- ಡಾ. ರೂಪಾ ರಾವ್
ಬಾಹ್ಯ ಮೌಲ್ಯೀಕರಣ ಅಂದರೆ ಹೊರಗಿನವರಿಂದ ಸಿಗುವ ಮೆಚ್ಚುಗೆ, ಬಹುಮಾನ, ಅನುಮೋದನೆ. ಇದು ತಾತ್ಕಾಲಿಕ ಭರವಸೆಯನ್ನು ನೀಡಬಹುದು, ಅದರ ಮೇಲೆ ಅತಿಯಾದ ಅವಲಂಬನೆಯು ಸ್ವಾಭಿಮಾನವನ್ನು ದುರ್ಬಲಗೊಳಿಸುತ್ತದೆ ಮತ್ತು ಅಭದ್ರತೆಗೆ ಕಾರಣವಾಗಬಹುದು. ಇದಕ್ಕೆ ಸರಿಯಾದ ಪರಿಹಾರ ಸೆಲ್ಫ್ ಲವ್.
ಲವ್ ಯುವರ್ ಸೆಲ್ಫ್ ಅಥವಾ ಸೆಲ್ಫ್ ಲವ್ ಈ ಪದಗಳು ಇದೀಗ ಬಹಳ ಪ್ರಚಲಿತ. ಹೌದು ಸೆಲ್ಫ್ ಲವ್ ಬೆಳೆಸಿಕೊಳ್ಳುವುದು ಬಾಹ್ಯ ಮೌಲ್ಯೀಕರಣದ ಅಗತ್ಯವನ್ನು ಕಡಿಮೆ ಮಾಡುತ್ತದೆ, ಇತರರನ್ನು ಮೆಚ್ಚಿಸಲು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ನಮ್ಮ ಮೌಲ್ಯಗಳು ಮತ್ತು ಆಸೆಗಳಿಗೆ ಸರಿಯಾದ ಆಯ್ಕೆಗಳನ್ನು ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.
ಆದರೆ, ಈ ನಿಮ್ಮನ್ನು ನೀವು ಪ್ರೀತಿಸುವುದು ಎಂದರೆ ಏನು?
ನಿವು ಯಾವುದೇ ಸೆಲ್ಫ್ ಹೆಲ್ಪ್ ಪುಸ್ತಕ ಓದಿ ಅಥವಾ ಮೋಟಿವೇಶನಲ್ ಸ್ಪೀಕರ್ ಗಳು ಪ್ರವಚನ ಕೇಳಿ, ನಿಮ್ಮನ್ನು ನೀವು ಪ್ರೀತಿಸುವುದು ಅಂದರೆ ಸ್ವ ಪ್ರೀತಿ ಎಂದರೆ ಬಹುತೇಕರು ಕೊಡುವ ಸಲಹೆಗಳು, ಮಸಾಜ್ ಮಾಡಿಸಿಕೊಳ್ಳಿ, ಫೇಶಿಯಲ್ಗಳಿಂದ ನಿಮ್ಮ ಮುಖವನ್ನು ಚೆಂದಗಾಣಿಸಿ ಅಥವಾ ಮೇಕಪ್ ಮತ್ತು ಸುಂದರವಾದ ಬಟ್ಟೆಗಳಿಂದ ನಿಮ್ಮನ್ನು ಅಲಂಕರಿಸಿಕೊಳ್ಳಿ.
ನಿಜ, ಈ ಮೇಲಿನ ನುಡಿಗಳು ಈ ಕ್ಷಣದಲ್ಲಿ ನಿಮಗೆ ಖುಷಿಯ ಫೀಲ್ ಉಂಟುಮಾಡಬಹುದು, ಆದರೆ ಅವುಗಳು ಕೇವಲ ನಮ್ಮ ಹೊರಗಿನ ವ್ಯಕ್ತಿತ್ವಕ್ಕೆ ಮಾತ್ರ ಮೀಸಲಾಗಿರುತ್ತದೆ.
