ನೆನಪಿನಾಳದಿಂದ: ಬದುಕಿನ ಬುತ್ತಿ ಕಟ್ಟಿಕೊಟ್ಟ ಮಾಯಿಲಕೋಟೆ ಸಂಸ್ಕೃತಿ

Upayuktha
0


ಬಹುಶಃ ಇಡೀ ಭಾರತದಲ್ಲೇ ಇಷ್ಟು ಸಣ್ಣ ಊರೊಂದರಲ್ಲಿ ಆರೇಳು ಭಾಷೆಗಳನ್ನಾಡುವ, ವಿವಿಧ ಧರ್ಮಗಳ, ವಿವಿಧ ಜಾತಿ-ವರ್ಗಗಳ, ಸಾಂಸ್ಕೃತಿಕ ಹಿನ್ನೆಲೆಗಳ ಜನರು ಒಟ್ಟಾಗಿ ವಾಸಿಸುವ ಜಾಗವೆಂದರೆ ಇದೊಂದೇ ಇರಬಹುದೇನೋ. ಅದು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶವಾದ ಮಾಯಿಲಕೋಟೆ. ಕೇವಲ ಮೂರ್ನಾಲ್ಕು ಕಿಲೋಮೀಟರ್‍‌ಗಳ ವಿಸ್ತಾರದ ಪ್ರದೇಶ. ಭಾಷಾವಾರು ರಾಜ್ಯಗಳ ವಿಂಗಡಣೆಗೆ ಮೊದಲು ಈ ಪ್ರದೇಶ ನಾಲ್ಕು ರಾಜ್ಯಗಳಲ್ಲಿ ಸೇರಿತ್ತು. ಕನ್ನಡ, ತುಳು, ಮರಾಠಿ, ಕೊಂಕಣಿ ( ಈ ಭಾಷೆಗಳಲ್ಲೂ ವಿವಿಧ ಪ್ರಬೇಧಗಳು) ಮಾತನ್ನಾಡುವ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಹೆಸರಾಂತ ಪತ್ರಕರ್ತರಾದ ಡಾ. ಈಶ್ವರ ದೈತೋಟ ಅವರು ಅತ್ಯಂತ ವೈಶಿಷ್ಟ್ಯಪೂರ್ಣವಾದ ತಮ್ಮೂರಿನ ಕುರಿತು ಅಪರೂಪದ ಮಾಹಿತಿಗಳನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಹಂಚಿಕೊಂಡಿದ್ದಾರೆ.


ಮುಂದಕ್ಕೆ ಅವರದೇ ಮಾತುಗಳಲ್ಲಿ ಓದೋಣ:


ನಾನು ಹುಟ್ಟಿ ಬೆಳೆದ ದೈತೋಟ ಮನೆ ನಮ್ಮೂರಿನ ಪ್ರಸಿದ್ಧ ಮಾಯಿಲಕೋಟೆ ಮಡಿಲಲ್ಲಿದೆ. ನಾನು ಹುಟ್ಟುವಾಗ ಮದ್ರಾಸ್ ಪ್ರಾಂತದಲ್ಲಿದ್ದ ಪಾಣಾಜೆ ಗ್ರಾಮದ ಈ ಪ್ರದೇಶ, ಶಾಲೆಗೆ ತೆರಳುವಾಗ ಕರ್ನಾಟಕಕ್ಕೆ ಸೇರಿತ್ತು. ನನ್ನ ಅಕ್ಕ-ಅಣ್ಣಂದಿರೆಲ್ಲರೂ ಕಲಿತ ಪಕ್ಕದ ಪಡ್ರೆ ತೋಟದ ಬಯಲಿನ ಶಾಲೆ ಕೇರಳದ ಪಾಲಾಗಿತ್ತು. ಇವೆಲ್ಲದರ ನಡುವೆ ನಮ್ಮನ್ನೆಲ್ಲಾ ಪ್ರೀತಿಯಿಂದ ಬಂಧಿಸಿಟ್ಟಿದ್ದು ಊರಿಗೇ ಹೆಮ್ಮೆಯಾಗಿದ್ದ ಪ್ರಕೃತಿ ಮತ್ತು ಸರಸ್ವತಿಯೇ ಮೈವೆತ್ತಂತಿದ್ದ ಮಾಯಿಲಕೋಟೆಯೆಂದರೇ ಸರಿ.


