ಕಲಿಯುಗದಲ್ಲಿ ಕಾಣಲು ಸಾಧ್ಯವೇ ಶ್ರೀರಾಮಚಂದ್ರನಂತವರನ್ನು? ಅಯೋಧ್ಯೆಯ ದೀಪ ರಾಮನನ್ನು ಶ್ರೀ ರಾಮಚಂದ್ರ ಎಂದು ಕರೆಯಲು ಕಾರಣ ತಿಳಿದಿದೆಯೇ ನಿಮಗೆ? ನನಗೆ ತಿಳಿದಿರುವಂತೆ ಎಲ್ಲಾ ಸ್ತ್ರೀಯರು ತಮಗೆ ಶ್ರೀ ರಾಮಚಂದ್ರನಂತಹ ಪತಿ ಬೇಕು ಎಂದು ಬಯಸುತ್ತಾರೆ. ಕಲಿಯುಗದಲ್ಲಿ ರಾಮನಂತವರು ಕೆಲವೇ ಕೆಲವರು ಇರಬಹುದು, ರಾಮ ಏಕಪತ್ನಿ ವ್ರತಸ್ಥ. ಸ್ತ್ರೀಯರನ್ನು ಗೌರವಿಸುವ ಆದಿಪುರುಷ.
ನಾನು ಇಲ್ಲಿ ಶ್ರೀ ರಾಮಚಂದ್ರ ಎಂದು ಆರಂಭಿಸಲು ಕಾರಣ ನಮ್ಮೀ ಸಮಾಜ ಮತ್ತು ಸಂಸ್ಕೃತಿ. ಹಿಂದೆ ಇದ್ದ ಸಂಸ್ಕೃತಿ ಇಂದು ಅಲ್ಪ ಪ್ರಮಾಣದಲ್ಲಿ ಜೀವಂತವಾಗಿದೆ.
ಹಿಂದೆ ಪತಿ ಎಂದರೆ ಒಂದು ಗೌರವ ಇತ್ತು. ಆದರೆ ಈ ದಿನಗಳಲ್ಲಿ ಪತಿಯ ಮೇಲಿನ ಗೌರವ ಕಡಿಮೆಯಾಗಿದೆ. ಅಲ್ಲದೇ ವಿವಾಹ ತನ್ನ ರೂಪವನ್ನೇ ಕಳೆದುಕೊಂಡಿದೆ. ಹಿಂದೆ ವಿವಾಹ ಎಂದರೆ ಒಂದು ಸಂಭ್ರಮ ಆದರೆ ಈ ದಿನಗಳಲ್ಲಿ ಈ ಸಂಭ್ರಮ ಮರೆಯಾಗಿದೆ.
ಹಿಂದೆ ಪತಿ ಎಂದರೆ ಪರದೈವ ಎಂಬ ಪದ್ಧತಿ ಇತ್ತು, ಆದರೆ ಈ ದಿನಗಳಲ್ಲಿ ಅದು ಕಾಣಸಿಗುವುದು ಕಡಿಮೆ. ವಿವಾಹ ಎಂದರೆ ಏಳೇಳು ಜನ್ಮದ ಅನುಬಂಧ ಹಿಂದೆ, ಈಗ ಏಳು ದಿನ ಉಳಿದರೇ ಸಾಕು ಎಂಬ ಗತಿ ತಲುಪಿದೆ. ಇಂದಿನ ಸಮಾಜ ವಿವಾಹ ರಹಿತ ಸಂಬಂಧ ಇಟ್ಟುಕೊಂಡು ವಿವಾಹ ಎಂಬ ಪವಿತ್ರ ಕ್ರಿಯೆಯ ಮಹತ್ವವನ್ನೇ ಕಡಿಮೆ ಮಾಡಿದೆ.
