ಶೇ. 75ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಹೆಚ್ಚಿನ ಪಿಂಚಣಿಗೆ ಆಗ್ರಹ-ವೈ.ಎಂ. ಸತೀಶ್

Upayuktha
0


ಬೆಂಗಳೂರು:
ಕರ್ನಾಟಕದಲ್ಲಿರುವ ವಿಕಲಚೇತನರುಗಳಿಗೆ ಪಿಂಚಣಿಯನ್ನು ಹೆಚ್ಚಿಸಿ ಅವರಿಗೂ ಮತ್ತು ಅವರ ಕುಟುಂಬಕ್ಕೂ ಮಾನವೀಯತೆ ಆಧಾರದ ಮೇಲೆ ಆರ್ಥಿಕವಾಗಿ ನೆರವಾಗಲು ವಿಧಾನಪರಿಷತ್ಸ ದಸ್ಯ ವೈ. ಎಂ. ಸತೀಶ್ ಅವರು ವಿಧಾನಪರಿಷತ್ತಿನಲ್ಲಿ ಬುಧವಾರ ಧ್ವನಿ ಎತ್ತಿದ್ದಾರೆ.


ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿಕಲಚೇತನರಿಗೆ ಪಿಂಚಣಿ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ಪಾಲು 4854 ಲಕ್ಷ ರೂಪಾಯಿಗಳು ಮತ್ತು ರಾಜ್ಯದ ಪಾಲು 388935.95 ಲಕ್ಷ ರೂಪಾಯಿ ಸೇರಿ ಒಟ್ಟು 393789.95 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದರು.


ಶೇ. 40 ರಿಂದ 75 ರಷ್ಟು ಅಂಗವಿಕಲತೆ ಇರುವವರಿಗೆ ಮಾಸಿಕ 800 ರೂಪಾಯಿ, ಶೇ. 75 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಇರುವವರಿಗೆ 1400 ರೂಪಾಯಿ ಮತ್ತು ಶೇ. 75 ರಷ್ಟು ಮನೋವೈಕಲ್ಯತೆ ಇರುವವರಿಗೆ 2000 ರೂಪಾಯಿಯನ್ನು ಪಿಂಚಣಿಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು. ಆಗ, ವೈ.ಎಂ. ಸತೀಶ್ ಅವರು, ಶೇ. 75 ರಷ್ಟು ಮನೋವೈಕಲ್ಯತೆಯನ್ನು ಹೊಂದಿರುವ ಮತ್ತು ಈ ಪ್ರಮಾಣಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗಳಿಗೆ ಹಾಗೂ ವಿಕಲಚೇತನರಿಗೆ ಮಾನವೀಯತೆಯ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.


ಈ ಕುರಿತು ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಜೆಟ್ ಪೂರ್ವದಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಸದನಕ್ಕೆ ಸ್ಪಷ್ಟಪಡಿಸಿದರು.


ಬಳ್ಳಾರಿ-ವಿಜಯನಗರ ತಾಲೂಕುಗಳಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ ವೈ.ಎಂ. ಸತೀಶ್ ಆಗ್ರಹ:- ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಮತ್ತು ವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲಿ ತಾಲೂಕು ಮಟ್ಟದ ಆಡಳಿತ ಸೌಧಗಳ ಅಗತ್ಯವಿದ್ದು, ಆದಷ್ಟು ಶೀಘ್ರದಲ್ಲಿ ಎಲ್ಲಾ 11 ತಾಲೂಕುಗಳಲ್ಲಿ ತಾಲೂಕು ಆಡಳಿತ ಸೌಧಗಳ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್  ಅವರು ಆಗ್ರಹಿಸಿದ್ದಾರೆ.


ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಕೊಟ್ಟೂರು ತಾಲೂಕಿನ ಒಟ್ಟು 2.61 ಎಕರೆ ಪ್ರದೇಶದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಸ್ಥಳವನ್ನು ಗುರಿತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆ ಸರ್ಕಾರದಲ್ಲಿ ಸ್ವೀಕೃತವಾಗಿದೆ ಎಂದರು. 


ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಮತ್ತು ಸಂಡೂರು ತಾಲೂಕುಗಳಲ್ಲಿ ತಾಲೂಕು ಆಡಳಿತಸೌಧಗಳಿವೆ. ಕಂಪ್ಲಿ ಮತ್ತು ಕುರುಗೋಡು ತಾಲೂಕುಗಳಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉತ್ತರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top