ಶಿವಮೊಗ್ಗ : ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯ ಸಂಸ್ಥಾಪನ ದಿನದ ಅಂಗವಾಗಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ, ಕಂಕನಾಡಿ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರವು ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಆವರಣದಲ್ಲಿ ನಡೆಯಿತು.
ಈ ಆರೋಗ್ಯ ತಪಾಸಣಾ ಶಿಬಿರವನ್ನು ಬಸವ ಕೇಂದ್ರದ ಶ್ರೀ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು ಉದ್ಘಾಟಿಸಿ ಮಾತನಾಡಿದರು. "ಭಾವೈಕ್ಯತೆಯಿಂದ ಕೂಡಿದ ಆರೋಗ್ಯ ತಪಾಸಣಾ ಶಿಬಿರವನ್ನು ಸರ್ವಧರ್ಮಗಳ ಪ್ರಾರ್ಥನೆಯ ಮೂಲಕ ನಡೆಸಿರುವುದು ಸಂತೋಷಕರವಾಗಿದೆ. ನಾವೆಲ್ಲರೂ ಒಟ್ಟಾಗಿ ಸಮಾಜದಲ್ಲಿ ಒಂದೇ ಎಂಬ ಭಾವನೆಯಿಂದ ಸಾಗೋಣ. ಆರೋಗ್ಯ ಯಾವ ಜಾತಿ ಧರ್ಮದ ಸ್ವತ್ತಲ್ಲ ಎಲ್ಲರೂ ಆರೋಗ್ಯದ ಕಡೆ ಜಾಗೃತರಾಗಬೇಕು.
ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ವ್ಯಕ್ತಿಯು ಸದೃಢನಾಗಿರುತ್ತಾನೆ" ಎಂದು ಕರೆ ನೀಡಿದರು. "ಎಸ್ಎಂಎಸ್ಎಸ್ಎಸ್ ಸಂಸ್ಥೆಯು ಕಳೆದ 35 ವರ್ಷಗಳಿಂದ ಬಡವರ್ಗದ ಜನರ ಶ್ರೇಯೋಭಿವೃದ್ದಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ ಹಾಗೂ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಶಿಕ್ಷಣವನ್ನೂ ಸಹ ಸಂಸ್ಥೆಯು ನೀಡುತ್ತಿದೆ" ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿವಮೊಗ್ಗದ ಅಪರ ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀ ಅನಿಲ್ ಕುಮಾರ್ ಬೊಮ್ಮರೆಡ್ಡಿಯವರು ಮಾತನಾಡಿ "ಆರೋಗ್ಯವು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದ್ದು ಆಸ್ತಿ, ಮನೆ, ಬಂಗಾರ ಇದ್ದರೂ ಆರೋಗ್ಯ ಉತ್ತಮವಾಗಿರದಿದ್ದರೆ ಅದು ಶೂನ್ಯವಾಗುತ್ತದೆ" ಎಂದರು. ನಂತರ "ಸಂಸ್ಥೆಯು ಸಮಾಜದಲ್ಲಿ ಶಾಂತಿ, ಪ್ರೀತಿ, ನ್ಯಾಯದ ಧ್ಯೇಯದೊಂದಿಗೆ ಕಳೆದ 35 ವರ್ಷಗಳಿಂದ ಸೇವಾ ಕಾರ್ಯಗಳನ್ನು ನೀಡುತ್ತಾ ಬರುತ್ತಿರುವುದು ಅವಿಸ್ಮರಣೀಯವಾಗಿದೆ. ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಶೋಷಿತ ಜನರ ಅಭಿವೃದ್ಧಿಗೆ ಶ್ರಮಿಸುವಂತಾಗಲಿ" ಎಂದು ಶುಭ ಹಾರೈಸಿದರು.
ಈ ಶಿಬಿರದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆದಂ ರಜಾ ನಈಮಿರವರು ಮಾತನಾಡಿ "ಸರ್ವಧರ್ಮೀಯರಿಗೆ ಸಂಸ್ಥೆಯ ಸಂಸ್ಥಾಪನ ದಿನದ ಅಂಗವಾಗಿ ಮೆಗಾ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಅರ್ಥಗರ್ಭಿತವಾಗಿದೆ. ಸಂಸ್ಥೆಯು ಸೌಹಾರ್ದಯುತವಾಗಿ ಭಾವೈಕ್ಯತೆ ಮೂಡಿಸುವ ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲಾ ವರ್ಗದ ಜನರಿಗೆ ಮಾಡುವ ಕಾರ್ಯ ಅತ್ಯಂತ ಅಭೂತಪೂರ್ವವಾದುದು" ಎಂದರು.
ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗದ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಎಸ್ಎಂಎಸ್ಎಸ್ಎಸ್ ಸಂಸ್ಥೆಯ ಅಧ್ಯಕ್ಷರು ಆದ ಪರಮಪೂಜ್ಯ ಡಾ.ಫ್ರಾನ್ಸಿಸ್ ಸೆರಾವೋ.ಎಸ್.ಜೆರವರು ಮಾತನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಸೇವಾ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಆರೋಗ್ಯ ಶಿಬಿರದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಡಾ.ಉಜ್ವಲ್ ಸುವರ್ಣರವರು ಮಾತನಾಡಿ ಆಸ್ಪತ್ರೆಯಲ್ಲಿ ದೊರಕುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಶಿಬಿರದಲ್ಲಿ ಎಸ್ಎಂಎಸ್ಎಸ್ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಪಿಯುಸ್ ಡಿಸೋಜ ಹಾಗೂ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಂ.ಫಾ.ಕ್ಲಿಫರ್ಡ್ ರೋಶನ್ ಪಿಂಟೊ, ಮೇರಿ ಇಮಾಕ್ಯುಲೇಟ್ ಕಾನ್ವೆಂಟಿನ ಸುಪೀರಿಯರ್ ಸಿ.ರೀಟಾ ಶಾಂತಿ ಮುಂತಾದವರು ಉಪಸ್ಥಿತರಿದ್ದರು. ಆರೋಗ್ಯ ಶಿಬಿರದ ಕಾರ್ಯಕ್ರಮದಲ್ಲಿ ಶ್ರೀಮತಿ ಗ್ರೇಸಿಯವರು ನಿರೂಪಿಸಿ, ಶ್ರೀಮತಿ ಪ್ರಮೀಳಾರವರು ಸ್ವಾಗತಿಸಿ, ಶ್ರೀಯುತ ಜಗದೀಶ್ ರವರು ಸರ್ವರನ್ನೂ ವಂದಿಸಿದರು. ವಿಶೇಷವೆಂದರೆ ಸುಮಾರು 1200 ಕ್ಕೂ ಹೆಚ್ಚಿನ ಜನರು ಈ ಮೆಗಾ ಆರೋಗ್ಯ ತಪಾಸಣಾ ಶಿಬಿರದ ಉಪಯೋಗವನ್ನು ಪಡೆದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
