ನಿನ್ನ ಬದುಕಿನ ಶಿಲ್ಪಿ ನೀನೆ

Upayuktha
0

 


ಕೆಲ ವರ್ಷಗಳ ಹಿಂದೆ ನನ್ನ ತರಗತಿಗೆ ಅಡ್ಮಿಶನ್ ಮಾಡಿಸಲು ಓರ್ವ ಹೆಣ್ಣು ಮಗಳು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕರೆತಂದರು. ಆಕೆ ನನ್ನನ್ನು ಮೊದಲು ಕೇಳಿದ ಪ್ರಶ್ನೆ ಮೇಡಂ 'ನೀವು ಚೀಟಿ ಮಾಡ್ತೀರಾ' ಅಂತ. ಕಕ್ಕಾಬಿಕ್ಕಿಯಾದ ನಾನು ಇಲ್ಲಪ್ಪ ಅಂತದೇನು ಇಲ್ಲ ಎಂದು ಹೇಳಿದೆ.


ಚಿಕ್ಕವಳಿಗೆ ಹೋಲಿಸಿದರೆ  ದೊಡ್ಡ ಮಗಳು ಸ್ವಲ್ಪ ವೀಕ್... ಅವಳಿಗೆ ಏನು ಅರ್ಥನೇ ಆಗಲ್ಲ ಮೇಡಂ ಎಂದು ಆಕೆ ಅಲವತ್ತುಕೊಂಡರು. ಕೂಡಲೇ ನಾನು ಹಾಗೆ ಒಬ್ಬರನ್ನು ಮತ್ತೊಬ್ಬರಿಗೆ ಕಂಪೇರ್ ಮಾಡೋಕೆ ಆಗಲ್ಲ. ಖಂಡಿತವಾಗಿಯೂ ಆಕೆ ಇಂಪ್ರೂವ್ ಆಗ್ತಾಳೆ ಎಂದು ಹೇಳಿದೆ. 


ದೊಡ್ಡ ಹುಡುಗಿಗೆ ಆತ್ಮವಿಶ್ವಾಸದ ಕೊರತೆ ಮತ್ತು ಕೊಂಚ ಭರವಸೆಯ ಅವಶ್ಯಕತೆ ಇತ್ತು. ಮಕ್ಕಳನ್ನು ತುಸು ಹೆಚ್ಛೇ ಪ್ರೀತಿಸುವ ಅವರಲ್ಲಿ ಜೀವನ ಪ್ರೀತಿಯನ್ನು ಹೊಮ್ಮಿಸುವ ಮಹತ್ವಾಕಾಂಕ್ಷೆ ನನ್ನದು. ಮುಂದಿನ ಕೆಲವೇ ತಿಂಗಳಲ್ಲಿ ನಾನು ಕಲಿಸುತ್ತಿದ್ದ ಅಬಾಕಸ್ ನ ಪ್ರಾಂತ ಮಟ್ಟದ ಸ್ಪರ್ಧೆ ಬಳ್ಳಾರಿಯಲ್ಲಿ ನಡೆಯುತ್ತಿತ್ತು. ಸುಮಾರು ಎರಡೂವರೆ ಸಾವಿರ ಮಕ್ಕಳು ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ ಮೊದಲನೇ ಲೆವೆಲ್ ನ ಎಂಟರಿಂದ 13 ವರ್ಷದ ಮಕ್ಕಳ ವಿಭಾಗದಲ್ಲಿ ನನ್ನ ಸಂಸ್ಥೆಯ ಆರು ಮಕ್ಕಳು ಮೊದಲ ರನ್ನರ್ ಅಪ್ ಸ್ಥಾನವನ್ನು ಅದರಲ್ಲೂ ವಿಶೇಷವಾಗಿ ಆ ಇಬ್ಬರು ಸಹೋದರಿಯರು ಪಡೆದರು.ತನ್ನ ಪ್ರಶಸ್ತಿ ಸ್ವೀಕರಿಸಿ ಓಡಿ ಬಂದ ದೊಡ್ಡ ಹುಡುಗಿ ನನ್ನನ್ನು ತಬ್ಬಿಕೊಂಡು ಅತ್ತರೆ  ನಂತರ ತನ್ನ ಪ್ರಶಸ್ತಿಯನ್ನು ಹಿಡಿದು ಬಂದ ತಂಗಿ ಕೂಡ ಮ್ಯಾಮ್ ನಮ್ಮಕ್ಕನಿಗೂ ಪ್ರಶಸ್ತಿ ಬಂತು ಅಂತ ಖುಷಿಯಿಂದ ತಬ್ಬಿಕೊಂಡಾಗ ನನಗೆ ಗಂಟಲುಬ್ಬಿ ಮಾತೇ ಬರಲಿಲ್ಲ. ಶಿಕ್ಷಕನ ಶ್ರಮಕ್ಕೆ ಸಾರ್ಥಕತೆ ಬರುವುದು ಇಂಥ ಕ್ಷಣಗಳಲ್ಲಿಯೇ ಅಲ್ಲವೇ??


ಊರಿಗೆ ನಾವು ಮರಳಿದ ನಂತರ ಆಕೆಯ ತಾಯಿ ಬಸ್ ನ ತುಂಬಾ ಪ್ರಶಸ್ತಿಗಳನ್ನು ಹೊತ್ತು ತಂದಿದ್ದೀರಿ ಎಂದು ಅಪಾರ ಖುಷಿ ಪಟ್ಟರಲ್ಲದೆ ಮರುದಿನ ನಮ್ಮ ಶಿಕ್ಷಕರ ಬಳಗಕ್ಕೆ ಅಭಿಮಾನದಿಂದ ಸನ್ಮಾನಿಸಿದರು. ನನ್ನ ಅತ್ಯಂತ ಆಪ್ತ ವಿದ್ಯಾರ್ಥಿನಿಯರಲ್ಲಿ ಒಬ್ಬಳಾದ ಆಕೆಯ ಯಶಸ್ಸಿನ  ಓಟ ಅಂದಿನಿಂದ ಪ್ರಾರಂಭವಾಯಿತು.


ಮುಂದೆ ಆಕೆ ಅತ್ಯಂತ ಆತ್ಮವಿಶ್ವಾಸದಿಂದ ಶಾಲೆಯ ನೃತ್ಯ ಸ್ಪರ್ಧೆ,ಭಾಷಣ ಸ್ಪರ್ಧೆ, ಪ್ರಬಂಧ ಲೇಖನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಅದಕ್ಕೆ ಬೇಕಾದ ಆಕರಗಳನ್ನು ನನ್ನಿಂದ ಸಂಗ್ರಹಿಸಿ ಪ್ರಸ್ತುತಪಡಿಸುತ್ತಿದ್ದಳು. 


ನಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಪುಣೆಯ ಅಖಿಲ ಭಾರತೀಯ ಸಾಂಸ್ಕೃತಿಕ ಸಂಘದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಜಾನಪದ ವಿಭಾಗದಲ್ಲಿ ಇಡೀ ದೇಶಾದ್ಯಂತ 50ಕ್ಕೂ ಹೆಚ್ಚು ಜಾನಪದ ನೃತ್ಯ ತಂಡಗಳು ಇದರಲ್ಲಿ ಭಾಗವಹಿಸಿದ್ದವು.ಅವುಗಳ ಪೈಕಿ ನಮ್ಮ ನೃತ್ಯ ಸಂಸ್ಥೆಯು ಮೂರನೇ ಸ್ಥಾನವನ್ನು ಗಳಿಸಿದಾಗ ನಮ್ಮ ವಿದ್ಯಾರ್ಥಿಗಳ ಗುಂಪಿನಲ್ಲಿ ಆಕೆಯೂ ಒಬ್ಬಳಾಗಿದ್ದಳು. ಇದರ ಜೊತೆ ಜೊತೆಗೆ ಕಥಕ್ ನೃತ್ಯವನ್ನು ಕೂಡ ಕಲಿತಿದ್ದ ಆಕೆ ನಮ್ಮ ನೃತ್ಯ ತಂಡದ ಮುಖ್ಯ ಭಾಗವಾಗಿ ಹಲವಾರು ಪ್ರದರ್ಶನಗಳನ್ನು ಕೂಡ ನೀಡಿದಳು.


ಮುಂದೆ ಪಿಯುಸಿ ಓದುತ್ತಿರುವಾಗಲೂ ಕೂಡ ಇಂಟರ್ ಕಾಲೇಜ್ ಡಿಬೇಟ್ ಕಾಂಪಿಟೇಶನ್ ನಲ್ಲಿ ಇಡೀ ತಾಲೂಕಿನ ಸುಮಾರು 14 ಕಾಲೇಜುಗಳ ಪೈಕಿ ಮೊದಲನೆಯವಳಾಗಿ ಆಯ್ಕೆಯಾದಳು. ಅದೆಷ್ಟೇ ನಾನು ಅಡುಗೆ ಮನೆಯಲ್ಲಿ, ಇಸ್ತ್ರಿ ಮಾಡುತ್ತಾ, ಮನೆಕೆಲಸದಲ್ಲಿ ನಿರತಳಾಗಿದ್ದರೂ ಕೂಡ ಹಠ ಮಾಡಿ ನನ್ನ ಬಳಿ ತನ್ನ ಸ್ಪರ್ಧೆಯ ವಿಷಯಗಳನ್ನು ಹೇಳಿಸಿ ಬರೆದುಕೊಳ್ಳುತ್ತಿದ್ದ ಆಕೆಯಿಂದಾಗಿ ನಾನು ಕೂಡ ಕೆಲ ವಿಷಯಗಳನ್ನು ಓದಿ ಅರಿಯುವಂತಾಯಿತು.