ಇನ್ನು ನಾವು ಸುಂದರವಾದ ಸ್ಥಳಗಳಿಗೆ ಭೇಟಿ ನೀಡಬಹುದು, ಸೆಲ್ಫಿ ತೆಗೆದುಕೊಳ್ಳಬಹುದು ಅಥವಾ ನಗುತ್ತಿರುವುದನ್ನು ಕ್ಲಿಕ್ ಮಾಡಲು ಅಥವಾ ರೋಮಾಂಚಕ ಭಂಗಿಯನ್ನು ಸೆರೆ ಹಿಡಿಯಬಹುದು.
ನಂತರ ಈ ಕ್ಷಣಗಳನ್ನು ನಮ್ಮ ಆಪ್ತರೊಂದಿಗೆ ಹಂಚಿಕೊಳ್ಳುತ್ತೇವೆ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತೇವೆ, ಲೈಕ್ಸ್ ಮತ್ತು ಕಾಮೆಂಟ್ಗಳಿಗಾಗಿ ಎದುರು ನೋಡುವುದು, ಈಗ ಆ ಲೈಕ್ಸ್ ಮತ್ತು ಕಾಮೆಂಟ್ಗಳು ಹೆಚ್ಚು ಬಂದಾಗ ನಾವು ನಿಜವಾಗಿಯೂ ನಮ್ಮನ್ನು ಪ್ರೀತಿಸುತ್ತಿದ್ದೇವೆ ಎಂದರ್ಥವೇ? ಲೈಕ್ಸ್ ಕಡಿಮೆಯಿದ್ದರೆ ಮತ್ತು ಕಾಮೆಂಟ್ಗಳು ಒಂದೋ ಎರಡೋ ಇದ್ದರೆ, ಅದು ನಮ್ಮ ಸ್ವಮೌಲ್ಯಗಳನ್ನೇ ಪ್ರಶ್ನಿಸುವಂತೆ ಮಾಡುತ್ತದೆಯಾ?
ಇದೊಂದು ಇನ್ನೊಂದು ರೀತಿಯ ಬಾಹ್ಯ ಮೌಲ್ಯೀಕರಣವನ್ನು (external validation) ಸ್ವಯಂ ಮೌಲ್ಯದೊಂದಿಗೆ (self worth) ತಪ್ಪಾಗಿ ತಿಳಿಯುವ ಟ್ರಾಪ್.
ನನ್ನ ಬಳಿ ಕೌನ್ಸೆಲಿಂಗ್ ಬಂದ ಒಂದು ಹೆಣ್ಣಿನದು ತಾನು ತನ್ನ ಜೊತೆಯವರಷ್ಟು ಚೆಂದವಿಲ್ಲ, ಯಾರೂ ತನ್ನನ್ನು ಮೆಚ್ಚುವುದಿಲ್ಲ, ತಾನು ಯಾವುದಕ್ಕೂ ಉಪಯೋಗವಿಲ್ಲ ಎಂದು ಕೊರಗುತ್ತಾರೆ, ಯೂನಿವರ್ಸಿಟಿ ಟಾಪರ್ ಆಗಿದ್ದ ಆಕೆ ಇದೀಗ ಈ ಹೊರಗಿನ ವ್ಯಾಲಿಡೇಶನ್ ಟ್ರಾಪಿಗೆ ಸಿಕ್ಕಿದ್ದಾಳೆ. ಅದರಿಂದ ತನ್ನ ನಿಜವಾದ ಸಾಮರ್ಥ್ಯವನ್ನು ಮರೆತೇಬಿಟ್ಟಿದ್ದಾಳೆ.
ಇಂತಹದು ನಾನು ಕೌನ್ಸೆಲಿಂಗ್ ಸಮಯದಲ್ಲಿ ಬಹಳಷ್ಟು ಜನರಲ್ಲಿ ಗಮನಿಸಿದ ರಿಯಾಲಿಟಿ. ಬಹುತೇಕರಿಗೆ ಬಾಲ್ಯದಿಂದಲೇ ಸಮಾಜದಿಂದ ಅನುಮೋದನೆ ಪಡೆಯಲು ಕಂಡೀಶನ್ (ಮನಸ್ಥಿತಿಯ ರೂಪಿಸುವಿಕೆ) ಮಾಡಲಾಗಿರುತ್ತದೆ.
