ಮಹಾತ್ಮಾ ಗಾಂಧೀಜಿ ಏಕೆ ಗಾಂಧೀ ತಾತ ಎಂದು ಜನಪ್ರಿಯರಾದರು? ಅದವರು ಬಿಡುವಿದ್ದಾಗೆಲ್ಲ ಮಕ್ಕಳ ಜೊತೆ ಕಾಲ ಕಳೆಯಲು ಬಯಸುತ್ತಿದ್ದರು. ಪತ್ರಿಕೋದ್ಯಮ ವೃತ್ತಿಯಲ್ಲಿ ದೊಡ್ಡ ದೊಡ್ಡ ಮನುಷ್ಯರದೆಲ್ಲ ಸಹವಾಸವಾಗಿ, ಸುಸ್ತಾಗಿ ಕೂತು ಒಮ್ಮೆ ಮನಸ್ಸನ್ನು ಹಿಂದೋಡಿಸಿದಾಗ "ನೀನೆಂಥಾ ದಡ್ಡ, ನಾವು ಎಷ್ಟು ಒಳ್ಳೆಯದನ್ನು ಹೇಳಿದರೂ, ನೀನು ಕಿವಿಗೊಡಲಿಲ್ಲ" ಎಂದು ನನ್ನನ್ನು ಒಂದು ಗುಂಪಿಗೆ ಗುಂಪೇ ಛೇಡಿಸತೊಡಗಿತು. ಅವರ್ಯಾರೆಂದರೆ- " ನನ್ನನ್ನು ಮುದಗೊಳಿಸಿದ, ತಿದ್ದಿದ, ತೀಡಿದ, ಪಾಠ ಕಲಿಸಿದ, ಎಚ್ಚರಿಸಿದ, ಸರಳವಾಗಿ ಮನುಷ್ಯನಾಗಿ ಪ್ರಕೃತಿಯೊಂದಿಗೆ ಬಾಳು" ಎಂದು ಪದೇ ಪದೇ ಮಾತಿಲ್ಲದೆ, ಕೋಪ ಮಾಡಿಕೊಳ್ಳದೆ, ನಗುನಗುತ್ತಲೇ ತೋರಿಸಿಕೊಟ್ಟ ಚಿಣ್ಣರು.
ಪತ್ರಕರ್ತನಾಗಿ ನಾನು ಪ್ರೊಫೆಸರ್‍ಗಳಿಂದ, ಪುಸ್ತಕಗಳಿಂದ, ಪತ್ರಿಕೆಗಳಿಂದ ಟಿವಿ, ನೆಟ್ ಗಳಿಂದ ಘಂಟೆಗಟ್ಟಲೆ ಕಲಿತುದನ್ನು, ಕ್ಷಣಗಣನೆಯಲ್ಲಿ ಈ ಕಿಡ್ ಸಿಟಿಜನ್‌ರು ಮನಸ್ಸಿನೊಳಗೆ ಅಚ್ಚೊತ್ತಿದ್ದಾರೆ ಎಂದು ಒಂದೊಂದು ಘಟನೆಯನ್ನು ಮೆಲುಕು ಹಾಕಿದಾಗಲೂ ನನಗೆ ಮನವರಿಕೆಯಾಗುತ್ತದೆ.
ನಾವಿಂದು ಚಿಂತೆ ಮಾಡಬೇಕಾಗಿರುವುದು ಮಕ್ಕಳು ನಮ್ಮ ಮಾತನ್ನು ಕೇಳುತ್ತಿಲ್ಲವೆಂದಲ್ಲ! ಎಚ್ಚರ ಇರಬೇಕಾಗಿರುವುದು ಮಕ್ಕಳು ಪ್ರತಿಕ್ಷಣದಲ್ಲೂ ನಮ್ಮ ಪ್ರತಿ ನಡೆಯನ್ನು ಕೂಡಾ ಗಮನಿಸುತ್ತಲಿರುತ್ತಾರೆ ಎಂಬುದರ ಬಗ್ಗೆ.
