ಸನಾತನ ಧರ್ಮದ ಉಳಿವಿಗೆ ಎಲ್ಲ ಪೀಠಗಳು ಒಗ್ಗೂಡಬೇಕು: ರಾಘವೇಶ್ವರ ಸ್ವಾಮೀಜಿ ಕರೆ

Upayuktha
0


ಗೋಕರ್ಣ: ಭಾರತದ ಸನಾತನ ಧರ್ಮವನ್ನು ಉಳಿಸಿಕೊಳ್ಳಬೇಕಾದರೆ ಎಲ್ಲ ಧರ್ಮಪೀಠಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗೂಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು 38ನೇ ದಿನ 'ಸತ್ಯಮೇವ ಜಯತೇ' ಅನಾವರಣ ನೆರವೇರಿಸಿ ಆಶೀರ್ವಚನ ನೀಡಿದರು. ಅದ್ವೈತ ಎನ್ನುವುದು ಬಾಹ್ಯಾರ್ಥದ ಸಿದ್ಧಾಂತವಾಗಿ ಉಳಿಯದೇ ಎಲ್ಲ ಜೀವನದ ಎಲ್ಲ ಹಂತಗಳಲ್ಲಿ ಅನ್ವಯವಾಗಬೇಕು. ಎಲ್ಲ ಜೀವಗಳು, ಜನರು, ಸಮಾಜ ಎಲ್ಲರಲ್ಲೂ ಒಮ್ಮತದ ಭಾವ ಮೂಡಬೇಕು ಎಂದು ಅಭಿಪ್ರಾಯಪಟ್ಟರು.


ರಾಗ ದ್ವೇಷಗಳಿಗೂ ಪರಂಪರೆ ಇರುತ್ತದೆ ಎನ್ನುವುದಕ್ಕೆ ಇಂದಿನ ಅನಾವರಣ ನಿದರ್ಶನ. ಸಂಸ್ಥಾನಕ್ಕೆ ಯಾರ ಮೇಲೂ ದ್ವೇಷ ಇಲ್ಲ. ನಮ್ಮ ಪರಂಪರೆಯಲ್ಲಿ ಇದುವರೆಗೆ ಯಾವುದೇ ಯತಿಗಳು ಯಾರನ್ನೂ ಶಪಿಸಿದ, ಅಥವಾ ಬೇರೆ ಸಂಸ್ಥೆ, ಮಠಗಳ ಮೇಲೆ ಆಕ್ರಮಣ ನಡೆಸಿದ ನಿದರ್ಶನ ಇಲ್ಲ. ಆದರೆ ಮಠದ ಮೇಲೆ ಸಾಲು ಸಾಲು ಆಕ್ರಮಣಗಳು, ದಾಳಿಗಳು ನಡೆದಿವೆ. ಇಷ್ಟಾಗಿಯೂ ಎಲ್ಲ ಕಾಲದಲ್ಲಿ ಶಿಷ್ಯಭಕ್ತರು ದೃಢವಾಗಿ ಮಠದ ಪರವಾಗಿ ನಿಂತಿದ್ದಾರೆ ಎಂದು ಬಣ್ಣಿಸಿದರು.


"ಈ ಆಕ್ರಮಣಗಳು ಮೊಘಲರು, ಬ್ರಿಟಿಷರು ಅಥವಾ ಅನ್ಯ ಮತ ಜಾತಿಯವರಿಂದ ಆದದ್ದಲ್ಲ. ನಮ್ಮೊಳಗಿನಿಂದಲೇ ಇಂಥ ದಾಳಿಗಳು ನಡೆದಿವೆ. ಬೇರೆ ಬೇರೆ ಮಠಗಳಿಂದ ಆಗಿರುವಂಥದ್ದು. ವಾಸ್ತವವಾಗಿ ಮಠ ರಾಗ-ದ್ವೇಷ ಮೀರಿ ಆಳುವಂಥ ಪೀಠ. ಈ ಸಿಂಹಾಸನ ರಾಗ-ದ್ವೇಷ ಮೀರುವಂಥದ್ದು. ರಾಗದ್ವೇಷಗಳನ್ನು ಮೀರಿ ಬೆಳೆಯುವುದೇ ನೈಜ ಯತಿಧರ್ಮ ಎಂದು ವಿಶ್ಲೇಷಿಸಿದರು.


