ಇಂದು ನಮ್ಮೊಳಗೆ ದಿನೇ ದಿನೇ ದ್ವೇಷದ ಭಾವ ಹೆಚ್ಚಾಗುತ್ತಿದೆ. ಮನಸ್ಸು ಮತ್ತೊಬ್ಬರಿಗೆ ಒಳ್ಳೆಯದನ್ನ ಬಯಸುವ ಬದಲು ಇತರರಿಗೆ ಕೇಡಾಗಲಿ ಎನ್ನುತ್ತಿದೆ. ನನ್ನ ಸಿದ್ಧಾಂತ ಮಾತ್ರ ಸತ್ಯವಾದದ್ದು ನಾನು ಹೇಳಿದ ಮಾತೇ ದೇವ ಶಾಸನ ಅನ್ಯರು ನಂಬಿದ ಸಿದ್ಧಾಂತಗಳೆಲ್ಲವೂ ಸುಳ್ಳು ಅವರ ಮಾತಿನಲ್ಲಿ ಯಾವ ಸತ್ಯವೂ ಇಲ್ಲ ಅದಕ್ಕಾಗಿ ಅವರ ಸಿದ್ಧಾಂತ ಮತ್ತು ಅವರ ಮಾತನ್ನು ನಾನು ಒಪ್ಪಲಾರೆ ನನ್ನ ಮಾತು ಮತ್ತು ಸಿದ್ಧಾಂತವನ್ನು ಎಲ್ಲರೂ ಒಪ್ಪಲೇಬೇಕು ಎಂದುಕೊಂಡು ಮತ್ತೊಬ್ಬರ ಮೇಲೆ ನಮ್ಮತನವನ್ನು ಹೇರಲು ಹೋಗುತ್ತೇವೆ. ನಮಗೆ ಒಂದು ವಿಷಯದ ಮೇಲೆ ಚಿಂತನೆ ನಡೆಸುವುದಕ್ಕಿಂತ ಅದನ್ನು ಟೀಕಿಸುವುದರ ಮೇಲೆ ಹೆಚ್ಚು ಆಸಕ್ತಿ.
ನಾವು ಯಾರ ಮಾತನ್ನು ಕೇಳಿಸಿಕೊಳ್ಳದಷ್ಟು ಅಸಹನಾಶೀಲರಾಗಿಬಿಟ್ಟಿದ್ದೇವೆ. ಎಲ್ಲರ ಬಗ್ಗೆಯೂ ತಾತ್ಸಾರದ ಭಾವ.ಸಮಗ್ರವಾಗಿ ವಿಚಾರಿಸಿ ತಿಳಿದುಕೊಳ್ಳುವ ಹೃದಯ ವೈಶಾಲ್ಯತೆ ನಮ್ಮಿಂದ ದೂರವಾಗುತ್ತಿದೆ.ನನ್ನ ಭಾವನೆಗೆ ಯಾರಾದರೂ ಧಕ್ಕೆ ಮಾಡಿದರೆ ಹೇಗೆ ಕೆರಳುತ್ತೇವೆಯೋ ಹಾಗೆ ಇನ್ನೊಬ್ಬರ ಭಾವನೆಗಳ ಬಗ್ಗೆ ಮಾತನಾಡುವಾಗ ಬಹು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನಾವು ನಮ್ಮ ಏಳಿಗೆಗಾಗಿ ಶ್ರಮಿಸುವುದಕ್ಕಿಂತ ನಮ್ಮ ಪಕ್ಕದವರ ಕಾಲನ್ನು ಎಳೆಯುವುದಕ್ಕಾಗಿಯೇ ಜೀವನದ ಅತಿ ಹೆಚ್ಚಿನ ಸಮಯವನ್ನು ಮೀಸಲಿಡುತ್ತೇವೆ. ಒಂದು ಬಾರಿ ಅಮೇರಿಕಾದಲ್ಲಿ ಅಲ್ಲಿರುವ ಭಾರತೀಯನನ್ನು ಅಮೆರಿಕಾದ ಪ್ರಜೆ ಕೇಳುತ್ತಾನೆ ಭಾರತೀಯರು ಒಲಂಪಿಕ್ ನಲ್ಲಿ ಒಂದು ಪದಕ ಗೆದ್ದರೂ ಜಗತ್ತಿನಾದ್ಯಂತ ಸುದ್ದಿಯಾಗುತ್ತಾರೆ. ಅಂತಹ ನೂರಾರು ಪದಕಗಳನ್ನು ಅಮೆರಿಕನ್ನರು ಗೆದ್ದರೂ ಅವರು ಅಷ್ಟು ಸುದ್ದಿಯಾಗುವುದಿಲ್ಲ. ಯಾಕೆ ಎಂದಾಗ ಆಗ ಭಾರತೀಯ ಹೇಳುತ್ತಾನೆ, ನಿಮ್ಮ ದೇಶದಲ್ಲಿ ಯಾರಾದರೂ ಏನನ್ನಾದರೂ ಸಾಧಿಸಲು ಹೊರಟರೆ ಎಲ್ಲರೂ ಅವನ ಬೆಂಬಲಕ್ಕೆ ನಿಂತು ಎಲ್ಲ ತರಹದ ಸಹಾಯಗಳನ್ನು ಮಾಡುತ್ತೀರಿ. ಆದರೆ ನನ್ನ ದೇಶದಲ್ಲಿ ಯಾರಾದರೂ ಸಾಧಿಸಲು ಹೊರಟರೆ ಅವರನ್ನ ತುಳಿಯಲು ಸುತ್ತಲೂ ನೂರು ಜನ ಸಿದ್ದರಾಗಿ ನಿಂತಿರುತ್ತಾರೆ. ಅಷ್ಟೊಂದು ಕಾಲೆಳೆಯುವವರ ಮಧ್ಯೆಯೂ ಆತ ಎದ್ದು ಬಂದರೆ ಆತನ ದೃಢಶಕ್ತಿ ಜಗತ್ತನ್ನ ಬೆಳಗುವುದರಲ್ಲಿ ಯಾವ ಸಂಶಯವೂ ಇಲ್ಲ. ನಾವು ಮತ್ತೊಬ್ಬರು ಬೆಳೆಯಲು ಎಂದು ಆಸ್ಪದ ಕೊಡಲಾರೆವು ಹೀಗೆ ಹೇಳಿದನಂತೆ.
