭಕ್ತರಿಗೆ ಅಗಳಕೇರಿ ಗ್ರಾಮಸ್ಥರು ಕುಡಿಯುವ ನೀರು, ಅನ್ನದಾನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮಹೇಂದ್ರ ಪರ್ವತ:-ಪುರಾಣದ ಪ್ರಕಾರ ಕಿಷ್ಕಿಂದೆ ಪರಿಸರದಲ್ಲಿರುವ ಬೆಟ್ಟಗುಡ್ಡಗಳ ಶ್ರೇಣಿಗಳನ್ನು ಮಹೇಂದ್ರ ಪರ್ವತ ಎಂದು ಕರೆಯಲಾಗುತ್ತಿದೆ. ಇದೇ ಪರ್ವತದಲ್ಲಿ ನಿಂತು ಲಂಕಾ ಪಟ್ಟಣ ಸುಟ್ಟು ಹಾಕುವ ಯೋಜನೆಹಾಕಿಕೊಂಡ ಹನುಮಂತ ದೇವರು ಧೂಮಕೇತು(ಅಗ್ನಿ)ವಿನಂತೆ ಬೃಹತ್ ಗಾತ್ರ ತಾಳಿ, ತನ್ನ ಬಾಲವನ್ನು ನೆಲಕ್ಕಪ್ಪಳಿಸಿ, ರೋಮ ಹರ್ಷದಿಂದ ಕೂಡಿ, ಕಿವಿಗಳನ್ನು ಗೂಟದಂತೆ ನೆಟ್ಟಗೆ ನಿಮಿರಿಸಿಕೊಂಡು ಮಹೇಂದ್ರ ಪರ್ವತವನ್ನು ಕಾಲಿನಿಂದ ಒತ್ತಿಕೊಂಡು ಕೈಗಳನ್ನು ಹಾರುವುದಕ್ಕೆ ಸಿದ್ಧನಾಗಿ ಪ್ರಕಾಶಿಸಿದಾಗ ಒಂದು ಕಾಲನ್ನು ಇಲ್ಲಿರಿಸಿ, ಲಂಕೆಗೆ ನೆಗೆದನೆಂಬ ಐತಿಹ್ಯ `ಸುಂದರ ಕಾಂಡದಲ್ಲಿ ವಿವರಿಸಲಾಗಿದೆ.
ಅಂದಿಗೆ ಅಂದರೆ `ಅಂಟಿಸು ಎಂದರ್ಥ. ಹೀಗಾಗಿ ಪಂಚ ಜ್ಞಾನೇಂದ್ರಿಯಗಳು ಮತ್ತು ದಶವಿಧ ಪ್ರಾಣಗಳನ್ನು ನಿಗ್ರಹಿಸಿ ಋಜುಕಾಯನಾಗಿ, ರಘು ಪ್ರವೀತನಾದ ರಾಮನ ಧ್ಯಾನ ಮಾಡುವ ಮಹಾ ಯೋಗಿಯಂತೆ ಸಹಸ್ರ ಫಣಿಗಳುಳ್ಳ ಶೇಷದೇವರೋಪಾದಿಯಲ್ಲಿ ಶರೀರ ಕಾಂತಿಯುಳ್ಳ, ವಜ್ರದೇಹಧಾರಿ, ಮಹಾಶೂರನಾದ ಅಂದಿಗಾಲೀಶನು ಕಪಿಗಳನ್ನು, ಭಕ್ತರನ್ನು ಸಂತೋಷಪಡಿಸುವುದಕ್ಕಾಗಿ ಈ ಗುಡ್ಡದಲ್ಲಿ ನೆಲೆ ನಿಂತಿದ್ದಾ ನೆಂದು ಭಕ್ತರು ನಂಬಿದ್ದಾರೆ. ಅಂದಿಗಾಲೀಶ ನೆಂಬ ಅಭಿದಾನ:-ಶ್ರೀ ಅಂದಿಗಾಲೀಶನ ಗುಡ್ಡ ಕುರುಚಲು ಗಿಡ, ಮರಗಳಿಂದ ಕೂಡಿದ್ದು ರಮಣೀಯವಾಗಿದೆ.
