ಕರ್ನಾಟಕ ಕಂಡ ಅತ್ಯಂತ ಚಾಣಾಕ್ಷ ರಾಜಕಾರಣಿಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ರಾಜಕೀಯ ಮುತ್ಸದ್ಧಿ ಇದ್ದರೆ ಅದು ರಾಮಕೃಷ್ಣ ಹೆಗಡೆ ಅವರು ಅನ್ನುವುದರಲ್ಲಿ ಎರಡು ಮಾತಿಲ್ಲ. ಇವರು 1983 ಮತ್ತು 1989ರ ಮಧ್ಯದಲ್ಲಿ ರಾಜ್ಯದ ಮುಖ್ಯ ಮಂತ್ರಿಗಳ ಸ್ಥಾನ ಸ್ವೀಕರಿಸಿ ತನಗೆ ಬಂದ ಎಲ್ಲಾ ಸವಾಲುಗಳನ್ನು ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸಿದ ಮುಖ್ಯಮಂತ್ರಿಯೂ ಹೌದು.
1982-84ರ ಕಾಲದಲ್ಲಿ ನಾನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಅವಧಿ. ಅಂದು ನಾನು ಮಂಗಳೂರು ವಿವಿ ಕೇಂದ್ರದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದಶಿ೯ಯಾಗಿ ಜವಾಬ್ದಾರಿ ಹೊತ್ತ ಕಾಲವದ್ದು. ಅಂದು ಇಂದಿನ ಹಾಗೆ ಯಾವುದೇ ಸವಲತ್ತುಗಳು ಇಲ್ಲದ ಮಂಗಳೂರು ವಿವಿ ಕ್ಯಾಂಪಸ್ ನಮ್ಮದಾಗಿತ್ತು. ಅಂದು ನಮ್ಮ ವಿವಿ ಕುಲಪತಿಗಳಾಗಿದ್ದವರು ಖ್ಯಾತ ಇತಿಹಾಸ ಪ್ರೊ.ಶೇಖ್ ಆಲಿಯವರು. ಅಂದು ನಮ್ಮ ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದವರು ಎಂಬಿಎ ವಿದ್ಯಾರ್ಥಿಯಾಗಿದ್ದ ಸೇೂಮೇಶ್ವರ ಅವರು. ಬಿಇ ಮುಗಿಸಿ ಎಂಬಿಎ ಅಧ್ಯಯನಕ್ಕೆ ಬಂದ ಸೇೂಮೇಶ್ವರ ಅವರು ಹೇೂರಾಟದ ಮುಂಚೂಣಿಯಲ್ಲಿರುವವರು. ಆದರೆ ನಾನು ಸ್ವಲ್ಪ ಸೌಮ್ಯ ಸ್ವಭಾವದ ಕಾರ್ಯದರ್ಶಿಯಾಗಿದ್ದೆ.
ಅಂದು ನಮ್ಮ ಪ್ರಮುಖ ಬೇಡಿಕೆಯೆಾಂದಿತ್ತು. ಅದೇನೆಂದರೆ ನಮ್ಮ ವಿದ್ಯಾರ್ಥಿ ಸಂಘವನ್ನು ಪಠ್ಯೇತರ ಚಟುವಟಿಕೆಗಳ ಸಂಘ ಅನ್ನುವುದನ್ನು Students council ಎಂದು ಮಾನ್ಯಮಾಡ ಬೇಕು. ಅದಕ್ಕೆ ನಮ್ಮ ವಿಶ್ವವಿದ್ಯಾಲಯ ಆಡಳಿತ ಒಪ್ಪಿಗೆ ಕೊಡಲೇ ಇಲ್ಲ. ನಮ್ಮ ಹೇೂರಾಟ ಎಷ್ಟು ದಿನ ನಡೆದಿತ್ತು ಅಂದರೆ ಮಂಗಳೂರು ವಿ.ವಿ.ಯ ಇತಿಹಾಸದಲ್ಲೇ ಕಾಣದಷ್ಟು ದಿನ ಅಂದರೆ ಸುಮಾರು 35 ದಿನಗಳ ಕಾಲ. ಕೊನೆಗೂ ನಮ್ಮ ಬೇಡಿಕೆ ಅಂದ್ರೆ ಕುಲಪತಿಗಳನ್ನು ಮನೆಗೆ ಕಳುಹಿಸಿ ಅನ್ನುವ ಮಟ್ಟಿಗೆ ಹೇೂರಾಟ ತಾರಕಕ್ಕೆ ಏರಿಬಿಟ್ಟಿತು. ಸ್ನಾತಕೋತ್ತರ ವಿದ್ಯಾರ್ಥಿಗಳೆಂದರೆ ಎಲ್ಲರೂ ಉನ್ನತ ಉದ್ದೇಶ ಇಟ್ಟುಕೊಂಡು ಸ್ನಾತಕೋತ್ತರ ಪದವಿ ಪಡೆಯಲು ಬಂದವರು. ಇಂತವರನ್ನು 35 ದಿನಗಳ ಕಾಲ ಹಿಡಿದು ಮುಷ್ಕರ ಮಾಡುವುದೆಂದರೆ ಸುಲಭವಾಗಿರಲಿಲ್ಲ.