ನಾವೆಂದಾದರೂ ಮಕ್ಕಳ ಅಗಾಧ ವಿಸ್ಡಮ್ ಅನ್ನು, ಅವರ ಅಮಾಯಕ ಸಹಜ ಯೋಚನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆಯೇ! ನಾವು ಚಿಕ್ಕವರಾಗಿದ್ದಾಗ ಪದೇ ಪದೇ ನಮ್ಮ ಕಿವಿಗೆ ಬೀಳುತ್ತಿದ್ದುದು ದೊಡ್ಡವರ ಮಾತಿನ ನಡುವೆ ಬಾಯಿ ಹಾಕಬಾರದೆಂಬ "ಬುದ್ಧಿ"ವಾದ. ನನಗಾಗ ದುಃಖ, ಕೋಪ ಬರುತ್ತಿತ್ತು. ನಿರ್ವಾಹವಿಲ್ಲದೆ ಬಾಯ್ಮುಚ್ಚಿ ಕುಳಿತಿರುತ್ತಿದ್ದೆ. ಇಂದು ತಪ್ಪು ಮಾಡಿದರೂ ಮಕ್ಕಳನ್ನು ಶಿಕ್ಷಷಿಸಬಾರದೆಂಬ ಜಗತ್ತಿನಲ್ಲಿ ನಾವಿದ್ದೇವೆ. ಕುಟುಂಬದೊಳಗಿನ ಹಕ್ಕು ಸಾಧನೆಗೆ ಹಿಂಸೆಯೇ ಸರಿಯೆಂಬ ಭಾವನೆಯಲ್ಲಿ ಬೆಳೆದ ಮಗುವಿಗೆ ಹೊರಜಗತ್ತಿನ ಹಿಂಸಾಚಾರವನ್ನು ಹತೋಟಿಸಲು ಶಾಂತಿ ಮಂತ್ರ ಹೇಳಿ ಸುಮ್ಮನಾಗಿಸುವುದು ಕಷ್ಟ.
ಮಗು ಬಯಸುವ ವಸ್ತುವೊಂದಕ್ಕೆ ಗಂಭೀರವಾಗಿದ್ದು ಹುಸಿ ಜಗಳವೆಸಗಿ ನೋಡಿ ತನಗೆ ಬೇಕಾದ ವಸ್ತು ತನಗಿನ್ನು ಸಿಗುವುದೇ ಇಲ್ಲವೆಂದು ಮನವರಿಕೆಯಾದರೆ, ಆ ಮಗು ಹೊಂದಾಣಿಕೆಗೆ ತನ್ನಿಂತಾನೆ ಸಿದ್ಧವಾಗಿ ಬಿಡುತ್ತದೆ!. ಅದು ಸ್ವಂತ ಬುದ್ಧಿ.
ಕಣ್ಣು ಮುಚ್ಚಿ, ಬದುಕಿನ ಪಯಣದ ದಾರಿಯಲ್ಲಿ ಮಕ್ಕಳೊಂದಿಗಿನ ನಿಮ್ಮ ಕುಶಲ ಕ್ಷಣಗಳನ್ನು ಮನಸಿನಂಗಳದಲ್ಲಿ ನೀವು ರೀ-ಪ್ಲೇ ಮಾಡಿ. "ಮುದ್ದಾದ ಮುಖ ಆಶ್ಚರ್ಯ, ಪ್ರೀತಿ ಅರಳುವುದರೊಂದಿಗೆ, ಜಗತ್ತನ್ನು ನಿಸ್ಪೃಹವಾಗಿ ಪರಿಕಿಸುವ ಕುತೂಹಲದಿಂದ ಮೂಡುವ ತಮಾಶೆ ಭಾವ, ಜೊತೆ ಜೊತೆಯಲ್ಲಿ ಜೋರಾಗಿ ಸ್ಫೋಟಗೊಳ್ಳುವ ಕೇಕೇ ನಗು". ನೆನಪಿನಾಳದಿಂದ: ಇದರಿಂದ ಸ್ಫೂರ್ತಿಗೊಳ್ಳದವರು ಯಾರಾದರೂ ಇರಲು ಸಾಧ್ಯವೇ!?