ಉತ್ತರಾಭಿಮುಖವಾಗಿ ನಿಂತಿರುವ ಏಕಶಿಲೆಯ ಮೇಲ್ಭಾಗದ ತುತ್ತ ತುದಿಯಲ್ಲಿ ಶ್ರೀ ಅಂದಿಗಾಲೀಶನ ಮಂದಿರ ನಿರ್ಮಾಣ ಮಾಡಲಾಗಿದೆ. ನೈಸರ್ಗಿಕವಾದ ಬಂಡೆಕಲ್ಲುಗಳು ಹೇರಳವಾಗಿದ್ದು, ದೇಹದಲ್ಲಿ ಕಸುವಿರುವವರಿಗೆ ಚೈತನ್ಯ ತುಂಬುತ್ತಿದೆ. ಮಂದಿರ ಸಾಧಾರಣ ಇದ್ದರೂ ಗರ್ಭ ಗುಡಿಯಲ್ಲಿ ಆಳೆತ್ತರದ ಶ್ರೀ ಅಂದಿಗಾಲೀಶ ಮಾತ್ರ ಶ್ರೀ ರಾಮಚಂದ್ರನ ಬಾಣದಂತೆ ತೀಕ್ಷ್ಣವಾಗಿ, ಮಹಾವೇಗವುಳ್ಳವನಾಗಿ ಲಂಕೆಗೆ ಹೋಗಿ ಆರ್ಯಳಾದ ಸೀತಾದೇವಿಯನ್ನು ನೋಡುವ, ಕಮಲ ಪುಷ್ಪದಂತಿರುವ ಲಂಕೆಯನ್ನು ಕೈಯಲ್ಲಿ ಹಿಡಿದು, ದಶಕಂಠನನ್ನು ಪಶುವಿನಂತೆ ಕಟ್ಟಿ ತರುತ್ತೇನೆ ಎನ್ನುವ ದೃಢಭಾವ, ಸಮಚಿತ್ತ ಹೊಂದಿರುವ ಖಚಿತ ಬುದ್ಧಿಯ ಭಾವಭಂಗಿಯಲ್ಲಿ ಕಂಗೊಳಿಸುತ್ತಿದ್ದಾನೆ.
ಹೀಗಾಗಿ ಇಲ್ಲಿನ ಪ್ರಾಣದೇವರಿಗೆ ಭಕ್ತರು `ಅಂದಿಗಾಲೀಶ' ಎಂಬ ಅಭಿದಾನದಿಂದ ಕರೆಯುತ್ತಿದ್ದಾರೆ. ಗುಡ್ಡದಲ್ಲಿ ಏನುಂಟು?:- ಅಂದಿಗಾಲೀಶನ ಗುಡ್ಡದ ಎಡ ಬದಿಯ ಕೆಳಗೆ ಕಡಿದಾದ ಕಲ್ಲು ಬಂಡೆಗಳ ಸಂದಣಿ ಇದೆ. ಸಣ್ಣಪುಟ್ಟ ಕಲ್ಲು ಬಂಡೆಗಳನ್ನು ಇಳಿದು-ಮೇಲಕ್ಕೆ ಹತ್ತಿ ಚಾರಣದ ಅನುಭೂತಿ ಪಡೆಯಬಹುದು. ಅಂದಿಗಾಲೀಶನನ್ನು ದರ್ಶಿಸುವ ಮುನ್ನ ಗುಡ್ಡದ ಮಧ್ಯೆ ಎಡಭಾಗದಲ್ಲಿ ಆಳೆತ್ತರದ ಹುತ್ತ ಇದೆ. ಬೃಹದಾಕಾರದ ಬಂಡೆಯೊಂದು ಹಾವಿನ ಹೆಡೆ ಅಡಿಯಲ್ಲಿ ಹುತ್ತವನ್ನು ಆವರಿಸಿಕೊಂಡಿದೆ. ಭಕ್ತಿ ಭಾವ ಮೂಡಿಸುವ ಈ ತಾಣ ಚರ್ಮರೋಗ ಉಳ್ಳವರು, ಸಂತಾನ ಅಪೇಕ್ಷಿಸುವವರು ಇಲ್ಲಿನ ಹುತ್ತಕ್ಕೆ ಹಾಲೆರೆದು, ವಿಧಾನೋಕ್ತ ಪೂಜೆ ಮಾಡಿದರೆ ಸರ್ಪದೋಷ ನಿವಾರಣೆಯಾಗಿ, ಚರ್ಮ ಕಾಂತಿಯಾಗುತ್ತದೆ.
