ಮತ್ತೆ ಜೀವ ತಳೆಯುತ್ತಿರುವ ಗಾಡ್ಗಿಳ್ ವರದಿ ಎಂಬ ಮರಣ ಶಾಸನ

Upayuktha
0


ಹೋದೆಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷಿಲಿ ಎಂಬಂತೆ, ಗಾಡ್ಗಿಳ್ ವರದಿಯನ್ನು ಗವಾಕ್ಷಿ ಮೂಲಕ ಮಲೆನಾಡಿನ ಜನರನ್ನು ಹೆದರಿಸಲು, ಬಲಿ ಪಡೆಯಲು ತರುವ ಪ್ರಯತ್ನ ಆಗ್ತಾ ಇದೆ.  


ಇದೇ 10.08.2024 ರಂದು ಬೆಂಗಳೂರಿನ ನಗರ ಪರಿಸರವಾದಿಗಳು ಸಭೆ ನಡೆಸಿ "ಗಾಡ್ಗಿಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟೆಷ್ಟು ಬಲಿ ಬೇಕು?" ಎಂಬ ಪೂರ್ವಾಗ್ರಹ ಶೀರ್ಷಿಕೆಯೊಂದಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಕಾರ್ಯಕ್ರಮ ಮಾಡಿ ಗಾಡ್ಗಿಳ್ ವರದಿಯ ಅನುಷ್ಠಾನಕ್ಕೆ ಒತ್ತಾಯದ ಮನವಿಯನ್ನು ಸಲ್ಲಿಸಿದ್ದಾರೆ.  


ಈಗ ಮೈಸೂರಿನ ಮತ್ತೊಂದು 'ನಗರ ಪರಿಸರವಾದಿಗಳು', 'ಪರಿಸರಕ್ಕಾಗಿ ನಾವು' ಎಂಬ ಸಂಘಟನೆಯೊಂದಿಗೆ ಗಾಡ್ಗಿಳ್ ವರದಿ ಜಾರಿಗೆ ಒತ್ತಾಯಿಸಿ ದಿನಾಂಕ 21.08.2024 ರಂದು ಮೈಸೂರಿನ ಗಾಂಧಿ ಚೌಕದಲ್ಲಿ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮತ್ತು ಅದೇ ದಿನ ಮೈಸೂರು ನಗರ ಪರಿಸರವಾದಿಗಳ ಮುಂದಾಳತ್ವದಲ್ಲಿ 20 ಜಿಲ್ಲಾ ಕೇಂದ್ರಗಳಲ್ಲೂ ಏಕ ಕಾಲದಲ್ಲಿ ಗಾಡ್ಗಿಳಿ ವರದಿ ಜಾರಿ ಒತ್ತಾಯಿಸಿ ಧರಣಿ ನೆಡೆಸಲು ಸಿದ್ದತೆ ಮಾಡ್ತಾ ಇದ್ದಾರೆ.


ಇಡೀ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ವಲಯ (ESZ) ಅಡಿಯಲ್ಲಿ ಒಳಗೊಂಡಂತೆ ವರದಿಯ ಶಿಫಾರಸುಗಳು ಅಪ್ರಾಯೋಗಿಕ.  ವರದಿ ಜಾರಿಯಿಂದ ಪಶ್ಚಿಮ ಘಟ್ಟ  ಪ್ರದೇಶದ ಆರು ರಾಜ್ಯಗಳ ಶಕ್ತಿ ಮತ್ತು ಅಭಿವೃದ್ಧಿ ಅಗತ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಗಾಡ್ಗಿಳ್ ವರದಿಯು ತನ್ನ ಶಿಫಾರಸುಗಳಿಂದ ಉಂಟಾಗಬಹುದಾದ ಆದಾಯ ನಷ್ಟವನ್ನು ಹೇಗೆ ಸರಿತೂಗಿಸುವುದು ಎಂಬುದನ್ನು ವರದಿಯಲ್ಲಿ ತಿಳಿಸುವುದಿಲ್ಲ. ವರದಿಯು ನೆಲದ ವಾಸ್ತವತೆಯನ್ನು ಪಶ್ಚಿಮಘಟ್ಟದ ಜನರ ಬದುಕು, ಕೃಷಿ, ಸಾಮಾಜಿಕ ಪರಿಸ್ಥಿತಿ, ಸಂಸ್ಕೃತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಎಂಬ ಮತ್ತು ಅನೇಕ ಇತರ ಕಾರಣಗಳಿಂದ 2012 ರಲ್ಲಿ, ಕೇಂದ್ರ ಪರಿಸರ ಸಚಿವಾಲಯವು ಗಾಡ್ಗೀಳ್ ಸಮಿತಿಯ ವರದಿಯನ್ನು ಬದಲಿಸಲು ಅಥವಾ ಹೊಸ ವರದಿಯನ್ನು ಅಭಿವೃದ್ಧಿಪಡಿಸಲು ಮಾಜಿ ಇಸ್ರೋ ಮುಖ್ಯಸ್ಥ ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ವರ್ಕಿಂಗ್ ಗ್ರೂಪ್ ಅನ್ನು ರಚಿಸಿತು.


