Entertainment: ಬೆಕ್ಕಿನ ಕಣ್ಣಿನಲ್ಲಿ- ಇದು ಎಂಥಾ ಲೋಕವಯ್ಯಾ!

Upayuktha
0


ದು ಎಂಥಾ ಲೋಕವಯ್ಯಾ ಸಿನೆಮಾದಲ್ಲಿ ನಮಗೆ ಆಕರ್ಷಿಸುವ ಮೊದಲ ಅಂಶ ಸಿನೆಮಾದಲ್ಲಿ ಒಂದು ಪ್ರಾಣಿಯನ್ನು ಬಳಸಿಯೂ ತೋರಿಸದಂತೆ, ಅದರ ಮಹತ್ವವನ್ನು ಎತ್ತಿಹಿಡಿದರೂ, ಅದು ತೆರೆಯ ಮೇಲೆ ಕಾಣಿಸದೇ ತನ್ನ ಇರುವನ್ನು ಸಿನೆಮಾದ ಉದ್ದಕ್ಕೂ ಕಾಯ್ದುಕೊಂಡು ಬಂದಂತಹ ವಿಶಿಷ್ಟ ಶೈಲಿ. ನಾವು ರಾಜಮೌಳಿ ನಿರ್ದೇಶನದ "ಈಗ" (ಮಕ್ಕಿ) ಸಿನೆಮಾವನ್ನು ನೋಡಿರುತ್ತೇವೆ. ಅದರಲ್ಲಿ ನೊಣವನ್ನು ಒಂದು ಪಾತ್ರದಂತೆ ಚಿತ್ರಿಸಿ ಅದ್ಭುತ ಮನೋರಂಜನೆ ನೀಡಲಾಗಿದೆ. ಅಕ್ಷಯ್ ಕುಮಾರ್ ನಟನೆಯ "ಎಂಟರ್ ಟೇನ್ ಮೆಂಟ್" ಸಿನೆಮಾದಲ್ಲಿ ಸಾಕು ನಾಯಿಯನ್ನು ಬಳಸಿ ಹಾಸ್ಯಭರಿತ ಸಿನೆಮಾವನ್ನು ಹೆಣೆಯಲಾಗಿದೆ. ಕನ್ನಡದಲ್ಲಿ ಇಂತಹ ಪ್ರಯತ್ನವನ್ನು ಮಾಡಿ ಸೈ ಎನಿಸಿಕೊಂಡಿರುವುದು ಎಂಥಾ ಲೋಕವಯ್ಯಾ ಸಿನೆಮಾದ ನಿರ್ದೇಶಕ ಸಿತೇಶ್ ಸಿ ಗೋವಿಂದ್ ಜಾಣ್ಮೆ.


