ಕಾಲಪ್ರಜ್ಞೆ, ದೇಶಪ್ರಜ್ಞೆಯ ಅರಿವು ಅಗತ್ಯ: ರಾಘವೇಶ್ವರ ಸ್ವಾಮೀಜಿ

Upayuktha
0


ಗೋಕರ್ಣ: ಕಾಲಪ್ರಜ್ಞೆ ಮತ್ತು ದೇಶಪ್ರಜ್ಞೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಸ್ವಾಮೀಜಿಯವರು, "ಆಯಾ ದೇಶ, ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಜೀವನವನ್ನು ಬದಲಾಯಿಸಿಕೊಳ್ಳಬೇಕು. ಊಟ, ನಿದ್ದೆ, ಎಚ್ಚರ ಹೀಗೆ ಎಲ್ಲಕ್ಕೂ ಒಂದು ನಿರ್ದಿಷ್ಟ ಕಾಲವಿದೆ. ಯುಕ್ತಾಹಾರ ವಿಹಾರ, ಸ್ವಪ್ನ ಎಲ್ಲವೂ ಅಗತ್ಯ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬಣ್ಣಿಸಿದ್ದಾನೆ" ಎಂದರು.


ಭಾರತೀಯರು ಕಾಲವನ್ನು ನೋಡಿದ ರೀತಿ ಅತ್ಯದ್ಭುತ. ಪ್ರತಿಯೊಂದು ಘಟನೆಗಳಿಗೆ ಕಾಲ ಕನ್ನಡಿ ಹಿಡಿಯುತ್ತದೆ. ಅದನ್ನು ಅರಿಯುವ ಸಾಧನವೇ ಜೌತಿಷ. ಭಾರತೀಯ ಪರಿಭಾಷೆಯಲ್ಲಿ ಫಲ ನೀಡುವಂಥದ್ದು ಗ್ರಹ. ವಿಜ್ಞಾನದ ಪರಿಭಾಷೆಗೂ ನಮ್ಮ ಭಾರತೀಯ ಪರಿಭಾಷೆಗೂ ವ್ಯತ್ಯಾಸವಿದೆ" ಎಂದು ವಿವರಿಸಿದರು.


ಸೂರ್ಯಚಂದ್ರರು ದೊಡ್ಡದಾಗಿ ಗೋಚರಿಸಿದರೆ, ಉಳಿದ ಐದು ಗ್ರಹಗಳಿಗೆ ತಾರಾಗ್ರಹಗಳೆನ್ನುತ್ತೇವೆ. ರಾಹುಕೇತುಗಳು ಛಾಯಾಗ್ರಹಗಳು. ಶುಕ್ರ ಹೆಚ್ಚು ತೇಜೋಮಯವಾಗಿ ಗೋಚರಿಸುತ್ತಾನೆ. ಗ್ರಹಗಳು ನಮ್ಮ ಬದುಕಿನ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ. ಆದರೆ ಒಂದೊಂದು ಕಡೆಗೆ ಇದ್ದಾಗ ಒಂದೊಂದು ಸಂದೇಶವನ್ನು ನೀಡುತ್ತವೆ. ಅಂತರಿಕ್ಷದ ಬೇರೆ ಬೇರೆ ಭಾಗಗಳನ್ನು ರಾಶಿ ಎನ್ನುತ್ತೇವೆ ಎಂದರು.


ವೃತ್ತಾಕಾರದ ಆಕಾಶವನ್ನು ಹನ್ನೆರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದೇ ರಾಶಿ. ನಕ್ಷತ್ರಗಳ ಗುಂಪನ್ನೇ ನಾವು ರಾಶಿ ಎಂದು ಕರೆಯಬಹುದು. ನಮ್ಮ ಪೂರ್ವಜರು ಇದನ್ನು ಸ್ಥಿರ ಎಂದು ಪರಿಗಣಿಸಿದ್ದಾರೆ ಎಂದು ವಿವರಿಸಿದರು. ಅಶ್ವಿನಿ, ಭರಣಿ ಮತ್ತು ಭಾಗಶಃ ಕೃತಿಕಾ ನಕ್ಷತ್ರವನ್ನು ಮೇಷ ಎಂದು ಕರೆದರು. ಇದಾವುದೂ ಒಂದು ನಕ್ಷತ್ರವಲ್ಲ. ನಕ್ಷತ್ರಪುಂಜ. ಹೀಗೆ ಎರಡೂವರೆ ನಕ್ಷತ್ರಪುಂಜಗಳ ಗುಂಪೇ ರಾಶಿ ಎಂದು ಬಣ್ಣಿಸಿದರು.


