ಅಧ್ಯಾತ್ಮ ರಾಮಾಯಣ-25: ವಿಭೀಷಣನಿಗೆ ಪಟ್ಟಾಭಿಷೇಕ, ಸಮುದ್ರರಾಜನ ಗರ್ವಭಂಗ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 


ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ



"ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ।

ಅಭಯಂ ಸರ್ವಭೂತೇಭ್ಯೋ ದರ್ಶಯಾಮಾಸ ರಾಘವಮ್॥


'ನಾನು ನಿನ್ನವನು' ಎಂದು ಒಮ್ಮೆ ಮಾತ್ರ ಹೇಳಿ ಯಾರೇ ಶರಣಾಗತನಾಗಿ ಬೇಡಿದರೂ ಸರಿ, ಅವನನ್ನು ನಾನು ಎಲ್ಲ ಪ್ರಾಣಿಗಳಿಂದ ನಿರ್ಭಯನಾಗಿಸುವೆನು. ಇದು ನನ್ನ ವ್ರತವಾಗಿದೆ." ಇದು ರಾಮನು ಸುಗ್ರೀವನಿಗೆ ಹೇಳಿದ ಮಾತು! ಸಂದರ್ಭ- ವಿಭೀಷಣನು ರಾವಣನನ್ನು ತೊರೆದು ರಾಮನಲ್ಲಿಗೆ ಬಂದು ಆಗಸದಲ್ಲಿಯೇ ನಿಂತು "ರಾಮನಿಗೆ ಶರಣು" ಎಂದಾಗ, ಸುಗ್ರೀವನು ವಿಭೀಷಣನ ಬಗೆಗೆ ಸಂದೇಹ ಪಟ್ಟಾಗ!


ವಿಭೀಷಣನು ಆಗಸದ ದಾರಿಯಲ್ಲಿ ಬಂದು ರಾಮನಿಗೆ ಶರಣಾಗಿ ರಾವಣನ ಆಸ್ಥಾನದಲ್ಲಿ ನಡೆದ ಘಟನೆಯನ್ನು ವಿವರಿಸಿದನು. ನೀನು ರಕ್ಷಿಸಬೇಕೆಂದು ಪ್ರಾರ್ಥಿಸಿದನು. ಸುಗ್ರೀವನು ವಿಭೀಷಣನ ರಾಮಬದ್ಧತೆಯ ಬಗೆಗೆ ಸಂದೇಹಿಸಿದಾಗ ರಾಮನು ಶರಣಾಗತರನ್ನು ಕಾಪಾಡುವುದು ನನ್ನ ಧರ್ಮವಾಗಿದೆ ಎಂದನು. ರಾಮನ ಅಭಯದ ನುಡಿಗಳನ್ನು ಕೇಳಿ ವಿಭೀಷಣನು ಧರೆಗಿಳಿದ, ರಾಮಪಾದಗಳಿಗೆ ಮಣಿದ, ರಾಮನನ್ನು ಸ್ತುತಿಸಿದ. ಧನ್ಯತಾಭಾವ ದೊಂದಿಗೆ- 'ಭಕ್ತಿಯೊಂದಿಗೆ ನಿನ್ನ ಸೇವೆಗೈಯ್ಯಲು ಬಂದಿದ್ದೇನೆ' ಎಂದು ರಾಮನಲ್ಲಿ ಹೇಳಿದ. ರಾಮನು ಭಕ್ತಿಯ ಮಹತ್ತ್ವವನ್ನು ಹೇಳುತ್ತಾ 'ಪಾಪರಹಿತನಾಗಿದ್ದುಕೊಂಡು, ಶಾಂತನಾಗಿದ್ದುಕೊಂಡು, ರಾಮಧ್ಯಾನದಲ್ಲಿ ಲೀನನಾಗುತ್ತಾ ನನ್ನ ಸಾರೂಪ್ಯ (ಮುಕ್ತಿ)ವನ್ನು ಹೊಂದಲು ಭಕ್ತಿಯೇ ಮುಖ್ಯ" ಎಂದನು.