ಸಂತಾನ ಫಲ ಪ್ರಾಪ್ತಿಯಾಗುತ್ತದೆ. ಗುಡ್ಡದ ಅಡಿಯ ಪೂರ್ವ ಭಾಗದಲ್ಲಿ `ಕೋತಿ ಗುಂಡು' ಇದ್ದು ವರ್ಷಪೂರ್ತಿ ಇಲ್ಲಿ ನೀರು ಇರುತ್ತದೆ. ಈ ಜಲ ಸೇವಿಸುವುದರಿಂದ ಉದರ ಶೂಲೆ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಗುಡ್ಡದ ಏಕಶಿಲಾ ಬೆಟ್ಟದ ಮೇಲ್ಬಾಗದಲ್ಲಿ ನೈಸರ್ಗಿಕ ಕುಡಿಯುವ ನೀರಿನ ತೊಟ್ಟಿಗಳಿವೆ. ಭಕ್ತರು ಗುಡ್ಡ ಏರಿ ತಮ್ಮ ಬಂಧು, ಬಳಗ, ಸ್ನೇಹಿತರು ಮತ್ತು ಹಿತೈಷಿಗಳೊಡನೆ ಕೂಡಿಕೊಂಡು ಅಡುಗೆ ತಯಾರಿಸಿ ಸಹಭೋಜನ ಮಾಡುವುದು ವಾಡಿಕೆ. ವಿಹಾರ ವೈವಿಧ್ಯ:-ಶ್ರೀ ಅಂದಿಗಾಲೀಶ ಗುಡ್ಡ ಭಕ್ತರಿಗೆ ಧಾರ್ಮಿಕ ತಾಣವಾಗಿದ್ದರೆ, ಪ್ರವಾಸಿಗರಿಗೆ ಸ್ವರ್ಗ ಸುಧೆ ಉಣಿಸುವ ಸೌಧವಾಗಿದೆ. ಗುಡ್ಡ ಏರಿ ನಿಂತರೆ ಸುತ್ತಲೂ ಮಹೇಂದ್ರ ಪರ್ವತದ ಪಡಿಯಚ್ಚುಗಳಂತಿರುವ ಕಲ್ಲುಬಂಡೆಗಳ ರಾಶಿ ಕಾಣಸಿಗುತ್ತದೆ.