ಬಾಹ್ಯಾಕಾಶದಲ್ಲಿ ಯಾವುದೋ ಒಂದು ನಮ್ಮ ಭಾಗವೂ ಇರುತ್ತದೆ. ನಮ್ಮನ್ನು ಬದಲಿಸುವ ಭಾಗ ಅದು. ಆ ರಾಶಿಗಳಲ್ಲಿ ಒಂದು ನಮ್ಮ ಕೇಂದ್ರವಾಗಿರುತ್ತದೆ. ಅದು ವಾಸ್ತವವಾಗಿ ನಮ್ಮನ್ನೇ ಸೂಚಿಸುತ್ತವೆ ಎಂದು ಹೇಳಿದರು.


ಆನೆಕೊಳಂಜಿ ಎಂಬ ಗದ್ದೆಯ ಅನಾವರಣವಾಗಿದೆ. ಭಾವನಾತ್ಮಕವಾಗಿ ಅದಕ್ಕೂ ಮಠಕ್ಕೂ ಸಂಬಂಧವಿದೆ. ಶ್ರೀಮಠದ 33ನೇ ಪೀಠಾಧಿಪತಿಗಳು ಸಂಚರಿಸುತ್ತಿದ್ದ ರಾಮಭದ್ರನ ಭಕ್ತಿಯ ಪ್ರತೀಕ ಅದು. ಆ ಆನೆಯನ್ನು ಕಟ್ಟಿಹಾಕುತ್ತಿದ್ದ ಜಾಗದಲ್ಲಿ ಇದೀಗ ರಕ್ತಶಾಲಿ ಅಥವಾ ಶಾಷ್ಟಿಕ ಎಂಬ ಕೆಂಪಕ್ಕಿ ಬೆಳೆದು ರಾಮನೈವೇದ್ಯಕ್ಕೆ ಸಮರ್ಪಿಸಲಾಗುತ್ತದೆ. ಇಡೀ ಸಮಾಜ ಭಕ್ತಿ-ಶ್ರದ್ಧೆಯಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಸಾವಯವ ವಿಧಾನದಲ್ಲಿ ಬತ್ತ ಬೆಳೆಯುತ್ತದೆ ಎಂದು ಸ್ವಾಮೀಜಿಯವರು ನುಡಿದರು. ಆನೆ ಹಾಗೂ ಮನುಷ್ಯನ ಸಂಬಂಧ ಪುರಾತನ. ಭಾವನೆಗಳಿಗೆ ಹೆಸರಾದ ಪ್ರಾಣಿ. ಅಂಥ ಗುರುಸೇವಕ ಆನೆಯ ಸ್ಮರಣೆ ನಡೆದಿದೆ ಎಂದರು.


ಪ್ರತಿ ವರ್ಷ ಸಮಾಜದ ಎಲ್ಲರೂ ಸೇರಿ ರಾಮದೇವರ ನೈವೇದ್ಯಕ್ಕೆ ಭತ್ತ ಬೆಳೆಯುವ ಆನೆಕೊಳಂಜಿ ಭತ್ತದ ಭಕ್ತಿಯ ಬಗೆಗಿನ ಅನಾವರಣವನ್ನು ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಹೆಗಡೆ ಭದ್ರನ್ ನೆರವೇರಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಹೊಸಾಕುಳಿ, ಕುಮಟಾ ಮಂಡಲದ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು.


ಕುಮಟಾ ಮಂಡಲದ ವೈದಿಕರಿಂದ ಸೇವಾರೂಪದಲ್ಲಿ ಎರಡು ದಿನಗಳಿಂದ ನಡೆದ ದುರ್ಗಾ ಅನುಷ್ಠಾನದ ಒಂದು ಲಕ್ಷ ಜಪ ಮತ್ತು ನವಗ್ರಹರ್ಪೂಕ ದುರ್ಗಾಹವನದ ಪೂರ್ಣಾಹುತಿ ಭಾನುವಾರ ನಡೆಯಿತು. 200ಕ್ಕೂ ಹೆಚ್ಚು ವೈದಿಕರು ಮತ್ತು ಪಾಠಕರು ಇದರಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಅಡಿಕೆ ಬೆಳೆಯಲ್ಲಿ ಸಮಗ್ರ ಕೃಷಿಯ ಆಯಾಮಗಳು ಎಂಬ ವಿಷಯ ಕುರಿತ ವಿಚಾರ ಸಂಕಿರಣ ನಡೆಯಿತು. ಅಡಿಕೆ ಬೆಳೆ ಕುರಿತ ಮಾಹಿತಿಪತ್ರ ಬಿಡುಗಡೆ ಮಾಡಲಾಯಿತು. ಐಸಿಎಆರ್, ಸಿಪಿಸಿಆರ್‍ಐ ಮತ್ತು ಕೆಳದಿ ಶಿವಪ್ಪನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿವಿ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಡಾ.ವಿನಾಯಕ ಹೆಗಡೆ, ಡಾ.ಭವಿಷ್ಯ್, ಡಾ.ನಾಗರಾಜಪ್ಪ ಅಡಿವೆಪ್ಪನವರ, ಡಾ.ಕೆ.ಬಾಲಚಂದ್ರ ಹೆಬ್ಬಾರ ಮತ್ತಿತರರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top