ಅಲ್ಲಿಗೆ ವರ್ಷಗಳ ಕಾಲ ಮಲೆನಾಡಿನ ಜನರ ನಿದ್ದೆ ಕೆಡಿಸಿದ್ದ, ಮಲೆನಾಡಿನ ನಾಗರಿಕರ ಮರಣ ಶಾಸನ ಎಂದೇ ಪ್ರಸಿದ್ದಿ ಪಡೆದಿದ್ದ ಗಾಡ್ಗಿಳ್ ವರದಿ ಎಂಬ ಭಯಾನಕ ವರದಿಯನ್ನು ಜಾರಿಗೆ ಬರದಂತೆ ಬುಲೆಟ್ ಫ್ರೂಫ್ ಗಾಜಿನ ಬಾಟಲಿಯಲ್ಲಿ ಹಾಕಿ ಗಟ್ಟಿ ಬಿರುಡೆ ಜಡಿಯಲಾಗಿತ್ತು!!  


ನಂತರ ಅದರ ಸ್ಕೆಲಟಿನ್ ಹಿಡಿದುಕೊಂಡು, ಕಸ್ತೂರಿ ರಂಗನ್ ಟೀಮ್ ಮತ್ತೊಂದು ವರದಿಯನ್ನು ಸಿದ್ದ ಮಾಡಿ ಕೊಟ್ಟಿತು.


ಈ ಹೊಸ ವರದಿಯ ಜಾರಿಗೆ ಆಕ್ಷೇಪಣೆಗಳಿದ್ದರೆ ಸೂಚಿಸುವಂತೆ ಕೋರಿ ಐದು ಬಾರಿ ಅಧಿಸೂಚನೆ ಹೊರಡಿಸಿ, ಈಗ ಆರನೆ ಬಾರಿಗೆ ಮತ್ತೊಮ್ಮೆ 60 ದಿನಗಳ ಕಾಲಾವಕಾಶ ಕೊಟ್ಟು ಅಧಿಸೂಚನೆ ಹೊರಡಿಸಲಾಗಿದೆ.  


ಸೂಕ್ತ ತಿದ್ದುಪಡಿಯೊಂದಿಗೆ ಕಸ್ತೂರಿ ರಂಗನ್ ವರದಿ ಜಾರಿಯ ವಿಷಯ ಚರ್ಚೆಯಲ್ಲಿದೆ.


ಇಂತಹ ಸಂದರ್ಭದಲ್ಲಿ, ಮರಣ ಶಾಸನ ಎಂದೇ ಪ್ರಸಿದ್ದಿ ಪಡೆದಿದ್ದ ಗಾಡ್ಗಿಳ್ ವರದಿ ಎಂಬ ಭಯಾನಕ ವರದಿಯನ್ನು ತುಂಬಿಸಿಟ್ಟ ಬುಲೆಟ್ ಫ್ರೂಫ್ ಗಾಜಿನ ಬಾಟಲಿಯ ಬಿರುಡೆ ತೆಗೆಯುವ ನಗರ ಪರಿಸರವಾದಿಗಳ ಪ್ರಯತ್ನ ಯಾಕೆ ಅನ್ನುವುದು ಮಲೆನಾಡಿಗರಿಗೆ ಅನುಮಾನ ಮತ್ತು ಗಾಬರಿ ಹುಟ್ಟಿಸುತ್ತಿದೆ.


ಈ ನಡುವೆ, ಗಾಡ್ಗಿಳ್ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ 'ಪರಿಸರಕ್ಕಾಗಿ ನಾವು' ಸಂಘಟನೆ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರವನ್ನೂ ಕೊಟ್ಟಿದೆ(ಪತ್ರದ ಕಾಪಿಯನ್ನು ಕೆಳಗೆ ಕೊಡಲಾಗಿದೆ). ಅದರ ಮೂರನೆ ಪ್ಯಾರವನ್ನು ಗಮನಿಸಿದರೆ, ಮಲೆನಾಡಿಗರ ಮೇಲೆ ಚಪ್ಪಡಿ ಎಳೆಯಲು ಈ ನಗರ ಪರಸರವಾದಿಗಳು ಕೈ ಜೋಡಿಸುವಂತಿದೆ.


ಈಗ ನಮ್ಮ ಮಲೆನಾಡಿನ ರೈತರ, ರೈತ ಕಾರ್ಮಿಕರ, ನಾಗರಿಕರ ವಿರೋಧ ಮತ್ತು ಹೋರಾಟ, ನಮ್ಮದೇ ಬಂಧುಗಳಾದ ನಗರ ಪರಿಸರವಾದಿಗಳ ಮೇಲೂ ಮಾಡಬೇಕಾಗಿದೆ.


ನಮ್ಮ ಶಾಂತಯುತ ಬದುಕಿಗೆ ಯಾರ್ಯಾರೆಲ್ಲ ಕಲ್ಲು ಹಾಕ್ತಾರೋ? ಅನಿವಾರ್ಯವಾಗಿ ಯಾರ್ಯಾರನ್ನೆಲ್ಲ ಎದುರಿಸಬೇಕೋ? ದೇವರೇ ಬಲ್ಲ!!

ಇವತ್ತು ಕೊಪ್ಪದಲ್ಲಿ ನಡೆದ ಯಶಸ್ವಿ ಪ್ರತಿಭಟನೆ ಕೇವಲ ಒಂದು ಪ್ರಾರಂಭ ಮತ್ತು ಟ್ರೈಲರ್!!

ಪಿಚ್ಚರ್ ಅಭಿ ಬಾಕಿ ಹೆ.

ಓ ದೇವರೇ, ಸಹಾಯ ಮಾಡು.


-ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top