ಕಥೆ: ತಂಗಿಗೊಂದು ಪತ್ರ

Upayuktha
0




ಪುಟ್ಟಿ,

ನಿನ್ನನ್ನು ಬೀಳ್ಕೊಂಡು ಊರಿಗೆ ಬಂದಾಗಿನಿಂದ ನಿನ್ನದೇ ಚಿಂತೆ. ದೇಹ ಇಲ್ಲಿದೆಯಷ್ಟೇ ಮನವೆಲ್ಲಾ ನಿನ್ನ ಸುತ್ತಲೇ ತಿರುಗುತ್ತಿದೆ.

 ಅಕ್ಕ ಮತ್ತು ನನ್ನ ನಂತರ ಹುಟ್ಟಿದ ನೀನು ನಮ್ಮ ಮನೆಯ ಪುಟ್ಟ ಕೂಸು.ನಿನಗೆ ನೆನಪಿದೆಯೇ.. ಎಷ್ಟೋ ಬಾರಿ ನಿನಗೆ ಹೇಳುತ್ತಿದ್ದೆವಲ್ಲ ನೀನು ಮುಪ್ಪಿನ ಮುದುಕಿಯಾದರೂ ನಮ್ಮ ಪಾಲಿಗೆ ಪುಟ್ಟಿಯೇ ಎಂದು. ಅದೆಷ್ಟು ಚಂದವಿತ್ತು ನಮ್ಮ ಬಾಲ್ಯ. ಅದರಲ್ಲೂ ಅಪ್ಪ ಅಮ್ಮ ನಾನು ಅಕ್ಕ ಮತ್ತು ಬಹಳ ದಿನಗಳ ನಂತರ ಹುಟ್ಟಿದ ನೀನು ನಮ್ಮ ಮನೆಯ ಕಣ್ಮಣಿ,ನಮ್ಮೆಲ್ಲರ ಮಾತುಕತೆಯ ಕೇಂದ್ರಬಿಂದು ನೀನೇ ಆಗಿದ್ದೆ ಅಲ್ಲವೇ!


ದಿನಗಳು ಕಳೆದದ್ದೇ ಗೊತ್ತಾಗದಂತೆ ನಮ್ಮೆಲ್ಲರ ಬಾಲ್ಯ ಕಳೆದು ಯೌವನಕ್ಕೆ ಬಂದಿದ್ದೆವು. ಅಕ್ಕ ಮತ್ತು ನಿನ್ನನ್ನು ಒಂದೇ ಮನೆಗೆ ಮದುವೆ ಮಾಡಿ ಕೊಟ್ಟಾಗ ಅಂದುಕೊಂಡದ್ದು ಪುಟ್ಟಿಗೆ ಅಕ್ಕನ ಆಸರೆ ಇರುತ್ತದೆ ಎಂದು.ಆಕೆ ಸದಾ ನಿನ್ನನ್ನು ಕಾಯುತ್ತಾಳೆ ಎಂದು. ಅಲ್ಲಿಯೂ ನಿನ್ನ ಕುರಿತೆ ಕಾಳಜಿ.


ಮದುವೆಯಾಗಿ ಅದೆಷ್ಟೋ ವರ್ಷಗಳವರೆಗೆ ನಿನ್ನ ಮಡಿಲು ತುಂಬದೇ ಇದ್ದಾಗ ಬೇಸರವಾದರೂ ಮುಂದೆ ನಿಮ್ಮ ಮನೆ ಬೆಳಗುವ ದೀಪಕ ಹುಟ್ಟಿದಾಗ ನಮ್ಮ ಖುಷಿಗೆ ಪಾರವೇ ಇರಲಿಲ್ಲ. ನೀನು, ನಿನ್ನ ಪತಿ ಮತ್ತು ಮಗ  ಪುಟ್ಟ ಸಂಸಾರದ ಸರಿಗಮದಲ್ಲಿ ಯಾವ ಅಪಸ್ವರವು ಇಲ್ಲದೆ ಈ ಇಪ್ಪತ್ತು ವರ್ಷಗಳು ಕಳೆದು ಹೋಗಿದ್ದವು. ನಿನ್ನ ಪತಿಯ ಜೊತೆಗೆ ಅಂಗಡಿಯಲ್ಲಿ ಕೈಗೂಡುತ್ತಿದ್ದ ನೀನು ಓದಿ ಕಾಲೇಜು ಅಧ್ಯಾಪಕಿಯಾದದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿತ್ತು.