ಸ್ವಂತಮನೆ ಮಕ್ಕಳೇ ಆಗಿರಬೇಕಿಲ್ಲ. ಗುರುತು ಪರಿಚಯವಿಲ್ಲದೆ ಬೀದಿ ಬದಿಯಲ್ಲಿ ಕಾರು-ಬಸ್ಸುಗಳ ಬಿರು ಚಲನೆಯೆಡೆಯಲ್ಲಿ ಬದುಕುವ ಎಳೆಯರೂ ಆಗಿರಬಹುದು. ದಯವಿಟ್ಟು ಪುರುಸೊತ್ತಾದೆಗಲ್ಲ ಮಕ್ಕಳನ್ನು ಗಮನಿಸುವುದನ್ನು ಹಾಬಿ ಮಾಡಿಕೊಳ್ಳಿರಿ. ಮಜಾ ಬರುತ್ತದೆ. ಮ್ಯೂಸಿಕ್‌ಗೆ ತಲೆದೂಗದವರು ರಕ್ಕಸರೇ ಇರಬೇಕೇಂಬ ಉಕ್ತಿಗೆ ಸರಿಗೂಡಿಸುವಂತೆ ಮಕ್ಕಳ ಮನಸ್ಸಿಗೆ ಸ್ಪಂದಿಸದವರು ವಿಕೃತರೇ ಇರಬೇಕು ಎನ್ನಬಹುದು.
1990ರ ದಶಕದ ಆದಿಭಾಗ. ನಾನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತರನ್ನು ಕೊನೆಯದಾಗಿ ಅವರದೇ ಕರಾವಳಿ ಜಿಲ್ಲೆಯಲ್ಲೊಂದು ಸಂವಹನ ಸಂಕಿರಣದಲ್ಲಿ ಭೇಟಿಯಾಗಿದ್ದೆ. ಮಾತಿನ ನಡುವೆ ಮಕ್ಕಳ ಮನಸ್ಸಿನ ವಿಚಾರ ಪ್ರಸ್ತಾಪಗೊಂಡಿತು. ತನ್ನ ಬದುಕಿನ ಬಹುಪಾಲು ಸಮಯ, ಮಕ್ಕಳ ಮನ ಅರಳಿಸಲು ಪೆನ್ನು, ಪೇಪರ್, ಪೆಯಿಂಟಿಂಗ್ ಮಾಧ್ಯಮದ ಮುಖಾಂತರ ಶ್ರಮಿಸಿದರ ಕಾರಂತರ ಬಾಯಿಂದ ಮಾತೊಂದು ಹೊರಬಿತ್ತು.
ಅದೇನೆಂದರೆ "ಮಕ್ಕಳ ಮನಸ್ಸು ಹೇಗಿರುತ್ತದೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಮಕ್ಕಳು ಅವರದೇ ವಿಚಿತ್ರ ಜಗತ್ತಿನಲ್ಲಿರುತ್ತಾರೆ".
ಮಕ್ಕಳ ಮನಸ್ಸನ್ನು ಯಾರೂ ಊಹಿಸಲು ಸಾಧ್ಯವಿಲ್ಲವೆಂದು ಅರಿತಿದ್ದ ಕಾರಂತರು ಮಕ್ಕಳೊಂದಿಗೆ ಮತ್ತು ಮಕ್ಕಳಿಗಾಗಿ ಮಾಡಿದ ಕೆಲಸ ಒಂದೆರಡಲ್ಲ. ಅವರು ಸ್ಥಾಪಿಸಿದ ಪರ್ಲಡ್ಕದ ಬಾಲವನದ ಇಂದಿನ ಸ್ಥಿತಿ ಕಣ್ಣೀರು ಇಡುವಂತಿದೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆ ಬಳಿಕವೂ, ಅವರು ಪುತ್ತೂರಿನ ಪರಿಸರದಲ್ಲಿ ಚಟುವಟಿಕೆಯಿಂದಿದ್ದ ಕಾಲದಲ್ಲಿ ಬಾಲವನ ಎಂತಹ ಸಂಭ್ರಮದಲ್ಲಿತ್ತೆಂದು ಆ ಕಾಲದ ಮಕ್ಕಳು- ಅಜ್ಜಂದಿರುಗಳಾಗಿ ಈಗಲೂ ನೆನಪಿಸಿಕೊಳ್ಳುವುದನ್ನು ಕಿವಿಯಾರೆ ಕೇಳಿದ್ದೇನೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