ದೈವರಾಧನೆಗೆ ಸರ್ವಸ್ವವನ್ನೇ ಸಮರ್ಪಿಸಿದ ಕಾಂತು ಅಜಿಲ

Upayuktha
0

ರಶುರಾಮನಿಂದ ಸೃಷ್ಟಿತವಾದ ಈ ಪುಣ್ಯ ಭೂಮಿ ತುಳುನಾಡು ಅದೆಷ್ಟೋ ಆರಾಧನೆಗಳ ನೆಲೆಬೀಡು. ಅಂತಹ ಅನೇಕ ಆರಾಧನೆಗಳಲ್ಲಿ ದೈವರಾಧನೆ ಕೂಡ ಒಂದು. ಭಯ, ಭಕ್ತಿ ಹಾಗೂ ನಂಬಿಕೆಯನ್ನಾವುಳ್ಳಂತಹ ಆರಾಧನೆ ದೈವರಾಧನೆಯಾಗಿದೆ. ಇದನ್ನು 'ಭೂತರಾಧನೆ' ಎಂದು ಸಹ ಕರೆಯುವ ವಾಡಿಕೆ ಇದೆ. "ಏರ್ ಕೈ ಬುಡುಂಡಲ ನಮ ನಂಬಿನ ದೈವ ಕೈ ಬುಡಂದ್" ಎಂಬ ಮಾತಿನಂತೆ ಇಂದಿಗೂ ದೈವಗಳು ಬೆನ್ನ ನೆರಳಿನಂತೆ ಕಾಯುತ್ತಿದೆ. ಇಂತಹ ದೈವರಾಧನೆಗೆ ಅನೇಕ ದೈವ ನರ್ತಕರು ತಮ್ಮ ಜೀವನವನ್ನು ಮುಡಿಪಾಗಿ ಇಟ್ಟಿದ್ದಾರೆ, ಅಂಥವರಲ್ಲಿ ಕಾಂತು ಅಜಿಲ ಕೂಡ ಒಬ್ಬರು.


ಕಾಂತು ಅಜಿಲರು 01-01-1966 ರಂದು ಸುಳ್ಯ ತಾಲೂಕು, ಎಡಮಂಗಳ ಗ್ರಾಮದ ಮೂಲಂಗೇರಿ ಎಂಬಲ್ಲಿ ಚನ್ನ ಅಜಿಲ ಹಾಗೂ ಕುಂಞಿ ದಂಪತಿಯವರ 7 ಜನ ಮಕ್ಕಳಲ್ಲಿ 5ನೇಯವರಾಗಿ ಜನಿಸಿದರು. ಇವರ ತಂದೆ ಹಾಗೂ ಅಜ್ಜ ಕೂಡ ದೈವ ನರ್ತನದಲ್ಲಿ ಊರ ಹಾಗೂ ಪರವೂರಿನಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿದ್ದಾರೆ. ಅವರಂತೆಯೇ ಕಾಂತು ಅಜಿಲ ಕೂಡ 20ನೇ ವಯಸ್ಸಿಗೆ ತನ್ನ ಕುಲ ಕಸುಬಾದ ದೈವದ ನರ್ತನ ಸೇವೆಯಲ್ಲಿ ತೊಡಗಿಕೊಂಡರು. ದೈವದ ಸೇವೆಯಲ್ಲಿ ಭಕ್ತಿ ಹಾಗೂ ಅಚಲವಾದ ನಂಬಿಕೆಯಿಂದ ತನ್ನ ಪೂರ್ವಜರಂತೆ ಇವರು ಕೂಡ ದೈವರಾಧನೆಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಎಲ್ಲರ ಮನೆ-ಮನಗಳಲ್ಲಿ ಪ್ರಸಿದ್ದಿ ಪಡೆದರು. ದೈವರಾಧನೆಗೆ ತನ್ನ ಸರ್ವಸ್ವವನ್ನೇ ಸಮರ್ಪಿಸಿದರಿಂದ ಊರು ಹಾಗೂ ಪರವೂರಿನಲ್ಲಿ ಕಾಂತು ಅಜಿಲ ಎಂಬ ಹೆಸರು ಅತ್ಯಂತ ಚಿರಪರಿಚಿತವಾಯಿತು.


ತನ್ನ ಪೂರ್ವಜರಿಂದ ಪರಂಪರಾಗತವಾಗಿ ಬಂದಂತಹ ದೈವದ ಚಾಕ್ರಿಯನ್ನು ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದರು. ಹಾಗೂ ದೈವದ ಸೇವೆಯಲ್ಲಿ ಯಾವುದೇ ರೀತಿಯ ಹೊಸ ಕ್ರಮವನ್ನು ಅನುಸರಿಸದೆ ತನ್ನ ಪೂರ್ವಜರ ಪದ್ಧತಿಯಂತೆ ಹಿಂದಿನ ಕ್ರಮವನ್ನೇ ಪಾಲಿಸುತ್ತಾ ಬಂದಿರುವುದು ವಿಶೇಷ ಎನ್ನಬಹುದು.


