ಒಳ್ಳೆಯ ನಿದ್ರೆ ಮಾಡಲು ಪುಣ್ಯ ಮಾಡಿರಬೇಕು ಈ ಮಾತು ಸುಳ್ಳಲ್ಲ ನೋಡಿ. ಎಲ್ಲಾ ಇದ್ದರೂ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದರೂ, ಮೆತ್ತನೆಯ ಹಾಸಿಗೆ ಮೇಲೆ ಮಲಗಿದ್ದರೂ, ನಿದ್ರೆ ಬಾರದೆ ನಿದ್ದೆ ಮಾತ್ರೆ ನುಂಗಿ ಮಲಗೋ ಜನ ಇದ್ದಾರೆ. ಅದೇ ಮೂರು ಹೊತ್ತು ಊಟಕ್ಕಾಗಿ ಕಷ್ಟ ಪಟ್ಟು ದುಡಿದು ರಾತ್ರಿಯ ಸಮಯದಲ್ಲಿ ಸಿಕ್ಕ ಜಗದಲ್ಲಿ ಹಾಸಿಗೆ, ಹೊದಿಕೆ ಇಲ್ಲದೆ ನೆಮ್ಮದಿಯಾಗಿ ನಿದ್ರೆ ಮಾಡುವ ಜನರೂ ಕೂಡ ಇದ್ದಾರೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಮನುಷ್ಯನಿಗೆ ಮಾನಸಿಕವಾಗಿ ಯಾವುದೇ ಒತ್ತಡ, ಹೆಚ್ಚು ಆಲೋಚನೆಗಳಾಗಲಿ ಅಥವಾ ಅವಶ್ಯಕತೆ ಗಿಂತ ಹೆಚ್ಚು ಸಿರಿವಂತಿಕೆ ಇಲ್ಲದೆ ಹೋದರೆ ಸುಖವಾಗಿ ನಿದ್ರೆ ಅದಾಗದೆ ಬರುತ್ತೆ. ಮನುಷ್ಯನಿಗೆ ಹಣ ಹೆಚ್ಚಾದಷ್ಟು ನೆಮ್ಮದಿ ಹಾಳಾಗುತ್ತದೆ. ಮನಸ್ಸಿಗೆ ಸದಾ ಚಿಂತೆಗಳು ಯೋಚನೆಗಳು ಬಂದು ಕಾಡುತ್ತಿದ್ದರೆ ಒಳ್ಳೆಯ ನಿದ್ರೆ ಎಲ್ಲಿಂದ ಬಂದೀತು.
ಮನುಷ್ಯನಿಗಷ್ಟೇ ಅಲ್ಲ ಬಹುತೇಕ ಜೀವಿಗಳಿಗೆ ನಿದ್ರೆ ತುಂಬಾ ಅತ್ಯವಶ್ಯ. ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ 8 ಗಂಟೆ ಕಾಲ ನಿದ್ರೆಯ ಬೇಕೇ ಬೇಕು. ವೈದ್ಯರು ಹೇಳುವಂತೆ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಒಂದು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಎಚ್ಚರ ಆಗದಂತೆ ಗುಣಮಟ್ಟದ ನಿದ್ರೆ ಮಾಡಲೇಬೇಕು. ಏಕೆಂದರೆ ನಮ್ಮ ದೇಹದ ಅಂಗಾಂಗಗಳಿಗೆ ಮತ್ತು ಮೆದುಳಿಗೆ ಇಷ್ಟು ಸಮಯದ ವಿಶ್ರಾಂತಿ ಅಗತ್ಯವಾಗಿರುತ್ತದೆ. ಆದರೆ ಕೆಲಸದ ಒತ್ತಡ, ಮಲಗುವಾಗ ಅತಿ ಹೆಚ್ಚು ಮೊಬೈಲ್ ಬಳಕೆ, ತಡರಾತ್ರಿಯ ಪಾರ್ಟಿ, ಆಧುನಿಕ ಜೀವನ ಶೈಲಿ ನಮ್ಮ ನಿದ್ರೆ ಮೇಲೆ ನೇರ ಪರಿಣಾಮ ಬೀರುತ್ತೆ. ನಿದ್ದೆ ಕಡಿಮೆ ಆದ್ರೆ ದೇಹದ ತೂಕ ಹೆಚ್ಚುವುದು, ಮಾನಸಿಕ ಒತ್ತಡ ಮುಂತಾದ ಸಮಸ್ಯೆ ಸೃಷ್ಟಿಯಾಗುತ್ತವೆ. ಹೀಗಾಗಿ ಸಂತಸದ ಜೀವನಕ್ಕಾಗಿ ಸುಖಕರ ನಿದ್ರೆ ತುಂಬಾ ಮುಖ್ಯ.
