ಯಕ್ಷಗಾನದ ಮೇರು ಕಲಾವಿದ ಕುಂಬಳೆ ಶ್ರೀಧರ ರಾಯರಿಗೆ ಹುಟ್ಟೂರಲ್ಲಿ ನುಡಿನಮನ

Upayuktha
0


ಕುಂಬಳೆ: ತೆಂಕುತಿಟ್ಟು ಯಕ್ಷಗಾನದಲ್ಲಿ ಆರು ದಶಕಗಳ ತಿರುಗಾಟಗೈದು, ತೆಂಕಣ ತವರು ಕುಂಬಳೆಯ ಹೆಸರನ್ನು ಮೆರೆಸಿದ ಯಕ್ಷದಿಗ್ಗಜ ಕುಂಬ್ಳೆ ಶ್ರೀಧರ ರಾಯರ ಅಗಲುವಿಕೆಯ ಹಿನ್ನೆಲೆಯಲ್ಲಿ ಹುಟ್ಟೂರು ಕುಂಬಳೆಯಲ್ಲಿ  ಗೌರವದ ಶ್ರದ್ಧಾಂಜಲಿ ಸಹಿತ ನುಡಿ - ನಮನ ಸಲ್ಲಿಸಲಾಯಿತು.


ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘ ಶೇಡಿಕಾವು ನೇತೃತ್ವದಲ್ಲಿ ಕುಂಬ್ಳೆ ಶೇಡಿಕಾವಿನ ಸಂಘದ ಕಚೇರಿಯಲ್ಲಿ ಆಯೋಜನೆಗೊಂಡ ಶ್ರದ್ಧಾಂಜಲಿ ಸಹಿತ ತಾಳಮದ್ದಳೆಯನ್ನು ವೇ. ಮೂ. ಹರಿನಾರಾಯಣ ಅಡಿಗ ಕುಂಬ್ಳೆ ಹಾಗೂ ನಾರಾಯಣ ಅಡಿಗ ಶೇಡಿಕಾವು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.


ತೆಂಕಣ ತವರನ್ನು ಬೆಳಗಿಸಿದ ಕಲಾವಿದ

ಕುಂಬಳೆ ಶ್ರೀಧರ ರಾಯರು ಕುಂಬ್ಳೆಯ ನೆಲದಿಂದ  1962ರಲ್ಲಿ ತಿರುಗಾಟ ಆರಂಭಿಸಿ ಭರ್ತಿ 62ವರ್ಷಗಳ ಕಲಾಯಾನ ನಡೆಸಿದ ತೆಂಕುತಿಟ್ಟು ತವರಿನ, ಕುಂಬಳೆ ನೆಲದ  ಚಾರಿತ್ರಿಕ ಕಲಾವಿದ. ಅವರ ಸಮಗ್ರ ಕಲಾಯಾನದಲ್ಲಿ ಈ ನೆಲದ ಯಕ್ಷಗಾನದ ಕಲಾಚರಿತೆ ಅಡಗಿದೆ. ಕುಂಬಳೆ ಎಂಬ ಊರಿಗೆ ಮಾನ್ಯತೆ ದಕ್ಕಿರುವುದೇ ಯಕ್ಷಗಾನದ ಇಂಥ ಕಲಾವಿದರ ಕೊಡುಗೆಯಿಂದ. ನಾಡನ್ನು ಬೆಳಗಿಸಿದ  ಮಹನೀಯ ಕಲಾವಿದರನ್ನು ನಾಡು ಆದರದಿಂದ ಸ್ಮರಿಸಿ ಗೌರವಿಸಬೇಕು.ಆದರೇಕೋ ಇಂದೀಗ ಯಕ್ಷಗಾನದ ಮೂಲನೆಲದಲ್ಲೇ ಕಲಾಸಂಸ್ಕೃತಿಯ ಪೋಷಣೆ, ಪ್ರೋತ್ಸಾಹ, ಗೌರವ ಕುಂದಿರುವುದು ಸಲ್ಲಕ್ಷಣವಲ್ಲ ಎಂದು ಸಂಸ್ಮರಣಾ ಭಾಷಣ ಮಾಡಿದ 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಸಂಪಾದಕ, ಖ್ಯಾತ ಲೇಖಕ ಎಂ.ನಾ. ಚಂಬಲ್ತಿಮಾರ್ ನುಡಿದರು.


