ಅದ್ಭುತ ಗಾಯಕ, ಸಂಗೀತಗಾರ, ನಟ ಶಶಿಧರ ಕೋಟೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ಕೋಟೆ ವಸಂತಕುಮಾರ್ ಮತ್ತು ಪಾವ೯ತಿ ಕೋಟೆ ದಂಪತಿಗೆ ಜನಿಸಿದರು. ಬಾಲ್ಯದಲ್ಲೇ, ಯಕ್ಷಗಾನ, ಸಂಗೀತದಲ್ಲಿ ಆಸಕ್ತಿ ಹೊಂದಿ, ಗುರುಗಳಾದ, ಸತ್ಯಭಾಮಾ, ಗೋಪಾಲ ಕೃಷ್ಣ ಅಯ್ಯರ್, ವಿದ್ವಾನ್. ಗುರುದತ್ ಹತ್ತಿರ ತರಬೇತಿ ಪಡೆದರು. ಸುಮಾರು 4000 (2010 ವಷ೯ದವರೆಗೆ) ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಮಹಾನ್ ಗಾಯಕರು! ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ಗಾಯನ ಮಾಡುವ ಪ್ರಖ್ಯಾತ ಗಾಯಕರು.ಇವರ ಸಂಗಿತ ಲಹರಿಗೆ, ಚಿತ್ರಗಾರ ಬಿ.ಕೆ.ಎಸ್. ವಮ೯ ಅವರು, ಹಾಡಿಗೆ ತಕ್ಕ ಹಾಗೆ, ಚಿತ್ರ ಚಿತ್ರಿಸಿ, ಗೀತ ಚಿತ್ರ ಕಾರ್ಯಕ್ರಮ ಆಯೋಜಿಸಿ, ಅದ್ಭುತ ಯಶಸ್ವಿಯಾಗಿ, ಬೆಂಗಳೂರು, ಚೆನ್ನೈ,ಮುಂಬಯಿಯಲ್ಲಿ ಜರುಗಿದ್ದು, ಅವಿಸ್ಮರಣೀಯ! ಮಧುರ ಮಿಲನಂ ಮೌನಂ, ಅಸ್ತಿತ್ವ, ಚಲನಚಿತ್ರ ಇವರು ನಿರ್ದೇಶಿಸಿದ ಸಂಗೀತದೊಂದಿಗೆ ಪ್ರದಶ೯ನಗೊಂಡು ಯಶಸ್ವಿಯಾಯಿತು.
ದೂರದರ್ಶನಕ್ಕೆ ವಿಶೇಷ, ಆಹ್ವಾನಿತರಾಗಿ, ಟಿವಿ ರಿಯಾಲಿಟಿ ಕಾಯ೯ಕ್ರಮಗಳಾದ, ಲಿಟಲ್ ಸ್ಟಾರ್ ಸಿಂಗರ್, ಸಂಗೀತ ಲಹರಿ, ಹಾಡೊಂದು ಹಾಡುವೆನು, ಸಂಗೀತ ಸಂಭ್ರಮ ನಿರೂಪಕರಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು. ದೂರದಶ೯ನದ ಧಾರಾವಾಹಿಗಳಾದ ತ್ರಿವೇಣಿ ಸಂಗಮ, ಮೀನಾಕ್ಷಿ ಮದುವೆ, ಕನಕ, ಗೆಜ್ಜೆ ಪೂಜೆ, ಭಾಗ್ಯ ಲಕ್ಷ್ಮೀ, ಪಾರು, ಧಾರಾವಾಹಿಗಳಲ್ಲಿ ನಟಿಸಿದ, ನಟಿಸುತ್ತಿರುವ ಗಾಯಕ, ನಟ! ಶಿಕ್ಷಕ, ನಟ, ಗಾಯಕರಾಗಿ, ನಾಡಿನಾದ್ಯಂತ ಖ್ಯಾತರಾದರೂ, ಆಂಗ್ಲ ಸಾಹಿತ್ಯ ಭಾಷೆಯಲ್ಲಿ ಎಂ.ಎ ಪದವಿ ಮಂಗಳೂರು ವಿಶ್ಪವಿದ್ಯಾಲಯದಿಂದ ಪಡೆದು, ಸತತ ಮೂರು ವಷ೯ ಅಧ್ಯಾಪಕರಾಗಿ, ನಂತರ, ಅದೇ ಕ್ಷೇತ್ರದ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು. ಪ್ರಖ್ಯಾತ ಗಾಯಕರಾಗಿ, ಮೈಸೂರು ಮಹಾರಾಜರಿಂದ ಗೌರವಿಸಲ್ಪಟ್ಟ ಕಲಾವಿದರು. ಕೋಟೆ ಮ್ಯೂಸಿಕ್ ಅಂಡ್ ಆರ್ಟ್ಸ್ ಫೌಂಡೇಷನ್ ಸ್ಥಾಪಕರು. ಇವರು ಶ್ರೀಮತಿ ಸೀತಾಕೋಟೆಯವರನ್ನು ವಿವಾಹವಾಗಿ ಒಬ್ಬ ಸುಪುತ್ರನನ್ನು ಪಡೆದ ಕಲಾವಿದರು.
