ಧರ್ಮಸ್ಥಳದಲ್ಲಿ “ಸಿರಿ ಹಬ್ಬ” ಸಾಂಸ್ಕೃತಿಕ ಕಾರ್ಯಕ್ರಮ

Upayuktha
0


ಬೆಳ್ತಂಗಡಿ:  ಉಜಿರೆ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರಿ ಸಿಬ್ಬಂದಿಗಳಿಗಾಗಿ ಸಿರಿ ಕ್ಲಬ್ ವತಿಯಿಂದ “ಸಿರಿ ಹಬ್ಬ" ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜುಲೈ.27 ರಂದು ಸಿರಿ ಕೇಂದ್ರ ಕಛೇರಿಯಲ್ಲಿ ಜರುಗಿತು.


ಸಿರಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನರವರು ಸಿರಿ ಸಿಬ್ಬಂದಿಗಳಿಗಾಗಿ ಆಯೋಜಿಸಲಾದ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಚೇರ್‌ಮೆನ್ ಆಗಿರುವ  ಯುವರಾಜ್ ಜೈನ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ‘ಸಿರಿ’ ಅಂದರೆ ಚಿಗುರು, ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಅಶ್ರಯದಲ್ಲಿ, ಸಿರಿ ಎಂ.ಡಿ ಯವರ ಮುಂದಾಳತ್ವದಲ್ಲಿ ನಡೆಯುತ್ತಿರುವ ನಮ್ಮ ಈ ಸಿರಿ ಸಂಸ್ಥೆ ಸದಾ ಚಿಗುರುತ್ತಿರಲಿ. ನಾವು ನಮ್ಮಲ್ಲಿರೋ ಅಹಂ ಭಾವವನ್ನು ತೊರೆದಾಗ ಮಾತ್ರ ದೇವರಿಗೆ ಅತ್ಯಂತ ಪ್ರಿಯವಾಗುತ್ತೇವೆ ಎಂದರು.


ಅದೇ ರೀತಿ ನಾವೆಲ್ಲರೂ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು, ನಮ್ಮನ್ನು ಹಾಗೂ ನಮ್ಮ ಕುಟುಂಬದವರನ್ನು ಯಾವ ಸಂಸ್ಥೆ ಬೆಳೆಸ್ತಾ ಇದೆಯೋ ಆ ಸಂಸ್ಥೆಯನ್ನು ಪ್ರೀತಿಸಿ, ಮುನ್ನಡೆಸುವ, ಜೊತೆ ಜೊತೆಗೆ ನಾವೂ ಬೆಳೆಯೋಣ. ಸಿರಿ ಸಂಸ್ಥೆ ಹಾಗೂ ಸಿರಿ ಸಿಬ್ಬಂದಿಗಳ ಏಳಿಗೆಗಾಗಿ ಸದಾ ಶ್ರಮಿಸುತ್ತಿರುವ ಪರಮಪೂಜ್ಯ ದಂಪತಿಗಳ ಸ್ತ್ರೀ ಸಬಲೀಕರಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಸಿರಿ ಎಂ.ಡಿಯವರೊಂದಿಗೆ ನಾವೆಲ್ಲರೂ ಕೈಜೋಡಿಸಿ ಸಿರಿಯ ಕಂಪನ್ನು ಜಗತ್ತಿನಾದ್ಯಂತ ಪಸರಿಸೋಣ ಎಂದು ಪ್ರೇರಣಾತ್ಮಕ ನುಡಿಗಳನ್ನಾಡಿ ಎಲ್ಲಾ ಸಿರಿ ಸಿಬ್ಬಂದಿಗಳನ್ನು ಹುರಿದುಂಬಿಸಿದರು.


ಇನ್ನೋರ್ವ ಮುಖ್ಯ ಅತಿಥಿ ಕೆನರಾ ಬ್ಯಾಂಕ್ ಮಂಗಳೂರು ಸರ್ಕಲ್ ಜನರಲ್ ಮ್ಯಾನೇಜರ್ ಆಗಿರುವ ಬಿ.ಸುಧಾಕರ ಕೊಟ್ಟಾರಿಯವರು ಮಾತನಾಡಿ, ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದಲ್ಲಿ ಆ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಅದೇ ರೀತಿ ಸುಮಾರು ಇಪ್ಪತ್ತು ದಶಕಗಳಿಂದ ಯಾವುದೇ ಲಾಭದ ಉದ್ದೇಶವಿಲ್ಲದೆ ಮಹಿಳಾ ಸಬಲೀಕರಣಕ್ಕಾಗಿಯೇ ಶ್ರಮಿಸುತ್ತಿರುವ ಸಂಸ್ಥೆಯೊಂದಿದ್ದರೇ ಅದು ನಮ್ಮ ಈ ಸಿರಿ ಸಂಸ್ಥೆ ಮಾತ್ರ. ಯಾವಾಗ ಒಂದು ಸಂಸ್ಥೆಯ ಸಿಬ್ಬಂದಿಗಳಲ್ಲಿ ನಾವೆಲ್ಲರೂ ಒಂದೇ ಅನ್ನುವ ಭಾವನೆ ಇರುತ್ತದೆಯೋ ಅಂತಹ ಸಂಸ್ಥೆ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಸಿರಿಯಲ್ಲಿರುವ ಸಿಬ್ಬಂದಿಗಳಲ್ಲಿ ಒಗ್ಗಟ್ಟಿದೆ. ಇದೇ ಒಗ್ಗಟ್ಟಿನ ಬಲದಿಂದ ಮುಂದಿನ ದಿನಗಳಲ್ಲಿ ಸಿರಿ ಸಂಸ್ಥೆಯ ಇನ್ನಷ್ಟು ಎತ್ತರಕ್ಕೆ ಬೆಳೆದು, ಸಿರಿ ಬ್ಯ್ರಾಂಡ್ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು.