ಆದರೆ ವಿಧಿಯ ವಿಪರ್ಯಾಸ ನೋಡು... ಯಾವ ಆರೋಗ್ಯ ಸಮಸ್ಯೆಗಳಿಲ್ಲದೆ ಆರಾಮಾಗಿ ಓಡಾಡಿಕೊಂಡಿದ್ದ ನಿನ್ನ ಪತಿಯನ್ನು ಪುಟ್ಟದೊಂದು ದೈಹಿಕ ತೊಂದರೆಯ ನೆಪದಲ್ಲಿ ಒಂದು ತಿಂಗಳ ಕಾಲ ಒದ್ದಾಡಿಸಿ ತನ್ನೆಡೆಗೆ ಕರೆಸಿಕೊಂಡುಬಿಟ್ಟ ಆ ಭಗವಂತ. ಎಲ್ಲ ಆತನ ಇಚ್ಛೆ.


ಈಗಾಗಲೇ 20 ದಿನಗಳು ಉರುಳಿ ಹೋದವು. ಮೊನ್ನೆಯ ದಿನ ನಿನ್ನನ್ನು ನಾನು ನೋಡಲು ಬಂದಾಗ ಅಮ್ಮನೊಂದಿಗೆ ಒಳಕೋಣೆಯಲ್ಲಿ "ಅಮ್ಮ ನನ್ನನ್ನು ಯಾಕೆ ಹೆತ್ತೆ ನೀನು? ಇಬ್ಬರು ಮಕ್ಕಳಿದ್ರಲ್ವಾ ನಿನಗೆ? ಎಂದು ನೀನಂದ ಮಾತುಗಳು ನನ್ನ ಕಣ್ಣಂಚಿನಲ್ಲಿ ನೀರು ತರಿಸಿದರೆ "ನಾನು ಯಾರಿಗಾಗಿ ಬದುಕಿರಲಿ" ಎಂದು ನೀನು ಅತ್ತಾಗ ನನ್ನ ಎದೆಗೆ ಶೂಲದಿಂದ ಇರಿದಂತಹ ನೋವು.


ನಿಜ ಪುಟ್ಟಿ ನಿನಗಾದ ನಷ್ಟವನ್ನು ನಾವ್ಯಾರೂ ತುಂಬಿಕೊಡಲು ಸಾಧ್ಯವಿಲ್ಲ. ನಮ್ಮೆಲ್ಲಾ ಪ್ರಯತ್ನಗಳ ಹೊರತಾಗಿಯೂ ಭಾವನಂತಹ ಒಳ್ಳೆಯ ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು ಈಗಲೂ ಕಾಡುತ್ತದೆ. ವಿಧಿಯ ಮುಂದೆ ನಾವೆಷ್ಟರವರು?


ಪುಟ್ಟಿ, ಈ ಜಗತ್ತಿಗೆ ಕಾಲಿಡುವಾಗಲು ಒಬ್ಬರೇ  ಸಾಯುವಾಗಲೂ ಅಷ್ಟೇ. ನಾವಾರೂ ಇಲ್ಲಿ ಶಾಶ್ವತವಾಗಿ ಇರಲು ಬಂದವರಲ್ಲ.ತುಸು ಬೇಗನೇ ಭಾವನ ಸರದಿ ಬಂದಿದೆ, ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸುಗಳು ಇನ್ನೂ ತಯಾರಾಗಿಲ್ಲ ಎಂಬುದು ನಿಜವಾದರೂ ಒಪ್ಪಲೇ ಬೇಕಾದಂತಹ ಅನಿವಾರ್ಯತೆ ನಮ್ಮೆಲ್ಲರದು. ಸಮಯ ಎಲ್ಲ ಸಂಕಟ, ನೋವು ಮನದಾಳದ ಗಾಯವನ್ನು ಮರೆಸುತ್ತದೆ....ಮರೆಯಬೇಕು ಕೂಡ. ಇದುವೇ ಜೀವನ ಅಲ್ವೇ  ಪುಟ್ಟಿ.


