(ಕೆಲಸದಾಳು ಇರಿಸಿಕೊಳ್ಳುವುದು ನಾಗರಿಕತೆಯ ಲಕ್ಷಣವಲ್ಲ!)

- ಸಫಿಯಾ ಹಮೀದ್, ಮಂಗಳೂರು
ಆಧುನಿಕ ಶಿಕ್ಷಣ ವ್ಯವಸ್ಥೆಯು ಜೀವನಕ್ಕೆ ಪೂರಕವಾಗಿಲ್ಲ ಎಂದು ವಾದಿಸುವವರು ಬಹಳ ಮಂದಿ ಇದ್ದಾರೆ. ಆದರೆ ಆಧುನಿಕ ಜಗತ್ತು ಬೇಡಿಕೆ ಇಟ್ಟಿದ್ದು ಸ್ವಾತಂತ್ರ್ಯ, ಸಮಾನತೆ, ಘನತೆ, ಗೌರವ, ಹಕ್ಕು, ಕರ್ತವ್ಯ ಇಂತಹ ಮನುಷ್ಯತ್ವ ಮೌಲ್ಯಗಳನ್ನೇ ಎಂಬುದನ್ನು ಮರೆಯುವಂತಿಲ್ಲ. ಶಿಕ್ಷಣ ಮನೆಯಿಂದಲೇ ಆರಂಭವಾಗಬೇಕು. ಗರ್ಭಧಾರಣೆಯಂದೇ ಮಾನವನ ಹುಟ್ಟು ಆಗುತ್ತದೆ. ಅಂದಿನಿಂದಲೇ ಕಲಿಕೆ ಆರಂಭವಾಗುತ್ತದೆ. ಮಗು ಗರ್ಭಚೀಲದಲ್ಲಿ ಕೊಸರಾಡುತ್ತದೆ, ಹೊರಳಾಡುತ್ತದೆ. ಬೆಳಕಿಗೆ, ಧ್ವನಿಗೆ ಸ್ಪಂದಿಸುತ್ತದೆ. ಎಲ್ಲಾ ಮನುಷ್ಯರೂ ಒಂದೇ ರೀತಿಯಾಗಿ ಜನ್ಮ ತಾಳುವ ಪ್ರಕ್ರಿಯೆಯೇ ಸಮಾನತೆ ಸಾರುತ್ತದೆ.
ಹಕ್ಕಿಯನ್ನು ಗಮನಿಸಿ. ಮನೆಯಲ್ಲಿ ಕೋಳಿ ಸಾಕುವುದಿದ್ದರೆ ಗಮನಿಸಿ. ಮೊಟ್ಟೆ ಒಡೆದು ಹೊರಬಂದ ಪುಟ್ಟ ಪುಟ್ಟ ಮರಿಗಳನ್ನು ಹೇಂಟೆ ಜೋಪಾನ ಮಾಡುತ್ತದೆ. ಕಾಳು-ಧಾನ್ಯ ಹೆಕ್ಕಿ, ಕುಕ್ಕಿ, ಆರಿಸಿ ಕೊಡುತ್ತದೆ. ಕೆಲವು ತಿಂಗಳ ನಂತರ ಸ್ವತಃ ಮರಿಗಳೇ ಹೆಕ್ಕಿ ತಿಂದು ಬೆಳೆದ-ಕೋಳಿಗಳಾಗುತ್ತವೆ. ತಾಯಿ-ಹೇಂಟೆ ಮತ್ತು ಮರಿ ಒಂದೇ ತರಹದ ಜೀವನ ನಡೆಸುತ್ತವೆ.
ಹಾಗೆಯೇ ನಾವು-ನೀವು ಕೂಡ ಮಾಡಬೇಕು ಎಂದು ಪ್ರಕೃತಿ ಬಯಸುತ್ತದೆ!