ಗುಡ್ಡದ ಪೂರ್ವದಲ್ಲಿ ಸೋಮಪ್ಪನ ಕೆರೆ, ದಕ್ಷಿಣದ ಆಗ್ನೇಯದಲ್ಲಿ ತುಂಗಭದ್ರಾ ಜಲಾಶಯದ ವಿಹಂಗಮ ನೋಟ ಕಣ್ಸೆಳೆಯುತ್ತದೆ. ದಕ್ಷಿಣದಲ್ಲಿ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ನಾಲೆ ಸರೀಸೃಪದಂತೆ ಸಳಸಳನೆ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ದೂರದಲ್ಲೆಲ್ಲೋ ಹಂಪಿ, ಆನೆಗೊಂದಿಯ ಪರಿಸರ ಗೋಚರಿಸುತ್ತದೆ. ನಿಸರ್ಗದ ಸೌಂದರ್ಯ ಇಲ್ಲಿ ಮೈವೆತ್ತಂತಿದ್ದು ಪ್ರವಾಸಿಗರು ಮತ್ತು ಭಕ್ತರನ್ನು ಶ್ರೀ ಅಂದಿಗಾಲೀಶ ಗುಡ್ಡ ಕೈ ಬೀಸಿ ಕರೆಯುತ್ತಿದೆ. ಗುಡ್ಡಕ್ಕೆ ಹೇಗೆ ಬರುವುದು?-ಕೊಪ್ಪಳ ಜಿಲ್ಲೆಯ ಅಗಳಕೇರಿ ಗ್ರಾಮಕ್ಕೆ ನಾಲ್ಕೂ ನಿಟ್ಟಿನಿಂದ ಕರ್ನಾಟಕ ಸಾರಿಗೆ ಬಸ್ ಸೌಲಭ್ಯ ಇದೆ. ಕೊಪ್ಪಳ ಮತ್ತು ಹೊಸಪೇಟೆಯಿಂದ 20 ಕಿ.ಮೀ., ಗಂಗಾವತಿಯಿಂದ 18 ಕಿ.ಮೀ., ಹುಲಿಗಿಯಿಂದ 7 ಕಿ.ಮೀ., ಅಂಜನಾದ್ರಿಯಿಂದ 14 ಕಿ.ಮೀ., ಬೂದಗುಂಪಾ ಕ್ರಾಸ್ ನಿಂದ 10 ಕಿ.ಮೀ. ಅನತಿ ದೂರದಲ್ಲಿರುವ ಅಗಳಕೇರಿಗೆ ಬಸ್, ಕಾರು, ಆಟೋ, ಟ್ಯಾಕ್ಸಿ, ಮೋಟಾರ್ ಬೈಕ್ ನಲ್ಲಿ ಬರಬಹುದು. ಅಲ್ಲಿಂದ ಕೇವಲ 3 ಕಿ.ಮೀ.ಅಂತದಲ್ಲಿರುವ ಅಂದಿಗಾಲೀಶನ ಗುಡ್ಡ ಹತ್ತಬಹುದು.
ಇದಕ್ಕೂ ಮುನ್ನ ತುಂಗಭದ್ರಾ ಎಡದಂಡೆ ನಾಲೆ ಇದ್ದು ಕಾಲು ಸೇತುವೆ ದಾಟಿ ಗುಡ್ಡದತ್ತ ಧಾವಿಸಬಹುದು. ಆ ಒಂದು ದಿನದ ಮಟ್ಟಿಗೆ ಅಂದಿಗಾಲೀಶನ ದರ್ಶನ, ಭೋಜನ ಸವಿದು ಭಕ್ತಿ ಮತ್ತು ಪ್ರಕೃತಿಯ ರಮಣೀಯತೆ ಆಸ್ವಾದಿಸಬಹುದು. ಏನುಪಯೋಗ?-`ಸುಂದರ ಕಾಂಡ' ದಲ್ಲಿ ನಿರೂಪಿಸಿದಂತೆ ವನವಾಸಿಯಾದ ಅಂದಿಗಾಲೀಶನನ್ನು ಸಾತ್ವಿಕ ಭಕ್ತಿಯಿಂದ ಹೂವು, ಹಣ್ಣು, ಕಾಯಿ, ದೀಪ, ಧೂಪಗಳಿಂದ ಪೂಜಿಸಿದರೆ ಭೀಮ ಶಕ್ತಿ,ಜ್ಞಾನ ಸುಧೆ, ಜನ್ಮ, ಮೃತ್ಯು, ಭಯ, ಸರ್ವ ಭಗ್ನ ಕ್ಲೇಶಗಳ ವಿನಾಶ, ಯಾತನೆ, ಪ್ರೇತ, ಭೂತ, ಪಿಶಾಚಿ ಭಯ ನಿವಾರಣೆ, ಶತೃ ನಾಶ ಮತ್ತು ಸರ್ವತ್ರ ವಿಜಯ ಪ್ರಾಪ್ತಿಯಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