ಸನ್ಯಾಸ ಸ್ವೀಕಾರ ಮಾಡುವಾಗಲೇ ಯಾರಿಗೂ ನಾವು ತೊಂದರೆ ಮಾಡುವುದಿಲ್ಲ ಎಂಬ ದೃಢ ಪ್ರತಿಜ್ಞೆಯನ್ನು ಮಾಡಬೇಕಾಗುತ್ತದೆ. ಸನ್ಯಾಸ ಎನ್ನುವುದು ಒಂದರ್ಥದಲ್ಲಿ ನಿರುಪದ್ರವ ವ್ರತ. ಅಶೋಕೆಯಲ್ಲಿ ಆದಿಗುರು ಶಂಕರರು ಮಠ ಸ್ಥಾಪನೆ ಮಾಡುವಾಗ ಶಂಕರರಿಗೆ ಕಂಡುಬಂದ ದೃಶ್ಯ ದ್ವೇಷವನ್ನು ಮೀರುವಂಥದ್ದು. ಹುಲಿಯೇ ಹುಲ್ಲೆಗೆ ಹಾಲುಣಿಸುವಂಥದ್ದು. ಅಂತೆಯೇ ಶೃಂಗೇರಿ ಇತಿಹಾಸ ತೆಗೆದುಕೊಂಡರೆ ಕಪ್ಪೆಗೆ ಹಾವು ನೆರಳು ನೀಡಿದ ದೃಶ್ಯ. ಅದು ಎಲ್ಲ ದ್ವೇಷವನ್ನು ಮೀರಬೇಕು ಎನ್ನುವ ಆಶಯ. ಅದು ಶಂಕರರ ಸಿದ್ಧಾಂತ. ಧರ್ಮಪೀಠಗಳು ಅಹಿಂಸಾ ತತ್ವವನ್ನು ಅನುಸರಿಸವಂತಾರಬೇಕು ಎಂದು ಆಶಿಸಿದರು.


ಶೃಂಗೇರಿ ಮಠದ ವಿದ್ಯಾರಣ್ಯರು ಗೋಕರ್ಣಕ್ಕೆ ಬಂದು ಈ ಮಠದ ಚಿದ್ಭೋದಭಾರತಿಗಳೂ ಅವರು ಜತೆಗಿದ್ದ ಸಮಾರಂಭದಲ್ಲಿ ರಾಜಲಾಂಛನಗಳನ್ನು ಅವರ ಸಾನ್ನಿಧ್ಯದಲ್ಲೇ ನೀಡಿರುವುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಬಳಿಕ ವಿಜಯನಗರ ಸಾಮ್ರಾಟರು ಕೂಡಾ ಶ್ರೀಮಠಕ್ಕೆ ರಾಜಲಾಂಛನಗಳನ್ನು, ಬಿರುದು ಬಾವಲಿ ಹೀಗೆ ಮಠಕ್ಕೆ ಗೌರವಗಳನ್ನು ಪ್ರದಾನ ಮಾಡಿದ ನಿದರ್ಶನ ಇದೆ. ಮತ್ತೆ ಆ ಕಾಲ ಬರಬೇಕು ಎಂದು ಹೇಳಿದರು.


"ಶಂಕರ ಸಿದ್ಧಾಂತ, ಪರಂಪರೆಯಲ್ಲಿ ಬಂದವರು. ನಿಮ್ಮದು ಜ್ಯೇಷ್ಠ ಶಿಷ್ಯ ಪರಂಪರೆ" ಎಂದು ವಿದ್ಯಾರಣ್ಯರು ಘೋಷಿಸಿದ್ದರು. ಸುರೇಶ್ವರಾಚಾರ್ಯರು ತಮ್ಮ ಜ್ಯೇಷ್ಠಶಿಷ್ಯರಿಗೆ ಮೊದಲು ಸನ್ಯಾಸತ್ವ ನೀಡಿದ್ದು, ಇಲ್ಲಿಯೇ ಎಂದು ಉಲ್ಲೇಖಿಸಿದ್ದಾರೆ. ಆ ಬಳಿಕ ಪರಿಸ್ಥಿತಿ ಭಿನ್ನವಾಗಿ ಪ್ರತಿ ತಲೆಮಾರಿನಲ್ಲಿ ಶ್ರೀಮಠದ ಮೇಲೆ ಇಂಥ ದಾಳಿಗಳು ನಡೆಯುತ್ತಾ ಬಂದಿವೆ. ಈ ತಲೆಮಾರಿನಲ್ಲಂತೂ ಯಾವುದೇ ಸಂತರಿಗೆ ನಡೆಯಬಾರದಂಥ ಘಟನೆ ನಡೆಯಿತು. 


ಆದರೂ ನಮ್ಮ ಮನಸ್ಸಿನಲ್ಲಿ ಅಂಥ ದ್ವೇಷಭಾವನೆ ಇಲ್ಲ. ಇದೆಲ್ಲ ಇಲ್ಲಿಗೇ ಮುಕ್ತಾಯವಾಗಿ ವಿದ್ಯಾನಂದರ ಕಾಲದ ಹೊಸ ಪರ್ವ ಮತ್ತೆ ಆರಂಭವಾಗಬೇಕು ಎಂದು ಆಶಿಸಿದರು.