ಮಕ್ಕಳ ಬದುಕು ಹಸನಾಗಬೇಕಾದರೆ ಅವರಿಗೆ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಕಲೆಗಳನ್ನು ಕಲಿಸಿ. ಕೆಲವನ್ನು ಶಾಲೆ-ಕಾಲೇಜುಗಳಲ್ಲಿ ಕಲಿಸುತ್ತಾರೆ. ಇನ್ನು ಕೆಲವನ್ನು ನಾವು ಅವರಿಗೆ ಮನೆಯಲ್ಲಿಯೇ ಕಲಿಸಬೇಕು. ಅಡುಗೆ ಅಂತಹ ಒಂದು ಕಲೆ.
* ಅಡುಗೆಗೆ ಕೆಲಸದಾಳು, ಮನೆಕೆಲಸಕ್ಕೆ ಜನ ಇದ್ದಾರೆ ಎಂಬುದು ಶ್ರೀಮಂತಿಕೆಯ ಲಕ್ಷಣವಲ್ಲ. ಜೀತದಾಳು, ಗುಲಾಮರನ್ನು ನೇಮಿಸುವುದು ಅನಾಗರಿಕ ಸಮಾಜದ ಗುರುತು. ನಿಮ್ಮ ಹೊಟ್ಟೆ ತುಂಬಿಸಿ ಅವರ ಕುಟುಂಬಕ್ಕೂ ನೆರವಾಗುತ್ತಿದ್ದೇವೆ ಎನ್ನುವುದು ಒಳ್ಳೆಯ ಸಬೂಬು ಅಲ್ಲ.
* ಅಡುಗೆ ಕೆಲಸ, ಮನೆ ನಿಭಾಯಿಸುವ ಕೆಲಸ ಅಂದರೆ ಅ ಆ ಇ ಈ ಅಕ್ಷರಪಾಠ ಕಲಿತಂತೆಯೇ.
* ಕಿಚನ್ ಸೆಟ್, ಆಟಿಕೆಗಳನ್ನು ನೀಡಿದಂತೆ ಒಂದು ಕೆಜಿ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು ಹೀಗೆ ತರಹೇವಾರಿ ದಿನಸಿ ಸಾಮಾಗ್ರಿಗಳನ್ನು ನಿಮ್ಮ ಮಕ್ಕಳಿಗೆ ನೀಡಿ. ಅವರು ಮಾಡುವ ಅಡುಗೆಗೆ ಸೂಕ್ತ ಸಲಹೆ ನೀಡಿ ಸರಿಪಡಿಸಿ. ನಿಂದಿಸಬೇಡಿ.
* ಕೇಕ್, ಪೇಸ್ಟ್ರಿ, ಡಾಲ್ಗೊನ ಕಾಫಿ, ಮ್ಯಾಗಿ ನೂಡಲ್ಸ್ ಮಾಡುವುದನ್ನು ಕಲಿಯುವುದು ಒಳ್ಳೆಯದೇ. ಜೊತೆಯಲ್ಲೇ ಅನ್ನ, ಸಾಂಬಾರು, ಸಾರು-ಪಲ್ಯ, ಟೀ, ಕಾಫಿ ಸಹ ಮಾಡಲಿಕ್ಕೆ ಬಿಡಿ.
* ದಿನನಿತ್ಯಕ್ಕೆ ಕನಿಷ್ಠ ಸಾಮಾಗ್ರಿಗಳನ್ನು ಉಪಯೋಗಿಸಿ ರುಚಿಕರ ಮತ್ತು ಆರೋಗ್ಯಕರ ಅಡುಗೆ ಮಾಡುವ ತಂತ್ರಗಾರಿಕೆ ಹೇಳಿಕೊಡಿ. ನೀವೂ ಮಾಡಿ, ಆಸ್ವಾದಿಸಿ.
* ಆರು ವಿವಿಧ ರುಚಿಗಳು ರಸೋತ್ಪತ್ತಿ ಮಾಡುತ್ತವೆ. ಮಧುರ (ಸಿಹಿ), ಆಮ್ಲ (ಹುಳಿ), ಲವಣ (ಉಪ್ಪು), ಕಟು (ಖಾರ), ತಿಕ್ತ (ಕಹಿ), ಕಷಾಯ(ಒಗರು). ಈ ಎಲ್ಲ ರುಚಿಗಳನ್ನು ಸವಿಯಲು ಸೂಕ್ತ ಸೂಚನೆಗಳನ್ನು ನೀಡಿ ಸಹಜವಾಗಿಯೇ ಪ್ರಯೋಗ ಮಾಡಲಿಕ್ಕೆ ಬಿಡಿ.
