ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ರಾಮನ ಬಂಟ ಹನುಮಂತ ರಾಮಾಜ್ಞೆಯನ್ನು ಕೂಡಲೇ ಪಾಲಿಸಿದ.
ಬೆಟ್ಟವನ್ನು ಹೊತ್ತು ತಂದ!
ಬೆಟ್ಟದ ಜೀವಗಳ ಜೀವವುಳಿಸಿ, ಗಾಯಗಳನ್ನು ಗುಣಪಡಿಸಿ, ಬೆಟ್ಟವನ್ನು ಅದನ್ನು ತಂದ ಸ್ಥಳದಲ್ಲಿಟ್ಟು ಬಂದ! ವಾನರರ ಜೈಶ್ರೀರಾಮ್ ಘೋಷಣೆಗಳು ರಾವಣನಿಗೆ ಅಚ್ಚರಿಯನ್ನುಂಟುಮಾಡಿದವು. ಕೂಡಲೇ ಲಂಕೆಯ ಎಲ್ಲ ವೀರರಿಗೆ ಯುದ್ಧಕ್ಕೆ ಹೋಗುವಂತೆ ಅಪ್ಪಣೆಮಾಡಿದ. ತಪ್ಪಿದರೆ ಕೊಂದುಬಿಡುವ ಎಚ್ಚರಿಕೆಯನ್ನೂ ಕೊಟ್ಟ! ರಾವಣನ ತತ್ತ್ವ! 'ನನ್ನಿಂದ ಸಾಯಿರಿ ಅಥವಾ ಅವರಿಂದ ಸಾಯಿರಿ!' ರಕ್ಕಸರು ರಕ್ಕಸ ಆಯುಧಗಳೊಂದಿಗೆ ಯುದ್ಧ ಮಾಡುತ್ತಿದ್ದುದರೆ ಕಪಿಗಳು ಮರ- ಪರ್ವತಶಿಖರ- ಉಗುರು- ಹಲ್ಲು- ಮುಷ್ಟಿಗಳಿಂದ ಯುದ್ಧ ಮಾಡುತ್ತಿದ್ದರು. ಕೆಲವೊಮ್ಮೆ ಸತ್ತ ಎದುರಾಳಿಗಳ ಆಯುಧಗಳನ್ನು ಬಳಸಿ, ಅಥವಾ ಅವರ ಕೈಗಳಿಂದ ಸೆಳೆದು ಅವುಗಳಿಂದಲೇ ಯುದ್ಧ ಮಾಡುತ್ತಿದ್ದರು.ಕಪಿಗಳಲ್ಲಿ ನೈಸರ್ಗಿಕ ದೇಹದ ಬಲದೊಂದಿಗೆ ರಾಮಭಕ್ತಿಯ ಬಲವೂ ಇತ್ತು! ಹಾಗಾಗಿ ನೇರಯುದ್ಧದಲ್ಲಿ ಅವರ ಕೈಮೇಲಾಗಿ ರಕ್ಕಸರು ಮಣ್ಣುಮುಕ್ಕತೊಡಗಿದರು.
ತನ್ನವರ ಸೋಲು ರಾವಣನನ್ನು ಸಿಟ್ಟಿಗೇಳುವಂತೆ ಮಾಡಿತು. ಸ್ವತಃ ತಾನೇ ಯುದ್ಧಕ್ಕೆ ಮಹಾರಥದಲ್ಲಿ ಹೋದನು. ಇಂದ್ರಜಿತುವನ್ನು ಲಂಕೆಯ ರಕ್ಷಣೆಗೆ ನೇಮಿಸಿದನು. ಯುದ್ಧರಂಗಕ್ಕೆ ಬಂದವನೇ ಕ್ರೂರವಾದ ಬಾಣಗಳ ಮೂಲಕ ಸುಗ್ರೀವನೂ ಸೇರಿದಂತೆ ಅನೇಕ ವಾನರಪ್ರಮುಖರನ್ನು ಹಿಮ್ಮೆಟ್ಟಿಸಿದನು. ರಾಮನ ಮೇಲೆ ದಾಳಿಮಾಡಲು ಹೋಗುವಾಗ ತಮ್ಮ ವಿಭೀಷಣನು ಗದಾಪಾಣಿಯಾಗಿ ತನ್ನನ್ನು ಎದುರಿಸಲು ನಿಂತದ್ದನ್ನು ನೋಡಿ ಸಿಟ್ಟಿಗೆದ್ದನು. ಅವನನ್ನು ಕೊಂದುಹಾಕುವ ಉದ್ದೇಶದಿಂದ ಶಕ್ತ್ಯಾಯುಧವನ್ನು ಅವನ ಮೇಲೆ ಪ್ರಯೋಗಿಸಿದನು. ಎದುರಿಲ್ಲದ ಆ ಆಯುಧದಿಂದ ಮಿತ್ರನಾದ ವಿಭೀಷಣನನ್ನು ರಕ್ಷಿಸಲು ಸ್ವತಃ ಲಕ್ಷ್ಮಣನೇ ಅದಕ್ಕೆ ಎದೆಯೊಡ್ಡಿದನು- ಮೂರ್ಛಿತನಾಗಿ ನೆಲಕ್ಕೊರಗಿದನು. ರಾವಣನು ಲಕ್ಷ್ಮಣನನ್ನು ಎತ್ತಿಕೊಂಡು ಹೋಗಲು ವಿಫಲಯತ್ನವನ್ನು ಮಾಡಿದನು. ಶೇಷನನ್ನು ಎತ್ತಲು