ಪುತ್ತೂರು: ಒಂದೊಂದು ಕಾಲಘಟ್ಟದಲ್ಲಿ ಯಕ್ಷಗಾನವನ್ನು ಮನಸಾ ಆರಾಧಿಸಿ, ಅದನ್ನು ಜನಮಾನಸದಲ್ಲಿ ಹಬ್ಬಿಸಿದ ಅನೇಕರು ಗತಿಸಿದ್ದಾರೆ. ಅವರ ಕೊಡುಗೆಗಳು ದಾಖಲಾಗಲಿಲ್ಲ. ದಾಖಲು ಮಾಡಬೇಕಾದ ಸಂಪನ್ಮೂಲಗಳು ವಿರಳವಾಗಿದ್ದುವು. ಅವರ ಸಾಂಗತ್ಯದಲ್ಲಿದ್ದ ಬೆರಳೆಣಿಕೆಯ ಮಂದಿ ಅಂತಹ ಹಿರಿಯರನ್ನು ಜ್ಞಾಪಿಸಿ, ಹೊಸ ತಲೆಮಾರಿಗೆ ಪರಿಚಯಿಸುವುದು ಕಲೆಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬದ್ಧತೆಯಲ್ಲಿ ಮಾಡಬೇಕಾದ ಕಾಯಕವಾಗಿದೆ.” ಎಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದರು.
ಅವರು ಪುತ್ತೂರು ಸನಿಹದ ದೊಡ್ಡಡ್ಕದ ಪಾಲೆಚ್ಚಾರು ಗೋವಿಂದ ನಾಯಕರ ‘ಶಿವಕೃಪಾ ನಿವಾಸ’ದಲ್ಲಿ ಜರುಗಿದ ಕೀರ್ತಿಶೇಷ ಮದ್ದಲೆಗಾರ ಪಡುಕಾನ ತಿಮ್ಮಯ್ಯ ಆಚಾರ್ ಅವರ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಪಡುಕಾನ ತಿಮ್ಮಯ್ಯರು ಗತಿಸಿ ನಾಲ್ಕು ದಶಕದ ಹತ್ತಿರವಾದರೂ ಅವರನ್ನು ಸ್ಮರಿಸಿ ಗೌರವಿಸುವ ಮೂಲಕ ಅವರ ಶಿಷ್ಯ ಗೋವಿಂದ ನಾಯಕರು ನಿಜಾರ್ಥದ ಗುರುವಂದನೆಯನ್ನು ಸಲ್ಲಿಸಿದ್ದಾರೆ” ಎಂದರು.
ಯಕ್ಷಗಾನ ಹಿಮ್ಮೇಳದ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಅರ್ಥಧಾರಿ, ವೇಷಧಾರಿ ಗುಂಡ್ಯಡ್ಕ ಈಶ್ವರ ಭಟ್ ಜತೆಯಾಗಿ ಸಮಾರಂಭವನ್ನು ದೀಪಜ್ವಲನದ ಮೂಲಕ ಉದ್ಘಾಟಿಸಿದರು. ತಿಮ್ಮಯ್ಯ ಆಚಾರ್ ಅವರ ಚಿರಂಜೀವಿ ಕೃಷ್ಣಯ್ಯ ಆಚಾರ್ ಉಪಸ್ಥಿತರಿದ್ದರು. ಗೋವಿಂದ ನಾಯಕ್ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ದುರ್ಗಾಪ್ರಸಾದ್, ಗಣಪತಿ ನಾಯಕ್ ಅತಿಥಿಗಳನ್ನು ಗೌರವಿಸಿದರು.
ಪೂರ್ವಾಹ್ನ ದೇವತಾರಾಧನೆಯ ಜತೆಗೆ ಬಾಲ ಕಲಾವಿದರಿಂದ ಸಂಗೀತ, ಸ್ಮೃತಿ ಕಲಾಪದ ಕೊನೆಗೆ ‘ಶ್ರೀಕೃಷ್ಣ ರಾಯಭಾರ, ಸುಧನ್ವ ಮೋಕ್ಷ’ ಪ್ರಸಂಗಗಳ ತಾಳಮದ್ದಳೆಗಳು ಜರುಗಿದ್ದುವು. ಕಲಾವಿದರಾಗಿ - ಪಾಲೆಚ್ಚಾರು ಗೋವಿಂದ ನಾಯಕ್, ಶ್ರೀಪತಿ ನಾಯಕ್ ಆಜೇರು, ಶ್ರೀಮತಿ ಅಮೃತಾ ಅಡಿಗ (ಭಾಗವತರು), ಪದ್ಯಾಣ ಶಂಕರನಾರಾಯಣ ಭಟ್, ಮುರಾರಿ ಕಡಂಬಳಿತ್ತಾಯ, ಕೌಶಿಕ್ ರಾವ್ ಪುತ್ತಿಗೆ, ಕೃಷ್ಣಪ್ರಕಾಶ ಉಳಿತ್ತಾಯ, ಪಿ.ಜಿ.ಜಗನ್ನಿವಾಸ ರಾವ್, ಮುರಳೀಧರ ಕಲ್ಲೂರಾಯ, ಕೃಷ್ಣಯ್ಯ ಆಚಾರ್, ಸತ್ಯನಾರಾಯಣ ಅಡಿಗ (ಚೆಂಡೆ, ಮದ್ದಳೆ), ಪಕಳಕುಂಜ ಶ್ಯಾಮ ಭಟ್, ಗುಂಡ್ಯಡ್ಕ ಈಶ್ವರ ಭಟ್, ನಾ. ಕಾರಂತ ಪೆರಾಜೆ, ಗುಡ್ಡಪ್ಪ ಬಲ್ಯ, ಭಾಸ್ಕರ ಶೆಟ್ಟಿ ಸಾಲ್ಮರ, ಕೇಶವ ಭಟ್ ಕೇಕಣಾಜೆ, ಅಶೋಕ ಸುಬ್ರಹ್ಮಣ್ಯ ಭಟ್ಪೆ ರುವಡಿ, ಸಚ್ಚಿದಾನಂದ ಪ್ರಭು (ಅರ್ಥದಾರಿಗಳು) ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