* ಮಕ್ಕಳು ಪಾಕಶಾಲೆಯಲ್ಲಿ ಪಳಗಿದಂತೆಯೇ ಸೆಲೆಬ್ರಿಟಿ ಶೆಫ್‌ಗಳ ಹಾಗೆ ಟ್ರೀಟ್ ಮಾಡಬೇಡಿ. ನಿಮ್ಮ ಅಮ್ಮ, ಅಜ್ಜಿ, ಮುತ್ತಜ್ಜಿಯಂದಿರು ಹಾಗೆ ಜೀವಿಸಿಲ್ಲ. ನೆನಪಿರಲಿ.
* ಅನ್ನ ಮತ್ತು ಅಮ್ಮ ಎಲ್ಲರಿಗೂ ಬೇಕು. ಗಂಡು-ಹೆಣ್ಣು ಭೇದ ಮಾಡದೆ ಎಲ್ಲ ಮಕ್ಕಳಿಗೂ ಅಡುಗೆಯ ತಂತ್ರಗಾರಿಕೆ ಕಲಿಸಿ. ನಳ ಮಹಾರಾಜ, ಅಡುಗೆ ಭಟ್ರು, ಹೋಟೆಲ್ ಶೆಫ್‌ಗಳೆಲ್ಲ ಗಂಡಸರೇ. ಅಮ್ಮನ ಕೈ ರುಚಿ ಎಂಬುದೂ ಸಾರ್ವತ್ರಿಕ ಸತ್ಯ.
* ಮನೆ ನಿಭಾಯಿಸುವ ಹಲವು ಕಾರ್ಯಗಳಾದ ಶುಚಿತ್ವ, ಆರೋಗ್ಯ, ಕಸ ವಿಂಗಡಣೆ, ಕಸದಿಂದ ರಸ, ಕಾಂಪೋಸ್ಟ್ ತಯಾರಿಕೆ, ನೀರಿನ ಮಿತ ಬಳಕೆ, ಮಳೆ ಕೊಯ್ಲು, ತರಕಾರಿ ತೋಟಗಾರಿಕೆ, ಹೂವಿನ ಗಿಡ ಬೆಳೆಸುವುದು ಹೀಗೆ ಹತ್ತು ಹಲವು ಕಲೆಗಳನ್ನು ಮಕ್ಕಳಿಗೆ ಅಪ್ಪ-ಅಮ್ಮಂದಿರೇ ಕಲಿಸಿದರೆ ಒಳ್ಳೆಯದು, ಕಲಿಸಬೇಕು.
* ಬೀಜ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ಮರವಾಗುವ ಪ್ರಕ್ರಿಯೆಯನ್ನು ಶಾಲಾ ಶಿಕ್ಷಕರೇ ಕಲಿಸಬೇಕೇ?
