ಆಸಕ್ತಿಗೆ ತಕ್ಕಂತೆ ಮುನ್ನಡೆಯಲು ಮಕ್ಕಳಿಗೆ ಶಿಕ್ಷಕರು, ಪೋಷಕರು ಸಹಕರಿಸಬೇಕು: ಮಲ್ಲೇಶಪ್ಪ

Upayuktha
0


ಶಿಕಾರಿಪುರ: ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ ಶಿಕಾರಿಪುರದ ಅಂಬಾರಗೊಪ್ಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 3 ದಿನದ ವೃತ್ತಿ ಯೋಜನೆ ಕಾರ್ಯಕ್ರಮದ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀಯುತ ಮಲ್ಲೇಶಪ್ಪನವರು ಮಾತನಾಡಿ "ಮಕ್ಕಳಿಗೆ ತಮ್ಮ ಗುರಿಯ ಬಗ್ಗೆ, ತಮ್ಮ ವೃತ್ತಿಯ ಆಯ್ಕೆಯ ಬಗ್ಗೆ ಯೋಚಿಸಲು ನಾವು ಬಿಡುವುದೇ ಇಲ್ಲ. ಇಂಜಿನಿಯರಿಂಗ್, ಮೆಡಿಕಲ್ ಎಂದು ಎರಡೇ ದಾರಿಗಳನ್ನು ತೋರಿಸಿ ಕೈ ಬಿಡುತ್ತೇವೆ. ಆದರೆ ಮಕ್ಕಳಿಗೆ ತಮ್ಮ ಪ್ರೌಢಶಾಲಾ ಹಂತದಲ್ಲೇ ತಮ್ಮ ಆಸಕ್ತಿಗನುಗುಣವಾಗಿ, ಪ್ರತಿಭೆಗನುಗುಣವಾಗಿ ಹಾಗೂ ಕೌಶಲ್ಯಗಳಿಗನುಗುಣವಾಗಿ ಗುರಿಯನ್ನು ನಿರ್ಧರಿಸಲು ಹಾಗೂ ಆ ಗುರಿಯ ಹಾದಿಯಲ್ಲಿ ಮುನ್ನಡೆಯಲು ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕು. ಆ ರೀತಿಯ ಮಾರ್ಗದರ್ಶನವನ್ನು ಮಾಡಲು ಶಿಕ್ಷಕರಿಗೆ ಕೊಡುವ ತರಬೇತಿ ಕಾರ್ಯಕ್ರಮವೇ ಈ ವೃತ್ತಿ ಯೋಜನೆ ಶಿಕ್ಷಕರ ತರಬೇತಿ ಕಾರ್ಯಗಾರ" ಎಂದರು.


ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಶಿವಮೊಗ್ಗ ಜಿಲ್ಲಾ ಸಮನ್ವಯಾಧಿಕಾರಿ ಉಮೇಶಪ್ಪನವರು ಮಾತನಾಡಿ "ಬೇರೆ ದೇಶಗಳಲ್ಲೆಲ್ಲ ವೃತ್ತಿ ಶಿಕ್ಷಣ ತರಬೇತಿಯನ್ನು ಶಾಲಾ ಹಂತದಲ್ಲಿಯೇ ಕೊಡಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಡಿಗ್ರಿ ಮುಗಿದ ನಂತರ ವೃತ್ತಿಯ ಬಗ್ಗೆ ಆಲೋಚಿಸುತ್ತಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ಒಡಂಬಡಿಕೆಯೊಂದಿಗೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮುಂದಿನ ವೃತ್ತಿ ಯೋಜನೆಯ ಬಗ್ಗೆ ತರಬೇತಿ ಕೊಡಲು ಶಿಕ್ಷಕರಿಗೆ ಕೊಡುತ್ತಿರುವ ಇಂದಿನ ತರಬೇತಿಯು ಅದ್ಭುತವಾದ ಕಾರ್ಯಕ್ರಮವಾಗಿದೆ" ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಬರಕೊಪ್ಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಭರಮಣ್ಣ.ಎಸ್ ರವರು ಮಾತನಾಡಿ "ಬೆಳೆಯುವ ಗಿಡವನ್ನು ಸಣ್ಣದ್ದರಿಂದಲೇ ಅದ್ಭುತವಾಗಿ ಪೋಷಿಸಿದರೆ ಅದು ಹೆಮ್ಮರವಾದ ಮೇಲೆ ಅದ್ಭುತವಾದ ನೆರಳನ್ನೂ, ಫಲವನ್ನೂ ಕೊಡುತ್ತದೆ. ಹಾಗೆಯೇ ವಿದ್ಯಾರ್ಥಿಗಳನ್ನು ಚಿಕ್ಕಂದಿನಿಂದಲೇ ಉತ್ತಮ ವೃತ್ತಿ ಜೀವನ ಕಟ್ಟಿಕೊಳ್ಳುವೆಡೆಗೆ ಅವರನ್ನು ತರಬೇತಿಗೊಳಿಸಿದರೆ ಅವರು ಮುಂದೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡ ನಂತರ ನಮ್ಮಂತಹ ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು ನೆನೆಯುತ್ತಾರೆ" ಎಂದರು.


ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಸತಿ ಶಿಕ್ಷಣ ಶಾಲೆಗಳ ಸುಮಾರು 30ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ನ ಡಿವಿಷನ್ ಇಂಪ್ಯಾಕ್ಟ್ ಮ್ಯಾನೇಜರ್ ಆದಂತಹ ರಾಘವೇಂದ್ರ ಪ್ರಸಾದ್, ಶಿವಮೊಗ್ಗ ಹಾಗೂ ದಾವಣಗೆರೆಯ ಮೆಂಟರ್ ಲೀಡರ್ ಆಗಿರುವ ಮಾಲಾ.ಎ, ಶಿವಮೊಗ್ಗದ ಹಲವು ವಸತಿ ಶಿಕ್ಷಣ ಶಾಲೆಗಳ ಶಿಕ್ಷಕರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಅಂತಿಮ ವರ್ಷದ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಆಶಾಬಾಯಿ ಹಾಗೂ ಸಿಂಚನ ಪ್ರಾರ್ಥಿಸಿ, ಶಿಕ್ಷಕರಾದ ರವಿ.ಡಿ.ಎನ್ ನಿರೂಪಿಸಿ, ಮಧುಸೂದನ್.ಎಸ್.ಜಿ ಸ್ವಾಗತಿಸಿ, ಪ್ರಶಾಂತ್.ಹೆಚ್.ಆರ್ ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top