ಬಹರೈನ್: ತುಳುಕೂಟ ಬಹರೈನ್ ಇತ್ತೀಚೆಗೆ ಆಟಿದ ಒಂಜಿ ದಿನ ಕಾರ್ಯಕ್ರಮವೊಂದನ್ನು ಸಂಘಟಿಸಿತ್ತು. ಬಹರೈನ್ ದೇಶದಲ್ಲಿ ಹಮ್ಮಿಕೊಂಡಿದ್ದ ಪ್ರಪ್ರಥಮ “ಆಟಿದ ಒಂಜಿ ದಿನ” ಕಾರ್ಯಕ್ರಮ ಇದಾಗಿದ್ದು, ದ್ವೀಪದಾದ್ಯಂತ ತುಳುವರಲ್ಲಿ ಹಾಗೂ ಕನ್ನಡಿಗರಲ್ಲಿ ಇದು ಸಂಚಲನವನ್ನು ಮೂಡಿಸಿತ್ತು. ಕರಾವಳಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಸಿದ್ದಿ ಪಡೆದಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ್ ಸುವರ್ಣ ಮುಲ್ಕಿ ಇವರ ನಿರ್ದೇಶನದಲ್ಲಿ ಸದ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇವರಲ್ಲದೆ, ನಮ್ಮ ಟಿವಿ ವಾಹಿನಿಯ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್, ಬಂಟ್ಸ್ ಕತಾರ್ ಸಂಸ್ಥೆಯ ಅಧ್ಯಕ್ಷ ನವೀನ ಶೆಟ್ಟಿ ಇರುವೈಲ್ ಹಾಗೂ ಗಗನ್ ಸುವರ್ಣ ಮುಲ್ಕಿ ಇವರೂ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಬಹರೈನ್ ದೇಶದಲ್ಲಿರುವ ತುಳು ಭಾಷಿಗರ ವಿವಿಧ ಸಮುದಾಯಗಳ ಸಂಘಟನೆಗಳು, ಕೊಂಕಣಿ ಹಾಗೂ ಮುಸ್ಲಿಂ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ನೀಡಿದ್ದೇ ಅಲ್ಲದೆ, ಅದರ ಅಧ್ಯಕ್ಷರುಗಳು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು.
ಬಹರೇನ್ ನ ಪ್ರಸಿದ್ಧ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಆಗಸ್ಟ್ ಒಂಬತ್ತರಂದು ಜರಗಿದ ಕಾರ್ಯಕ್ರಮವನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ತುಳುವರು ಆಗಮಿಸಿದ್ದರು. ಸಂಜೆ ಐದು ಗಂಟೆಯಿಂದ ಏಳು ಗಂಟೆಯ ತನಕ ಜರಗಿದ ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ತುಳುವರು ಬಹರೈನ್ ನ ಸುಡು ಸೆಖೆಯನ್ನೂ ಲೆಕ್ಕಿಸದೆ ಉತ್ಸಾಹದಿಂದ ಪಾಲ್ಗೊಂಡಿದ್ದರು. ತುಳುನಾಡಿನ ಪ್ರಾಚೀನ ಆಟೋಟ ಸ್ಪರ್ಧೆಗಳನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಪ್ರಯತ್ನಕ್ಕೆ ಅತ್ಯುತ್ತಮ ಪ್ರತಿಕ್ರೀಯೆ ಸಿಕ್ಕಿತ್ತು. ಮುಖ್ಯ ಅತಿಥಿಯಾಗಿ ಭಾರತೀಯ ರಾಯಭಾರಿಗಳಾದ ಗೌರವಾನ್ವಿತ ವಿನೋದ್ ಕೆ. ಜಾಕೋಬ್ ಪಾಲ್ಗೊಂಡಿದ್ದರು. ಸಂಜೆ 7ಕ್ಕೆ ಪ್ರಾರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುಕೂಟದ ಮುಖ್ಯಸ್ಥರಲ್ಲೊಬ್ಬರಾದ ರಾಜ್ ಕುಮಾರ್ ರವರು ಭಾರತೀಯ ರಾಯಭಾರಿಗಳನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿ, "ಆಟಿದ ಒಂಜಿ ದಿನ" ವನ್ನು ಪ್ರಪ್ರಥಮವಾಗಿ ಬಹರೈನ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಹಾಗೂ ಇದಕ್ಕೆ ಅಭೂತಪೂರ್ವ ಪ್ರತಿಕ್ರೀಯೆ ಸಿಕ್ಕಿದೆ ಎಂದು ವಿವರಿಸಿದರು.