ಈ ಕಂಡೀಶನಿಂಗ್ ಹೀಗಾಗುತ್ತೆ.
ಮನೆಗೆ ಯಾರಾದರೂ ಬಂದಾಗ ಅಥವಾ ಎಲ್ಲಿಯಾದರೂ ಹೋದಾಗ ಚಿಕ್ಕ ಮಕ್ಕಳಿಗೆ ಎಲ್ಲಿ ಪುಟ್ಟ ಒಂದು ಹಾಡು ಹೇಳು, ಒಂದು ಪೋಯೆಮ್ ಹೇಳು ಎಂದು ಕೇಳಿ ಅದು ಆ ಹಾಡನ್ನು ಹೇಳಿದಾಗ ಅದಕ್ಕೆ ಸುತ್ತಲಿನವರು ಕ್ಲಾಪ್ಸ್ ಹಾಕುವುದೋ, ಅಥವಾ ನೀನು ಹೀಗೆ ಮಾಡಿದರೆ ಸರೀಕರು, ಏನಂದುಕೊಳ್ಳುತ್ತಾರೋ ಅಥವಾ ನಾಕು ಜನಕ್ಕೆ ಮೆಚ್ಚುಗೆ ಆಗುವುದೇ ಬದುಕು ಎಂಬುದೆಲ್ಲಾ ಕಂಡೀಷನಿಂಗ್.
ಚಿಕ್ಕಂದಿನಲ್ಲಿ ಮಧ್ಯದಲ್ಲಿ ತಾನು ಮಾತಾಡಿದ್ದಕ್ಕೆ ಅಪ್ಪ ಬೈದು ಹೊಡೆದು ನಿಂದಿಸಿದ್ದು ಈಗಲೂ ಯಾರೊಂದಿಗೆ ಮಾತಾಡಿದರೆ ಅವರೇನು ಅಂದುಕೊಳ್ಳುತ್ತಾರೋ ಎಂಬ ಭಾವನೆ ಇಂದ ಮಾತೇ ಆಡದ ಜನರಿದ್ದಾರೆ. ಕ್ಲಾಸಿನಲ್ಲಿ ಕೈ ಎತ್ತಿ ಉತ್ತರ ಹೇಳಲು ಸ್ವಲ್ಪ ತಡವರಿಸಿದಾಗ ಮೇಷ್ಟ್ರು ಸಮೇತ ಇಡೀ ಕ್ಲಾಸ್ ಅಪಹಾಸ್ಯದ ನಂಗೆ ನಕ್ಕು ಮಾಡಿದ ಅಪಮಾನ ಈಗಲೂ ಯಾವುದೇ ಗುಂಪಿನ ಮುಂದೆ ಮಾತಾಡಲು ಭಯ ತರುತ್ತದೆ.
ಹೀಗೇ ಹೊರಗಿನ ಜನರ ವ್ಯಾಲಿಡೇಶನ್ ನಮ್ಮ ಸ್ವಯಂ-ಪ್ರೀತಿಯ ಅಳತೆಗೋಲಾಗಿದೆ. ಎಂದು ಇನ್ನೂ ಬಹುತೇಕ ಜನರು ನಂಬುತ್ತಿದ್ದಾರೆ. ಆದರೆ ನಿಜವಾದ ಸೆಲ್ಫ್ ಲವ್ ಇತರರು ನಿಮ್ಮನ್ನು ಹೇಗೆ ನೋಡುತ್ತಾರೆ ಅಥವಾ ಅವರಿಂದ ನೀವು ಸ್ವೀಕರಿಸುವ ಹೊಗಳಿಕೆಯ ಮೇಲೆ ನಿಂತಿರಬಾರದು. ಇದು ನಮ್ಮ ಮನಸಿನ ಕನ್ನಡಿಯಲ್ಲಿ ನಾವು ನಮ್ಮನ್ನು ಹೇಗೆ ಬಿಂಬಿಸಿಕೊಳ್ಳುತ್ತಿದ್ದೇವೆ ಎಂಬುದು ಸೆಲ್ಫ್ ಲವ್. ಸ್ವ-ಪ್ರೀತಿಯು ನಿಮ್ಮ ದೇಹ ಮತ್ತು ಮುಖವನ್ನು ಅಲಂಕರಿಸುವುದು ಮಾತ್ರವಲ್ಲ. ನಮ್ಮ ಮನಸಿನ ಕನ್ನಡಿಯಲ್ಲಿ ನಮಗೆ ಕಾಣುವ ನಮಗಿರಬಹುದಾದ ಕುಂದನ್ನು ಸರಿಪಡಿಸಿಕೊಳ್ಳುವುದು, ನಮ್ಮದೇ ಆದ ವಿಭಿನ್ನ ಹಾಗೂ ವಿಶಿಷ್ಟ ಸಾಮರ್ಥ್ಯಗಳನ್ನು ಗುರುತಿಸಿ ಸಂಭ್ರಮಿಸುವುದು. ಜೀವನದ ಎಂತಹುದೇ ಸಂದರ್ಭದಲ್ಲಿಯೂ ನಮ್ಮನ್ನು ನಾವು ಕೈಬಿಡದಿರುವುದು.
