ವನಿತಾ ಕಥನ-5: ಭರತನ ಮಾತೆ "ಕೈಕೇಯಿ"

Upayuktha
0


ರಾಮಾಯಣದ ಸ್ತ್ರೀಯರಲ್ಲಿ ತಿರಸ್ಕಾರಕ್ಕೆ ಒಳಗಾಗುವ ಹಾಗೂ ಕೆಟ್ಟ ಸ್ತ್ರೀ ಎಂಬ ಮಾತಿಗೆ ಗುರಿಯಾಗುವವಳು ಭರತನ ಮಾತೆ ಕೈಕೇಯಿ. ದಶರಥ ಮಹಾರಾಜನ ಮೂವರು ಪತ್ನಿಯರಲ್ಲಿ ಮೂರನೆಯವಳು ಕೈಕೇಯಿ. ದಶರಥ ಮಹಾರಾಜನಿಗೆ ಕೌಸಲ್ಯ ಮತ್ತು ಸುಮಿತ್ರಾಳಿಂದ ಸಂತಾನ ಭಾಗ್ಯ ದೊರೆಯದೆ ಹೋದಾಗ ಕೈಕೆಯ ರಾಜ್ಯದ ರಾಜಕುಮಾರಿ ಅಶ್ವಪತಿ ಮಹಾರಾಜನ ಮಗಳು ಕೈಕೇಯಿಯೊಂದಿಗೆ ದಶರಥನ ವಿವಾಹವಾಗುತ್ತದೆ. ಕೈಕೇಯಿ ಹುಟ್ಟಿದ ಕೆಲವೇ ಸಮಯದಲ್ಲಿ ಅವಳ ತಾಯಿಯು ನಿಧನಳಾದ ಕಾರಣ ಸಣ್ಣ ಮಗು ಇದ್ದಾಗಿನಿಂದ ಮಂಥರೆ ಎಂಬ ದಾಸಿಯು ಅವಳನ್ನು ಬೆಳೆಸಿರುತ್ತಾಳೆ. ಕೈಕೇಯಿಗೆ ಅವಳಿ ಸಹೋದರ ಯುದ್ಧಜಿತ್ ನೊಂದಿಗೆ ಒಟ್ಟು 7 ಜನ ಸಹೋದರರು ಇರುತ್ತಾರೆ.


ಕೈಕೇಯಿ ರಾಜಕುಮಾರಿಯಾಗಿ ಬೆಳೆದ ಕಾರಣ ಅವಳು ಚಾಣಾಕ್ಷಳು, ಬುದ್ದಿವಂತಳು, ಸಕಲ ವಿದ್ಯೆಗಳನ್ನು ಬಲ್ಲವಳು ಆಗಿದ್ದಳು. ಅವಳ ಸ್ವಭಾವ ಹಠಮಾರಿ ಹಾಗೂ ಸ್ವಾರ್ಥದ ಗುಣಗಳು ಕೂಡ ಇದ್ದವು. ಅವಳಿಗೆ ಸಿಟ್ಟು ಬೇಗ ಬರುತ್ತಿತ್ತು. ಮೂವರು ರಾಣಿಯರ ಮಧ್ಯದಲ್ಲಿ ರಾಜನು ತನಗೆ ಹೆಚ್ಚು ಮಹತ್ವ ನೀಡಬೇಕು ಎಂಬ ಹಠವೂ ಇದ್ದಿತು. ಅವಳಿಗೆ ಎಲ್ಲ ರೀತಿಯಲ್ಲಿ ಉತ್ತಮಳಾಗಿದ್ದ ಕೌಸಲ್ಯೆಯ ಬಗೆಗೆ ಅತೀವ ಮತ್ಸರ ಇದ್ದಿತು. ಅವಳ ರೂಪ ಗುಣಗಳಿಂದ ರಾಜನಿಗೆ ಪ್ರಿಯಳಾದ ರಾಣಿಯೂ ಆಗಿದ್ದಳು. ಕೈಕೇಯಿಯನ್ನು ವಿವಾಹವಾದ ನಂತರವೂ ದಶರಥ ಮಹಾರಾಜನಿಗೆ ಮಕ್ಕಳು ಆಗದ ಕಾರಣ, ಗುರು ವಸಿಷ್ಠರು ಋಷ್ಯಶೃಂಗರ ಮೂಲಕ ಪುತ್ರಕಾಮೇಷ್ಠಿ ಯಾಗವನ್ನು ಮಾಡುವ ನಿರ್ಧಾರ ಮಾಡಲಾಗುತ್ತದೆ. ಯಾಗದ ಸಮಯದಲ್ಲಿ ಸಂತುಷ್ಟನಾದ ಯಜ್ಞ ಪುರುಷನು ಪ್ರಸಾದದ ರೂಪದಲ್ಲಿ ಪಾಯಸವನ್ನು ಕೊಟ್ಟಾಗ ದಶರಥನು ತನ್ನ ಮೂವರು ರಾಣಿಯರಲ್ಲಿ ಸಮನಾಗಿ ಪಾಯಸವನ್ನು ಹಂಚುತ್ತಾನೆ. ಕೌಸಲ್ಯಳಿಗೆ ರಾಮನು, ಸುಮಿತ್ರಾಳಿಗೆ ಲಕ್ಷ್ಮಣ ಶತ್ರುಘ್ನರು ಹಾಗೂ ಕೈಕೇಯಿಗೆ ಭರತರು ಜನಿಸುತ್ತಾರೆ. ಕೈಕೇಯಿಯು ವಾತ್ಸಲ್ಯ ಮಯಿ ತಾಯಿಯೇ ಆಗಿದ್ದಳು. ರಾಮ ಮತ್ತು ಭರತರಲ್ಲಿ ಯಾವುದೇ ಭೇದ ಭಾವ ಮಾಡದೇ ಸಮನಾಗಿ ಪ್ರೀತಿಸುತ್ತಿದ್ದಳು. ಎಲ್ಲರಿಗೂ ಪ್ರೀತಿ ಪಾತ್ರನಾದ ರಾಮನು ಕೈಕೇಯಿಯ ವಾತ್ಸಲ್ಯಕ್ಕೆ ಪಾತ್ರನಾಗಿದ್ದಾನು. 

ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮಿಥಿಲೆಯ ರಾಜಕುಮಾರಿಯರೊಂದಿಗೆ ವಿವಾಹದ ನಂತರ ಭರತನು ಸೋದರ ಮಾವನೊಂದಿಗೆ ಕೈಕೆಯ ದೇಶಕ್ಕೆ ಹೋಗುತ್ತಾನೆ. ಆ ಸಮಯದಲ್ಲಿ ರಾಮನ ಪಟ್ಟಾಭಿಷೇಕದ ಚರ್ಚೆ ನಡೆದಾಗ ದಶರಥನಿಗೆ ಕೈಕೇಯಿ ಒಪ್ಪದೇ ಹೋದರೆ ಎಂಬ ಮಾತನ್ನು ರಾಜ್ಯ ಸಭೆಯಲ್ಲಿ ಕೇಳುತ್ತಾರೆ. ಮಡದಿಯ ಬಗೆಗಿನ ಮೋಹ ಹಾಗೂ ವಿಶ್ವಾಸದಲ್ಲಿ ರಾಜನು ರಾಮನನ್ನೇ ಯುವರಾಜನನ್ನಾಗಿ ಮಾಡುವ ನಿರ್ಣಯ ಮಾಡುತ್ತಾನೆ.  ರಾಮನ ಪಟ್ಟಾಭಿಷೇಕದ ಸಮಾಚಾರ ಕೇಳಿದ ಕೈಕೇಯಿ ಸಂತಸವನ್ನೇ ಪಟ್ಟಿರುತ್ತಾಳೆ. ಆದರೆ ಅವಳ ದಾಸಿ ಮಂಥರೆಯ ಕಲಿಕೆಯ ಮಾತಿಗೆ ಒಳಗಾಗಿ ಕೆಟ್ಟ ಬುದ್ದಿಯನ್ನು ಪ್ರದರ್ಶಿಸುತ್ತಾಳೆ.


