ತೆರಿಗೆ ಏರಿಕೆ ವಿರುದ್ಧದ ಆಕ್ರೋಶದ ಹಿಂದಿನ ಸತ್ಯದಿಂದ ದೂರ ಸರಿಯುತ್ತಿರುವ ಆಳುವ ಪಕ್ಷಗಳು

Upayuktha
0


ಕೇಂದ್ರದ ಬಹು ನಿರೀಕ್ಷಿತ ಬಜೆಟ್‌ ಮುಗಿದು ಎಲ್ಲ ರೀತಿಯ ಚರ್ಚೆ, ಟೀಕೆ, ತಮಾಷೆ ಮಾಡಿ ಮುಗಿದಿದೆ ಎಂದು ಕೊಳ್ಳುತ್ತೇನೆ. ಉದ್ದೇಶಪೂರ್ವಕವಾಗಿಯೇ ಎರಡು ದಿನ ಬಿಟ್ಟು ಬರೆಯೋಣ ಎಂದು ಸುಮ್ಮನಿದ್ದೆ. ಬಜೆಟ್‌ ಬಗ್ಗೆ ವಿಶ್ಲೇಷಣೆ ಬರೆಯಲು ನಾನು ಫೇಸ್‌ಬುಕ್‌ ಅಥವಾ ಇನ್ಯಾವುದೇ ವೇದಿಕೆಯ ಆರ್ಥಿಕ ತಜ್ಞನೂ ಅಲ್ಲ. ಲಕ್ಷಗಟ್ಟಲೇ ಕೋಟಿಯ ಸಾಲ, ಬಡ್ಡಿ ಹಾಗೂ ಇತರ ಲೆಕ್ಕಾಚಾರಗಳು ನನ್ನ ತಲೆಯೊಳಗೂ ಹೋಗುವುದಿಲ್ಲ. ಆದಾಗ್ಯೂ ಈ ದೇಶದ ಒಬ್ಬ ಸಾಮಾನ್ಯ ಪ್ರಜೆಯಾಗಿ, ದಶಕಗಳಿಂದ ಸರ್ಕಾರದ ಪರ, ವಿರುದ್ಧ ಮತ ಚಲಾಯಿಸಿದ ಮತದಾರನಾಗಿ ಒಂದಿಷ್ಟು ವಿಚಾರವನ್ನು ಹಂಚಿಕೊಳ್ಳಬೇಕೆಂದು ಅನಿಸುತ್ತಿದೆ.


ಯಾವುದೇ ಆದಾಯ ತೆರಿಗೆ ಕಟ್ಟದ ವೃತ್ತಿಯ ಆರಂಭಿಕ ದಿನಗಳಿಂದ, ಈಗ ಒಂದಿಷ್ಟು ತೆರಿಗೆ ಕಟ್ಟುವ ಮಟ್ಟಿಗೆ ಜೀವನವನ್ನು ನೋಡಿದ್ದೇನೆ, ಅನುಭವಿಸಿಕೊಂಡು ಬಂದಿದ್ದೇನೆ. ಹೀಗಾಗಿ ನನ್ನ ಆದಾಯ ತೆರಿಗೆಯನ್ನು ಕಡಿಮೆ ಮಾಡಿ, ನನಗೇನೋ ಉಚಿತವಾಗಿ ಒಂದಿಷ್ಟು ಸವಲತ್ತುಗಳನ್ನು ನೀಡಿ ಎಂದು ಸರ್ಕಾರದ ಮುಂದೆ ಗೋಗರೆಯುವ ಸ್ಥಿತಿಯಲ್ಲಿ ನಾನಿಲ್ಲ. ಹೀಗಾಗಿ ದುಡಿಯುವ ವರ್ಗದಿಂದಲೇ ದೇಶ ಕಟ್ಟಬೇಕಿದೆ ಎನ್ನುವ ಪುಕ್ಕಟೇ ಭಾಷಣವನ್ನು ದಯವಿಟ್ಟು ಮಾಡಬೇಡಿ. ಶೇ.50ರಷ್ಟು ತೆರಿಗೆ ಕಟ್ಟಿಯೆಂದರು ಕೂಡ ನಾನು ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಈ ತೆರಿಗೆದಾರನಾಗಿ ನಾನು ಬಯಸುವುದು ಏನು ಎನ್ನುವ ಕನಿಷ್ಠ ಪ್ರಜ್ಞೆಯನ್ನು ಆಳುವ ಸರ್ಕಾರ ಹೊಂದಿರಬೇಕಾಗುತ್ತದೆ. ನರೇಂದ್ರ ಮೋದಿಗೆ 300 ರುಚಿ ಅನುಭವಿಸಲು ಬಿಟ್ಟು, 400ರ ಅಟ್ಟವನ್ನು ತೋರಿಸಿ 240ಕ್ಕೆ ಏಕೆ ಇಳಿಸಿದರು ಹಾಗೂ ರಾಹುಲ್‌ ಗಾಂಧಿಗೆ ನೂರರ ಗಡಿ ದಾಟಲು ಇನ್ನೂ ಅಸಾಧ್ಯವಾಗಿದ್ದೇಕೆ ಎನ್ನುವುದನ್ನು ಅರ್ಥೈಸಿಕೊಳ್ಳದಿರುವವರೆಗೆ ಪ್ರಶ್ನಿಸಿದವರೆಲ್ಲ ಅಜ್ಞಾನಿಗಳು, ದೇಶ ವಿರೋಧಿಗಳಂತೆ ಕಾಣಿಸುವುದು ಸಾಮಾನ್ಯ.