ಶ್ರೀ ಶಶಿಧರ ಕೋಟೆಯವರಿಗೆ, ಅನೇಕ ಬಿರುದುಗಳು, ಪ್ರಶಸ್ತಿಗಳು ಲಭಿಸಿವೆ. ಬೆಂಗಳೂರು ರತ್ನ, ಗಾಯನ ಮಾಂತ್ರಿಕ, ವಿಶ್ವ ಮಾನವ, ಗಾನಗಂಧರ್ವ, ಕನ್ನಡ ಸಾರಥಿ, ಗಾನಗಾರುಡಿಗ, ಆಯ೯ಭಟ ಶ್ರೇಷ್ಠಗಾಯಕ, ಸಂಗೀತ ರತ್ನ ಮುಂತಾದ ಗೌರವಗಳನ್ನು ಪ್ರಶಸ್ತಿಗಳನ್ನು, ಬಹುಮಾನಗಳನ್ನು ನೀಡಿ ಆದರದಿಂದ, ಪ್ರೀತಿಯಿಂದ, ಸಂತೋಷಪಟ್ಟು ಸನ್ಮಾನಿಸಲಾಯಿತು. ಅನೇಕ ಕಾಯ೯ಕ್ರಮಗಳನ್ನು ನಾಡಿನಲ್ಲಿ ನೀಡಿ, 250ಕ್ಕೂ ಹೆಚ್ಚು ಸಂಗೀತ ರಿಕಾಡ್ಸ್ ತಯಾರಿಸಿ, ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದ ಕೀತಿ೯ಗೆ, ಪ್ರಸಿದ್ಧಿಗೆ ಪಾತ್ರರಾಗಿದ್ದಾರೆ.
ತೆರೆ ಮೇಲೆ ದಂಪತಿಗಳಿಬ್ಬರೂ ನಟನೆ ಮಾಡಿ, ಹೊಸತನದಿಂದ ಪ್ರಖ್ಯಾತರಾದವರು. ಶ್ರೀ ಶಶಿಧರ ಕೋಟೆಯವರು, ಪ್ರೀತಿಯಿಂದ ಪ್ರಖ್ಯಾತ ಗಾಯಕ ಜೇಸುದಾಸ್ ಅವರ ಮಧುರ ಕ್ಲಾಸಿಕಲ್ ಸಂಗೀತಕ್ಕೆ ಮನಸೋತು (ಅವರಂತೆ ಕಾಣುವ) ಗಾಯಕನಾದೆ ಎಂದು ಹೇಳಿ, ತಮ್ಮ ಗೌರವ ಹೃದಯ ಪೂರ್ವಕವಾಗಿ ಸೂಚಿಸಿದ್ದಾರೆ.
ಅನೇಕ ಭಕ್ತಿ ಗೀತೆಗಳನ್ನು, ಸುಶ್ರಾವ್ಯವಾಗಿ ಗಾಯನ ಮಾಡುವ ಕಲೆ ಇವರಿಗೆ ದೈವದತ್ತವಾಗಿದೆ. ಅಯ್ಯಪ್ಪ ಸ್ವಾಮಿಯ, ಗಣಪತಿಯ, ಭಾವಗೀತೆಯ ಗಾಯಕರಾಗಿ, ಜನ ಮನಸೂರೆಗೊಳ್ಳುವ ಮಹಾನ್ ಕಲಾವಿದರು. ನಮ್ಮ ಮನೆಯಂಗಳದಲ್ಲಿ ಶ್ರೀ ಕೋಟೆಯವರ ಸಂಗೀತ ನ ಭೂತೋ ನ ಭವಿಷ್ಯತಿ! ಸ್ನೇಹಿತರೊಂದಿಗೆ ಆ ಸಂದರ್ಭ ಅವಿಸ್ಮರಣೀಯ!
ಅನೇಕ ಸ್ನೇಹಿತರನ್ನು ಸಂಪಾದಿಸಿ, ಎಲ್ಲರ ಪ್ರೀತಿಪಾತ್ರರಾಗಿ, ಸದಾ ನಗುಮುಖದ ಸಂಗೀತ ಲಹರಿ ಹಬ್ಬಿಸುತ್ತಿರುವ ಅದ್ಭುತ ಕಲಾವಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