ಶ್ರೀಮನ್ ನಿಜಗುಣ ಶಿವಯೋಗಿಗಳು ರಚಿಸಿದ ಕೈವಲ್ಯ ಪದ್ಧತಿ ಶಾಸ್ತ್ರಗ್ರಂಥಗಳನ್ನು ಮುಮುಕ್ಶುಗಳ ಹೃದಯದೊಳಗೆ ಬಿತ್ತಿ ಮುಕ್ತಿಯ ಪತವನ್ನು ತೋರಿದ ಶಿವಾವತಾರಿ ಸದ್ಗುರು ಸಿದ್ದಾರೂಢರ ಸ್ವಾಮಿಗಳ ಪರಮಶಿಷ್ಯರಾಗಿ ಅವರ ಜ್ಞಾನದ ಕಿರಣದಲ್ಲಿ ಉದಯಗೊಂಡ ಆರೋಡ ಪರಂಪರೆಗೆ ಜ್ಯೋತಿಯಾಗಿ ಬೆಳಗಿ ಹಳ್ಳಿ ಹಳ್ಳಿಗೂ ಸಂಚರಿಸಿ ಅನೇಕ ಜನರನ್ನು ಉದ್ದರಿಸಿದವರು ಶಿವಪುತ್ರ ಮಹಾಸ್ವಾಮಿಗಳು.
ಅವರ ಪ್ರೀತಿಯ ಕಂದರಾಗಿ ಆಧುನಿಕ ಯುಗದ ಮಹಾಸಂತರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ವಿರಾಜಮಾನರಾಗಿ ತಮ್ಮ ಜ್ಞಾನದ ಬೆಳಕಿನಿಂದ ಸಾಮಾನ್ಯರ ಬದುಕಿನ ಕತ್ತಲೆಯನ್ನು ಕಳೆದು ಭಕ್ತಿಯ ಮಹಾಕೋಟೆಯನ್ನ ಕಟ್ಟಿದ ಪರಮಪೂಜ್ಯ ಸದ್ಗುರು ಅಭಿನವ ಶಿವಪುತ್ರ ಸ್ವಾಮಿಗಳು ಈ ನಾಡು ಮರೆಯಲಾಗದ ಕರುಣಾಮೂರ್ತಿಗಳು. ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಗಿಂತ ಪುರುಷ ಶ್ರೇಷ್ಠ ಎನ್ನುವ ಅವಿವೇಕತನ ಹಾಸು ಹೊಕ್ಕಾದ ಸಮಯದಲ್ಲಿ ಮಂತ್ರ, ಜಪ, ತಪಗಳು ಪುರುಷರಿಗೆ ಮಾತ್ರ ಎಂಬಂತೆ ಇರುವಾಗ ಪೂಜ್ಯ ಅಭಿನವ ಶಿವಪುತ್ರ ಮಹಾಸ್ವಾಮಿಗಳು ಮಹಿಳಾಮಾತೆಯರಿಗೆ ಮಹಾರುದ್ರದ ಮಂತ್ರಗಳನ್ನ ಕಲಿಸಿ ಭಗವಂತನ ಸನ್ನಿಧಾನವನ್ನ ಸೇರಲು ಪುರುಷ ಎಷ್ಟು ಶಕ್ತನು ಮಾತೇಯರು ಅಷ್ಟೇ ಶಕ್ತರು ಎಂದು ಸಮಾಜದೊಳಗಿದ್ದ ಲಿಂಗಭೇದ ಭಾವವನ್ನು ಅಳಿಸಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದರು.
ಶೋಷಿತ ಜನರಿಗ ಶಕ್ತಿಯಾಗಿ ನಿಂತು ಜಾತಿ,ಕುಲ, ಪಂಥಗಳನ್ನ ಮೀರಿ ಎಲ್ಲ ಸಮಾಜದ ಗುರುವಾಗಿ ಸರ್ವರ ಬಾಳು ಬೆಳಗಿದ ಮಹಾಯೋಗಿಗಳು. ಅಳಿದು ಹೋಗುವ ಮಠ ಮಂದಿರಗಳನ್ನ ಕಟ್ಟದೆ ಸದಾಕಾಲ ಉಳಿಯುವ ಭಕ್ತರ ಹೃದಯ ಮಂದಿರಗಳನ್ನ ಕಟ್ಟಿ ನಿಲ್ಲಿಸಿದರು. ಒಂದು ಬಾರಿ ಶ್ರೀಮಠದ ರೈತ ಭಕ್ತ ಓರ್ವನು ತಾನು ಬೆಳೆದ ಬೆಳೆಯಲ್ಲಿ ಬಂದ ಲಾಭದ ಒಂದಿಷ್ಟು ಹಣವನ್ನು ಗುರುಗಳಿಗೆ ಅರ್ಪಿಸಬೇಕೆಂದು ಅವರ ಬಳಿಗೆ ತೆಗೆದುಕೊಂಡು ಬಂದಿದ್ದನು ಆಗ ಗುರುಗಳು ಆ ಭಕ್ತನನ್ನು ಹಾಗೆ ಮಾತನಾಡಿಸುತ್ತಾ ನಿಮ್ಮ ಮನೆಗೆ ಹಿಂದೆ ನಾನು ಬಂದಾಗ ಒಂದು ಭಾಗದ ಗೋಡೆ ಮಳೆಗೆ ಸೋರುತ್ತಿತ್ತು ಅದನ್ನು ದುರಸ್ತಿ ಮಾಡಿಸಿದ್ದೀರಾ?