'ಈಗಲೇ ವಿಭೀಷಣನು ನನ್ನ ದರ್ಶನದ ಫಲವನ್ನು ನೋಡಲಿ' ಎಂದು ಲಕ್ಷ್ಮಣನಿಗೆ ಹೇಳುತ್ತಾ ಅವನಲ್ಲಿ "ತಮ್ಮ! ಸಮುದ್ರದ ನೀರನ್ನು ತೆಗೆದುಕೊಂಡು ಬಾ, ಈಗಲೇ ಇವನಿಗೆ ಲಂಕಾ ರಾಜ್ಯಕ್ಕೆ ಒಡೆಯನನ್ನಾಗಿ ಮಾಡಿ ಪಟ್ಟಾಭಿಷೇಕ ಮಾಡುತ್ತೇನೆ" ಎಂದನು. ಲಕ್ಷ್ಮಣನು ತಂದ ಸಮುದ್ರದ ನೀರಿನಿಂದ ರಾಮನು ವಿಭೀಷಣನಿಗೆ ಅವನ ಮಂತ್ರಿಗಳ ಎದುರಿನಲ್ಲಿ ಲಕ್ಷ್ಮಣನಿಂದ ಪಟ್ಟಾಭಿಷೇಕವನ್ನು ಮಾಡಿಸಿದನು. ಸುಗ್ರೀವ ಹಾಗೂ ಸಮಸ್ತ ವಾನರವೀರರು ಧನ್ಯ ಧನ್ಯವೆಂದು ಕೊಂಡಾಡಿದರು. ಸುಗ್ರೀವನು ವಿಭೀಷಣನನ್ನು ಆಲಂಗಿಸಿ 'ರಾವಣನನ್ನು ವಧಿಸುವಲ್ಲಿ ಮುಖ್ಯಪಾತ್ರ ವಹಿಸಿಕೊಂಡು ಸಹಕರಿಸಬೇಕು' ಎಂದಾಗ ವಿಭೀಷಣನು 'ರಾಮಸೇವೆಯನ್ನು ಭಕ್ತಿಯಿಂದ, ನಿರ್ವಂಚನೆಯಿಂದ ಮಾಡುವೆನು' ಎಂದನು. ಲಂಕೆಯ ಗುಟ್ಟು ಅನಾಯಾಸವಾಗಿ ರಾಮನಿಗೆ ಸಿಗುವುದರೊಂದಿಗೆ ರಾವಣನ ಅರ್ಧಬಲವೇ ಕುಸಿದುಹೋಯಿತು! ಬಿಡುವುದು ಸುಲಭ, ಹಿಡಿಯುವುದು ಕಷ್ಟ, ಹಿಡಿದಿಟ್ಟುಕೊಳ್ಳುವುದು ಕಷ್ಟಾತಿಕಷ್ಟ!! ಅಲ್ಲವೇ? ಇಲ್ಲಿ ಅದು ಸುಲಭ- ಅತಿಸುಲಭದಲ್ಲಿ ಆಯಿತು!



ರಾಮನಬಲವನ್ನು ದುರ್ಬಲಗೊಳಿಸಲು ರಾವಣನು ಭೇದೋಪಾಯವನ್ನು ಬಳಸಿದನು. ಅವನು ಕಳಿಸಿದ ಶುಕನೆಂಬ ರಾಕ್ಷಸನು ಆಕಾಶದಲ್ಲಿದ್ದುಕೊಂಡೇ  'ರಾಮನ ಪತ್ನಿಯನ್ನು ನಾನು ಕದ್ದುಕೊಂಡು ಬಂದುದರಲ್ಲಿ ನಿನಗೆ ಯಾವ ನಷ್ಟವೂ ಇಲ್ಲ. ನೀನೀಗ ಕಿಷ್ಕಿಂಧೆಗೆ ಹೋಗು. ಲಂಕೆಯು ಅಜೇಯ ರಾಜ್ಯ. ಯಾರೂ ಗೆಲ್ಲಲಾರರು"-  ಎಂದು ಸುಗ್ರೀವನಿಗೆ ಹೇಳುತ್ತಿರುವಾಗಲೇ ಕಪಿಗಳು ಹೋಗಿ ಅವನನ್ನು ಹಿಡಿದೆಳೆದು ತಂದು ಹಿಂಸಿಸತೊಡಗಿದರು. ಶುಕನ ದೀನ ಬೇಡಿಕೆಗೆ ಕರಗಿದ ರಾಮನು ಅವನಿಗೆ ಅಭಯಪ್ರದಾನ ಮಾಡಿ ಲಂಕೆಗೆ ತೆರಳಲು ಅನುಮತಿಸಿದ. ಹೋಗುವಾಗ ಆಕಾಶದಲ್ಲಿ ನಿಂತು ರಾವಣನಿಗೆ ನಿನ್ನ ಸಂದೇಶವೇನೆಂದು ಸುಗ್ರೀವನಲ್ಲಿ ಕೇಳಿದನು. ಆಗ ಸುಗ್ರೀವನು-" ನನ್ನ ಸೋದರನಾದ ವಾಲಿಯು ರಾಮನಿಂದ ಹತನಾದಂತೆ, ನೀನು ನಿನ್ನ ಮಕ್ಕಳು,ಸೈನ್ಯ ಮತ್ತು ವಾಹನಗಳೊಂದಿಗೆ ರಾಮನಿಂದ ಹತನಾಗುವೆ ಎಂದು ರಾವಣನಿಗೆ ಹೇಳು"- ಎಂದು ಸುಗ್ರೀವನು ಹೇಳಿದ. ರಾಮನ ಮಹಾಬಲದ ಕುರಿತು ಶಾರ್ದೂಲನೆಂಬ ರಾಕ್ಷಸ ಗೂಢಚಾರನು ರಾವಣನಿಗೆ ಈಗಾಗಲೇ ಮಾಹಿತಿಯಿತ್ತಿದ್ದನು. ಇದರಿಂದ ರಾವಣನು ಚಿಂತಿತನಾಗಿದ್ದನು.