2014 ಹಾಗೂ 2019ರಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಮತ ಹಾಕಿರುವ ಕಾರಣ ಎಲ್ಲರಿಗೂ ಸ್ಪಷ್ಟವಾಗಿತ್ತು. ನಮ್ಮ ಜೀವನವನ್ನು ಸರಳಗೊಳಿಸುವ ಕನಸನ್ನು ಮೋದಿ ಕಟ್ಟಿಕೊಟ್ಟಿದ್ದರು. ಅದರ ಜತೆಗೆ ಭಾರತೀಯರ ರಕ್ತವನ್ನು ಹೀರುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮಹದಾಸೆ ಎಲ್ಲರಲ್ಲಿತ್ತು. ಆದರೆ ಇಂದಿಗೂ ಭಾರತದ ಬಹುತೇಕ ಮಧ್ಯಮ ವರ್ಗದ ಆಕ್ರೋಶವನ್ನು ಸರ್ಕಾರ ಅಥವಾ ಆಳುವ ಪಕ್ಷಗಳು ಅರ್ಥೈಸಿಕೊಂಡಿಲ್ಲ. ಬಿಜೆಪಿಯ ಐಟಿ ಸೆಲ್‌ನ ಒಂದಿಷ್ಟು ಬುದ್ಧಿವಂತರು ಅಂದುಕೊಂಡ್ಹಾಗೆ ಮಧ್ಯಮ ವರ್ಗದವರು ತೆರಿಗೆ ರಹಿತ, ಪುಕ್ಕಟೆ ಜೀವನವನ್ನು ಬಯಸುತ್ತಿಲ್ಲ. ಹಾಗೆಯೇ ಕಾಂಗ್ರೆಸ್‌ನ ಬುದ್ಧಿವ್ಯಾದಿಗಳು ಅರಿತುೊಂಡ ರೀತಿ ಪುಕ್ಕಟೆ ಯೋಜನೆಗಳ ಹಿಂದೆಯೂ ಬಿದ್ದಿಲ್ಲ. ಒಂದೊಮ್ಮೆ ಅದು ಸತ್ಯವಾಗಿದ್ದರೆ, ರಾಹುಲ್‌ ಗಾಂಧಿಯ ಇಂಡಿ ಒಕ್ಕೂಟಕ್ಕೆ ೩೦೦+ ಸ್ಥಾನಗಳು ದೊರೆಯುತ್ತಿದ್ದವು ಹಾಗೂ ಬಿಜೆಪಿಯ ಸ್ಥಿತಿ ಇನ್ನಷ್ಟು ಹೀನಾಯವಾಗಿರುತ್ತಿತ್ತು. ಈ ದೇಶದ ಯಾವುದೇ ಪ್ರಜ್ಞಾವಂತ ಪ್ರಜೆಯೂ ಅನರ್ಹರಿಗೆ ʼಬಿಟ್ಟಿ ಭಾಗ್ಯʼವನ್ನು ಒಪ್ಪುವುದಿಲ್ಲ. ಆದರೆ ನಾವು ತೆರಿಗೆದಾರರು ಬಯಸುವುದೇ ಬೇರೆಯ ವಿಷಯ. ಸರ್ಕಾರ ಹಾಗೂ ಆಡಳಿತ ಪಕ್ಷಗಳಿಗೆ ಅಧಿಕಾರದ ಚುಕ್ಕಾಣಿ ಮುಂದೆ ಇದ್ಯಾವುದು ಕಾಣಿಸುವುದೇ ಇಲ್ಲ.