ನೀನು ಅಂದು ಹೇಳಿದ ಇನ್ನೊಂದು ಮಾತು ನಾನು ಯಾರಿಗಾಗಿ ಬದುಕಿರಲಿ ಎಂದು ಅಲ್ವೇ ಪುಟ್ಟಿ.. ನೀನು ನಿನ್ನನ್ನು ಪ್ರೀತಿಸುವ ಅಪ್ಪ, ಅಮ್ಮ, ಅಕ್ಕ ಮತ್ತು ನಮ್ಮೆಲ್ಲರಿಗಾಗಿ ಬದುಕಬೇಕು. ನಿನ್ನ ಮತ್ತು ಭಾವನ ಪ್ರೀತಿಯ ದ್ಯೋತಕವಾದ ದೀಪಕನಿಗಾಗಿ ಬದುಕಬೇಕು, ನಿನಗಾಗಿ ಬದುಕಬೇಕು.


ಈ ಬದುಕು ಒಂದು ರೈಲಿನ ಪಯಣದಂತೆ... ನಾವೆಲ್ಲರೂ ಪಯಣಿಗರು. ಆ ದೇವರು ನಿಗದಿಪಡಿಸಿ ದಂತೆ ನಮ್ಮ ಪಯಣ ಪ್ರಾರಂಭವಾಗಿ ಅಲ್ಲಿಗೆ ಎಲ್ಲ ಸಂಬಂಧಗಳು ಜೊತೆಯಾಗಿ ನಮ್ಮ ನಮ್ಮ ನಿಲುಗಡೆ ಬರುವವರೆಗೆ ತುಸು ದೂರ ಜೊತೆಯಾಗಿ ಸಾಗುತ್ತೇವೆ. ಅವರವರ ಸರದಿ ಬಂದಾಗ ಪಯಣವನ್ನು ಮುಗಿಸಿ ಇಳಿಯಲೇಬೇಕು.... ಶಿಕ್ಷಕಿಯಾದ ನಿನಗೆ ಇದು ಗೊತ್ತಿಲ್ಲದ್ದೇನಲ್ಲ.


ಇದುವರೆಗೂ ಮಗಳಾಗಿ, ಸೋದರಿಯಾಗಿ, ಪತ್ನಿಯಾಗಿ ನಿನ್ನ ಕರ್ತವ್ಯಗಳನ್ನು ನೀನು ನಿಭಾಯಿಸಿರುವೆ.... ಇದೀಗ ನೀನು ತಾಯಿಯಾಗಿ ಮಾತ್ರವಲ್ಲ, ತಂದೆಯಾಗಿಯೂ ಕೂಡ ದೀಪಕನ ಜವಾಬ್ದಾರಿಯನ್ನು ಹೊರಬೇಕು. ಆತನಿಗೆ ಒಳ್ಳೆಯ ಶಿಕ್ಷಣ, ಬದುಕನ್ನು ಕೊಡುವ ಮಹತ್ತರ ಹೊಣೆಗಾರಿಕೆ ಕೇವಲ ನಿನ್ನದು ಮಾತ್ರ. ಎಂದಿನಂತೆ ನಿನ್ನ ಬೆನ್ನ ಹಿಂದೆ ನಿನಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ನಿನ್ನ ಅಣ್ಣ ಇದ್ದೇ ಇರುತ್ತಾನೆ. 


