ಮಂಗಳೂರು: ಭಾರತ ಹೊರ ದೇಶದ ಆಕ್ರಮಣ ತಡೆದು ಎದುರಿಸುವಷ್ಟು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಆದರೆ ದೇಶದ ಒಳಗೆ ನಡೆಯುತ್ತಿರುವ ವಿಭಜನೆಯನ್ನು ಎದುರಿಸಲು ವಿಫಲವಾಗುತ್ತಿದೆ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಅಂದರೆ, ದೇಶಕ್ಕೆ ಬಾಹ್ಯ ಭಯಕ್ಕಿಂತ ಆಂತರಿಕ ಭೀತಿಯೇ ಹೆಚ್ಚಿದೆ ಎಂದು ನಿವೃತ್ತ ಲ್ಯಾನ್ಸ್ ದಫೆದಾರ್ ಸೋಮಶೇಖರ್ ಶೆಟ್ಟಿ ತಿಳಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತಿಹಾಸ ವಿಭಾಗ, ಎನ್ ಸಿಸಿ ನೌಕಾದಳ ಮತ್ತು ಭೂದಳ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕ್ರೀಡಾ ವಿಭಾಗದ ವತಿಯಿಂದ ನಡೆದ 78ನೇ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿವರ್ಷ ರಾಷ್ಟ್ರೀಯ ಹಬ್ಬ ಆಚರಿಸುವ ಮೂಲಕ ನಮ್ಮ ದೇಶಕ್ಕಾಗಿ ಹೋರಾಡಿ ಮಡಿದ ಮಹನೀಯರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಆದರೆ ಇಂದಿನ ಯುವ ಜನತೆ ಇತಿಹಾಸ ಮರೆತು ಸ್ವಾರ್ಥಿಗಳಂತೆ ಬದುಕುತ್ತಿರುವುದು ವಿಷಾದನೀಯ. ದೇಶಭಕ್ತಿ ಇದ್ದಾಗ ಮಾತ್ರ ಸಧೃಡ ದೇಶದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ದೇಶಕ್ಕೆ ಸುಲಭವಾಗಿ ಸ್ವಾತಂತ್ರ‍್ಯ ದೊರಕಿಲ್ಲ. ಸಾಲು ಸಾಲು ದಂಗೆ, ಹೋರಾಟ ಎದುರಿಸಲು ಸಾಧ್ಯವಾಗದೆ ಬ್ರಿಟಿಷರು ಭಾರತದಿಂದ ಪಲಾಯನ ಮಾಡಿದರು. ನಾವು ಸ್ವಾತಂತ್ರ‍್ಯವನ್ನು ಪಡೆದುಕೊಂಡಿದ್ದೇವೆ; ಹೊರತು ಬೇಡಿ ಪಡೆದಿಲ್ಲ. ಇಂದು ವಿದೇಶಗಳಿಗೂ ಮಿಲಿಟರಿ ಸಲಕರಣೆಗಳನ್ನು ತಯಾರಿಸಿ ರಫ್ತು ಮಾಡುವಷ್ಟರ ಮಟ್ಟಿಗೆ ದೇಶ ಬೆಳೆದಿರುವು ಹೆಮ್ಮೆಯ ಸಂಗತಿ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ದೇಶವನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ಯುವಜನತೆ ಮೇಲಿದೆ ಎಂದು ತಿಳಿಸಿದರು.
ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಲಕ್ಷ್ಮೀದೇವಿ, ಸ್ವಾತಂತ್ರ‍್ಯ ಎಂಬುದು ಐತಿಹಾಸಿಕ ಸ್ಫೂರ್ತಿ ಮತ್ತು ಚರಿತ್ರಾರ್ಹ ಸಂಗತಿ. ಬ್ರಿಟಿಷ್ ವಸಾಹತುಷಾಹಿಯಿಂದ ಮುಕ್ತರಾಗಿ ಮೂಲಭೂತ ಹಕ್ಕು ಪಡೆದಿದ್ದೇವೆ. ಅದನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳಿಸಿಕೊಂಡು ಹೋಗಬೇಕು. ಸ್ವಾತಂತ್ರ‍್ಯ ಮತ್ತು ಸಂವಿಧಾನವನ್ನು ಯಾವುದೇ ರೀತಿಯಲ್ಲೂ ದೌರ್ಜನ್ಯಕ್ಕೊಳಪಡಿಸದಂತೆ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ವ್ಯಾಪಾರಕ್ಕಾಗಿ ಬಂದ ಬ್ರಿಟಿಷರಿಗೆ ಭಾರತದಲ್ಲಿದ್ದ ಆಂತರಿಕ ಶತ್ರುಗಳು ದೇಶವನ್ನು ಮುತ್ತಿಗೆ ಹಾಕಲು ಕೀಲಿಕೈಗಳಾದರು. ನಾವು ಇಂದು ಸ್ವತಂತ್ರವಾಗಿ ಜೀವಿಸಲು 6 ಲಕ್ಷ ಜನರ ಬಲಿದಾನದ ಕೊಡುಗೆಯಿದೆ. ದೇಶಭಕ್ತಿ ಮತ್ತು ದೇಶ ಸೇವೆಗಾಗಿ ನಾವು ಅಪ್ಪಟ ಭಾರತೀಯನಾಗಿ ಇರಬೇಕಾಗುತ್ತದೆ ಎಂದು ತಿಳಿಸಿದರು.
ಎನ್ ಸಿಸಿ ನೌಕದಳದ ಸಂಯೋಜಕ ಪ್ರೊ. ಯತೀಶ್ ಕುಮಾರ್, ಎನ್ ಸಿಸಿ ಭೂದಳ ಸಂಯೋಜಕ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಯರಾಜ್ ಎನ್., ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ, ಎನ್ಎಸ್ಎಸ್ ಅಧಿಕಾರಿ ಡಾ. ಗಾಯತ್ರಿ ಎನ್. ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