ಸಮುದಾಯ ಬಾನುಲಿ: ಬೆಳವಣಿಗೆಗೆ ಅವಕಾಶಗಳು ಮತ್ತು ಸವಾಲುಗಳು- ಕಾರ್ಯಾಗಾರ

Upayuktha
0


ಧಾರವಾಡ: ಸಮುದಾಯ ಬಾನುಲಿ: ಬೆಳವಣಿಗೆಗೆ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಮೇಲೆ ಎರಡು ದಿನದ ಕಾರ್ಯಾಗಾರವನ್ನು ಕೃಷಿ ಸಮುದಾಯ ಬಾನುಲಿ ಕೇಂದ್ರ ಕೃ.ವಿವಿ., ಧಾರವಾಡ ಹಾಗೂ ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್, ಕರ್ನಾಟಕ ಅವರ ಸಹಯೋಗದೊಂದಿಗೆ ದಿನಾಂಕ 17-18 ಆಗಸ್ಟ್, 2024 ರವರೆಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಉದ್ಘಾಟಕರಾದ ಡಾ. ಎಸ್. ಎಸ್. ಅಂಗಡಿ, ವಿಸ್ತರಣಾ ನಿರ್ದೇಶಕರು, ಕೃ.ವಿ.ವಿ., ಧಾರವಾಡ ಇವರು ಮಾತನಾಡುತ್ತಾ ಕೃಷಿ ವಿಶ್ವವಿದ್ಯಾಲಯದ ಸಮುದಾಯ ಬಾನುಲಿ ಕೇಂದ್ರವು 17 ವರ್ಷ ಪೂರೈಸಿದೆ ಮತ್ತು ಇದು ನಡೆದ ಬಂದ ಹಾದಿ ಹಾಗೂ ಬೆಳೆದ ಬಂದ ವೈಖರಿ ತುಂಬ ಸುಗಮವಾಗಿಲ್ಲದಿದ್ದರೂ, ಅನೇಕ ರೈತರನ್ನು ಮತ್ತು ಸಾಮಾನ್ಯ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈಗಿನ ಕಾಲದಲ್ಲಿ ರೇಡಿಯೋವನ್ನು ಕೇಳುವವರು ಕಡಿಮೆಯಾಗಿದ್ದರು ಕೂಡ ನ್ಯಾರೋ ಕಾಸ್ಟಿಂಗ್, ಪಾಡ್ ಕಾಸ್ಟಿಂಗ್ ಮತ್ತು ಆ್ಯಪ್‌ಗಳ ಮೂಲಕ ಅನೇಕ ಕೃಷಿ ತಂತ್ರಜ್ಞಾನಗಳು ಮತ್ತು ಯೋಜನೆಗಳ ಕುರಿತು ಮಾಹಿತಿಯನ್ನು ಪ್ರಸಾರ ಮಾಡುತ್ತಾ ಮೂಲೆ ಮೂಲೆಗಳಲ್ಲೂ ತಲುಪುತ್ತಿದೆ. ನಮ್ಮ ಜನಪದ ಸಾಹಿತ್ಯದಲ್ಲಿ ಅನೇಕ ಕುತೂಹಲಕಾರಿ ಅಂಶಗಳಿದ್ದು, ಅವನ್ನು ಹೆಕ್ಕಿ ತೆಗೆದು ಸಮುದಾಯ ಬಾನುಲಿ ಕೇಂದ್ರದ ವ್ಯಾಪ್ತಿಯಲ್ಲಿರುವ ಸಾಮಾನ್ಯ ಜನರಿಗೆ ಬಿತ್ತರಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್, ಕರ್ನಾಟಕದ ಅಧ್ಯಕ್ಷರಾದ ಡಾ. ರಶ್ಮಿ ಅಮ್ಮೆಂಬಳ ಅವರು ಮಾತನಾಡಿ, 1995 ರಲ್ಲಿ ಸುಪ್ರೀಂ ಕೋರ್ಟ್, ಧ್ವನಿ ಒಂದು ಸಾರ್ವಜನಿಕ ಸಂಪತ್ತಾಗಿದ್ದು ಬಾನುಲಿ ಕೇಂದ್ರಗಳನ್ನು ಕೃಷಿ ವಿಜ್ಞಾನ ಕೇಂದ್ರ ಮತ್ತು ಎನ್‌ಜಿಒಗಳು ಕೂಡ ತಮ್ಮದೇ ಬಾನುಲಿ ಕೇಂದ್ರಗಳನ್ನು ತೆರೆಯಬಹುದೆಂದು ಆದೇಶ ನೀಡಿದಾಗ ಅನೇಕ ಸಂಸ್ಥೆಗಳು ಮುಂದೆ ಬಂದು ಈಗ ನಮ್ಮ ದೇಶದಲ್ಲಿ ಸುಮಾರು 500 ಬಾನುಲಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.