* ನೂರಾರು ಬಗೆಯ ಧವಸ-ಧಾನ್ಯಗಳಿವೆ: ಏಕದಳ- ದ್ವಿದಳ ಧಾನ್ಯಗಳು. ತೊಗರಿ ಬೇಳೆ, ಉದ್ದು, ಹುರುಳಿ, ಮಸೂರ್ ದಾಲ್, ಕಡ್ಲೆ, ಹೆಸರು, ಹೆಸರು ಬೇಳೆ, ಕಡ್ಲೆ ಬೇಳೆ ಇನ್ನೂ ಹತ್ತು ಹಲವು ಕಾಳು-ಧಾನ್ಯಗಳಿವೆ. ಸಾಂಬಾರು ಪದಾರ್ಥಗಳು: ಏಲಕ್ಕಿ, ಲವಂಗ, ದಾಲ್ಚಿನ್ನಿ, ಅದರ ಎಲೆ, ಕಾಡು ಏಲಕ್ಕಿ, ಕಲ್ಲು ಹೂವು, ಜೀರಿಗೆ, ಶಾಹಿ ಜೀರಿಗೆ, ಜಾಯಿಪತ್ರೆ, ಕರಿಮೆಣಸು. ಗೆಡ್ಡೆಗೆಣಸು, ದಿನಸಿ ಸಾಮಾಗ್ರಿ ಹೀಗೆ ಪಟ್ಟಿ ಮಾಡುತ್ತ ಹೋದರೆ ಶಾಲೆ-ಕಾಲೇಜಿನ ಕೋರ್ಸ್‌ಗಳಂತೆಯೇ ಭಾಸವಾಗುತ್ತದೆ. ಇವೆಲ್ಲದರ ಕನ್ನಡ ಹೆಸರುಗಳನ್ನು ಮಕ್ಕಳಿಗೆ ಕಲಿಸಿ. ಟಿವಿಯಲ್ಲಿ ಅಡುಗೆ ಪ್ರದರ್ಶನ ಮಾಡುವವರಂತೆ ಪ್ರತಿಯೊಂದಕ್ಕೂ ಇಂಗ್ಲಿಷನ್ನೇ ಅವಲಂಬಿಸಬೇಡಿ.
* ಪ್ರಕೃತಿ ಅತ್ಯಂತ ಬುದ್ಧಿವಂತ ಘಟಕ. ಮಾವು, ಹಲಸು, ಗೇರು, ನುಗ್ಗೆ, ಚಗಟೆ (ತಗರೆ), ತಿಮರೆ (ಬ್ರಾಹ್ಮಿ, ಒಂದೆಲಗ), ಕೆಸು (ಚೋಂಬು), ಕಣಿಲೆ (ಕಳಲೆ), ಅಣಬೆ, ಕಲ್ಲಣಬೆ ಇತ್ಯಾದಿಯೆಲ್ಲವೂ ಆಯಾ ಋತುಮಾನಕ್ಕೆ (ಸೀಸನ್) ತಕ್ಕಂತೆ ನಮ್ಮ ಆರೋಗ್ಯಕ್ಕೆ ಸಮತೋಲಿತ ಆಹಾರ ಒದಗಿಸುತ್ತದೆ. ಇವುಗಳನ್ನು ಸಾಧ್ಯವಾದಷ್ಟೂ ಬಳಸಿ.
ಚಟುವಟಿಕೆ:
1. ಜೀರಿಗೆ-ಬಡೇಸೋಂಫು, ರಾಗಿ-ಸಾಸಿವೆ, ತೊಗರಿ ಬೇಳೆ- ಕಡ್ಲೆ ಬೇಳೆಗಳ ವ್ಯತ್ಯಾಸ ತಿಳಿಯಿರಿ.
2. ಕಲ್ಲುಪ್ಪು, ಪುಡಿ ಉಪ್ಪು, ಟೂತ್ ಪೇಸ್ಟ್ ನ ಉಪ್ಪು ಹೊರತುಪಡಿಸಿ ನಿಮಗೆಷ್ಟು ಬಗೆಯ ಉಪ್ಪು ಗೊತ್ತು?
3. ನೀವು ಚಹ-ಕಾಫಿ ಪ್ರಿಯರಾಗಿದ್ದರೆ ವಿಧ ವಿಧದ ಚಹ-ಕಾಫಿ ಸವಿಯಿರಿ.
4. ಮನೆಯ ಹಿತ್ತಲಲ್ಲಿಯೇ ಬೆಳೆಸಿದ ತರಕಾರಿಗೂ, ಮಾರುಕಟ್ಟೆಯ ತರಕಾರಿಗೂ ರುಚಿ ವ್ಯತ್ಯಾಸ ತಿಳಿಯಿರಿ.
5. ಆಯಾ ಸೀಸನ್‌ನಲ್ಲಿ ಪ್ರಕೃತಿ ನೀಡುವ ಬೆಳೆ, ತರಕಾರಿ, ಹಣ್ಣು ಹಂಪಲು ಸೇವಿಸಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