ದೀಪಕನ ಸೋತ ಮೊಗದಲ್ಲಿ ಸಮಾಧಾನದ ನಗು ಮೂಡಿಸಲು ನಿನ್ನ ಚೇತರಿಕೆಯ ಅಗತ್ಯವಿದೆ. ಭಾವನ ಜೊತೆಗಿನ ಒಡನಾಟ ನಮ್ಮೆಲ್ಲರ ಸ್ಮೃತಿಯಲ್ಲಿ ಮಧುರ ನೆನಪಾಗಿ ಉಳಿಯಲಿ. ನಿನ್ನ ನೋವನ್ನು ಮರೆಸುವ ಶಕ್ತಿಯನ್ನು ಆ ಭಗವಂತ ನಿನಗೆ ಕೊಡಲಿ ಎಂದು ಅನವರತ ಪ್ರಾರ್ಥಿಸುವ ಅಪ್ಪ ಅಮ್ಮನಿಗಾಗಿಯಾದರೂ ನೀನು ಸುಧಾರಿಸಿಕೊಳ್ಳಲೇಬೇಕು.... ವಯೋ ಸಹಜ ಅಶಕ್ತತೆಯ ಜೊತೆಗೆ ನಿನ್ನ ಬದುಕು ಹೀಗಾಗಿ ಹೋಯಿತು ಎಂಬ ನೋವು ಅವರನ್ನು ಮತ್ತಷ್ಟು ಹಣ್ಣಾಗಿಸಿದೆ. ಅವರ ನೋವಿನ ನಿಟ್ಟುಸಿರುಗಳನ್ನು ಸಮಾಧಾನ ಚಿತ್ತಕ್ಕೆ ತಿರುಗಿಸುವ ಶಕ್ತಿ ಕೇವಲ ನಿನ್ನ ಚೇತರಿಕೆಯಲ್ಲಿದೆ. 


ಸಾವು ನಿನ್ನನ್ನು ಸಮೀಪಿಸುವ ಮುನ್ನ ಸಾಯುವ ಮಾತಾಡಬೇಡ ಪುಟ್ಟಿ, ಮನಸ್ಸಿಗೆ ತುಂಬಾ ಸಂಕಟವಾಗುತ್ತದೆ. ಬದುಕು ನಮಗೆ ಬಹಳಷ್ಟನ್ನು ಕೊಡುತ್ತದೆ, ಒಂದಷ್ಟನ್ನು ಕಸಿದುಕೊಳ್ಳುತ್ತದೆ. ಭಾವನನ್ನು ಕಳೆದುಕೊಂಡಿರುವ ನೀನು ಮಾನಸಿಕವಾಗಿ ಸೋತಿರುವೆ, ಆದರೆ ಸತ್ತಿಲ್ಲ.

ಜೀವನದ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿರುವ ನೀನು ಮತ್ತೆ ಸಶಕ್ತಳಾಗಿ  ದೀಪಕನ ಬದುಕಿನ ಭವಿಷ್ಯಕ್ಕೆ ಬೆಳಕಿನ ಹಾದಿಯನ್ನು ತೋರು. ನಿನ್ನ ಮುಂದೆ ನಿನ್ನ ಮತ್ತು ನಿನ್ನ ಮಗನ ಭವಿಷ್ಯವಿದ್ದರೆ, ನಿನ್ನ ಹಿಂದೆ ಅಪಾರ ಬಂದು ಬಳಗದ ಪ್ರೀತಿ ವಿಶ್ವಾಸಗಳ ಬೆಂಬಲವಿದೆ.

ಬೇಗನೆ ಚೇತರಿಸಿಕೊಂಡು ನಿನ್ನ ಮಗನ ಭವಿಷ್ಯದ  ಕನಸುಗಳ ಚಿತ್ತಾರಕೆ ಬಣ್ಣ ತುಂಬು. ಆತನ ಭವಿತವ್ಯದ  ರೆಕ್ಕೆಗಳಿಗೆ ಕಸುವು ತುಂಬು ಎಂದು ನಿನ್ನನ್ನು ಆಗ್ರಹಿಸುವೆ.


 ಇಂತಿ ನಿನ್ನನ್ನು ಪ್ರೀತಿಸುವ 

 ನಿನ್ನ  ಅಣ್ಣ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top