ನಮ್ಮ ಭಾರತೀಯ ಪರಂಪರೆಯಲ್ಲಿ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರ ಎನ್ನುವುದು ರಕ್ತಗತವಾಗಿ ಬಂದಿದೆ. ಮಾಂಗಲ್ಯ ಎಂಬ ಪವಿತ್ರ ಸರಕ್ಕೆ ಎಷ್ಟು ಮಹತ್ವ ಇದೆ ಎಂದು ಎಷ್ಟು ಜನರು ತಿಳಿದಿದ್ದಾರೆ? ತಾಳಿಯನ್ನು ಮಂಗಳ ಸೂತ್ರ ಎಂದೂ ಕರೆಯುತ್ತಾರೆ. ಮಂಗಳ ಸೂತ್ರ (ಸಂಸ್ಕೃತದಲ್ಲಿ ಮಂಗಳ ಅಂದರೆ 'ಪವಿತ್ರ, ಶುಭ', ಮತ್ತು ಸೂತ್ರ ಅಂದರೆ 'ದಾರ') ಇದರ ಮೂಲವು ಕ್ರಿ.ಶ 6ನೇ ಶತಮಾನಕ್ಕೆ ಹಿಂದಿನದು. ಏಕೆಂದರೆ ಇತರ ಪುರುಷರು ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆಗಾಗಿ ವಧುವಿನ ಸುತ್ತ ಒಂದೇ ಹಳದಿ ದಾರವನ್ನು ಕಟ್ಟಲಾಗುತ್ತದೆ. ತಾಳಿ ಗಂಡನ ಆರೋಗ್ಯ ಸೂಚಕವಾಗಿದೆ. ಆದರೆ ಇಂದಿನ ನಗರೀಕರಣ ಸಮಾಜದಲ್ಲಿ ತಾಳಿ, ಸರ ಹಾಕುವವರ ಸಂಖ್ಯೆಯೇ ಕಡಿಮೆಯಾಗಿದೆ. ಹಾಗಾದರೆ ಎಲ್ಲಿ ಹೋಯಿತು ಭಾರತೀಯ ಸಂಸ್ಕೃತಿ?
ಕಾಲುಂಗುರದ ಮಹತ್ವ ಏನು?
ಅದನ್ನು ಯಾಕೆ ಧರಿಸುತ್ತಾರೆ ಎಂದು ತಿಳಿದಿದ್ದೀರಾ ಯಾರಾದರೂ...? ಕೇಳಿ ಕಾಲುಂಗುರವು ತಾಯಿಯ ಕರುಳಿನೊಂದಿಗೆ ಸಂಪರ್ಕ ಹೊಂದಿದೆ. ಜೀವನದಲ್ಲಿ ತಾಯ್ತನ ಎನ್ನುವುದು ಪ್ರಮುಖವಾದ ಹಂತ. ಅವಳು ತನ್ನ ಹೊಟ್ಟೆಯಲ್ಲಿರುವ ಶಿಶುವಿನ ಜೊತೆಗೆ ಆರಂಭದಿಂದಲೂ ಭಾವನಾತ್ಮಕ ಸಂಬಂಧ ಹೊಂದಿರುತ್ತಾಳೆ. ಕಾಲುಂಗುರವು ಹೆರಿಗೆ ಸಂದರ್ಭದಲ್ಲಿ ಹೆಚ್ಚಿನ ರಕ್ತಸ್ರಾವ ಆಗದ ರೀತಿ ತಡೆಯುತ್ತದೆ. ಈ ವಿಷಯ ತಿಳಿಯದೇ ಆಧುನಿಕ ಸಮಾಜ ಮೂಡನಂಬಿಕೆ ಹಾಗೂ ಹಿಂದಿನ ಕಾಲದ್ದು ಎಂಬ ಕಾರಣಗಳಿಗೆ ಕಾಲುಂಗುರವನ್ನು ಸ್ಟೈಲ್ ಎಂದು ಭಾವಿಸಿದೆ ಅದನ್ನು ಧರಿಸುವುದನ್ನು ನಿಲ್ಲಿಸಿದ್ದಾರೆ. ಸಂಪ್ರದಾಯ ನಾಶವಾಗಿರುವುದು ಯಾರಿಂದ? ಬದಲಾವಣೆ ಜಗದ ನಿಯಮ ಹೌದು, ಆದರೆ ನಮ್ಮ ಸಂಸ್ಕಾರವನ್ನು ಕಳೆದುಕೊಳ್ಳದು ಸರಿಯಲ್ಲ.
ಅರಿಶಿನ ಕುಂಕುಮ ಏನಿದು? ಸಹಜವಾಗಿ ಎರಡು ವರ್ಣ ಎಂದು ಹೇಳುತ್ತಾರೆ.ಆದರೆ ಆ ವರ್ಣ ಒಬ್ಬ ಹೆಣ್ಣು ಮಗಳ ಜೀವನ ಎಂದು ಎಷ್ಟು ಜನ ತಿಳಿದಿದ್ದೀರಿ? ಅದು ಒಂದು ರೀತಿ ರಕ್ಷೆ ಇದ್ದ ಹಾಗೆ, ಅದು ನಮ್ಮ ಭಾರತೀಯ ಸಂಸ್ಕೃತಿ. ಹಣೆಯ ಕುಂಕುಮ ಗಂಡನ ಶ್ರೇಯಸ್ಸಿನ ಸಂಕೇತ. ಅಲ್ಲದೇ ಮುಖದ ಹೊಳಪನ್ನು ಹಾಗೂ ಕೆಲವು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ.
