ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕೀಟ ಹಾಗೂ ರೋಗಗಳು ಬಾಧಿಸುತ್ತಿದ್ದು, ಇವುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಂಬಂಧ ರೈತರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಹೇಳಿದರು.
ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ವಿಸ್ತರಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವ ತೋಟಗಾರಿಕೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಅಡಿಕೆ ಬೆಳೆಯಲ್ಲಿ ವಿವಿಧ ಕೀಟ ರೋಗ ಬಾಧೆಯಿಂದ ಬೆಳೆ ನಷ್ಟ ಉಂಟಾಗುತ್ತಿದ್ದು, ಅವುಗಳಲ್ಲಿ ಅಡಿಕೆ ಎಲೆ ಚುಕ್ಕೆ ರೋಗವು ಪ್ರಸ್ತುತ ಸನ್ನಿವೇಶದಲ್ಲಿ ತೀವ್ರವಾಗಿ ಬಾಧಿಸುತ್ತಿದೆ. ಈ ರೋಗವನ್ನು ಸಮರ್ಪಕವಾಗಿ ನಿಯಂತ್ರಿಸಲು “ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ ಸಮಗ್ರ ನಿಯಂತ್ರಣ” ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಬಾಧೆಯು ವ್ಯಾಪಕವಾಗಿದ್ದು, ಈ ರೋಗವು ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ತೀವ್ರವಾಗಿ ಬಾಧಿಸುವುದರಿಂದ ಮುಂದಿನ 2-3 ತಿಂಗಳು ರೈತರ ತಾಕುಗಳಿಗೆ ಇಲಾಖಾಧಿಕಾರಿಗಳು ಕ್ಷೇತ್ರ ಭೇಟಿ ನೀಡುವ ಸಮಯದಲ್ಲಿ ರೋಗದ ಲಕ್ಷಣ ಹಾಗೂ ಪರಿಹಾರೋಪಾಯಗಳ ಕುರಿತು ಹಾಗೂ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡಂತೆ ರೋಗದ ಹರಡುವಿಕೆ ಮತ್ತು ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ವಿಜ್ಞಾನಿಗಳಿಂದ ಪಡೆದು ರೈತರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಾಗಾರದಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಪಾಲ್ಗೊಂಡು ಅಡಿಕೆ ಎಲೆ ಚುಕ್ಕೆ ರೋಗದ ಜೊತೆಗೆ ಅಡಿಕೆ ಬೆಳೆಯಲ್ಲಿ ಇತರೆ ಕೀಟ ರೋಗ ಬಾಧೆಗಳು ಹಾಗೂ ಪೋಷಕಾಂಶ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು.
ಕಾಸರಗೋಡು ಸಸ್ಯ ಸಂರಕ್ಷಣೆ ವಿಭಾಗದ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ವಿನಾಯಕ ಹೆಗಡೆ ಮಾತನಾಡಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಹಾಗೂ ಇತರೆ ರೋಗಗಳ ಗುರುತಿಸುವಿಕೆ ಮತ್ತು ಸಮಗ್ರ ನಿರ್ವಹಣೆ ಕುರಿತು ಮಾಹಿತಿಯನ್ನು ಮಂಡಿಸಿದರು. ವಿಜ್ಞಾನಿ(ಕೀಟಶಾಸ್ತ್ರ) ಡಾ. ಮಧು ಟಿ. ಎನ್. ಅಡಿಕೆ ಬೆಳೆಯಲ್ಲಿ ವಿವಿಧ ಕೀಟಗಳು, ಅವುಗಳ ಲಕ್ಷಣ ಹಾಗೂ ಸಮಗ್ರ ನಿರ್ವಹಣೆ ಕುರಿತು ವಿವರವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ರೈತರ ತಾಕುಗಳಿಗೆ ಭೇಟಿ ನೀಡಿದಾಗ ಈ ವಿಷಯಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಲು ತಿಳಿಸಲಾಯಿತು.
ಕಾರ್ಯಾಗಾರದಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಗಳ ತೋಟಗಾರಿಕೆ ಇಲಾಖೆಯ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