ಆದರೆ ಶ್ರೀಮಠ ಬೇರೆ ಮಠಗಳ ಮೇಲೆ ಆಕ್ರಮಣ ನಡೆಸಿದ ನಿದರ್ಶನ ಇಲ್ಲ. ದಾನಗಳನ್ನು ನೀಡಿದ ನಿದರ್ಶನಗಳೇ ಸಿಗುತ್ತವೆ. ಇಷ್ಟಾಗಿಯೂ ಮಠ ಇಂದಿಗೂ ಊರ್ಜಿತವಾಗಿರುವುದೇ ಪವಾಡ. ಇಷ್ಟೆಲ್ಲ ಆಕ್ರಮಣಗಳು ನಡೆದರೂ ನಾವು ಉಳಿದುಕೊಂಡಿದ್ದೇವೆ ಎನ್ನುವುದೇ ಪವಾಡ. ಧರ್ಮದ ಬಲದಿಂದ ಉಳಿದುಕೊಳ್ಳುವುದು ಸಾಧ್ಯವಾಯಿತು ಎಂದು ಬಣ್ಣಿಸಿದರು.


ರಾಮರಕ್ಷೆ ಇರುವ ನಿದರ್ಶನಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಹೆಜ್ಜೆಹೆಜ್ಜೆಗೂ ರಾಮನೇ ಕೈಹಿಡಿದು ಮುನ್ನಡೆಸುತ್ತಿದ್ದಾನೆ. ಶಿಷ್ಯರೆಲ್ಲರೂ ಸದೃಢವಾಗಿ ಮಠದ ಪರವಾಗಿ ನಿಂತಿದ್ದಾರೆ. ಮಠ ಇಂದು ನಿಂತುಕೊಂಡಿದ್ದರೆ ಸರ್ಕಾರದ ರಕ್ಷಣೆಯಿಂದಲ್ಲ; ಶಿಷ್ಯವರ್ಗ ಸಂಘಟಿತವಾಗಿ ಗಟ್ಟಿಯಾಗಿ ನಿಂತುಕೊಂಡ ಕಾರಣದಿಂದ ಮಠ ಉಳಿದಿದೆ. ಶಂಕರರ ಮಠಗಳಲ್ಲಿ ಅವಿಚ್ಛಿನ್ನತೆ ಉಳಿದುಕೊಂಡಿರುವುದು ಇಲ್ಲಿ ಮಾತ್ರ. ಬಹುಶಃ ಈ ಪರಂಪರೆ ಉಳಿದುಕೊಂಡು ಬರಲಿ ಎಂಬ ಆಶಯ ಶ್ರೀಶಂಕರರದ್ದೂ ಆಗಿತ್ತು. ಸನಾತನ ಹಾಗೂ ಸದಾತನ ಎಂದೆಂದಿಗೂ ಉಳಿದುಕೊಳ್ಳಲಿ ಎಂದು ಹಾರೈಸಿದರು.


ವಿದ್ಯಾರಣ್ಯರ ಪರಂಪರೆಯೂ ಬೆಳಗಲಿ, ಬೆಳೆಯಲಿ. ವಿದ್ಯಾರಣ್ಯರ ಔದಾರ್ಯ ಮರಳಿ ಬರಲಿ. ಶ್ರೀಮಠದ ಆನೆ ಕಳ್ಳತನದ ವಿಚಾರದಲ್ಲಿ ಮಹಾರಾಜರ ತೀರ್ಮಾನದ ಬಗೆಗಿನ ಅನಾವರಣವನ್ನು, ನ್ಯಾಯಕ್ಕಾಗಿಯೇ ಹೋರಾಡುತ್ತಾ ಬಂದಿರುವ ವಕೀಲ ನಾಗರಾಜ ನೆರವೇರಿಸಿರುವುದು ಅರ್ಥಪೂರ್ಣ. ಮೈಸೂರಿಗೆ ಶೃಂಗೇರಿ ರಾಜಪೀಠವಾಗಿದ್ದರೂ, ನಿಷ್ಪಕ್ಷಪಾತವಾಗಿ, ಯಾವ ಪ್ರಭಾವಕ್ಕೂ ಒಳಗಾಗದೇ ನ್ಯಾಯನಿರ್ಣಯ ಮಾಡಿದರು. ಮಠಕ್ಕೆ ಸಲ್ಲಬೇಕಾದ ಗೌರವಗಳು ಸಲ್ಲುವಂತೆ ನೋಡಿಕೊಂಡರು. ಇದು ಇಂದಿನ ನ್ಯಾಯಾಧೀಶರಿಗೆ ಮಾರ್ಗದರ್ಶಿಯಾಗಬೇಕು ಎಂದು ಅಭಿಪ್ರಾಯಪಟ್ಟರು.


ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಅರವಿಂದ ಬಂಗಲಗಲ್ಲು, ಶ್ರೀಶ ಶಾಸ್ತ್ರಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top