ಸಮುದ್ರವನ್ನು ದಾಟಲು ಸಮುದ್ರರಾಜನ ಸಹಕಾರ ಬೇಕಿತ್ತು. ರಾಮನು ಬಂದಿದ್ದರೂ, ಸಮುದ್ರರಾಜನ ಸಹಕಾರವನ್ನು ನಿರೀಕ್ಷಿಸುತ್ತಿದ್ದರೂ ಅವನು ಬರಲಿಲ್ಲ! ರಾಮನಿಗೆ, ತನ್ನನ್ನು ಹಗುರವಾಗಿ ಕಂಡ ಸಮುದ್ರರಾಜನ ಮೇಲೆ ಸಿಟ್ಟು ಉಕ್ಕಿಬಂತು. ಸಮುದ್ರವನ್ನು ಆರಿಸಿ-ಒಣಗಿಸಿ, ನಡೆದೇ ಲಂಕೆಗೆ ಹೋಗುವ ಇರಾದೆಯಿಂದ ಬಿಲ್ಲಿಗೆ ಬಾಣ ಹೂಡಿದನು. ಇಡೀ ಭೂಮಿ ನಡುಗಿತು. ಸಮುದ್ರರಾಜನೂ ನಡುಗಿದ! ಬಂದ. ರಾಮನೆದುರು 'ಶರಣು' ಎನ್ನುತ್ತಾ ಸಾಷ್ಟಾಂಗ ನಮಸ್ಕಾರ ಮಾಡಿ,ಕಾಣಿಕೆಗಳನ್ನು ಅರ್ಪಿಸಿ, ಕೈಜೋಡಿಸಿ ನಿಂತ! ರಾಮನು ಬಾಣ ಹೂಡಿಯಾಗಿತ್ತು. ಅದಕ್ಕೊಂದು ಗುರಿಯನ್ನು ಕೊಡಲೇಬೇಕಿತ್ತು,! 'ರಾಮಬಾಣ- ರಾಮವಾಕ್ಯ' ಎಂದೂ ವ್ಯರ್ಥವಾಗದು. ಇದು ಸಮುದ್ರರಾಜನ ಅನುಭವಕ್ಕೂ ಬಂತು. ಅವನು ಉತ್ತರದಿಕ್ಕಿನಲ್ಲಿರುವ 'ದ್ರುಮಕುಲ್ಯ'ವನ್ನು ತೋರಿಸಿ, ಅಲ್ಲಿಗೆ ಬಾಣ ಪ್ರಯೋಗಿಸಲು ಹೇಳಿದ. ಅಲ್ಲಿದ್ದ  ಆಭೀರರೆಂಬ ದುಷ್ಟರನ್ನು ಕೊಂದು ರಾಮಬಾಣವು ಮರಳಿ ರಾಮನ ಬತ್ತಳಿಕೆಯನ್ನು ಸೇರಿತು! ಸಮುದ್ರರಾಜನಿಗೆ "ಅವಗುಣದಲ್ಲಿಯೂ ಗುಣವಾಯಿತು!" ಸಮುದ್ರರಾಜನು; ರಾಮನಲ್ಲಿ "ವಾನರಸೇನೆಯಲ್ಲಿರುವ ವಿಶ್ವಕರ್ಮನ ಮಗನಾದ ನಳನು ಲಂಕೆಗೆ ಸೇತುವೆಯನ್ನು ನಿರ್ಮಿಸಲಿ. ಅವನು ಈ ಕೆಲಸದಲ್ಲಿ ಜಾಣನೂ ವರವನ್ನು ಪಡೆದವನೂ ಆಗಿದ್ದಾನೆ" ಎಂದು ಹೇಳಿದ. ರಾಮನ ಅಪ್ಪಣೆಯೊಂದಿಗೆ ಸಮುದ್ರರಾಜನು ಮರಳಿದ. ಸೇತುವೆ ರಚಿಸಲು ರಾಮನ ಆಜ್ಞೆಯಾಯಿತು. ನಳನು ಹರ್ಷದಿಂದ ವಾನರರ ಸಹಕಾರದೊಂದಿಗೆ ನೂರು ಯೋಜನ ದೂರದ ಸೇತುವೆಯನ್ನು ಭದ್ರವಾಗಿ ಕಟ್ಟಿದನು. ರಾಮನು ಸಂತೋಷಗೊಂಡನು.


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top