ಮಂಗಳೂರು ವಿವಿ ಯಕ್ಷಮಂಗಳ ಪ್ರಶಸ್ತಿ ಪ್ರದಾನ

Upayuktha
0

  • ಯಕ್ಷಗಾನಕ್ಕೆ ವಿಶ್ವ ಮನ್ನಣೆ: ಪ್ರೊ ಪಿ.ಎಲ್ ಧರ್ಮ
  • ಶ್ರೀಧರ ಹಂದೆ, ಎಂ.ಕೆ. ರಮೇಶ್ ಆಚಾರ್ಯ ಅವರಿಗೆ ಯಕ್ಷಮಂಗಳ ಪ್ರಶಸ್ತಿ
  • ರಾಧಾಕೃಷ್ಣ ಕಲ್ಚಾರ್ ಅವರ "ಪೀಠಿಕಾ ಪ್ರಕರಣ" ಗ್ರಂಥಕ್ಕೆ ಕೃತಿ ಪ್ರಶಸ್ತಿ ಪ್ರದಾನ 




ಮಂಗಳ ಗಂಗೋತ್ರಿ: ಯಕ್ಷಗಾನ ಕರ್ನಾಟಕದ ಕಲೆ ಆಗಿದ್ದರೂ ವಿಶ್ವದಲ್ಲೇ ಮನ್ನಣೆಗೆ ಪಾತ್ರವಾಗಿದೆ. ಹಿರಿಯ ಕಲಾವಿದರ ಆದರ್ಶವನ್ನಿಟ್ಟುಕೊಂಡು ಹೊಸತಲೆಮಾರು ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಯಕ್ಷಗಾನದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ.ಎಲ್ ಧರ್ಮ ಹೇಳಿದರು.


ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23 ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯು ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಾಲಿಗ್ರಾಮ ಮೇಳದ ಸಂಚಾಲಕ, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಶ್ರೀಧರ ಹಂದೆ ಹಾಗೂ ತೆಂಕು ಮತ್ತು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ ಅವರಿಗೆ ಯಕ್ಷಮಂಗಳ ಪ್ರಶಸ್ತಿ, 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ನಿವೃತ್ತ ಉಪನ್ಯಾಸಕ, ಯಕ್ಷಗಾನ ತಾಳಮದ್ದಳೆಯ ಶ್ರೇಷ್ಠ ಕಲಾವಿದ ರಾಧಾಕೃಷ್ಣ ಕಲ್ಚಾರ್ ಅವರ 'ಪೀಠಿಕಾ ಪ್ರಕರಣ' ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿ, 10 ಸಾವಿರ ರೂ. ನಗದು, ಪ್ರಶಸ್ತಿ, ಸ್ಮರಣಿಕೆಗಳ ಜೊತೆಗೆ ಸನ್ಮಾನ ಮಾಡುವ ಮೂಲಕ ಪ್ರದಾನ ಮಾಡಲಾಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರರಾವ್ ಮಾತನಾಡಿ ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ವಿಜ್ಞಾನ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಯಕ್ಷಗಾನ ಪ್ರವೇಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.


ಜಾನಪದ ವಿದ್ವಾಂಸ ಡಾ.ಕೆ. ಚಿನ್ನಪ್ಪ ಗೌಡ ಅಭಿನಂದನಾ ಭಾಷಣ ಮಾಡಿ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿಯಲ್ಲಿ ಸ್ಥಳೀಯ ಕಲೆ, ಸಂಸ್ಜೃತಿಗೆ ಆದ್ಯತೆ ಸಿಗಬೇಕು. ಮಂಗಳೂರು ವಿವಿಯ ನೀತಿಯಲ್ಲಿ ಯಕ್ಷಗಾನಕ್ಕೆ ಪ್ರೋತ್ಸಾಹ ದೊರಕಬೇಕು ಎಂದರು.


ಬಳಿಕ ಪ್ರಶಸ್ತಿ ವಿಜೇತರು ಮಾತನಾಡಿದರು.


ಕುಲಸಚಿವ ರಾಜು ಕೆ. ಮೊಗವೀರ ಮಾತನಾಡಿ ಯಕ್ಷಗಾನದಿಂದ ಕನ್ನಡ ಭಾಷೆ ಬೆಳೆದಿದೆ. ಕಲಾವಿದರು ಮಾತ್ರವಲ್ಲ ನೋಡುಗರೂ ತಮ್ಮ ಭಾಷಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದರು.


ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿದರು. ಸಂಶೋಧನಾಧಿಕಾರಿ ಡಾ. ಸತೀಶ್  ಕೊಣಾಜೆ ವಂದಿಸಿದರು. ದೀವಿತ್ ಶ್ರೀಧರ ಕೋಟ್ಯಾನ್  ಸನ್ಮಾನ ಪತ್ರ ವಾಚಿಸಿದರು. ಶ್ರೀದೇವಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. 


ಕಾರ್ಯಕ್ರಮದಲ್ಲಿ ಯಕ್ಷಮಂಗಳದ ಸುಮಾರು 60 ವಿದ್ಯಾರ್ಥಿಗಳಿಂದ ದೀವಿತ್ ಎಸ್. ಕೋಟ್ಯಾನ್ ನಿರ್ದೇಶನದಲ್ಲಿ 10 ನಿಮಿಷಗಳ ಕಾಲ ಪ್ರದರ್ಶನಗೊಂಡ "ಶ್ರೀರಾಮ ದರ್ಶನ" ಕಲಾಭಿಮಾನಿಗಳ ಮನಸೊರೆಗೊಂಡಿತು. 