ನಮಗೆ ಯಾರೋ ಅಮೆರಿಕನ್ನರು ಚೀನಿಯರು ಬೆಳೆದರೆ ನಡೆಯುತ್ತದೆ. ಆದರೆ ಯಾವುದೇ ಕಾರಣಕ್ಕೂ ನಮ್ಮ ಮನೆಯ ಪಕ್ಕದವನು ಬೆಳೆಯಬಾರದು. ಸದಾಕಾಲ ಅಕ್ಕಪಕ್ಕದವರ ಮೇಲೆ ದ್ವೇಷದ ಭಾವನೆ ತುಂಬಿರುತ್ತದೆ. ನಮ್ಮ ಕೈಲಾದರೆ ಮತ್ತೊಬ್ಬರ ಸಹಾಯಕ್ಕೆ ನಿಲ್ಲೋಣ. ಅದು ಆಗದಿದ್ದರೂ ಕಾಲೆಳೆಯುವ ಪ್ರಯತ್ನ ಮಾಡದಿದ್ದರೆ ಅದೇ ನನ್ನ ದೇಶಕ್ಕೆ ನಮ್ಮ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ ಆಗುತ್ತದೆ. ನಾನು ಮಾಡಿದ ಸಹಾಯವನ್ನು ಯಾರು ಸ್ಮರಿಸದಿದ್ದರೂ ಸಹಕರಿಸುವುದನ್ನು ಬಿಡಬಾರದು. ಒಂದು ಮಾವಿನ ಮರವು ಮಾನವನಿಗೆ ರುಚಿಯಾದ ಹಣ್ಣುಗಳನ್ನು ನೀಡಿ ಉಪಕಾರ ಮಾಡುತ್ತದೆ. ಆದರೆ ಕೃತಜ್ಞಹೀನ ಮಾನವನು ಅದಕ್ಕೆ ಕಲ್ಲೆಸೆಯುತ್ತಾನೆ. ಅಷ್ಟಾದರೂ ಅದು ಹಣ್ಣು ಕೊಡುವುದನ್ನು ಬಿಡಲಾರದು. ತನ್ನ ಕಾರ್ಯವನ್ನ ತಾನು ಮಾಡಿ ಧನ್ಯತೆಯನ್ನು ಪಡೆಯುವುದು ನಾವು ಮಾಡುವ ಸಹಾಯ ಯಾರನ್ನು ಮೆಚ್ಚಿಸುವದಕ್ಕಾಗಿ ಅಲ್ಲ, ಬದಲಿಗೆ ಅದು ನಮ್ಮ ಆತ್ಮತೃಪ್ತಿ ಗಾಗಿರಬೇಕು.
ಒಂದು ಬಾರಿ ನಾವು ಎಲ್ಲರನ್ನೂ ಪ್ರೀತಿಸುವುದನ್ನು ಕಲಿತುಬಿಟ್ಟರೆ ಸಹಜವಾಗಿ ಇತರರು ನನ್ನನ್ನು ಪ್ರೀತಿಸಲು ಪ್ರಾರಂಭಿಸುವರು. ನಾನೇ ಅವರನ್ನು ದ್ವೇಷಿಸಿದರೆ ಅವರು ಹೇಗೆ ನನ್ನನ್ನು ಪ್ರೀತಿಸುವರು? ಮತ್ತೊಬ್ಬರ ಬಗ್ಗೆ ಪ್ರಶಂಸೆಯ ಮಾತನಾಡುವ ಸಮಯ ಬಂದರೆ ಹಿಂಜರಿಯಬೇಡಿ. ಎಲ್ಲರೂ ನನ್ನನ್ನೇ ಹೊಗಳಬೇಕೆನ್ನುವ ನಾವು ಮತ್ತೊಬ್ಬರ ಒಳ್ಳೆಯ ಕಾರ್ಯವನ್ನು ಹೊಗಳುವಾಗ ಬಾಯಿ ಮುಚ್ಚಿಕೊಂಡು ಬಿಟ್ಟರೆ ಸ್ವಾರ್ಥಿಯಾಗಿ ಬಿಡುತ್ತೇವೆ. ಅದಕ್ಕಾಗಿ ಸರ್ವರನ್ನು ಪ್ರೀತಿಸೋಣ, ಪ್ರೀತಿಯನ್ನು ಹಂಚೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