ವಿಶೇಷನೇ ಆಗಬೇಕು! ರಾವಣನನ್ನು ಕಂಡ ಹನುಮನು ಅತಿಯಾದ ಸಿಟ್ಟಿನಿಂದ ಅವನ ಎದೆಗೆ ಬಲವಾಗಿ ಗುದ್ದಿದನು. ಅವನ ಮೂಗು-ಬಾಯಿಗಳಿಂದ ನೆತ್ತರನ್ನು ಕಕ್ಕುತ್ತಾ, ಕಣ್ಣುಕತ್ತಲೆ ಬಂದಂತಾಗಿ ರಥದಲ್ಲಿ ಕುಳಿತನು. ಹನುಮನು ಹೂವನ್ನೆತ್ತುವಷ್ಟು ಸುಲಭವಾಗಿ ಲಕ್ಷ್ಮಣನನ್ನೆತ್ತಿಕೊಂಡು ರಾಮನ ಬಳಿಗೆ ಬಂದನು.(ಶೇಷ-ವಿಶೇಷ) ಶಕ್ತ್ಯಾಯುಧವು ಅದಾಗಲೇ ಲಕ್ಷ್ಮಣನಲ್ಲಿರುವ ದೈವಾಂಶದಿಂದ ಪ್ರೇರೇಪಿಸಲ್ಪಟ್ಟು ರಾವಣನ ರಥವನ್ನು ಸೇರಿಯಾಗಿತ್ತು!
ರಾಮನು ಕೋಪದಿಂದ ರಾವಣನ ಮೇಲೇರಿ ಹೋದನು. ರಥದಲ್ಲಿ ಹಿಂದಿರುಗುತ್ತಿರುವವನನ್ನು ತಡೆದು ಅವನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು! ರಾವಣನು ಪ್ರತಿಯಾಗಿ ರಾಮನ ರಥವಾದ ಹನುಮನ ಮೇಲೆ ಬಾಣಗಳನ್ನು ಪ್ರಯೋಗಿಸಿದನು. ವಜ್ರವನ್ನು ಕೊರೆಯುವ ಶಸ್ತ್ರ ರಾವಣನಲ್ಲಿ ಇರಲಿಲ್ಲ! ಹನುಮ ವಜ್ರದೇಹಿ! ಬಜರಂಗಬಲಿ!! ರಾಮನು ಹರಿತವಾದ ಬಾಣಗಳನ್ನು ಒಮ್ಮೆಲೇ ಹೂಡಿ ರಾವಣನ ರಥ- ಸಾರಥಿ- ಬಿಲ್ಲು- ಶಸ್ತ್ರಹಮೂಹ- ಧ್ವಜಗಳನ್ನು ಕತ್ತರಿಸಿ ಹಾಕಿದನು. ಮೂರ್ಛಿತನಾದ ರಾವಣನು ಎಚ್ಚೆತ್ತು ಲಂಕೆಗೆ ಮರಳಿದನು.
ರಾಮನು ಕೂಡಲೇ ಎಚ್ಚರದಪ್ಪಿ ಬಿದ್ದ ತಮ್ಮನಲ್ಲಿಗೆ ಬಂದು ಗೋಳಾಡಿದನು. ಹನುಮನಲ್ಲಿ ಮತ್ತೊಮ್ಮೆ ದ್ರೋಣಗಿರಿಯನ್ನು ತರಲು ಹೇಳಿದನು. ಹನುಮನು ಕ್ಷೀರಸಮುದ್ರದತ್ತ ಹಾರಿದನು.
ರಾವಣನಿಗೆ ಈ ಸುದ್ದಿಯು ಗೂಢಚಾರನ ಮೂಲಕ ಗೊತ್ತಾಯಿತು. ಕೂಡಲೇ ಹನುಮನನ್ನು ವಂಚಿಸಿ ತಡೆಯಲು ಮಾಯಾವಿಯಾದ ಕಾಲನೇಮಿಗೆ ಹೇಳಿದ. ಅವನು ಹಿಂಜರಿದಾಗ ಕೊಲೆಬೆದರಿಕೆಯನ್ನು ನೀಡಿ ಕಳಿಸಿದನು. ಹನುಮನು ಅಲ್ಲಿಗೆ ತಲುಪುವ ಮೊದಲೇ ಕಾಲನೇಮಿಯು ಮುನಿವೇಷ ಧರಿಸಿ ಆಶ್ರಮವನ್ನು ನಿರ್ಮಿಸಿ ಹಿಮವತ್ಪರ್ವತದ ತಪ್ಪಲಿನಲ್ಲಿದ್ದನು. ಹನುಮನಿಗೆ ಅಚ್ಚರಿಯಾಯಿತು. ಯಾಕೆಂದರೆ ಹಿಂದಿನ ಸಲ ಬಂದಾಗ ಆಶ್ರಮವಿರಲಿಲ್ಲ! ಈಗ ಹೇಗೆ ಬಂತು? ಆದರೂ ನೋಡಿಯೇ ಬಿಡೋಣವೆಂದು ಆಶ್ರಮದೊಳಕ್ಕೆ ಹೊಕ್ಕಾಗ ಕಪಟಮುನಿಯು ಎದುರ್ಗೊಂಡನು. ಆತಿಥ್ಯ ಸ್ವೀಕರಿಸಿ ವಿಶ್ರಮಿಸು ಎಂದು ಅವನು ಹೇಳಿದನು.