ಇನ್ನೊಬ್ಬ ಪ್ರಮುಖರಾದ ಆಸ್ಟಿನ್ ಸಂತೋಷ್ ರವರು ರಾಯಭಾರಿಗಳನ್ನು ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರನ್ನು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ವೇದಿಕೆಗೆ ಆಹ್ವಾನಿಸಿದರು. ತುಳುನಾಡಿನಿಂದ ತಂದಿದ್ದ ಮಲ್ಲಿಗೆ, ಸೇವಂತಿಗೆ, ಗೊಂಡೆ ಹೂಗಳು, ಪಿಂಗಾರ, ತೆಂಗಿನ ಮರದ ಕೊಂಬು, ಬಾಳೆ ಗಿಡ, ಮಾವಿನ ಎಲೆಗಳು, ಹಲಸಿನ ಹಣ್ಣು ಇತ್ಯಾದಿಗಳಿಂದ ಮಾಡಿದ್ದ ಅಲಂಕಾರಗಳು ಸಮಾರಂಭದ ಸೌಂದರ್ಯವನ್ನು ಹೆಚ್ಚಿಸಿದ್ದವು. ಅತಿಥಿಗಳಿಗೆ ತುಳು ಲಾಂಛನಗಳನ್ನೊಳಗೊಂಡ ಶಾಲುಗಳನ್ನು ಹಾಕಿ, ವೀಳ್ಯದೆಲೆ, ಅಡಿಕೆ ಮತ್ತು ಪಿಂಗಾರಗಳನ್ನು ನೀಡಿ ಸ್ವಾಗತಿಸಲಾಯಿತು. ಓಲೆಬೆಲ್ಲದೊಂದಿಗೆ ನೀರನ್ನು ಹಾಗೂ ಪಾನಕಗಳನ್ನು ಅತಿಥಿಗಳಿಗೆ ನೀಡಲಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹಿಂದೂ, ಕ್ರೈಸ್ತ ಹಾಗೂ ಇಸ್ಲಾಮ್ ಧಾರ್ಮಿಕ ಗುರುಗಳು ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದರು. ಭಾರತೀಯ ರಾಯಭಾರಿಗಳು ದೀಪ ಬೆಳಗಿಸಿ, ಹಲಸಿನ ಹಣ್ಣನ್ನು ತುಂಡು ಮಾಡುವುದರ ಮೂಲಕ ಸಮಾರಂಭಕ್ಕೆ ಅದ್ದೂರಿಯ ಚಾಲನೆ ನೀಡಿದರು. ಸನ್ಮಾನ ಸ್ವೀಕರಿಸಿದ ನಂತರ ತುಳುವಲ್ಲೇ ತನ್ನ ಸಂದೇಶ ನೀಡಿದಾಗ, ಕಿಕ್ಕಿರಿದ ಸಂಖ್ಯೆಯಲ್ಲಿ ನೆರೆದಿದ್ದ ತುಳುವರು ಕಿವಿಗಡಚಿಕ್ಕುವ ಕರತಾಡನದೊಂದಿಗೆ ಸ್ವೀಕರಿಸಿದರು. "ನಿಮ್ಮ ಆತಿಥ್ಯಕ್ಕೆ ಚಿರಋಣಿಯಾಗಿದ್ದೇನೆ, ಈ ದ್ವೀಪದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ತುಳುವರು ಇದ್ದಾರೆಂದು ತಿಳಿದು ಸಂತೋಷವಾಗಿದೆ. ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಕಣ್ಣಾರೆ ಕಂಡು ಖುಷಿಪಟ್ಟಿದ್ದೇನೆ" ಎಂದು ರಾಯಭಾರಿಗಳು ತಿಳಿಸಿದರು. ಹೊರದೇಶದಲ್ಲಿ ಭಾರತೀಯ ರಾಯಭಾರಿಗಳು ತುಳು ಭಾಷಣವನ್ನು ಬರೆದು ತಂದು ಸುಲಲಿತವಾಗಿ ಮಾತನಾಡಿರುವುದು ಬಹರೈನ್ ನ ತುಳುವರಿಗೆ ಸಂತೋಷ ತಂದಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾರಂಭದಲ್ಲೇ ಪ್ರದರ್ಶನಗೊಂಡ ಹುಲಿವೇಷದ ವೇಷಧಾರಿಗಳು ಅದ್ಬುತ ಹುಲಿ ಕುಣಿತವನ್ನು ಪ್ರದರ್ಶಿಸಿದರು. ಹುಲಿಮರಿಯೊಂದು ಪಲ್ಲಕಿಯಲ್ಲಿ ಸಭಾಂಗಣ ಪ್ರವೇಶಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ತುಳುನಾಡಿನ ಶೈಲಿಯಲ್ಲಿಯೇ ಬಣ್ಣಕ್ಕೆ ಮೈಯೊಡ್ಡಿದ್ದ ಹುಲಿ ವೇಷಧಾರಿಗಳ ವೇಷಭೂಷಣಗಳನ್ನು ವಿಶೇಷವಾಗಿ ಮಂಗಳೂರಿನಿಂದ ತರಿಸಲಾಗಿತ್ತು. ಸುಮಾರು ನೂರಕ್ಕೂ ಮಿಕ್ಕಿದ ತುಳು ಕಲಾವಿದರು ತುಳು ಜಾನಪದ ಹಾಗೂ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. ತುಳುನಾಡಿನ ಸೌಹಾರ್ದತೆಯ ಸಂಕೇತವಾಗಿ ಮುಸ್ಲಿಂ ಯುವಕರು ದಫ್ ಪ್ರದರ್ಶನ ನೀಡಿದರೆ, ಕೊಂಕಣಿ ತಂಡವು ಕೊಂಕಣಿ ಭಾಷೆಯ ಜಾನಪದ ನೃತ್ಯವೊಂದನ್ನು ಪ್ರದರ್ಶಿಸಿತು.