ಅದೊಂದು ಪುಟ್ಟ ವಠಾರ. ಆಸುಪಾಸಿನ ಮನೆ ಮಂದಿ ಒಬ್ಬೊರಿಗೊಬ್ಬರು ಪರಿಚಯಸ್ಥರು. ಜ್ಯೋತಿಷ್ಯವನ್ನು ತುಂಬಾ ನಂಬುವ ಕಂಜೂಸ್ ಗಂಡ, ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುವ ಹೆಂಡ್ತಿ, ಲವ್ ಗೆ ಬಿದ್ದಿರುವ ಅವರ ಮಗ, ಅವರ ಎದುರಿನ ಮನೆಯಲ್ಲಿಯೇ ಅವನ ಲವ್ವರ್, ಉತ್ತಮ ಮನಸ್ಸಿರುವ ಆದರೆ ಸಹಾಯಕ್ಕೆ ಹೋಗಿ ಸಾಲದ ಸುಳಿಗೆ ಸಿಕ್ಕಿಬಿದ್ದಿರುವ ಪಕ್ಕದ ಮನೆಯ ಯುವಕ, ಅನೇಕ ಆಕಾಂಕ್ಷೆಗಳನ್ನು ಇಟ್ಟುಕೊಂಡಿರುವ ಅವನ ಪತ್ನಿ, ಎದುರಿಗೆ ರೋಪ್ ಹಾಕಿದರೂ ಒಳಗೊಳಗೆ ಹೆದರುವ ವಿಲನ್, ಪರಿಸರ ಪ್ರೇಮಿ ಹೋರಾಟಗಾರ, ಅವರ ನಡುವೆ ಕಳ್ಳ ಜ್ಯೋತಿಷಿ, ಹೆಣ್ಣುಬಾಕ ಪ್ರಿನ್ಸಿಪಾಲ್, ಹುಚ್ಚನಂತೆ ಕಾಣುವ ಒಬ್ಬ ಗಂಡಸಿನ ಅಸಲಿ ಮುಖ, ಮರಳು ಮಾಫಿಯಾದ ದಗೆಕೋರ ಹೀಗೆ ಆರಂಭದಿಂದಲೇ ಸಿನೆಮಾ ಹೊಸ ಲೋಕವನ್ನು ನಮ್ಮೆದುರು ತೆರೆಯುತ್ತಾ ಹೋಗುತ್ತದೆ. ನಮ್ಮ ನಿಮ್ಮ ಹಳೆ ವಠಾರದಂತೆ ಇಲ್ಲಿಯೂ ಎಲ್ಲರಿಗೂ ಒಬ್ಬರಿಗೊಬ್ಬರ ನಡುವೆ ಪ್ರೀತಿ ಇದೆ, ಮನೆ ಕಾರ್ಯಕ್ರಮಗಳಿಗೆ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಅದರ ನಡುವೆ ಆ ವಠಾರದಲ್ಲಿ ಒಂದು ಮೆಹಂದಿ ನಡೆಯುತ್ತದೆ. ಅಲ್ಲಿ ಸಿನೆಮಾಕ್ಕೆ ಹೊಸ ಆಯಾಮ ಸಿಗುತ್ತದೆ.


ಕಥೆಯನ್ನು ಎಲ್ಲಿಯೂ ಮಿಸ್ ಮಾಡದೇ ನೋಡುತ್ತಾ ಹೋದರೆ ಇಷ್ಟು ಪಾತ್ರಗಳ ನಡುವೆ ಒಂದು ಕೊಂಡಿಯಂತೆ ಕೆಲಸ ಮಾಡುವ ಸಂಭಾಷಣೆಯೇ ಇಲ್ಲದೆಯೂ ಅನೇಕ ಕಥೆಗಳನ್ನು ಒಡಲಲ್ಲಿ ಬಚ್ಚಿಟ್ಟಂತೆ ಆಡುವ ಮಾರ್ಜಾಲವೊಂದು ಹೇಗೆ ಎಲ್ಲರ ಬದುಕಿನಲ್ಲಿ ಆಟವಾಡುತ್ತದೆ ಎನ್ನುವುದೇ ಕಥೆಯ ಜೀವಾತ್ಮ. ಪ್ರತಿ ಪಾತ್ರಕ್ಕೂ ಅದರದ್ದೇ ಮಹತ್ವವಿದೆ. ಮರದ ಕೊಂಬೆ ಕಡಿಯುವವನ ಬದುಕಿನ ಸಂಕಟ, ಆಶ್ರಮ ಕಟ್ಟಲು ಬಂದವನ ಲೋಭ, ಪೊಲೀಸ್ ಅಧಿಕಾರಿಯ ಪಾತ್ರ, ಸರಿಯಾದ ಸಮಯಕ್ಕೆ ರೋಗಿಯನ್ನು ಕರೆದುಕೊಂಡು ಬಂದು ಒಳ್ಳೆಯ ಕೆಲಸ ಮಾಡಿದ್ರಿ, ಇಲ್ಲದಿದ್ದರೆ..... ನನಗೆ ಮನೆಗೆ ಹೋಗಲು ಲೇಟ್ ಆಗುತ್ತಿತ್ತು ಎಂದು ಹೇಳುವ ವೈದ್ಯನ ಸಮಯಪ್ರಜ್ಞೆ, ತಲೆಯಲ್ಲಿ ಕೂದಲು ಇಲ್ಲದೆಯೂ ದಟ್ಟಕೇಶರಾಶಿಯ ತೈಲ ಮಾರುವ ಅಂಗಡಿಯ ಕೆಲಸದವ ಹೀಗೆ ಸಿನೆಮಾದಲ್ಲಿ ಹಾಸ್ಯವನ್ನು ಸಿಂಪಡಿಸಿದ ರೀತಿಯನ್ನು ನೋಡಿದಾಗ ಕಾಮಿಡಿ ಹೇಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ಗೊತ್ತಾಗುತ್ತದೆ. ಒಂದು ಗ್ರಾಮದಲ್ಲಿ ನಡೆಯುವ ಅಷ್ಟೂ ಘಟನೆಗಳನ್ನು ಎರಡು ದಿನದ ಒಳಗೆ ಹೇಳುತ್ತಾ, ಅದರ ನಡುವೆ ನಂಬಿಕೆ, ಮೂಢನಂಬಿಕೆಯ ಹಗ್ಗಕ್ಕೆ ಹಾಸ್ಯದ ಹೂಗಳನ್ನು ಪೋಣಿಸಿ, ಅಂತ್ಯಕ್ಕೆ ಎಲ್ಲರ ಹೊರ ಮತ್ತು ಒಳಮುಖಗಳನ್ನು ಅನಾವರಣಗೊಳಿಸುವ ಚಿತ್ರದ ಬರವಣಿಗೆ ಶಕ್ತಿಯುತವಾಗಿದ್ದ ಕಾರಣ ಚಿತ್ರ ಸಿನೆಮಾ ಹೆಚ್ಚು ಇಷ್ಟವಾಗುತ್ತದೆ. 