ಹನುಮನ ತಾನು ಬಂದ ಕಾರ್ಯವನ್ನು ಹೇಳಿ ಅವಸರಿಸಿದನು. ಆಗ ಕಾಲನೇಮಿಯು ಚಿಂತಿಸಿದಂತೆ ಮಾಡಿ 'ಲಂಕೆಯಲ್ಲಿ ಲಕ್ಷ್ಮಣನೂ ಸೇರಿದಂತೆ ಎಲ್ಲರೂ ಪುನಶ್ಚೇತನವನ್ನು ಪಡೆದಿರುವರು' ಎಂದನು. ಅದನ್ನು ನಂಬಿದ ಹನುಮನು ಸಮೀಪದಲ್ಲಿರುವ ಸರೋವರಕ್ಕೆ ಮಿಂದು ನೀರು ಕುಡಿಯಲೆಂದು ಹೋದನು. ಸರೋವರದಲ್ಲಿ ಮೀಯಲು ತೊಡಗಿದಾಗ ಮೊಸಳೆಯೊಂದು ಅವನ ಕಾಲನ್ನು ಹಿಡಿದೆಳೆಯತೊಡಗಿತು. ಹನುಮನು ಮೊಸಳೆಯ ಸಹಿತ ಕಾಲನ್ನು ಹಿಂದಕ್ಕೆ ಸೆಳೆದನು. ಬಳಿಕ ಮೊಸಳೆಯ ಬಾಯಿಬಿಡಿಸಿ ಸೀಳಿಹಾಕಿದನು. ಮೊಸಳೆ ಸತ್ತಿತು. ಆಗ ಆಗಸದಲ್ಲಿ ದಿವ್ಯರೂಪ ಧರಿಸಿದ ಯುವತಿಯೊಬ್ಬಳು ಕಂಡುಬಂದಳು. ಅವಳು-" ಎಲೈ ಕಪಿಶ್ರೇಷ್ಠ! ನಾನೊಬ್ಬ ಶಾಪಗ್ರಸ್ತ ಅಪ್ಸರೆ. ನಿನ್ನಿಂದಲೇ ನನಗೆ ಶಾಪಮುಕ್ತಿ ಎಂದು ನನಗೆ ಶಾಪಕೊಟ್ಟ ಋಷಿಯು ಹೇಳಿದ್ದ. ನಿನ್ನಿಂದ ನಾನು ಶಾಪಮುಕ್ತಳಾದೆ. ನಿನ್ನನ್ನು ಈ ಸರೋವರಕ್ಕೆ ಕಳುಹಿಸಿದ ಮುನಿಯು ನಿನ್ನ ಕಾರ್ಯಕ್ಕೆ ತಡೆಯೊಡ್ಡಲು ರಾವಣನು ಕಳಿಸಿದ ಕಾಲನೇಮಿ ಎಂಬ ರಾಕ್ಷಸನು.ಅವನನ್ನು ಕೊಂದುಬಿಡು"- ಎಂದು ಹೇಳಿ, ಹನುಮನಿಗೆ ನಮಿಸಿ ತನ್ನ ಲೋಕಕ್ಕೆ ಹೋದಳು. ಹನುಮನು ಮರಳಿ ಬಂದುದನ್ನು ಕಂಡು ಕಾಲನೇಮಿಯು ಅಚ್ಚರಿಯಿಂದ ನೋಡಿದನು. ತನ್ನ ಬಣ್ಣ ಬಯಲಾದುದನ್ನು ಕಂಡು ತನ್ನ ನಿಜರೂಪದೊಂದಿಗೆ ಯುದ್ಧಮಾಡತೊಡಗಿದನು. ಹೆಚ್ಚಿನ ಸಮಯವಿಲ್ಲದ ಹನುಮನು ತನ್ನ ಬಲವಾದ ಮುಷ್ಟಿಯಿಂದ ಅವನ ನೆತ್ತಿಗೆ ಹೊಡೆದು ಕೊಂದುಹಾಕಿದನು. ಬಳಿಕ ದ್ರೋಣಗಿರಿಯನ್ನೆತ್ತಿಕೊಂಡು ರಾಮನಿರುವಲ್ಲಿಗೆ ಬಂದನು. ಹನುಮ- ವೀರಹನುಮ!! ಧೀರಹನುಮ!!
ಮುಂದುವರಿಯುವುದು....
- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