ಬ್ರಹ್ಮವಾಹಕ, ವೇ.ಮೂ. ಹರಿನಾರಾಯಣ ಅಡಿಗ ಕುಂಬಳೆ, ಒಡನಾಡಿ ಅರ್ಥಧಾರಿ ಪಕಳಕುಂಜ ಶ್ಯಾಂಭಟ್, ಕಲಾವಿದ ದಿವಾಣ ಶಿವಶಂಕರ ಭಟ್, ಶ್ರೀಧರ ರಾಯರ ಸಹೋದರ, ಕಲಾವಿದ ಕುಂಬ್ಳೆ ಗೋಪಾಲ ಶ್ರೀಧರ ರಾಯರ ಮೆಲುಕುಗಳೊಂದಿಗೆ ನುಡಿನಮನ ಸಲ್ಲಿಸಿದರು.


ನುಡಿತೋರಣದ ಮಾತಿನಮಂಟಪ:

ಶ್ರೀಧರ ರಾಯರಿಗೂ ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘಕ್ಕೂ ಸುದೀರ್ಘವಾದ ಹೃದ್ಯ, ಅವಿನಾಭಾವ ಸಂಬಂಧ.ಈ ಹಿನ್ನೆಲೆಯಲ್ಲಿ ಆಯೋಜಿಸಿದ ನುಡಿನಮನ ತಾಳಮದ್ದಳೆಯಲ್ಲಿ ಮೊದಲಿಗೆ "ಜಟಾಯುಮೋಕ್ಷ" ಆಖ್ಯಾನ ಅನಾವರಣಗೊಂಡಿತು.


ಮುಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀಶ ಬೇಂಗ್ರೋಡಿ, ವೆಂಕಟರಾಜ ಕುಂಟಿಕಾನ,ಶ್ರೀಹರಿ ಮಯ್ಯ ಮಧೂರು, ಪುಂಡಿಕಾಯಿ ರಾಜೇಂದ್ರ ಭಟ್,ಮುರಳೀಧರ ಶೇಡಿಕಾವು ಹಾಗೂ ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಂಭಟ್, ಬಾಲಕೃಷ್ಣ ಆಚಾರ್ಯ ನೀರ್ಚಾಲು, ಅಶೋಕ ಕುಂಬಳೆ, ಪ್ರತಾಪ ಕುಂಬಳೆ, ಸದಾಶಿವ ಗಟ್ಟಿ ನಾಯ್ಕಾಪು ಭಾಗವಹಿಸಿದರು. ಎರಡನೇ ಆಖ್ಯಾನ "ವಾಲಿಮೋಕ್ಷ"ದ ಹಿಮ್ಮೇಳದಲ್ಲಿ ತಲ್ಪನಾಜೆ ಶಿವಶಂಕರ ಭಟ್- ಲಕ್ಷ್ಮೀಶ ಬೇಂಗ್ರೋಡಿ ಅವರ ದ್ವಂದ ಭಾಗವತಿಕೆ ಸಹಿತ ಸುರೇಶ ಆಚಾರ್ಯ ನೀರ್ಚಾಲು, ವಸಂತ ಭಟ್ ಭಾಗವತಿಕೆ ಮಾಡಿದರು. ಕೃಷ್ಣಮೂರ್ತಿ ಪಾಡಿ, ಪುಂಡಿಕೈ, ಹಾಗೂ ದಿವಾಣ ಶಿವಶಂಕರ ಭಟ್, ಗೋಪಾಲ ನಾಯ್ಕ್ ಸೂರಂಬೈಲು, ಮಜಲು ಉದಯ ಶಂಕರ ಭಟ್, ಶಿವರಾಮ ಭಂಡಾರಿ ಕಾರಿಂಜ, ಸದಾಶಿವ ಮುಳಿಯಡ್ಕ ಪಾಲ್ಗೊಂಡರು.


ಸಂಘದ ಸಂಚಾಲಕ ಅಶೋಕ ಕುಂಬಳೆ ಸ್ವಾಗತಿಸಿದರು. ಸುಜನಾ ಶಾಂತಿಪಳ್ಳ ವಂದಿಸಿದರು. ಶ್ರೀಧರ ರಾವ್ ಅವರ ಬಾಲ್ಯ ಒಡನಾಡಿ, ಅಭಿಮಾನಿ ವಿಶ್ವನಾಥ ರೈ ಮಾನ್ಯ ವಿಶೇಷ ಸಹಕಾರವನ್ನಿತ್ತರು. ಕುಂಬಳೆಯ ಗಣ್ಯರನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top