ಹಿಂದೆ ದೇವಾಸುರ ಸಂಗ್ರಾಮದಲ್ಲಿ ದಶರಥನಿಗೆ ಸಹಾಯ ಮಾಡಿದಾಗ ಪಡೆದ ಎರಡು ವರಗಳನ್ನು ನೆಪವಾಗಿಟ್ಟುಕೊಂಡು ಆ ವರಗಳಲ್ಲಿ ಮೊದಲನೆಯದಾಗಿ ರಾಮನಿಗೆ ವನವಾಸವನ್ನು ಎರಡನೆಯದಾಗಿ ಭರತನಿಗೆ ರಾಜ್ಯಾಭಿಷೇಕವನ್ನು ಮಾಡ ಬೇಕೆಂದು ಕೇಳಿದಾಗ ದಶರಥ ಮಹಾರಾಜನು ದಿಕ್ಕೇ ತೋಚದವನಾಗಿ ರಾಣಿಯನ್ನು ಪರಿ ಪರಿಯಾಗಿ ಬೇಡಿ ಕೊಳ್ಳುತ್ತಾನೆ. ಕೈಕೇಯಿ ಕಠೋರ ಹೃದಯದವಳಾಗಿರುತ್ತಾಳೆ. ಅವಳು ಕೇಳಿದ ವರವನ್ನು ಪೂರೈಸಲೇ ಬೇಕೆಂಬ ಹಠಕ್ಕೆ ಬಿದ್ದು ಪತಿಯ ಪ್ರಾಣಕ್ಕೆ ಕಂಟಕಳಾಗುತ್ತಾಳೆ. ಯಾವ ಮಗನ ಸಲುವಾಗಿ ಅವನ ಏಳಿಗೆ ಮತ್ತು ಅಧಿಕಾರಕ್ಕೆ ಎಂದು ಕಠೋರಳಾಗಿರುತ್ತಾಳೆಯೋ ಅವನಿಂದಲೇ ತಿರಸ್ಕಾರಕ್ಕೆ ಗುರಿಯಾಗಿ ಮಗನ ಪ್ರೀತಿ ವಿಶ್ವಾಸಗಳನ್ನೇ ಕಳೆದುಕೊಂಡು, ವಿಧವೆಯ ಜೀವನ ಹಾಗೂ ಎಲ್ಲರ ಕಣ್ಣಿನಲ್ಲಿ ಕೆಟ್ಟವಳಾಗಿ ಪಶ್ಚಾತ್ತಾಪದ ಜೀವನ ನಡೆಸುತ್ತಾಳೆ. ಭರತನಿಗೆ ತಾಯಿಯ ಮೇಲೆ ಅಸಮಾಧಾನ ಹಾಗೂ ತಿರಸ್ಕಾರಗಳು ಉಂಟಾದ ಸಮಯದಲ್ಲಿ ರಾಮನು ಭರತನಿಗೆ ಹಿತವಚನಗಳನ್ನು ಹೇಳಿ ತಾಯಿಯನ್ನು ತಿರಸ್ಕಾರ ಮಾಡಬಾರದು ಎಂಬ ತಿಳುವಳಿಕೆ ಹೇಳುತ್ತಾನೆ. ಯಾವ ಕೌಸ ಲ್ಯೆಯನ್ನು ಮತ್ಸರ ಭಾವದಿಂದ ಕಂಡು ಅವಳಿಗೆ ಅವಮಾನ ಮಾಡುವ ಅವಕಾಶ ಬಿಡುತ್ತಿದ್ದಿಲ್ಲವೋ ಅದೇ ಕೌಸಲ್ಯೆ ದಶರಥನ ಸಾವು ಮತ್ತು ಮಗನ ತಿರಸ್ಕಾರ ಸಮಯದಲ್ಲಿ ಸಾಂತ್ವನ ನೀಡುತ್ತಾಳೆ.


ಕೈಕೇಯಿಯ ಜೀವನ ನಮಗೆ ಅನೇಕ ಪಾಠವನ್ನು ಹೇಳಿ ಕೊಡುತ್ತದೆ. ಮುಖ್ಯವಾಗಿ ನಮ್ಮಲ್ಲಿ ಎಷ್ಟೇ ಉತ್ತಮ ಗುಣ ಸಾಮರ್ಥ್ಯ ಇದ್ದರೂ ಅಸೂಯೆ ಮತ್ತು ಕಲಿಕೆಯ ಮಾತಿಗೆ ಒಳಗಾಗುವುದರಿಂದ ನಮ್ಮ ವ್ಯಕ್ತಿತ್ವವನ್ನೇ ಕಳೆದು ಕೊಳ್ಳುತ್ತೇವೆ. ನಾವು ಯಾರ ಸಲುವಾಗಿ ಹೋರಾಡುತ್ತಿದ್ದೇವೆಯೋ ಅವರಿಗೆ ಅದರ ಅವಶ್ಯಕತೆ ಇದೆಯೋ ಇಲ್ಲವೋ ತಿಳಿದು ಮುನ್ನಡೆಯಬೇಕು. ಮತ್ಸರಕ್ಕೆ ಒಳಗಾಗಿ ಯಾರನ್ನೂ ಹಿಂಸಿಸಬಾರದು. ಹಠಮಾರಿತನದಿಂದ ಹಾನಿಯೇ ಹೆಚ್ಚು, ಉತ್ತಮರ ಮತ್ತು ದೊಡ್ಡವರ ಸಹವಾಸ ಮತ್ತು ಸಲಹೆಗಳನ್ನು ಪಡೆಯಬೇಕು. ಯಾವುದೇ ಪರಿಸ್ಥಿತಿಯಲ್ಲಿ ಸಿಟ್ಟು ಮತ್ಸರದ ಕೈಲಿ ಬುದ್ಧಿಕೊಟ್ಟು ವಿವೇಕ ಕಳೆದು ಕೊಳ್ಳಬಾರದು. ಸಂಸ್ಕಾರ ಹಾಗೂ ಭಾಂದವ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಇಂತಹ ಅನೇಕ ವಿಷಯಗಳನ್ನು ಕೈಕೇಯಿಯ ಪಾತ್ರದಿಂದ ಕಲಿಯಬಹುದಾಗಿದೆ. 


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top