ಬಾನುಲಿ ಕೇಂದ್ರಗಳ ಉದ್ದೇಶ ಸಾಮಾನ್ಯ ಜನರಿಗೆ ಮಾಹಿತಿ ನೀಡುವುದು ಮತ್ತು ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸುವುದೇ ಆಗಿದೆ. ಬಾನುಲಿ ಕೇಂದ್ರಗಳು ನಾನ್ ಪ್ರಾಫಿಟ್ ಸಂಸ್ಥೆಗಳಾಗಿರುವದರಿಂದ ಅವು ಸಮಾಜದ ಏಳಿಗೆಗೆ ಕಂಕಣಕಟ್ಟಿ ನಿಂತಿವೆ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾದ ಶ್ರೀ ಶಿವಶಂಕರ, ಜಂಟಿ ಕಾರ್ಯದರ್ಶಿ, ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್, ಕರ್ನಾಟಕ ಇವರು ಬಾನುಲಿ ಕೇಂದ್ರಗಳ ಚಟುವಟಿಕೆಗಳ ಕುರಿತು ಮಾತನಾಡುತ್ತಾ ಆರೋಗ್ಯ, ಶಿಕ್ಷಣ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಉಪಜೀವನ ನಿರ್ವಹಣೆ ಮತ್ತು ನೈರ್ಮಲ್ಯ ಕುರಿತಾದ ವಿಷಯಗಳು ಸಮುದಾಯಗಳಿಗೆ ಮುಟ್ಟುವಲ್ಲಿ ಯಶಸ್ವಿಯಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಕೂಡ ಸಹಯೋಗ ನೀಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯ ನೀಡುತ್ತಿವೆ ಎಂದರು. ಅದರಲ್ಲೂ ಕೂಡ ಸ್ವಸಹಾಯ ಗುಂಪುಗಳ ಸಹಬಾಗಿತ್ವದಲ್ಲಿ ಅನೇಕ ಕಾರ್ಯಕ್ರಮಗಳು ಮಹಿಳೆಯರ ಸ್ವಾವಲಂಬನೆಗೆ ಸಹಾಯ ಮಾಡಿವೆ ಎಂದು ತಿಳಿಸಿದರು.


ಸಹ ವಿಸ್ತರಣಾ ನಿರ್ದೇಶಕರಾದ ಡಾ. ಎಸ್. ಎ. ಗದ್ದನಕೇರಿ ಅವರು ಸ್ವಾಗತಿಸಿದರು, ಕಾರ್ಯಕ್ರಮದ ಆಯೋಜಕರಾದ ಡಾ. ಸುರೇಖಾ ಸಂಕನಗೌಡರ, ಕಾರ್ಯಾಗಾರದ ಉದ್ದೇಶವನ್ನು ತಿಳಿಸಿದರು. ಕಾರ್ಯಕ್ರಮವನ್ನು ಡಾ. ಗೀತಾ ತಾಮಗಳೆ ನಿರೂಪಿಸಿದರು ಮತ್ತು ಡಾ. ಎಸ್. ಎನ್. ಜಾಧವ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top