ಇವರು ಗ್ರಾಮದ ದೈವಗಳಾದ ಶಿರಾಡಿ, ಮಹಾಲಿಂಗರಾಯ (ಮಲೆಂಗ್ರಿರಾಯ) ಉಳ್ಳಾಕುಲು, ಚಾಮುಂಡಿ ಹಾಗೂ ಇತರ ದೈವಗಳ ಸೇವೆಯನ್ನು ಕೂಡ ನಿಷ್ಠೆಯಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದರು, ಅಷ್ಟಲ್ಲದೆ ಪರವೂರಿನಲ್ಲೂ ಸಹಿತ ದೈವದ ನರ್ತನ ಸೇವೆಯನ್ನು ಬಹಳ ನೇಮ-ನಿಷ್ಠೆಯಿಂದ ಮಾಡಿಕೊಂಡು ಬಂದಿರುತ್ತಾರೆ.


ಕಾಂತು ಅಜಿಲರು 'ನಮ್ಮ ಕುಡ್ಲ' ಎಂಬ ಚಾನೆಲ್‌ನಲ್ಲಿ ದೈವದ ಸಂದರ್ಶನದಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲದೆ ಗ್ರಾಮಗಳಲ್ಲಿ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ಗ್ರಾಮ ಅಲ್ಲದೆ ಬೇರೆ ಗ್ರಾಮದಲ್ಲೂ ಕೂಡ ಉತ್ತಮ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಅದರೆ ವಿಪರ್ಯಾಸ ಎಂದರೆ ಗ್ರಾಮ ಚಾವಡಿಯಾದ ಇಡ್ಯಡ್ಕ ಎಂಬಲ್ಲಿ ದಿನಾಂಕ 30-03-2023 ರಂದು ಶಿರಾಡಿ ರಾಜನ್ ದೈವದ ನರ್ತನ ಸೇವೆ ಮಾಡುತ್ತಿರುವಾಗಲೇ ಹೃದಯಾಘಾತದಿಂದ ದೈವಾಧೀನರಾದರು. ಅಂದು ಆ ಊರು ಹಾಗೂ ಪರವೂರಿನ ಜನರು ಒಬ್ಬ ದೈವ ನರ್ತಕನನ್ನು ಕಳೆದುಕೊಂಡಿದಷ್ಟಲ್ಲದೇ ತಮ್ಮ ಪಾಲಿಗೆ ಒಬ್ಬ ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದಾರೆ.


ಇವರು ಪತ್ನಿ ಗಿರಿಜಾ ಹಾಗೂ ಇವರಿಗೆ ಐವರು ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದಾರೆ. ಇಂದು ಇವರ ದೈವದ ಸೇವೆಯನ್ನು ಇವರ ಇಬ್ಬರು ಪುತ್ರರು ಮುನ್ನಡೆಸುತ್ತ ಹೋಗುತ್ತಿದ್ದಾರೆ. ತನ್ನ ಪೂರ್ವಜರು ಹಾಗೂ ತಂದೆಯ ದಾರಿಯಂತೆ ಇವರೂ ಕೂಡ ಸಾಗುತ್ತಿದ್ದು ದೈವದ ಸೇವೆಯನ್ನಾ ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ಮುನ್ನಡೆಸುತ್ತಾ ಸಾಗುತ್ತಿದ್ದಾರೆ. ಇವರ ದೈವದ ಸೇವೆಯು ಹೀಗೆಯೇ ಮುಂದುವರೆಯುವಂತಾಗಲಿ ಎಂದು ಆಶಿಸೋಣ.


ದೈವರಾಧನೆಗೆ ತನ್ನ ಜೀವನದ ಜೊತೆಗೆ ಜೀವವನ್ನೆ ಸಮರ್ಪಣೆ ಮಾಡಿದ ಕಾಂತು ಅಜಿಲರು ಇಂದಿಗೂ ಊರ ಹಾಗೂ ಪರವೂರ ಮತ್ತು ಕುಟುಂಬಸ್ಥರ ಮನದಲ್ಲಿ ಹಚ್ಚೆಯಾಗಿ ಉಳಿದಿದ್ದಾರೆ.


- ಧನ್ಯಶ್ರೀ ಕೆ

ಪೆರ್ಲಂಪಾಡಿ 

ಪ್ರಥಮ ಪತ್ರಿಕೋದ್ಯಮ ವಿಭಾಗ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top