ಸಾಮಾನ್ಯವಾಗಿ ಮಲಗಿದ ಹತ್ತು ಹದಿನೈದು ನಿಮಿಷಗಳೊಳಗೆ ನಿದ್ರೆ ಪ್ರಾರಂಭವಾಗುತ್ತದೆ. ನಾವು ಹಾಸಿಗೆಗೆ ಇಳಿದು ಕೆಲವು ಗಂಟೆಗಳಾದರೂ ನಮಗಿನ್ನೂ ನಿದ್ದೆ ಬರುತ್ತಿಲ್ಲ ಎಂದರೆ ನಾವು ಯಾವದೋ ಒಂದು ಸಮಸ್ಸೆಯಲ್ಲಿ ಬಳಲುತ್ತಿದ್ದೇವೆ ಎಂದರ್ಥ. ನಿದ್ರೆ ಬಾರದಿರಲು ಸಾಮಾನ್ಯ ಕಾರಣ ಮನಸ್ಸಿನಲ್ಲಿ ಚಿಂತೆ, ಭಯ, ದುಃಖ, ಕೋಪ, ಅವಮಾನದ ನೋವು, ನಾಳೆ ಏನಾಗುವುದೋ ಎಂಬ ಆತಂಕ, ಕೆಟ್ಟ ಆಲೋಚನೆಗಳು, ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು, ನಿದ್ರಿಸುವ ಸಮಯವನ್ನು ಮತ್ತೆ ಮತ್ತೆ ಬದಲಾಯಿಸುವುದು. ಹೀಗೆ ನಿದ್ದೆ ಬಾರದಿರಲು ಹಲವಾರು ಕಾರಣಗಳನ್ನು ನೋಡಬಹುದು.
ನಿದ್ರಾಹಿನತೆ ಯಿಂದ ಸಾಕಷ್ಟು ತೊಂದರೆಗಳು ಬರುತ್ತವೆ. ಬಹಳ ದಿನಗಳಿಂದ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೃದಯದ ತೊಂದರೆ ಬರುವ ಸಾಧ್ಯತೆಗಳು ಇರುತ್ತೆ. ಏಕೆಂದರೆ ನಿದ್ರೆಗೂ ಮತ್ತು ನಿಮ್ಮ ಹೃದಯಕ್ಕೂ ಬಹಳ ಒಳ್ಳೆಯ ಸಂಭಂದವಿದೆ. ಸಾಮಾನ್ಯವಾಗಿ ಮನುಷ್ಯನಿಗೆ ಹೃದಯಾಘಾತ ಬೆಳಗಿನ ಸಮಯಗಳಲ್ಲಿ ಉಂಟಾಗುತ್ತದೆ. ಅದಕ್ಕೆ ಕಾರಣ ನಿಮ್ಮ ಹೃದಯ ರಕ್ತನಾಳಗಳ ಜೊತೆಗೆ ನಿದ್ರೆ ಹೇಗೆ ಹೊಂದಾಣಿಕೆ ಆಗುತ್ತದೆ ಎಂದು. ಪ್ರತಿ ರಾತ್ರಿ ನಿದ್ರೆ ಇಲ್ಲದೆ ಬಳಲುತ್ತಿದ್ದರೆ ನಿಮ್ಮ ದೇಹದ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಅಂಶ ಮಿತಿ ಮೀರಿ ಹೋಗುತ್ತದೆ. ಇದರಿಂದ ಹೃದಯಾಘಾತ ಸಂಭವಿಸುತ್ತದೆ. ಯಾರು ದಿನದಲ್ಲಿ ಬಹಳ ಕಡಿಮೆ ನಿದ್ರೆ ಮಾಡುತ್ತಾರೊ ಆವರಿಗೆ ಬೊಜ್ಜು ಬೆಳೆದು ದೇಹದ ತೂಕ ಇದ್ದಕ್ಕಿದ್ದಂತೆ ಏರಿಕೆಯಾಗುವ ಸಂಭವ ಹೆಚ್ಚಿರುತ್ತದೆ. ಇದಕ್ಕೆ ಕಾರಣ ಕಡಿಮೆ ಪ್ರಮಾಣದ ನಿದ್ರೆ ಮನುಷ್ಯನ ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಉಂಟು ಮಾಡಿ ಹೊಟ್ಟೆ ಹಸಿವಿಗೆ ಸಂಬಂಧ ಪಟ್ಟಂತೆ ಮನುಷ್ಯನ ಆರೋಗ್ಯವನ್ನು ಏಕಾಏಕಿ ಅದಲು ಬದಲು ಮಾಡುತ್ತದೆ.
ನಿದ್ರಾಹೀನತೆಯು ನಮ್ಮ ಹಾರ್ಮೋನುಗಳ ಮೇಲೆ ವಿಶೇಷವಾಗಿ ನಮ್ಮ ಲೆಪ್ಟಿನ್ ಮತ್ತು ಗ್ರೆಲಿನ್ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ. ಗ್ರೆಲಿನ್ ಒಂದು ಹಸಿವಿನ ಹಾರ್ಮೋನ್ ಆಗಿದ್ದು, ನಿಮಗೆ ಏನಾದರು ತಿನ್ನುವಂತೆ ತಿಳಿಸುತ್ತದೆ. ಮತ್ತೊಂದೆಡೆ ಲೆಪ್ಟಿನ್ ಎಂಬುದು ತೃಪ್ತಿಯ ಹಾರ್ಮೋನ್ ಆಗಿದ್ದು ಅದು ತಿನ್ನುವುದನ್ನು ನಿಲ್ಲಿಸುವಂತೆ ಆದೇಶಿಸುತ್ತದೆ. ನೀವು ನಿದ್ದೆಯಿಂದ ವಂಚಿತರಾದಾಗ ನಿಮ್ಮ ದೇಹವು ಹೆಚ್ಚು ಗ್ರೆಲಿನ್ ಮತ್ತು ಕಡಿಮೆ ಲೆಪ್ಟಿನನ್ನು ಉತ್ಪಾದಿಸುತ್ತದೆ. ಆದ್ದರಿಂದ ನಿದ್ದೆ ಕಡಿಮೆಯಾದಾಗ ನಿಮ್ಮ ಹಸಿವು ಹೆಚ್ಚಾಗುವುದು, ಆ ಮೂಲಕ ದೇಹಕ್ಕೆ ಸೇರುವ ಕ್ಯಾಲರಿ ಪ್ರಮಾಣ ಕೂಡ ಹೆಚ್ಚುವುದು. ಅದಲ್ಲದೇ, ತಡರಾತ್ರಿಯಲ್ಲಿ ಬಾಯಾಡಿಸುವುದರಿಂದ ನಿಮ್ಮ ತೂಕದ ಮೇಲೆ ಸುಲಭವಾಗಿ ಇನ್ನೊಂದಷ್ಟು ಕೆಜಿ ತೂಕ ಸೇರಬಹುದು.
ಹಾಗಾದ್ರೆ ನಿದ್ದೆ ಸರಿಯಾಗಿ ಮಾಡಲು ಏನು ಮಾಡಬಹುದು? ಹೀಗೆ ಮಾಡಿ...