ಉಜಿರೆಯ ಉದ್ಯಮಿ ಹಾಗೂ ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ರಾಜೇಶ್ ಪೈಯವರು ಮುಖ್ಯ ಅತಿಥಿಯಾಗಿ ಮಾತನಾಡಿ, ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಅಮ್ಮನವರ ಕನಸಿನ ಕೂಸಾಗಿರುವ ಸಿರಿ ಸಂಸ್ಥೆ ಸಿಬ್ಬಂದಿಗಳ ಪರಿಶ್ರಮದಿಂದಾಗಿ ಇಂದು ಲಾಭದ ಹಾದಿಯಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಈ ಸಿರಿ ಹಬ್ಬವನ್ನು ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಟ್ಟಡದಲ್ಲಿ ಆಚರಿಸುವಂತಾಗಲಿ. ಅದೇ ರೀತಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ  ಕೆ.ಎನ್ ಜನಾರ್ದನರವರು ಸಿರಿ ಹಬ್ಬ ಕಾರ್ಯಕ್ರಮಕ್ಕೆ ಬಂದ ಅತಿಥಿ ಅಭ್ಯಾಗತರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಗೌರವಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬರಲು ಸಹಕರಿಸಿದ ಸಿರಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಎಲ್ಲಾ ಸಿರಿ ಸಿಬ್ಬಂದಿಗಳಿಗೂ ಶುಭವನ್ನು ಹಾರೈಸಿದರು.


ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ  ಚೈತ್ರೇಶ್ ಇಳಂತಿಳ, ಸಾಂಸ್ಕೃತಿಕ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಉಜಿರೆ ಶ್ರೀ ಧ.ಮಂ ಐಟಿ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಡಾ|| ವಿದ್ಯಾ ಕೆ, ಇದೇ ಕಾಲೇಜಿನ ಗ್ರಂಥಾಲಯ ಅಧಿಕಾರಿ ಡಾ|| ರಂಜಿತಾ, ಉಜಿರೆ ಸಂಧ್ಯಾ ಟ್ರೆರ‍್ಸ್ ಮಾಲಕಿ ಅರ್ಚನಾ ರಾಜೇಶ್ ಪೈಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧ.ಮಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ  ಜನಾರ್ದನ ಮೋಗರಾಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು ಹಾಗೂ ಘಟಕಗಳಲ್ಲಿ ಉತ್ತಮ ರೀತಿಯಲ್ಲಿ  ಕಾರ್ಯನಿರ್ವಹಿಸು ತ್ತಿರುವ ಸಿರಿ ಸಿಬ್ಬಂದಿಗಳಿಗೆ ಅತಿಥಿ ಗಣ್ಯರು ಪ್ರಶಂಸ ಪತ್ರ ನೀಡಿ ಗೌರವಿಸಿದರು. ಅದೇ ರೀತಿ ಸಿರಿ ಸಿಬ್ಬಂದಿಗಳಿಗಾಗಿ ಆಯೋಜಿಸಲಾದ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಿದರು.


ಸಿರಿ ಬ್ಯ್ರಾಂಡ್ & ಮಾರುಕಟ್ಟೆ ವಿಭಾಗದ ಸಲಹೆಗಾರರಾದ  ವಿಶ್ವಜ್ಞ ಆಚಾರ್ ಸ್ವಾಗತಿಸಿ, ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕರಾದ  ಪ್ರಸನ್ನರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗೊದಾಮು ಪ್ರಬಂಧಂಕರಾದ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಅಗರಬತ್ತಿ ವಿಭಾಗದ ಮೇಲ್ವಿಚಾರಕ ಸತೀಶ್ ಧನ್ಯವಾದವಿತ್ತರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top