ನಮಗೆ ಸವಿಯಲು ಸಿಗುತ್ತಿದ್ದ ಕುಂಟಾಂಗಿಲ, ನೆಲ್ಲಿಕಾಯಿ, ಚಪ್ಪಳಿಕೆ, ಮಾವು, ಹಲಸು ಮರಗಳೆಲ್ಲಾ ಈ ನಮ್ಮ ಪ್ರೀತಿಯ ಕೋಟೆಯಲ್ಲಿತ್ತು. ಕುಡಿಯುವ ನೀರಂತೂ ಅದರ ಉದರದಿಂದಲೇ ಬರುತ್ತಿತ್ತು. ಅಜ್ಜ, ನಮ್ಮಪ್ಪ, ಅಣ್ಣ ಎಂದು ಕುಟುಂಬದವರು ಊರಿನ ಆರೋಗ್ಯ ರಕ್ಷಣೆ, ಸುಧಾರಣೆಗೆಂದು ನಿರ್ವಹಿಸುತ್ತಿದ್ದ ಆಯುರ್ವೇದ ಮತ್ತು ಗಿಡಮೂಲಿಕೆಗಳ ಆಧಾರದ ಅಜ್ಜಿಮದ್ದಿನ ಹಣ್ಣು, ಕಾಯಿ, ಸೊಪ್ಪು, ಗೆಲ್ಲು, ಬೇರು, ನಾರುಗಳೆಲ್ಲವನ್ನೂ ಬೆಳೆಸಿ ಸಲಹುವ ಪ್ರಕೃತಿ ಮಾತೆಯ ಮಡಿಲು ಕೂಡಾ ಇದುವೇ ಹಸಿರು ಗುಡ್ಡವಾಗಿತ್ತು.


ಅಂದಿನ ಕಾಲದಲ್ಲಿ ಪರವೂರಿನವರು ಯಾರಾದರೂ ನಮ್ಮೂರಿಗೆ ಬಂದರೆ ಸಾಕು, ''ನಮ್ಮೂರಿನಲ್ಲಿ ಮಾಯಿಲಕೋಟೆ ಇದೆ. ಅದನ್ನು ಹತ್ತಿದರೆ ಅರಬ್ಬೀ ಸಮುದ್ರದಲ್ಲಿ ಹಡಗು ಹೋಗುವುದು ಕಾಣುತ್ತದೆ. ಎದುರಿನ ಜಂಗ್ಲಿ ಕಾಡಿನೆಡೆಯಿಂದ ಸೂರ್ಯ ಉದಯಿಸಿ ಮೇಲೇರುವುದನ್ನು ನೋಡಬಹುದು. ಗುಡ್ಡದ ಎದುರಿನ ತುದಿಯಲ್ಲಿ ಹುಲಿ ಬಾಂಡೆಲು ಇದೆ. ಪತ್ರಡೆ ಮಾಡಲು ರುಚಿರುಚಿ ಮರಕೆಸುವು ಬೇಕಾದಷ್ಟು ಉಂಟು. ಬಲಿಯೇಂದ್ರ ಪೂಜೆ ಅಲಂಕಾರಕಕೆ ಪಾದೆ ಹೂವು ಸಿಗುತ್ತದೆ'' ಎಂದೆಲ್ಲಾ ಜಂಭದಿಂದ ಹೇಳುತ್ತಿದ್ದುದು ನೆನಪಿದೆ.