ಎರಡು ಹಾಡುಗಳಲ್ಲಿ ಒಂದು ಮಾಧುರ್ಯ ಮತ್ತೊಂದು ಪಾರ್ಟಿ ಸಾಂಗ್ ಅದರ ಸಾಹಿತ್ಯ ಮತ್ತು ಟ್ಯೂನ್ ಗಳಿಗಾಗಿ ಮನತಟ್ಟುತ್ತವೆ. ನಾರದ ವಿಜಯದ "ಇದು ಎಂಥಾ ಲೋಕವಯ್ಯಾ" ಹಾಡನ್ನು ಟೈಟಲ್ ಟ್ರಾಕಿನಂತೆ ಬಳಸಲಾಗಿದ್ದು, ಮಂಗಳೂರಿನ ನೆಲದ ಕಂಪನ್ನು ಹಾಗೆಯೇ ಬೊಗಸೆಯಲ್ಲಿ ಎತ್ತಿ ನಿಮ್ಮ ನೆತ್ತಿಯ ಮೇಲೆ ಸುರಿದಷ್ಟು ತಂಪೆನಿಸುತ್ತದೆ. ಬೊಂಡವನ್ನು ಕುಡಿದವನು ಕುಡುಕನಾ ಎನ್ನುವ ಸಣ್ಣ ಸಣ್ಣ ಎಳೆಗಳು ಮತ್ತು ಅದರೊಳಗಿನ ಥ್ರಿಲ್ ಅನುಭವಿಸಲು ನೀವು ಸಿನೆಮಾ ನೋಡಲೇಬೇಕು. ಯಾವುದೋ ಒಂದು ದಿನ ನಿಮ್ಮದೇ ಮನೆಯ ಕಿಟಕಿಯ ಪರದೆಯನ್ನು ಸರಿಸಿ ನೀವು ಹೊರಗೆ ಇಣುಕಿದರೆ ಹೇಗೆ ಬೇರೆ ಬೇರೆ ಲೋಕವನ್ನು ಕಾಣಬಹುದೋ ಹಾಗೆ ಇದು ಎಂಥಾ ಲೋಕವಯ್ಯಾ ಸಿನೆಮಾ ನಮ್ಮದೇ ಪಕ್ಕದ ವಠಾರದ ಕುತೂಹಲಕಾರಿ ಕಥೆ. ಒಂದು ಕೈಯಲ್ಲಿ ಪಾಪ್ ಕಾರ್ನ್ ಮೆಲ್ಲುತ್ತಾ, ಮತ್ತೊಂದು ಕೈಯಲ್ಲಿ ಪೆಪ್ಸಿ ಸಿಪ್ ಕುಡಿಯುತ್ತಾ, ಪಕ್ಕದ ಮನೆಯ ಹಜಾರದ ಕಥೆಯನ್ನು ನೋಡುವ ಮಜಾವೇ ಬೇರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top