ಯುವಕರಿಗೆ ಮಾದರಿ: ಛಲ ಬಿಡದೆ ಕನಸಿನ ಬೆಂಬತ್ತಿ ಪೊಲೀಸ್ ಆದ ನಾಗರಾಜ

Upayuktha
0

 


 

ಪೊಲೀಸರೆಂದರೆ ಸಮಾಜದಲ್ಲಿ ಶಾಂತಿ- ಸುವ್ಯವಸ್ಥೆಯನ್ನು ಕಾಪಾಡುವವರಾಗಿರುತ್ತಾರೆ. ಸೈನಿಕರು ಗಡಿಯಲ್ಲಿ ನಿಂತು ದೇಶವನ್ನು ಕಾಯುವಂತೆ ಸಮಾಜದ ಜನರನ್ನು ಕಾಯುವವರು ಪೊಲೀಸರು. 'ಪೊಲೀಸ್ ಪೇದೆ'ಯಾಗಿ ಕರ್ತವ್ಯ ನಿರ್ವಹಿಸುವವರಲ್ಲಿ 'ನಾಗರಾಜ' ಎಂಬುವವರು ಒಬ್ಬರು.               


ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಣಿಯಾರು ಎಂಬ ಪುಟ್ಟ ಹಳ್ಳಿಯವರು. ಇವರ ತಂದೆ - ರಾಮ ಮತ್ತು ತಾಯಿ- ಇಂದಿರಾ. ಇವರ ತಂದೆ ಮಂಗಳೂರಿನಲ್ಲಿ ಕಾರು ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮತ್ತು ಇವರ ತಾಯಿ ಬೀಡಿ ಕಟ್ಟುವ ವೃತ್ತಿ ಮಾಡುತ್ತಿದ್ದರು. ವರ್ಷಗಳು ಉರುಳಿದಂತೆ ಅವರ ತಂದೆಯವರು ಅನಾರೋಗ್ಯಕ್ಕೆ ಈಡಾಗಿದ್ದರಿಂದ ತನ್ನ ದುಡಿಮೆಯನ್ನು ನಿಲ್ಲಿಸಿ ಮನೆಗೆ ವಾಪಸಾದರು. ಹೀಗಾಗಿ ಇವರ ಬಾಲ್ಯದ ಜೀವನವು ಕಷ್ಟಕರವಾಗಿತ್ತು. 


ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣಿಯಾರು ಮತ್ತು ಕೆಯ್ಯೂರಿನಲ್ಲಿ ಪೂರ್ಣಗೊಳಿಸಿದರು. ನಂತರ ತನ್ನ ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೆಯ್ಯೂರಿನಲ್ಲಿಯೇ ಪಡೆದರು. ನಿರೂಪಣೆ ಮಾಡುವುದು, ಸಣ್ಣ ಪುಟ್ಟ ಕವನಗಳನ್ನು ರಚಿಸುವುದು, ಓದುವುದು ಇವರ ಹವ್ಯಾಸಗಳಾಗಿದ್ದವು. ಅಲ್ಲದೆ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು ಮತ್ತು ಜಾನಪದ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ತನ್ನ ವಿದ್ಯಾರ್ಥಿ ಜೀವನದಿಂದಲೂ ಅತ್ಯಂತ ಚುರುಕಿನಿಂದ ಕೂಡಿದ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಇಂದಿಗೂ ಸಹ ಅವರ ಶಿಕ್ಷಕವೃಂದ ಮತ್ತು ಉಪನ್ಯಾಸಕ ವೃಂದದವರಿಗೆ ನೆಚ್ಚಿನ ವಿದ್ಯಾರ್ಥಿಯಾಗಿರುತ್ತಾರೆ.