ಅದರಲ್ಲೂ ಸ್ನಾತಕೋತ್ತರ ಅಂದ ಮೇಲೆ ನಮ್ಮೆಲ್ಲರ ಭವಿಷ್ಯ ನಿರ್ಧರಿಸುವವರು ನಮ್ಮ ಪ್ರೊಫೆಸರುಗಳು. ಅವರನ್ನು ಎದುರು ಹಾಕಿಕೊಂಡು ಮುಷ್ಕರ ಮಾಡಿದರೆ ನಮ್ಮೆಲ್ಲರ ಅಂಕಗಳ ಪರಿಸ್ಥಿತಿ ಏನಾಗಬಹುದು. ಇದನ್ನೆಲ್ಲಾ ನಿಭಾಯಿಸಿಕೊಂಡು ನಮ್ಮೆಲ್ಲರ ಹೇೂರಾಟ ಕೊಣಾಜೆಯಲ್ಲಿ ಅತ್ಯಂತ ಸುದೀರ್ಘವಾದ ಕಾಲ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮನ್ನು ಮಾತನಾಡಿಸಿ ಮುಷ್ಕರಕ್ಕೆ ಇತಿಶ್ರೀ ಹಾಡಲು ಬಂದ ಅಂದಿನ ಮುಖ್ಯಮಂತ್ರಿಗಳು ರಾಮಕೃಷ್ಣ ಹೆಗಡೆ ಅವರು ವಿದ್ಯಾರ್ಥಿ ನಾಯಕರಾದ ನಮ್ಮನ್ನು ಕರೆದು ಅವರು ಹೇಳಿದ ಮಾತು ಇಂದಿಗೂ ನೆನಪಾಗುತ್ತದೆ. "ವಿದ್ಯಾರ್ಥಿಗಳು ಮುಷ್ಕರ ಮಾಡಬೇಕು, ಮಾಡಬಾರದು ಅನ್ನುವುದರಲ್ಲಿ ನಾನು ಕೊನೆಯ ಮನುಷ್ಯ. ಆದರೆ ಮುಷ್ಕರ ಮಾಡಬೇಕಾದ ವಿಷಯ ಘನ ಕಾರ್ಯವಾಗಿರಬೇಕು. ನಿಮ್ಮ ಬೇಡಿಕೆ ಕೇವಲ ಸಂಘಕ್ಕೆ ಒಂದು ಹೊಸ ನಾಮಕರಣ ಅಲ್ವಾ. ಅದನ್ನು ಇಂದೇ ಮಾಡಿ ಬಿಡಿ ಕುಲಪತಿ ಸಾಹೇಬ್ರೆ. ಅಂದಿನಿಂದ ವಿದ್ಯಾರ್ಥಿ ಸಂಘ ಅನ್ನುವ ಹೆಸರಿನ ಭಾಗ್ಯ ಕೂಡಿ ಬಂತು ನೇೂಡಿ.
ಇಂದು ಅಂದರೆ ಸರಿ ಸುಮಾರು 35/40 ವರುಷಗಳ ಅನಂತರ ಇದನ್ನೆಲ್ಲಾ ನೆನಪಿಸಿಕೊಂಡಾಗ ಈ ಮುಷ್ಕರ ಈ ನಾಮಕರಣ ಇದೆಲ್ಲವೂ ಅತ್ಯಂತ ಬಾಲಿಶವಾಗಿ ಕಾಣುತ್ತದೆ. ಮಾತ್ರವಲ್ಲ ಅಂದು ನಮ್ಮ ಚಾಣಾಕ್ಷ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನಮಗೆ ಹೇಳಿದ ಉಪದೇಶದ ಮಾತು ಇಂದಿಗೂ ಪ್ರಸ್ತುತ ಅನ್ನಿಸದೇ ಇರಲಾರದು. ಅಲ್ವೇ?
- ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