ಮುಂದೆ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಆಕೆ ಇದೀಗ ಆಯುರ್ವೇದ ವೈದ್ಯ ವಿಜ್ಞಾನದ ಅಂತಿಮ ವರ್ಷದ ವಿದ್ಯಾರ್ಥಿನಿ. ಇದರ ಜೊತೆಗೆ ಇಡೀ ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ನಡೆಸಿದ ಯುವ ಭಾರತ ಕಾರ್ಯಕ್ರಮದ ನೃತ್ಯ ಸ್ಪರ್ಧೆಯಲ್ಲಿ ತನ್ನ ಕಾಲೇಜನ್ನು ಪ್ರತಿನಿಧಿಸಿ ದಕ್ಷಿಣ ಭಾರತದಿಂದ ಹೋಗಿ ಉತ್ತರ ಭಾರತದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ನೃತ್ಯ ಪ್ರದರ್ಶನವನ್ನು ತನ್ನ ತಂಡದೊಂದಿಗೆ ನೀಡಿದ್ದಾಳೆ. ಇದರ ಜೊತೆ ಜೊತೆಗೆ ಕಾಲೇಜಿನಲ್ಲಿ ನಡೆಯುವ ಎಲ್ಲಾ ಪ್ರಮುಖ ಕಾರ್ಯಕ್ರಮಗಳಲ್ಲಿ ವೇದಿಕೆ ನಿರ್ವಹಣೆ, ನಿರೂಪಣೆ ಮುಂತಾದ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾಳೆ.


 ಆಕೆಯಲ್ಲಿ ಭರವಸೆ ನಾನು ತುಂಬಿದ್ದೇನೆ ಎಂದು ಹೇಳಿದರೆ ತಪ್ಪಾದೀತು.... ಅದೆಷ್ಟೇ ಸಲಿಗೆಯಿಂದ ಬೈದರೂ, ತಮಾಷೆ ಮಾಡಿದರೂ ತನ್ನ ಕಪಿ ಚೇಷ್ಟೆಯಿಂದ ನಮ್ಮನ್ನೆಲ್ಲ ನಗಿಸುತ್ತಿದ್ದ ಆಕೆ ಎಷ್ಟೋ ಬಾರಿ ವಿಷಯದ ಅರಿವಿಲ್ಲದೆ ಇದ್ದರೂ ಕೂಡ ಛಲದಿಂದ ಕಲಿಸಿಕೊಂಡು, ಬರೆದುಕೊಡಲೇಬೇಕೆಂದು ಆಗ್ರಹಿಸಿ,ಬರೆಸಿಕೊಂಡುದನ್ನು ಚಾಚೂ ತಪ್ಪದೇ ಕಲಿತು ಭಾಷಣ,ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ  ಪ್ರಶಸ್ತಿ ಗಳಿಸುತ್ತಿದ್ದುದು ಇಂದಿಗೂ ಕಣ್ಣ ಮುಂದೆ ಕಟ್ಟಿದಂತಿದೆ. ಬಹುಶಃ ನಿನ್ನ ಬದುಕಿನ ಶಿಲ್ಪಿ ನೀನೆ ಎಂಬುದಕ್ಕೆ ಆಕೆ ಉದಾಹರಣೆಯಾಗಬಲ್ಲಳು.


ಸ್ನೇಹಿತರೆ ಮಕ್ಕಳು ಬಯಸುವುದು ತುಸು ಬೆಚ್ಚಗಿನ ತಾಯಿ ಪ್ರೀತಿ, ಭರವಸೆ,ನಂಬಿಕೆ ಮತ್ತು ಅಪಾರ ವಿಶ್ವಾಸವನ್ನು ತುಂಬುವ ಶಿಕ್ಷಕರನ್ನು... ಅಂತಹ ಶಿಕ್ಷಕರಿಗೆ ನನ್ನ ನಮನಗಳು.

 

ಇನ್ನೇನು ಕೆಲವೇ ದಿನಗಳಲ್ಲಿ ವೈದ್ಯಕೀಯ ಸೇವೆಗೆ ಪಾದಾರ್ಪಣೆ ಮಾಡಲಿರುವ ಆಕೆಗೆ ಮನದುಂಬಿ ಶುಭವಾಗಲಿ ಎಂದು ಹರಸುವೆ. 


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top