ದಾರಿದೀಪ-14: ಅವಮಾನಗಳಿಗೆ ಕುಗ್ಗದಿರು

Upayuktha
0


ಮಾನ- ಅಪಮಾನ, ಹೊಗಳಿಕೆ-ನಿಂದನೆ, ಪ್ರಶಂಸೆ- ಪ್ರತೀಕಾರ, ದ್ವೇಷಿ- ಪ್ರೀತಿ, ಇದೆಲ್ಲವನ್ನು ನಾವುಗಳು ಸಮಚಿತ್ತದಿಂದ ಸ್ವೀಕರಿಸುವುದನ್ನು ಕಲಿಯಬೇಕು. ಸನ್ಮಾನವಾದಾಗ ಹಿಗ್ಗದೆ ಅಪಮಾನವಾದಾಗ ಕುಗ್ಗದೆ ದ್ವೇಷಿಸುವವನನ್ನ ಸೇಡಿನ ಪ್ರತಿಕಾರದಿಂದ ನೋಡದೆ ಪ್ರೀತಿಸುವವನು ಅತಿಯಾಗಿ ತಲೆ ಮೇಲೆ ಹೊತ್ತು ಮೆರೆಸದೆ ಸರ್ವರೋಳು ಸಮಭಾವವನ್ನು ಕಾಣುವ ಹಾಗಾದರೆ ನಮಗೆ ಏನೇ ಒದಗಿ ಬಂದರೂ ಸ್ಥಿತಪ್ರಜ್ಞನಾಗಿರಬಹುದು. ಆವಾಗ ನಮ್ಮ ಆನಂದಕ್ಕೆ ಯಾವ ಕೊರತೆಯೂ ಇರುವುದಿಲ್ಲ.


ಒಂದು ಬಾರಿ ಒಬ್ಬ ರಾಜನ ಅರಮನೆಯ ದರ್ಬಾರಿನಲ್ಲಿ ಸಾಮ್ರಾಜ್ಯದ ಎಲ್ಲಾ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಅಲ್ಲಿಗೆ ಅಷ್ಟಾವಕ್ರ ಮುನಿಗಳ ಆಗಮನವಾಗುತ್ತದೆ ಅವರ ಹೆಸರೇ ಹೇಳುವಂತೆ ಎಂಟು ರೀತಿಯ ವಕ್ರಾಕಾರಗಳಿಂದ ಕೂಡಿದ ಬಹುವಿಕಾರ ದೇಹದ ಮುನಿಗಳವರು ಆ ಸಭೆಗೆ ಅವರು ವಿಚಿತ್ರ ರೀತಿಯಲ್ಲಿ ನಡೆದುಕೊಂಡು ಬರುವುದನ್ನು ನೋಡಿ ರಾಜನನ್ನು ಒಳಗೊಂಡಂತೆ ಸರ್ವರೂ ಅಪಹಾಸ್ಯದಿಂದ ನಗಲು ಪ್ರಾರಂಭಿಸಿದರು ಅವರೆಲ್ಲರೂ ನಗುವುದನ್ನು ಕಂಡು ಅಷ್ಟವಕ್ರ ಮುನಿಗಳು ನಗತೊಡಗಿದರು. ಆಗ ರಾಜನಿಗೆ ಆಶ್ಚರ್ಯವಾಯಿತು. ಮುನಿಗಳೇ ನೀವೇಕೆ ನಗುತ್ತಿದ್ದಿರಿ ಎಂದಾಗ ಮುನಿಗಳು ನೀವೆಲ್ಲರೂ ಏಕೆ ನಗುತ್ತಿದ್ದೀರಿ ಎಂದು ರಾಜನನ್ನು ಕೇಳಿದರು. ಆಗ ರಾಜನು ನಿಮ್ಮ ವಿಚಿತ್ರ ದೇಹವನ್ನ ನೋಡಿ ನಮಗೆಲ್ಲರಿಗೂ ನಗು ಬಂತು ಆದರೆ ನಿಮ್ಮ ನಗುವಿಗೆ ಕಾರಣವೇನು? ಎಂದಾಗ ಮುನಿಗಳು ಹೇಳಿದರು ನನಗೂ ಅದನ್ನೇ ನೋಡಿ ನಗು ಬಂತು; ಜೊತೆಗೆ ಈ ದೇಹವೇ ನಾನೆಂದು ಭಾವಿಸಿಕೊಂಡು ಇದರೊಳಗಿರುವ ಮಹಾಜ್ಞಾನಿಯನ್ನು ಮರೆತು ನಗುವ ಮೂರ್ಖರನ್ನು ಕಂಡು ನಗು ಬಂತು. ಎಂದಾಗ  ಅಲ್ಲಿರುವವರೆಲ್ಲರೂ ತಲೆತಗ್ಗಿಸಿ ಕುಳಿತರು.