ಆರಂಭದಲ್ಲೇ ಮರದ ರೆಂಬೆಯೊಂದರಲ್ಲಿ ಕ್ರೌಂಚ ಪಕ್ಷಿಗಳು ಮಿಲನವಾಗುತ್ತಿರುವಾಗ ಬೇಡರ ನಾಯಕ ಕಿರಾತಕ ವಾಲ್ಮೀಕಿಯಿಂದ ಬಾಣ ಪ್ರಯೋಗ, ಶಾಪಕ್ಕೆ ತುತ್ತಾಗಿ ಪರಿಹಾರವಾಗಿ ರಾಮಾಯಣ ದರ್ಶನ ಕಾವ್ಯ ರಚನೆ, ದಶರಥನಿಂದ  ಪುತ್ರಕಾಮೇಷ್ಟಿಯಾಗ, ತಂದೆಯ ಮಾತು ನೆರವೇರಿಸಲು ರಾಮ ಪತ್ನಿ ಹಾಗೂ ಸಹೋದರ ಲಕ್ಷ್ಮಣನ ಜೊತೆಗೆ ಕಾಡಿಗೆ ಪಯಣ,  ಅಲ್ಲಿಗೆ ಹರಿಣಿಯ ಕಂಡು ಹಿಡಿಯಲು ಪ್ರಯತ್ನಸುವ ಕಡೆಗೆ ಅದೇ ಜಿಂಕೆಯ ಹುಡುಕಾಟದಲ್ಲಿ ರಾವಣನಿಂದ ಅಪಹರಣಕ್ಕೊ ಳಗಾದ ಸೀತೆ, ಅಪಹರಣ ಸಮಯದಲ್ಲಿ ರಾವಣನಿಗೆ ಜಠಾಯುನಿಂದ ತಡೆ, ಜಠಾಯಿಗೆ ಸೋಲು, ರಾಮನಿಂದ ಹುಡುಕಾಟ, ರಾಮನಿಗೆ ಸುಗ್ರೀವನಿಂದ ಸಹಕಾರದ ಭರವಸೆ, ವಾಲಿ ಸುಗ್ರೀವ ಕಾಳಗ, ಹನುಮನಿಂದ ಲಂಕಯಲ್ಲಿ ಸೀತೆಯ ಪತ್ತೆ, ಬಂದು ರಾಮನಿಗೆ ತಿಳಿಸುವುದು, ವಾನರರು ಸಮೇತ ಶರಸೇತುವೆ ನಿರ್ಮಾಣದಲ್ಲಿ ಸಹಕಾರ, ಅಲ್ಲಿಂದ ಲಂಕೆಗೆ ಪಯಣ ರಾಮ, ಲಕ್ಷ್ಮಣರಿಂದ ರಾವಣ- ಕುಂಭಕರ್ಣ ಕಾಳಗ, ಅವರನ್ನು ಯಮಲೋಕಕ್ಕೆ ಅಟ್ಟುವುದು, ರಾಮನ ಸಖ್ಯ ಬೆಳೆಸಿದ ಸಭ್ಯ ವಿಭೀಷಣ, ಅಲ್ಲಿಂದ ಸೀತೆಯ ಜೊತೆಗೂಡಿ ಅಯೋಧ್ಯೆಗೆ ಬಂದು ರಾಮ ಪಟ್ಟಾಭಿಷೇಕವನ್ನು ಒಳಗೊಂಡ ಶ್ರೀ ರಾಮ ದರ್ಶನ ನಿಜಕ್ಕೂ ಕಲಾಭಿಮಾನಿಗಳ ಮನಸೊರೆಗೊಂಡಿತು.


ವಿಶೇಷವೆಂದರೆ ಈ ಪ್ರದರ್ಶನದಲ್ಲಿ ಬಾಂಗ್ಲಾ ದೇಶದ ವಿದ್ಯಾರ್ಥಿಯೂ ಸೇರಿದಂತೆ ವಿವಿಯ ವಿವಿಧ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಶಾಲಾ ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಪಾತ್ರ ನಿರ್ವಹಿಸಿ ಪ್ರಶಸ್ತಿ ವಿಜೇತರಾದ ಅನ್ವಿತಾ, ರಕ್ಷಾ, ಶರಣ್ಯ ಅವರನ್ನು ಸನ್ಮಾನಿಸಲಾಯಿತು.


ಯಕ್ಷಗುರು ದೀವಿತ್ ಎಸ್. ಕೋಟ್ಯಾನ್, ಸುದರ್ಶನ ವಿಜಯ ನಿರ್ದೇಶಕ ಅಶ್ವಥ್ ಮಂಜನಾಡಿ, ಕಲಾವಿದರಾದ ಪವನ್ ಆಚಾರ್ಯ, ಯತೀಶ್ ಕುಂಬ್ಳೆ, ವಿನುತಾ ಡಿ. ಗಟ್ಟಿ, ಅನ್ವಿತಾ ಅವರನ್ನು ಸನ್ಮಾನಿಸಲಾಯಿತು. 


ವಿವಿಗೆ ಗೌರವ ತರುವಂತೆ ಮಾಡುವೆ: ಕಲ್ಚಾರ್

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಧಾಕೃಷ್ಣ ಕಲ್ಚಾರ್,  'ನನಗಿದು ಭಾವುಕ ಕ್ಷಣ. ಓದಿದ ವಿವಿಯಲ್ಲೇ ಪ್ರಶಸ್ತಿ ಪಡೆಯುತ್ತಿರುವುದು ಧನ್ಯತೆಯನ್ನುಂಟುಮಾಡಿದೆ. ಮುಂದೆಯೂ ಯಕ್ಷಗಾನ ಕುರಿತ ಬರವಣಿಗೆಯನ್ನು ಮುಂದುವರಿಸಿ ಈ ವಿವಿಗೆ ಗೌರವ ತರುವೆ' ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors
Mandovi Motors
To Top