ಮಾತ್ರವಲ್ಲದೆ ಇವರು 'ಡೈಲಾಗ್ ಕಿಂಗ್' ಎಂದೇ ಖ್ಯಾತಿ ಪಡೆದ ನಾಯಕ ನಟ 'ಸಾಯಿಕುಮಾರ್' ಅವರ ಅಪ್ಪಟ ಅಭಿಮಾನಿಯಾಗಿದ್ದರು. ಅವರು ಪೊಲೀಸ್ ಸಮವಸ್ತ್ರ ಧರಿಸಿ ನಟಿಸಿದ ಎಲ್ಲಾ ಚಲನಚಿತ್ರಗಳನ್ನು ತಡರಾತ್ರಿಯವರೆಗೂ ಸಹ ನೋಡುತ್ತಿದರು. ಏಕೆಂದರೆ ತಾನೂ ಕೂಡ ಸಮಾಜದಲ್ಲಿ ಇದೇ ರೀತಿಯಾದ ಸೇವೆಯನ್ನು ಸಲ್ಲಿಸಬೇಕೆಂಬ ಪಣತೊಟ್ಟಿದ್ದರು. ತನ್ನ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿ ಮಂಗಳೂರಿನ ಕೊಡಿಯಾಲ್‌ಬೈಲಿನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ D.Ed ಕೋರ್ಸ್ ಅನ್ನು ಪೂರ್ಣಗೊಳಿಸಿ ಸರಕಾರಿ ಉನ್ನತ ಪ್ರಾಥಮಿಕ ಶಾಲೆ ಸಂಜಯ್ ನಗರ, ದರ್ಬೆ (ಪುತ್ತೂರು) ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಪಾಲ್ತಾಡಿಯಲ್ಲಿ ಎರಡು ವರ್ಷಗಳ ಕಾಲ ಅತಿಥಿ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬೋಧನೆಯನ್ನು ನೀಡಿದರು. 


ಇವರು ಶಿಕ್ಷಕರಾಗಿದ್ದರೂ ತಾನೊಬ್ಬ ಪೊಲೀಸ್ ಆಗಬೇಕೆಂಬ ಛಲದ ಬೆನ್ನು ಬಿಡಲಿಲ್ಲ. ಪ್ರತಿ ದಿನ ಮುಂಜಾನೆ ಬೇಗ ಎದ್ದು ಓಡುವುದು, ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ಗುಂಡು ಎಸೆತವನ್ನು ಅಭ್ಯಾಸ ಮಾಡುತ್ತಿದ್ದರು. ಮಾತ್ರವಲ್ಲದೆ, ತನ್ನ ಆತ್ಮೀಯರಾದ PSI ಅಧಿಕಾರಿಯಾದ ಪ್ರದೀಪ್ ಕೆಂಗುಡೇಲು ರವರ ಸಲಹೆಯಿಂದಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಹೆಚ್ಚಾಗಿ ಓದುತಿದ್ದರು. ಬಡತನದ ನಡುವೆಯೂ ಸಹ ತನ್ನ ಬಿಡುವಿಲ್ಲದ ಸತತ ಪ್ರಯತ್ನದಿಂದಾಗಿ 2015 ರಂದು ಬಂಟ್ವಾಳ ನಗರದ ಪೊಲೀಸ್ ಠಾಣೆಯಲ್ಲಿ "ಪೊಲೀಸ್ ಪೇದೆ"ಯಾಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸಮಾಜದಲ್ಲಿ ಉತ್ತಮ ಗೌರವವನ್ನು ಪಡೆದು ಕೊಂಡರು.            


"ಮೊದಲು ಯಾರಿಗೂ ಸಹಾಯ ಮಾಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ನಾನು ವೃತ್ತಿಗೆ ಸೇರಿದ ನಂತರ ನನ್ನ ಸಹೋದ್ಯೋಗಿಗಳೊಂದಿಗೆ ಕಷ್ಟದಲ್ಲಿರುವವರಿಗೆ ನನ್ನ ಕೈಲಾಗುವಷ್ಟು ಸಹಾಯವನ್ನು ಮಾಡುತ್ತಿದ್ದೇನೆ. ಸಮಾಜಕ್ಕೆ ನಾನು ಸೇವೆಯನ್ನು ಸಲ್ಲಿಸುತ್ತಿದ್ದೇನೆ ಎಂಬ ಹೆಮ್ಮೆಯಿದೆ. ನನ್ನಂತೆಯೇ ನನ್ನ ತಂಗಿಯಂದಿರು ಮತ್ತು ತಮ್ಮಂದಿರು ಉತ್ತಮ ಹುದ್ದೆಗಳನ್ನೆರಬೇಕೆಂದು ನನ್ನ ಕನಸಾಗಿದೆ". 