ಇಂತಹ ಅಪೂರ್ವ ಪ್ರಕೃತಿ ಮಡಿಲಲ್ಲಿ ಬೆಳೆದ ನನಗೆ ಈ ದೇಶದ ಮೂಲೆ ಮೂಲೆಗಳಲ್ಲಿಯೂ  ಸ್ಥಳೀಯವಾಗಿ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಿದ ಮಾಯಿಲರಂತಹ ಸಮುದಾಯಗಳ ಬಗ್ಗೆ  ಪ್ರೀತಿ ಗೌರವಗಳು ಇದ್ದೇ ಇರುತ್ತದೆ. ನಮ್ಮ ಬದುಕಿನಲ್ಲೀಗ ನಡೆಯುತ್ತಿರುವ ತಂತ್ರಜ್ಞಾನದ ಪ್ರಭಾವ, ಜಗದಗಳೀಕರಣ ಒತ್ತಡಗಳ ಹಿನ್ನೆಲೆಯಲ್ಲಿ ಪರಿಸರದೊಂದಿಗೆ ಹೊಂದಾಣಿಕೆಯೊಂದಿಗೆ ಬದುಕಬೇಕಾದ ಅನಿವಾರ್ಯತೆ ಎದ್ದೆದ್ದು ಕಾಣಿಸುತ್ತದೆ. 


ಒಬ್ಬ ಅನಾಮಿಕ ಸಮಾಜ ವಿಜ್ಞಾನಿ ಹಲವು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದ. 'ದಿ ಮೋಸ್ಟ್ ಸೀರಿಯಸ್ ಕಾಸ್ ಆಫ್ ಎಯಿಲ್‌ಮೆಂಟ್ ದ್ಯಾಟ್ ಮ್ಯಾನ್‌ಕೈಂಡ್ ಮೆ ಫೇಸ್ ಇನ್ ದಿ ಟ್ವೆಂಟೀಫಸ್ಟ್ ಸೆಂಚುರಿ ಈಸ್ ಇನ್‌ಕ್ರೀಸಿಂಗ್ ಹ್ಯೂಮನ್ ಐಸೊಲೇಶನ್ ಡಿಸ್‌ಪೈಟ್ ಆಲ್ ಕಮ್ಯುನಿಕೇಶನ್ ಸಯನ್ಸ್‌''. ಅಂದರೆ 21ನೇ ಶತಮಾನದಲ್ಲಿ ನಾವು ಎದುರಿಸಬೇಕಾಗಬಹುದಾದ ಅತೀ ಗಂಭೀರ ರೋಗಮೂಲವೆಂದರೆ ಲಭ್ಯವಿರುವ ಎಲ್ಲಾ ಸಂವಹನ ತಂತ್ರಜ್ಞಾನ ಹಾಗೂ ಸಂವಹನ ಕಾರ್ಯತಂತ್ರಗಳ ಹೊರತಾಗಿಯೂ ಪೀಡಿಸುವ ಮಾನವನ ಏಕಾಂಗಿತನ.


ತಂತ್ರಜ್ಞಾನದಿಂದ ಅನುಕೂಲವೆಷ್ಟೇ ಆಗಲಿ, ಮಜಾ ಎಷ್ಟೇ ಬರಲಿ- ಆತಂಕವೆಂದರೆ ಅತಿಯಾದ ತಂತ್ರಜ್ಞಾನದ ಅವಲಂಬಿಕೆಯಿಂದ ಮಾನವನ ಕುಟುಂಬ ಜೀವನ ಚಿಂದಿ ಚಿತ್ರಾನ್ನವಾಗುತ್ತದೆ ಎಂಬ ವಿಚಾರ. ಮನುಷ್ಯ ಮಾತು ಕಲಿತಾಗ ದೊಡ್ಡ  ಸಾಧನೆಯೆಂದೇ ಪರಿಗಣಿತವಾಗಿತ್ತು. ಅಕ್ಷರ, ಪದ, ಬರವಣಿಗೆ, ಓದುವಿಕೆ, ಪತ್ರಿಕೆಯಿಂದ ಅಂತರ್ಜಾಲದ ವರೆಗೆ ಒಂದೊಂದೇ ಹೊಸ ಅವತರಣಿಕೆಯಾಯಿತು.

- ಡಾ. ಈಶ್ವರ ದೈತೋಟ, ಎಂ.ಎ. ಡಿ.ಲಿಟ್.


(ಮುಂದಿನ ವಾರಕ್ಕೆ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top