ಇತರರು ಇಂದು ನಿಮ್ಮನ್ನು ಮೆಚ್ಚಬಹುದು, ಆದರೆ ನಾಳೆ ಯಾವುದೋ ಕಾರಣಕ್ಕಾಗಿ ಅಥವಾ ಯಾವುದೋ ಸನ್ನಿವೇಶದಿಂದ ತಮ್ಮ ಮೆಚ್ಚುಗೆಯನ್ನು ಬೇರೆಡೆಗೆ ಬದಲಾಯಿಸಬಹುದು. ಜನರನ್ನು ಹೆಚ್ಚಿಸುತ್ತಾ ಕೂತರೆ, ಅದು ಕೊನೆಯಾಗದ ರೇಸಿನಲ್ಲಿನ ನಿಲ್ಲದ ಓಟ..
ಹಾಗೆಯೇ ಇನ್ನೊಂದು ಮುಖ್ಯವಾದ ಅಂಶ ಜನರು ಮೆಚ್ಚುವುದಿಲ್ಲ ಎಂದು ಅವರ ಅಭಿರುಚಿ ಸರಿ ಇಲ್ಲ ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎಂಬೆಲ್ಲಾ ಯೋಚನೆಗಳು ನಮ್ಮ ಕುಂದು ಹಾಗೂ ತಪ್ಪಿಗೆ ನಾವೇ ಹಾಕಿಕೊಳ್ಳುವ ಮುಸುಗು. ಇತರರ ಅಭಿರುಚಿಯನ್ನು ಗೌರವಿಸುತ್ತಲೇ, ನಮ್ಮಲ್ಲಿ ಏನಾದರೂ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಗಳಿದ್ದರೆ ಮಾಡಿಕೊಳ್ಳಬಹುದು. ನಮ್ಮ ಉಡುಪು ಹಾಗೂ ನಡತೆ ನಾವಿರುವ ಸಮಾಜದ ಆರೋಗ್ಯಕ್ಕೆ ಮಾರಕವಾಗಿದ್ದರೆ ಅದನ್ನು ಬದಲಾಯಿಸಿಕೊಳ್ಳುವುದರಲ್ಲಿ ತಪ್ಪೆನಿಲ್ಲ
ಆದರೆ ಅವರ ಅಭಿಪ್ರಾಯಗಳು ನಮ್ಮನ್ನು ವ್ಯಾಖ್ಯಾನಿಸುವುದಿಲ್ಲ. ಏಕೆಂದರೆ ನಮ್ಮ ಜೀವನದಲ್ಲಿ ಸದಾಕಾಲ ಇರುವ ವ್ಯಕ್ತಿ ಅಂದರೆ ನಾವು, ನಾವು ಮಾತ್ರ. ನಾವು ಯಾರೆಂದು ಗುರುತಿಸಲು, ಪ್ರಶಂಸಿಸಲು, ಪ್ರೀತಿಸಲು ಮತ್ತು ಒಪ್ಪಿಕೊಳ್ಳಲು ನಮಗಿಂತ ಅತ್ಯುತ್ತಮ ವ್ಯಕ್ತಿ ಇನ್ನೊಬ್ಬರಿಲ್ಲ. ಆದ್ದರಿಂದ, ಇತರರಿಂದ ಮೆಚ್ಚುಗೆ, ವ್ಯಾಲಿಡೇಶನ್ ಪಡೆಯಲು ಕಾಯುವ ಬದಲು, ಸ್ವಾವಲೋಕನ ಹಾಗೂ ಸ್ವಯಂ ಮೌಲೀಕರಣ ಅಭ್ಯಾಸ ಮಾಡಲು ಪ್ರಾರಂಭಿಸಬೇಕು.