ತುಳುನಾಡಿನ ಉಡುಗೆ ತೊಡುಗೆಗಳನ್ನು ಬಿಂಬಿಸುವ ಮಿಸ್ ತುಳುನಾಡು ಹಾಗೂ ಮಿಸೆಸ್ ತುಳುನಾಡು ಸ್ಪರ್ಧೆಗಳನ್ನೂ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು 20 ಕ್ಕೂ ಮಿಕ್ಕಿದ ಯುವತಿ ಹಾಗೂ ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು. ಅತಿಥಿಗಳಾದ ಚಂದ್ರಶೇಖರ ಸುವರ್ಣ, ನವೀನ ಶೆಟ್ಟಿ ಎಡ್ಮೆಮಾರ್, ನವೀನ ಶೆಟ್ಟಿ ಇರುವೈಲ್ ಹಾಗೂ ಗಗನ್ ಸುವರ್ಣರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಹರೈನ್ ನ ರಾಯಭಾರೀ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಹಲವು ದಶಕಗಳಿಂದ ವಿವಿಧ ರೀತಿಯಲ್ಲಿ ತುಳುವರಿಗೆ ಹಾಗೂ ಕನ್ನಡಿಗರಿಗೆ ಸಹಾಯ ಹಸ್ತ ನೀಡುತ್ತಿರುವ ಶ್ರೀಮತಿ ಸಂಧ್ಯಾ ಪೈ ಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಬಹರೈನ್ ದೇಶವನ್ನು ಬಿಟ್ಟು ತೆರಳುತ್ತಿರುವ ಹಿರಿಯ ತುಳುವ ಹಾಗೂ ಕೊಂಕಣಿ ಸಮುದಾಯದ ಪ್ರಮುಖ ವ್ಯಕ್ತಿ ಜೋಯೆಲ್ ಡಿ'ಸಾ ರವರನ್ನು ಗೌರವವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಆಟಿ ತಿಂಗಳಿನ ಖಾದ್ಯಗಳನ್ನು ಸವಿಯುವ ಏರ್ಪಾಡು ಮಾಡಲಾಗಿತ್ತು. ಸುಮಾರು ಅರುವತ್ತಕ್ಕೂ ಹೆಚ್ಚಿನ ಮನೆಗಳಲ್ಲಿ ತಯಾರಿಸಿದ ಹಲಸಿನ ಗಟ್ಟಿ, ಹಳದಿ ಎಲೆಯ ಗಟ್ಟಿ, ತಿಮರೆ ಹಾಗೂ ಇತರ ಚಟ್ನಿಗಳು, ಕೆಸುವಿನ ಎಲೆಗಳಿಂದ ತಯಾರಿಸಿದ ಖಾದ್ಯಗಳು, ಪತ್ರೊಡೆ, ಹಲಸಿನ ಕಾಯಿಯ ಪದಾರ್ಥಗಳು ಹೀಗೆ ಹತ್ತು ಹಲವು ತುಳುನಾಡಿನ ಖಾದ್ಯಗಳನ್ನು ಸವಿಯುವ ಅವಕಾಶವನ್ನು ಬಹರೈನ್ ನ ತುಳುವರಿಗೆ ತುಳುಕೂಟ ಏರ್ಪಡಿಸಿ ಕೊಟ್ಟಿತ್ತು. ಇದಕ್ಕಾಗಿ ಅಗತ್ಯವಿರುವ ವಿವಿಧ ಎಲೆಗಳನ್ನು, ತರಕಾರಿಗಳನ್ನು ವಿಶೇಷವಾಗಿ ಮಂಗಳೂರಿನಿಂದ ತರಿಸಲಾಗಿತ್ತು. ಹುಲಿವೇಷದ ಉಸ್ತುವಾರಿಯನ್ನು ಗಣೇಶ್ ಸಾಲ್ಯಾನ್ ಹಾಗೂ ಚಿರಾಗ್ ಸುವರ್ಣ ರವರು ವಹಿಸಿದ್ದರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿ ಕುಮಾರಿ ನಮಿತಾ ಸಾಲ್ಯಾನ್ ಮತ್ತು ಪ್ರೀತಮ್ ಆಚಾರ್ಯರವರದಾಗಿತ್ತು. ಶ್ರೀಮತಿ ಲೋಲಾಕ್ಷಿ ರಾಜಾರಾಮ್ ರವರ ನೇತೃತ್ವದಲ್ಲಿ ಆಟಿಯ ವಿವಿಧ ಖಾದ್ಯಗಳನ್ನು ಮಹಿಳೆಯರು ತಯಾರಿಸಿ ಪ್ರದರ್ಶಿಸಿದ್ದರು. ಹೀಗೆ ವಿವಿಧ ಜವಾಬ್ದಾರಿಗಳನ್ನು ತುಳುಕೂಟದ ಸದಸ್ಯ ಸದಸ್ಯೆಯರು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