ಅರಿಶಿನ, ಕುಂಕುಮ ನಮ್ಮ ಹೆಣ್ಣು ಮಕ್ಕಳ ಪಾಲಿಗೆ ಪವಿತ್ರ ಭಾವ ಹಾಗು ಭಾವನಾತ್ಮಕ ಸಂಬಂಧವನ್ನು ಉಂಟುಮಾಡುವ ಸಂಕೇತ. ಹೀಗಾಗಿ ನಮ್ಮ ಹೆಣ್ಣು ಮಕ್ಕಳು ಒಂದು ಹೊತ್ತಿನ ಊಟ ಬೇಕಾದರೂ ಬಿಡುತ್ತಾರೆ. ಅರಿಶಿನ, ಕುಂಕುಮ ಇಲ್ಲದಿರುವ ದಿನ ಅವರು ಕಲ್ಪನೆ ಮಾಡಿಕೊಳ್ಳಲಾರರು.
ಅರಿಶಿನದಲ್ಲಿ ವಾಸ್ತವಿಕವಾಗಿ ಅನೇಕ ಬಗೆಯ ಔಷಧೀಯ ಗುಣಗಳು ಇದೆ. ಕುಂಕುಮ ಹಣೆಗೆ ಸ್ವಲ್ಪ ಮೇಲ್ಬಾಗದಲ್ಲಿ ಇಡುವುದರಿಂದ ತಲೆ ನೋವು ಬರುವುದಿಲ್ಲ. ದೇಹದಲ್ಲಿರುವ ಷಟ್ ಚಕ್ರಗಳು ಇದೆ. ಹಣೆಗೆ ಸ್ವಲ್ಪ ಮೇಲ್ಬಾಗದಲ್ಲಿ ಆಜ್ಞಾ ಚಕ್ರ ಇರುವುದರಿಂದ ನರಗಳಿಗೆ ಉತ್ತಮ ವ್ಯಾಯಾಮ ಲಭಿಸುತ್ತದೆ.
ವೈಚಾರಿಕತೆ: ಅರಿಶಿನ, ಕುಂಕುಮ ಧರಿಸಿದ ಹೆಣ್ಣು ಮಕ್ಕಳ ಮುಖದಲ್ಲಿ ಸೌಭಾಗ್ಯವತಿ ಕಳೆ ತುಂಬಿರುತ್ತದೆ. ಅರಿಶಿನ, ಕುಂಕುಮ ಎನ್ನುವುದು ಭಗವಂತನಿಗೆ ಸ್ತ್ರೀ ಲೇಪಿಸುವುದು, ಹೊಸ್ತಿಲಿಗೆ ಹಚ್ಚುವುದು, ಪ್ರತಿಯೊಂದು ಶುಭ ಕಾರ್ಯದಲ್ಲಿ ಅರಿಶಿನ, ಕುಂಕುಮ ಮೊದಲು ಬಳಸುತ್ತಾರೆ. ಅರಿಶಿನ, ಕುಂಕುಮ ಶುಭದ ಸಂಕೇತ. ಆದರೆ ಆ ಅರಿಶಿನ ಕುಂಕುಮ ಆಧುನಿಕ ಸಮಾಜದಲ್ಲಿ ಮರೆಯಾಗಿದೆ.
ಮೂಗುತಿ, ಸಹಜವಾಗಿ ಹೆಣ್ಣಿನ ನಿಯಂತ್ರಣ ಸಾಧನ ಎಂದು ಹೇಳುತ್ತಾರೆ. ಹೆಣ್ಣು ಮೂಗುತಿ ಧರಿಸುವುದು ಹಿಂದೂ ಸಂಸ್ಕೃತಿಯಲ್ಲಿ ಕಾಣಬಹುದು. ಕೆಲವು ಹಿಂದೂ ಸಮಾಜದಲ್ಲಿ ಗಾಜಿನ ಬಳೆ ಮೂಗುತಿ ಹಾಕುವ ಶಾಸ್ತ್ರ ಮಾಡುತ್ತಾರೆ, ಗಾಜಿನ ಬಳೆ ಹಾಗೂ ಮೂಗುತಿ ಋತುಚಕ್ರದೊಂದಿಗೆ ಸಂಬಂಧ ಹೊಂದಿದೆ. ಹೆಣ್ಣು ಮಕ್ಕಳ ದೇಹವನ್ನು ತಂಪಾಗಿಸುತ್ತದೆ ಮತ್ತು ಧನಾತ್ಮಕ ಚಿಂತನೆಗಳಿಗೆ ಸಹಾಯವಾಗುತ್ತದೆ. ಈ ಆಧುನಿಕ ಯುಗದಲ್ಲಿ ಮೂಗುತಿ ಹಾಕುವವರ ಸಂಖ್ಯೆ ಎಷ್ಟು?. ಈ ಬದಲಾವಣೆ ಹಿಂದುತ್ವದ ವಿನಾಶವಲ್ಲದೆ ಬೇರೆ ಏನು ಅಲ್ಲ.
- ಹರ್ಷಿತಾ
ವಿಸಿ ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