ಎಂದು ವಿಚಾರಿಸಿದಾಗ ಆತನು ಇಲ್ಲ ಗುರುಗಳೇ ಇನ್ನೂ ಆ ಗೋಡೆ ಹಾಗೆ ಇದೆ ಎಂದಾಗ ಮಾತೃ ಹೃದಯವಂತರಾದ ಗುರುಗಳು ಹೇಳಿದರು- ಸನ್ಯಾಸಿಗಳಾದ ನಾವು ನೀವು ಎಷ್ಟೇ ಕೊಟ್ಟರೂ ಅವುಗಳನ್ನು ತೆಗೆದುಕೊಂಡು ಬಿಡುತ್ತೇವೆ. ಈಗ ಈ ಹಣವನ್ನ ತೆಗೆದುಕೊಂಡು ಹೋಗು. ಮೊದಲು ನಿನ್ನ ಮನೆಯ ಆ ಗೋಡೆಯನ್ನು ದುರಸ್ತಿ ಮಾಡಿಸಿಕೊ ವಯಸ್ಸಾದ ಹಿರಿಯರಿರುವ ಮನೆಯದು ಆ ವಯೋವೃದ್ಧರನ್ನು ಕಾಳಜಿ ಮಾಡು. ಅದೇ ನೀನು ನನಗೆ ಕೊಡುವ ಭಕ್ತಿಯ ಕಾಣಿಕೆಯಾಗುತ್ತದೆ ಎಂದು ಆತನನ್ನು ಹರಸಿ ಕಳುಹಿಸಿದರು.
ಅವರ ಜಾಗದಲ್ಲಿ ನಾವು ನೀವುಗಳಿದ್ದರೆ ಅವನ ಕಷ್ಟ ಏನೇ ಇರಲಿ ನನಗೆ ಹಣ ಸಿಕ್ಕಿತೆಂದು ತೆಗೆದುಕೊಂಡು ಇಟ್ಟುಕೊಳ್ಳುತ್ತಿದ್ದೆವು ಆದರೆ ಕರುಣಾಹೃದಯದ ಪೂಜ್ಯರು ಭಕ್ತರ ಏಳಿಗೆಯ ಬಗ್ಗೆಯೇ ಸದಾಚಿಂತಿಸುತ್ತಿರುವವರಾಗಿದ್ದರು ಅಂತ ಗುರುಗಳನ್ನ ಪಡೆದ ಭಕ್ತ ಕುಲವೇ ಧನ್ಯ. ಅವರು ಕಲಿಸಿದ ಶಿಸ್ತಿನ ಪಾಠ ಇವತ್ತಿಗೂ ಭಕ್ತರು ಪಾಲಿಸುವುದನ್ನು ನೋಡಿದರೆ ಪೂಜ್ಯರ ಸುಭಿಕ್ಷಯ ಸಮಾಜಕ್ಕಾಗಿ ಇದ್ದ ಅವರ ದೂರದೃಷ್ಟಿಯ ಕಲ್ಪನೆಯ ಅರಿವಾಗುತ್ತದೆ.
ಅವರು ಯಾವತ್ತಿಗೂ ಸಣ್ಣ ಮಠದ ಸ್ವಾಮೀಜಿ ದೊಡ್ಡಮಠದ ಸ್ವಾಮೀಜಿ ಎಂದು ಸನ್ಯಾಸಿಗಳನ್ನು ಬೇದ ಭಾವದಿಂದ ನೋಡದೆ ಎಲ್ಲ ಸಿದ್ದಾಂತ ಪರಂಪರೆಗಳನ್ನು ಗೌರವದಿಂದ ಕಂಡು ಅನೇಕ ಯುವಸಂತರಿಗೆ ತಾಯಿಯ ರೂಪದಲ್ಲಿ ಕೈಹಿಡಿದು ಮುನ್ನಡಿಸಿ ಅವರ ಬಾಳಿಗೆ ಮಹಾಶಕ್ತಿಯಾದವರು. ನಿಜವಾದ ಆರೂಢ ಸ್ಥಿತಿಯನ್ನು ತಲುಪಿ 2020ರಲ್ಲಿ ದೈಹಿಕವಾಗಿ ನಮ್ಮಿಂದ ಮರೆಯಾದರೂ ಆದರೂ ಅವರು ಹಚ್ಚಿದ ಜ್ಞಾನಜ್ಯೋತಿ ಇಂದಿಗೂ ಅನೇಕ ಭಕ್ತರ ಮನವನ್ನು ಬೆಳಗಿಸುತ್ತಿದೆ.
- ಶ್ರೀರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ. ವಿಜಯಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