ಮನಸ್ಸನ್ನು ಸದಭಿರುಚಿಯತ್ತ ಪರಿವರ್ತಿಸುವ ಸಾಮರ್ಥ್ಯ ಯಕ್ಷಗಾನಕ್ಕಿದೆ: ಶಾಸಕ ಅಶೋಕ ಕುಮಾರ್ ರೈ

Upayuktha
0





ಪುತ್ತೂರು:ಬಾಲ್ಯದಲ್ಲಿ ಯಕ್ಷಗಾನದ ಸೊಗಸನ್ನು ಸವಿದ ಅನುಭವ ಅನನ್ಯ. ಒಂದು ಕಾಲಘಟ್ಟದ ಯಶಸ್ವೀ ತುಳು ಕಥಾನಕ ‘ಕಾಡಮಲ್ಲಿಗೆ’ ಪ್ರಸಂಗವು ತುಂಬಾ ಆಕರ್ಷಿಸಿತ್ತು. ಶಾಲಾ ಜೀವನದಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರವಹಿಸಿದ ದಿನಮಾನಗಳು ನೆನಪಾಗುತ್ತದೆ. ತಾಳಮದ್ದಳೆಯಲ್ಲಿ ಪಾತ್ರಗಳ ಮೂಲಕ ಉತ್ತಮ ವಿಚಾರವನ್ನು ಬಿತ್ತರಿಸಲು ಅವಕಾಶಗಳಿವೆ. ಉತ್ತಮ ಸಂದೇಶವನ್ನು ಕೊಡುವ ಕಥಾನಕಗಳಿವೆ. ಆಟ ಇರಲಿ, ಕೂಟ ಇರಲಿ, ಅಲ್ಲಿ ಪುರಾಣ ಪ್ರಪಂಚದ ದರ್ಶನವಾಗುವುದರಿಂದ ಕಥೆಗಳು ಬಹುಬೇಗ ಅರ್ಥವಾಗುತ್ತವೆ” ಎಂದು ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಹೇಳಿದರು.



ಅವರು ಪುತ್ತೂರಿನ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭದಲಿ ಮಾತನಾಡುತ್ತಾ, “ಮನಸ್ಸನ್ನು ಸದಭಿರುಚಿಯತ್ತ ಪರಿವರ್ತನೆಗೊಳಿಸುವ ಸಾಮರ್ಥ್ಯ ಯಕ್ಷಗಾನಕ್ಕಿದೆ.” ಎಂದರು. ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಇವರು ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಿದ್ದಾರೆ.



ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಇದರ ಮ್ಹಾಲಕರಾದ ಜಿ.ಬಲರಾಮ ಆಚಾರ್ಯರು ದೀಪಜ್ವಲನೆಯ ಮೂಲಕ ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಿಸಿದರು. ಪುತ್ತೂರು ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಅಶೋಕ ನಾಮದೇವ ಪ್ರಭು ಶುಭಾಶಂಸನೆ ಮಾಡಿದರು. ಪ್ರಗತಿಪರ ಕೃಷಿಕ ಪದ್ಯಾಣ ಗೋಪಾಲಕೃಷ್ಣ ಭಟ್ಟರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೊಳಲಿಯ ಕಲಾಪೋಷಕ, ಸಂಘಟಕ ವೆಂಕಟೇಶ ನಾವಡರಿಗೆ ‘ಕುರಿಯ ಸ್ಮೃತಿ ಗೌರವ’ ಸಲ್ಲಿಸಲಾಯಿತು.


ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟರು ಪ್ರಸ್ತಾವನೆಯೊಂದಿಗೆ ಪದ್ಯಾಣ ಗಣಪತಿ ಭಟ್ಟರ ಸಂಸ್ಮರಣೆ ಮಾಡಿದರು. ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ನಿರ್ವಹಿಸಿ ವಂದಿಸಿದರು. ಭಾಗವತ ರಮೇಶ ಭಟ್ ಪುತ್ತೂರು, ಸ್ವಸ್ತಿಕ್  ಪದ್ಯಾಣ ಸಹಕರಿಸಿದರು. 


ಸಪ್ತಾಹದ ಮೊದಲ ದಿನದ ತಾಳಮದ್ದಳೆಯ ಪ್ರಸಂಗ ‘ಭಕ್ತ ಪ್ರಹ್ಲಾದ’. 

ಕಲಾವಿದರಾಗಿ – ಎಂ.ದಿನೇಶ ಅಮ್ಮಣ್ಣಾಯ (ಭಾಗವತರು), ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್.

(ಮದ್ದಳೆ-ಚೆಂಡೆ); ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಷ್ಣು ಶರ್ಮ ವಾಟೆಪಡ್ಪು, ರಾಮ ಜೋಯಿಸ್ ಬೆಳ್ಳಾರೆ, ನಾ. ಕಾರಂತ ಪೆರಾಜೆ, ರಾಮಚಂದ್ರ ಭಟ್ ದೇವರಗುಂಡಿ ಭಾಗವಹಿಸಿದ್ದರು.


ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ಜುಲೈ 7, ರವಿವಾರ ಸಂಪನ್ನವಾಗಲಿದೆ. ಈ ಸಂದರ್ಭದಲ್ಲಿ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರೀ ಯವರಿಗೆ ಪದ್ಯಾಣ ಪ್ರಶಸ್ತಿ ಹಾಗೂ ಬಿ.ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top