ಒಬ್ಬ ವ್ಯಕ್ತಿಯನ್ನು ಆತನ ದೇಹದ ಸೌಂದರ್ಯ ಹಾಗೂ ಶ್ರೀಮಂತಿಕೆ ಬಡತನದ ಮೇಲೆ ವ್ಯಕ್ತಿತ್ವವನ್ನು ಅಳೆಯಲಾಗದು ಯಾರೊಳಗೆ ಯಾವ ಶಕ್ತಿ ಇದೆ ಅನ್ನೋದು ಬಾಹ್ಯವಾಗಿ ನೋಡುವುದರಿಂದ ಅರ್ಥವಾಗಲಾರದು. ನಮ್ಮನ್ನು ಯಾರೇ ಎಷ್ಟೇ ಅವಮಾನಿಸಿದರೂ ನಾವು ಮಾತ್ರ ದುಃಖಿಸದೆ ದೃಢವಾಗಿರಬೇಕು. ಶ್ರೀ ಕೃಷ್ಣ ಪರಮಾತ್ಮನು ಪಾಂಡವರ ಪರವಾಗಿ ಸಂಧಾನಕ್ಕೆಂದು ದುರ್ಯೋಧನನ ಬಳಿ ಬಂದಾಗ ಕೇವಲ ಐದು ಹಳ್ಳಿಗಳನ್ನ ಅವರಿಗೆ ಬಿಟ್ಟು ಕೊಡು ಎಂದು ಸಂಧಾನದ ಸೂತ್ರವಿಟ್ಟಾಗ ಆ ದುರ್ಯೋಧನನು ಶ್ರೀ ಕೃಷ್ಣನನ್ನು ಅವಮಾನಿಸಿ ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ನಿಮಗೆ ಒಂದು ಸೂಜಿ ಮೊನೆಯಷ್ಟು ಜಾಗವನ್ನೂ ನಾನು ಕೊಡಲಾರೆ ಎಂದು ಹೇಳಿ ನಗತೊಡಗಿದ. ಅಷ್ಟೆಲ್ಲ ಅವಮಾನಗಳಾಗುತ್ತಿದ್ದರೂ ಕೃಷ್ಣ ಮಾತ್ರ ಸುಮ್ಮನೆ ನಿಂತುಕೊಂಡಿದ್ದ. ಆವೇಶಕ್ಕೆ ಒಳಗಾಗದೆ ಸಹಜವಾಗಿ ಸ್ವೀಕರಿಸಿಬಿಟ್ಟ. ಅದನ್ನು ಯಾವತ್ತಿಗೂ ಮನಸ್ಸಿಗೆ ಹಚ್ಚಿಕೊಳ್ಳದೆ ತನ್ನ ಧರ್ಮ ಕಾರ್ಯದಲ್ಲಿ ನಿರತನಾದ. ಹಾಗೆ ನಾವುಗಳು ಎಷ್ಟೇ ನಿಂದನೆಗಳು ಬಂದರೂ ಅದನ್ನ ಸಹಜವಾಗಿ ಸ್ವೀಕರಿಸಿ ನಮ್ಮ ಸಾಧನೆಯ ಕಡೆಗೆ ನಾವು ಹೆಚ್ಚು ಗಮನಹರಿಸಿ ಛಲದಿಂದ ಸಾಗಬೇಕು. ಆಗ ಮಾತ್ರ ಯಶಸ್ಸು ಸಾಧ್ಯವಾಗಬಲ್ಲದು. ಇತರರ ಮಾತಿಗೆ ಕುಗ್ಗಿ ಕುಳಿತರೆ ನಮ್ಮಿಂದ ಏನು ಸಾಧಿಸಲಾಗದು ನಮ್ಮ ಸಾಧನೆಯೇ. ಪ್ರತಿಯೊಬ್ಬರಿಗೂ ಉತ್ತರವಾಗಬೇಕು.

- ಶ್ರೀ ರಾಮಕೃಷ್ಣ ದೇವರು

ಶ್ರೀ ಷಣ್ಮುಖಾರೂಢ ಮಠ ವಿಜಯಪುರ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top