ಭ್ರಷ್ಟ ಸಿಎಂ ರಾಜೀನಾಮೆಗೆ ಕ್ಷಣಗಣನೆ: ವಿಜಯೇಂದ್ರ

Upayuktha
0

 ಭ್ರಷ್ಟಾಚಾರದ ಪಿತಾಮಹ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆ: ಬಿವೈವಿ



ಬೆಂಗಳೂರು: ರಾಜ್ಯದ ಭ್ರಷ್ಟ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಕ್ಷಣಗಣನೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸದಿಂದ ನುಡಿದರು.


ಬಿಜೆಪಿ- ಜೆಡಿಎಸ್ ಪಕ್ಷಗಳ ಮೈಸೂರು ಚಲೋ ಪಾದಯಾತ್ರೆಯ ಆರನೇ ದಿನದ ಸಂದರ್ಭದಲ್ಲಿ ಶ್ರೀರಂಗಪಟ್ಟಣದಲ್ಲಿ ಏರ್ಪಡಿಸಿದ ಸಭೆಯಲ್ಲಿ ಇಂದು ಅವರು ಮಾತನಾಡಿದರು. ಪಟಾಕಿ ಸಿಡಿಸುವ ಶಬ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಾಲ್ಮೀಕಿ ನಿಗಮದ ಹಗರಣ, ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದು ಖಚಿತ ಎಂದು ಸಂತೋಷದಿಂದ ಪಟಾಕಿ ಹೊಡೆಯುತ್ತಿದ್ದಾರೆ; ಸಿಎಂ ರಾಜೀನಾಮೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.


ಮುಖ್ಯಮಂತ್ರಿಗಳು ಹಾಜರಿರದ ಸಚಿವ ಸಂಪುಟ ಸಭೆ ಮೊನ್ನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರದ ಆರೋಪ ಬಂದಿದೆ. ಮುಡಾದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳ ಲೂಟಿ ಮಾಡಿದ ಆರೋಪ ಅವರ ಮೇಲಿದೆ. ಎರಡೂ ಆರೋಪಗಳಲ್ಲಿ ಸ್ವತಃ ಈ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎ 1 ಆರೋಪಿ ಎಂದು ವಿಶ್ಲೇಷಿಸಿದರು. ಆ ಸಚಿವ ಸಂಪುಟ ಸಭೆಯ ನೇತೃತ್ವವನ್ನು ಭ್ರಷ್ಟಾಚಾರದ ಪಿತಾಮಹರಾದ ಡಿ.ಕೆ.ಶಿವಕುಮಾರ್ ಅವರು ವಹಿಸಿದ್ದರು ಎಂದು ಟೀಕಿಸಿದರು.

ಮುಖ್ಯಮಂತ್ರಿಯವರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ಕೊಡಲಾಗದೆ ಅಧಿವೇಶನವನ್ನು ಮೊಟಕುಗೊಳಿಸಿದ್ದಾರೆ. ವಿರೋಧ ಪಕ್ಷದವರ ನಿಲುವಳಿಗೆ ಉತ್ತರ ಕೊಡಲಾಗದೆ ಓಡಿ ಹೋದ ಅಪಕೀರ್ತಿಗೆ ಪಾತ್ರರಾದವರು ಈ ನಾಡಿನ ದೊರೆ ಸಿದ್ದರಾಮಯ್ಯನವರು ಎಂದು ವಿವರಿಸಿದರು.




ಬಡವರಿಗೆ ನ್ಯಾಯ ಕೊಡಿಸುವ ಉದ್ದೇಶ:

ಅಹಿಂದ ಸಮುದಾಯಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಅವರಿಗೇ ಮೋಸ ಮಾಡಿ, ಭ್ರಷ್ಟಾಚಾರದ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ. ನಮ್ಮ ಪಾದಯಾತ್ರೆ ಸ್ವಾರ್ಥಕ್ಕಲ್ಲ; ನಮ್ಮ ಪಾದಯಾತ್ರೆ ಈ ನಾಡಿನ ದೀನದಲಿತರು, ಪರಿಶಿಷ್ಟ ಜಾತಿ, ಪಂಗಡಗಳಿಗೆ, ಬಡವರಿಗೆ ನ್ಯಾಯ ಕೊಡಿಸುವ ಉದ್ದೇಶ ಹೊಂದಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.


ನಮ್ಮದು ಪ್ರಾಮಾಣಿಕ ಹೋರಾಟ, ಬಡವರ ಪರ ಹೋರಾಟ, ಭ್ರಷ್ಟ ಕಾಂಗ್ರೆಸ್ ಸರಕಾರ, ಭ್ರಷ್ಟ ಸಿಎಂ ವಿರುದ್ಧ ಹೋರಾಟ ನಮ್ಮದು ಎಂದು ತಿಳಿಸಿದರು. ಚಿಕ್ಕಮಗಳೂರು, ಮಧುಗಿರಿ, ಕೊಪ್ಪಳ, ವಿಜಯನಗರ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದ ಮಾತ್ರವಲ್ಲದೆ ನೆಲಮಂಗಲ, ಹೊಸಪೇಟೆ, ಶ್ರೀರಂಗಪಟ್ಟಣದಿಂದ ದೊಡ್ಡ ಸಂಖ್ಯೆಯಲ್ಲಿ ಬಂದ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿದರು.


ಕಾಂಗ್ರೆಸ್ ಸರಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ ಮತ್ತು ಭ್ರಷ್ಟಾಚಾರಕ್ಕೋಸ್ಕರ ಆಡಳಿತ ನಡೆಸುತ್ತಿದೆ ಎಂದು ಅವರು ಟೀಕಿಸಿದರು. ಇಂಥ ಭ್ರಷ್ಟ ಸರಕಾರವನ್ನು ಕಿತ್ತೊಗೆಯುವತನಕ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ತಿಳಿಸಿದರು. ಬಿಜೆಪಿ- ಜೆಡಿಎಸ್ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top