ಪೊಲೀಸರು ಯಾವುದೇ ರೀತಿಯ ಕಾನೂನು ಬದ್ಧವಾದ ದಂಡಗಳನ್ನು ವಿಧಿಸಿದರೆ ಅದು ಜನರ ಒಳಿತಿಗಾಗಿ ಎಂಬುದನ್ನು ಅವರು ಅರಿತುಕೊಳ್ಳಬೇಕು. ಮತ್ತು ಯುವಕರು ಸಣ್ಣ ಪ್ರಾಯದಲ್ಲಿ ತಪ್ಪುಗಳನ್ನು ಮಾಡಿದಾಗ ಅವರ ವಿರುದ್ದವಾಗಿ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗುತ್ತದೆ. ಆಗ ಅವರಿಗೆ ತಾವು ಮಾಡಿದ ತಪ್ಪುಗಳು ಸರಿ ಎಂದೆನಿಸಿದರೂ ಸಹ ಭವಿಷ್ಯದಲ್ಲಿ ತಮ್ಮನ್ನು ತಾವೇ ಕಷ್ಟಕ್ಕೆ ಸಿಲುಕಿಸಿಕೊಂಡ ಹಾಗೆ ಆಗುತ್ತದೆ. ಹೀಗಾಗಿ ಯುವಕರಿಗೆ ಹೇಳುವುದಿಷ್ಟೇ, ನಿಮಗೆ ಯಾವುದೇ ರೀತಿಯ ತೊಂದರೆಗಳಿದ್ದಲ್ಲಿ ಕಾನೂನುಗಳ ರೀತಿಯಲ್ಲಿ ಪರಿಹಾರಗಳಿವೆ. ಆದರೆ ಕಾನೂನುಗಳನ್ನು ನೀವು ನಿಮ್ಮ ಕೈಗೆತ್ತಿಕೊಂಡು ದೂರುಗಳು ದಾಖಲಾಗಿ ನಿಮ್ಮ ಜೀವನವನ್ನು ದಯವಿಟ್ಟು ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಬಯಸುತ್ತೇನೆ.     

- ನಾಗರಾಜ

         

ನನ್ನ ಮಗ ಪೊಲೀಸ್ ಹುದ್ದೆಯಲ್ಲಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಯಾವುದಾದರೊಂದು ಸರಕಾರಿ ನೌಕರನಾಗಬೇಕು ಎಂಬುದು ನಮ್ಮ ಕನಸಾಗಿತ್ತು. ಅದನ್ನು ಅವನು ಈಡೇರಿಸಿದ. ಊರಿನವರು, ಸಂಬಂಧಿಕರು ಮಗನ ಬಗ್ಗೆ ಕೇಳಿದಾಗ ನನ್ನ ಮಗ ಪೊಲೀಸ್ ಹುದ್ದೆಯಲ್ಲಿದ್ದಾನೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ.              

- ಹೆತ್ತವರು. 


ಕಿರಿಯರಿಂದ ಹಿರಿಯರ ವರೆಗಿನ ಎಲ್ಲರನ್ನೂ ಅತ್ಯಂತ ಪ್ರೀತಿ, ಗೌರವದಿಂದ ಕಾಣುವ ವ್ಯಕ್ತಿತ್ವ ಅವರದು. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ನಿಮ್ಮ ಜೀವನವು ಸುಖ- ಸಂತೋಷದಿಂದ ಕೂಡಿರಲೆಂದು ಆಶಿಸೋಣ.               




- ಕೃತಿಕಾ ಕಣಿಯಾರು 

 ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top