ಬಂಟ್ವಾಳ: ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜೊತೆಗೆ ಸಂಸ್ಕಾರ ಭರಿತವಾದ ಶಿಕ್ಷಣವನ್ನು ಅಳವಡಿಸಿಕೊಂಡು, ಗುರು ಹಿರಿಯರಿಗೆ ವಿಧೇಯರಾಗಿ, ತಾಳ್ಮೆಯಿಂದ ಸಮಾಜದೊಂದಿಗೆ ಬೆರೆತಾಗ ವ್ಯಕ್ತಿಯಲ್ಲಿ ನಾಯಕತ್ವ ಗುಣ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರೂ ಹಾಗೂ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಅಭಿಪ್ರಾಯ ಪಟ್ಟರು.
ಅವರು ಸರಕಾರಿ ಪದವಿಪೂರ್ವ ಕಾಲೇಜು ಸಿದ್ಧಕಟ್ಟೆ ಇಲ್ಲಿನ 2024 - 25 ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಇತರ ಸಂಘಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಘ ಮೂಲಕ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದರೊಂದಿಗೆ ರಾಜಕೀಯ ರಂಗದಲ್ಲಿ ನಾಯಕರಾಗಲು ಅವಕಾಶ ಸಿಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತನ್ನ ವಿದ್ಯಾರ್ಥಿ ಜೀವನ ಹಾಗೂ ನಿಜ ಜೀವನದಲ್ಲಿ ಎಷ್ಟು ಕಷ್ಟ, ಸವಾಲು ಬಂದರೂ ಅದನ್ನು ಮೆಟ್ಟಿ ಮುಂದೆ ಸಾಗಬೇಕು ಆವಾಗ ತಮ್ಮ ನಿರೀಕ್ಷೆಯ ಮೆಟ್ಟಿಲು ಏರಲು ಸಾಧ್ಯವಾಗುತ್ತೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಯಂತಹ ದುಸ್ಸಾಹಸಕ್ಕೆ ಹೋಗಬಾರದು ಎಂದರು.
ಉದ್ಘಾಟನೆ ಮಾಡಿದ ಮೂಡಬಿದಿರೆ ಶ್ರೀ ಮಹಾವೀರ ಕಾಲೇಜ್ ನ ಪ್ರಾಂಶುಪಾಲರಾದ ಪ್ರೊಫೆಸರ್ ರಮೇಶ್ ಭಟ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯಾವುದೇ ವಿಷಯದಲ್ಲಿ ಆಗಲಿ ಆಸಕ್ತಿ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ, ಆಸಕ್ತಿಯಿಂದ ಅಧ್ಯಯನ ಮಾಡಿದ್ದಲ್ಲಿ ತಾವು ತೆಗೆದುಕೊಂಡ ವಿಷಯದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಮತ್ತು ಸಾಧನೆಯನ್ನು ಮಾಡಬಹುದು.
ಸಂಸ್ಥೆಯ ಪ್ರಾಂಶುಪಾಲರಾದ ಉದಯಕುಮಾರ್ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಶೀನಪ್ಪ ಎನ್ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ವ್ಯವಹಾರ ಅಧ್ಯಯನ ಉಪನ್ಯಾಸಕಿ ಶ್ರೀಮತಿ ರೇಖಾ ಬಾಳಿಗಾ ಬಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ನಾಯಕ ಲತೀಶ್ ಧನ್ಯವಾದಗೈದರು ಹಾಗೂ ಕನ್ನಡ ಉಪನ್ಯಾಸಕ ಸಂಜಯ್ ಬಿ ಎಸ್ ಇವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