ಚಾರಣಪಥಗಳ ಆನ್ ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ: ಸಚಿವ ಈಶ್ವರ ಖಂಡ್ರೆ

Upayuktha
0

 



ಮಂಗಳೂರು: ಜುಲೈ 3ನೇ ವಾರದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳಿಗೆ  ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.


ಮಂಗಳೂರಿನ ಪಡೀಲ್ ನಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಲಗ್ಗೆ ಇಟ್ಟು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಚಾರಣಕ್ಕೆ ಈ ಆಗಸ್ಟ್ ನಿಂದ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.


ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾವುದೇ ಚಾರಣ ಪಥಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಕಾರಣ ಚಾರಣಿಗರು ಅಪಾಯಕ್ಕೆ ಈಡಾಗುವ ಸಂಭವ ಹೆಚ್ಚಾಗಿರುತ್ತದೆ, ಜೊತೆಗೆ ಇಲ್ಲಿನ ಜೀವರಾಶಿ ಮತ್ತು ಮೊಳಕೆಯೊಡೆಯುವ ಸಸ್ಯರಾಶಿಗೂ ತೊಂದರೆ ಆಗುತ್ತದೆ ಹೀಗಾಗಿ ಆಗಸ್ಟ್ ನಿಂದ ಚಾರಣಕ್ಕೆ ಮರು ಚಾಲನೆ ನೀಡುವುದಾಗಿ ತಿಳಿಸಿದರು.


ಈಗಾಗಲೇ ರಾಜ್ಯದ ಹಲವು ಚಾರಣ ಪಥಗಳನ್ನು ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದ್ದು, ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಆದೇ ರೀತಿ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಕೊಡಚಾದ್ರಿ, ಕುರಿಂಜಲ್, ಕಂಗಡಿಕಲ್, ನರಸಿಂಹ ಪರ್ವತಗಳಲ್ಲಿ ಅರಣ್ಯ ಇಲಾಖೆ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಇದಲ್ಲದೆ ಎತ್ತಿನಭುಜ ಸೇರಿದಂತೆ ಕೆಲವು ಕಡೆಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲ ಚಾರಣ ಪಥಗಳಿಗೂ ಒಂದೇ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.


ಚಾರಣಿಗರ ಸಂಖ್ಯೆಗೆ ಮಿತಿ:

ಕೆಲವು ಪ್ರವಾಸಿ ಸಂಸ್ಥೆಗಳು (ಟೂರ್ ಆಪರೇಟರ್ ಗಳು) ಚಾರಣಪಥಗಳ ಬಗ್ಗೆ ಯುವಜನರಲ್ಲಿ ಅತಿಯಾದ ಆಸಕ್ತಿ ಕೆರಳಿಸುತ್ತಿದ್ದು, ಇದರ ಪರಿಣಾಮವಾಗಿ ಚಾರಣಪಥಗಳಲ್ಲಿ ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕೃತಿ, ಪರಿಸರ ಉಳಿಸಲು ಕೆಲವು ಕಠಿಣ ಕ್ರಮ ಅತ್ಯಗತ್ಯ ಎಂದು ಹೇಳಿದರು.


ಪ್ರತಿಯೊಂದು ಚಾರಣ ಪಥದಲ್ಲೂ ಅದರ ವಿಸ್ತಾರ, ಅಲ್ಲಿರುವ ಗೈಡ್ ಮತ್ತು ಇತರ ಮೂಲಭೂತ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗುವುದು. ಯಾವುದೇ ಚಾರಣಪಥದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಚಾರಣಿಗರಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.


ಮೂರನೆ ವ್ಯಕ್ತಿ ತಪಾಸಣೆ

ಒಂದೊಮ್ಮೆ ಯಾವುದೇ ಚಾರಣ ಪಥದಲ್ಲಿ ಹೆಚ್ಚಿನ ಸಂಖ್ಯೆಯ ಚಾರಣಿಗರಿಗೆ ಅವಕಾಶ ನೀಡಲಾಗುತ್ತಿದೆ ಎಂದು ದೂರು ಬಂದರೆ, ಈ ಬಗ್ಗೆ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.


ಒಂದೇ ವೆಬ್ ಸೈಟ್ ನಲ್ಲಿ ವಿವಿಧ ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಇರುವ ಕಾರಣ, ಒಂದು ಚಾರಣ ಪಥದಲ್ಲಿ ಟಿಕೆಟ್ ಸಿಗದಿದ್ದರೆ ಮತ್ತೊಂದಕ್ಕೆ ಟಿಕೆಟ್ ಕಾಯ್ದಿರಿಸುವ ಅವಕಾಶವೂ ಇರುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ವಿವರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top