ನಮಗೆ ನಿಜವಾಗಿಯೂ ಸಂತೋಷವನ್ನುಂಟುಮಾಡುವ ಕೆಲಸಗಳನ್ನು ಮಾಡಲು ಸಮಯ ಕಳೆಯುವುದು. ನಮ್ಮ ಒಳ ಧ್ವನಿಯನ್ನು ಆಲಿಸುವುದು ಮತ್ತು ನಮಗೆ ಅಗತ್ಯವಾದ ಪ್ರೀತಿ ಮತ್ತು ಕಾಳಜಿಯನ್ನು ನೀಡಬೇಕು.
ನೆನಪಿಡಿ, ಸೆಲ್ಫ್ ಲವ್ ಒಂದು ನಿರಂತರ ಪ್ರಯಾಣ, ಇದು ಗಮ್ಯಸ್ಥಾನವಲ್ಲ. ಇದು ನಮ್ಮ ಭೂತಕಾಲದ ನೋವಿನ ವಿಚಾರಗಳನ್ನು ಬಿಟ್ಟು, ವರ್ತಮಾನವನ್ನು ಆನಂದಿಸುವುದು ಮತ್ತು ನಮ್ಮ ಭವಿಷ್ಯದಲ್ಲಿ ಭರವಸೆ ಹೊಂದುವುದು.
ಕೊನೆಯದಾಗಿ ಕಿವಿ ಮಾತು:
ಇತರರು ನಿಮ್ಮನ್ನು ಹೇಗೆ ಮೆಚ್ಚುತ್ತಾರೆ ಎಂಬ ಕಾರಣಕ್ಕಾಗಿ ನೀವು ಅರ್ಹರು ಎಂಬುದಲ್ಲ, ಆದರೆ ನೀವು ನಿಮ್ಮನ್ನು ಹೇಗೆ ನೋಡುತ್ತೀರಿ ಎಂಬುದು ಮುಖ್ಯ. "ಇತರರು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಹೊರತಾಗಿಯೂ ನಿಮ್ಮನ್ನು ಅನ್ ಕಂಡೀಶನ್ ಆಗಿ ಪ್ರೀತಿಸಿ."
ನೀವು ನಿಜವಾಗಿಯೂ ನಿಮ್ಮನ್ನು ಆಂತರ್ಯದಲ್ಲಿ ಒಪ್ಪಿಕೊಂಡು ಪ್ರೀತಿಸಿದಾಗಲೇ ವ್ಯಕ್ತಿತ್ವ ಹಾಗೂ ವ್ಯಕ್ತಿ ಬೆಳವಣಿಗೆ ಸಾಧ್ಯ.
ಹೀಗೆ ಮಾಡಿದಾಗ ನಿಮ್ಮ ಸಂತೋಷ, ನಿಮ್ಮ ಸ್ವ-ಮೌಲ್ಯ ಮತ್ತು ನಿಮ್ಮ ಸಾಧನೆಯ ಪ್ರಜ್ಞೆಗೂ ಜೀವ ಬಂದು ಬದುಕಲ್ಲಿ ಧೈರ್ಯದಿಂದ ಬದುಕು ನಡೆಸಲು ಸಹಾಯವಾಗುತ್ತದೆ.
ನೆನಪಿಡಿ, ನಿಮಗೆ ನೀವೇ ಜಾಂಬವಂತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