ಹಾಸಿಗೆಗೆ ಹೋಗುವ ಮುನ್ನ ಕೆಲವು ಆರೋಗ್ಯಕರ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಧ್ಯಾನ, ಒಳ್ಳೆಯ ಪುಸ್ತಕಗಳನ್ನ ಓದುವದು, ಹಾಲು ಕುಡಿಯುವದು ಹೀಗೆ. ಮಲಗುವ ಒಂದು ಗಂಟೆಯ ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡಿ, ಟಿವಿ ನೋಡುತ್ತಾ ಮಲಗ್ಬೇಡಿ, ನಿದ್ರಾ ಕೋಣೆಗೆ ಹೋಗುವ ಮೊದಲು ಸ್ವಲ್ಪ ಹೊತ್ತು ನಡೆದಾಡಿ, ತುಂಬಾ ಆಯಾಸವಾಗಿದ್ದರೆ ಸ್ನಾನ ಮಾಡಿ, ಫ್ರೆಶ್ ಆಗಿ, ಸಕಾರಾತ್ಮಕವಾಗಿ ಯೋಚಿಸಿ, ಮಲಗುವಾಗ ಯಾವ ಚಿಂತೆ, ಭಯ, ಕೋಪ, ದುಃಖದ ವಿಚಾರಗಳ ಬಗ್ಗೆ ಗಮನ ಕೊಡಬೇಡಿ. ಈ ಅಭ್ಯಾಸ ಬೆಳೆಸಿಕೊಂಡರೆ ಮನಸ್ಸಿನ ಒತ್ತಡ ನಿವಾರಣೆಯಾಗಿ ಒಳ್ಳೆಯ ನಿದ್ದೆ ಬರುತ್ತದೆ. ಕೆಲವರು ಹಾಸಿಗೆ ಮೇಲೆಯೇ ಕುಳಿತು ಎಲ್ಲಾ ಕೆಲಸ ಮಾಡುತ್ತಾರೆ. ಲ್ಯಾಪ್ ಬಳಕೆ, ಅಲ್ಲೆ ಊಟ ಮಾಡುವವುದು, ಹೀಗೆ ಪ್ರತಿಯೊಂದು ಕೆಲಸ ಹಾಸಿಗೆ ಮೇಲೆ ಮಾಡುತ್ತಾರೆ. ಆದರೆ ಈ ರೀತಿಯ ಅಭ್ಯಾಸ ನಿಮ್ಮ ನಿದ್ದೆ ಹಾಳುಮಾಡುತ್ತೆ. ಎಲ್ಲ ಚಟುವಟಿಕೆ ಹಾಸಿಗೆ ಮೇಲೆ ನಡೆದರೆ ನಿದ್ದೆಗೆ ಅವಕಾಶ ಎಲ್ಲಿದೆ, ನಿದ್ದೆ ಮುಂದುಡುತ್ತಾ ಹೋಗುತ್ತೆ. ಹೀಗಾಗಿ ನಿದ್ದೆ ಮಾಡಲು ಮಾತ್ರ ಹಾಸಿಗೆ ಸೀಮಿತವಾಗಿರಲಿ.
ಪರಿಪೂರ್ಣವಾದ ನಿದ್ದೆಯಿಂದ ಅಧಿಕ ರಕ್ತದೊತ್ತಡ, ಜೀರ್ಣಕ್ರಿಯೆ ಮತ್ತು ಮಧುಮೇಹ ಮುಂತಾದ ದೈಹಿಕ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುಬಹುದು.
ನಿದ್ದೆ ಭಾವನೆಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಉತ್ತಮ ನಿದ್ರೆ ಒಳ್ಳೆಯ ಆಲೋಚನೆಗಳನ್ನು ಪ್ರಚೋದಕಗಳನ್ನುಉತ್ತೇಜಿಸುವ ಮತ್ತು ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ.
- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