ತೆರಿಗೆದಾರನಾಗಿ ಬಯಸುವುದೇನು?

* ಶೈಕ್ಷಣಿಕ ಸೆಸ್‌ ಎಂದು ಹೊಸ ಲೂಟಿಗೂ ತಯಾರಿದ್ದೇನೆ. ಆದರೆ ನಾವು ಬಯಸುವುದು, ನಮ್ಮ ಮನೆಯ ಮಕ್ಕಳನ್ನು ಓದಿಸಲು ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆ. ಒಂದೊಮ್ಮೆ ಇಂತಹ ಶಾಲೆ ಕಟ್ಟಲು ಬೇಜವಾಬ್ದಾರಿ ಸರ್ಕಾರಕ್ಕೆ ಅಸಾಧ್ಯವಾದರೆ, ಖಾಸಗಿ ಶಾಲೆಗಳಲ್ಲಿನ ಹಗಲು ದರೋಡೆ ನಿಯಂತ್ರಿಸುವ ಕಾನೂನು.

* ತೆರಿಗೆ ಕಟ್ಟಿದ ಬಳಿಕವೂ ರಸ್ತೆಗಳಿಗೂ ಟೋಲ್‌ ಕಟ್ಟಲು ಯಾವುದೇ ಸಮಸ್ಯೆಯಿಲ್ಲ. ಆದರೆ ನಾವು ಬಯಸುವುದು ಉತ್ತಮ ಗುಣಮಟ್ಟದ ರಸ್ತೆಗಳನ್ನು.

* ಆರೋಗ್ಯ ವಿಮೆ ಹಾಗೂ ಔಷಧಿಗಳಿಗೆ ಚಿನ್ನ, ವಜ್ರಕ್ಕಿಂತ ಹೆಚ್ಚಿನ ಜಿಎಸ್‌ಟಿ ಕೊಡಲು ತಯಾರಿದ್ದೇವೆ. ಆದರೆ ನಾವು ಬಯಸುವುದು ಸರ್ಕಾರದಿಂದ ಉತ್ತಮ ಆಸ್ಪತ್ರೆ ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು.

* ನಮ್ಮ ವಾಹನಗಳಿಗೆ ಲಕ್ಷಗಟ್ಟಲೇ ರಸ್ತೆ ತೆರಿಗೆ, ಇಂಧನಕ್ಕೆ ಶೇ.50+ ತೆರಿಗೆ ಕೊಡಲು ಸಿದ್ಧರಿದ್ದೇವೆ. ಆದರೆ ನಮ್ಮ ಕನಸಿರುವುದು ಹೊಂಡ ರಹಿತ ಸುರಕ್ಷಿತ ರಸ್ತೆ ಮಾತ್ರ.

* ನಾವು ಖಾಸಗಿ ಕಂಪೆನಿಯಲ್ಲಿ ಅಥವಾ ಸ್ವಂತ ಶಕ್ತಿಯಿಂದ ದುಡಿದು, ನಮ್ಮ ನಿವೃತ್ತಿ ಜೀವನಕ್ಕೆ ನಾವೇ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ತೆರಿಗೆ ಹೊರೆಯನ್ನು ಒಂದು ಜವಾಬ್ದಾರಿಯನ್ನಾಗಿ ಸ್ವೀಕರಿಸಲು ಸಿದ್ಧವಿದ್ದೇವೆ. ಆದರೆ ನಾವು ಸರ್ಕಾರಿ ಕಚೇರಿಗೆ ಹೋದಾಗ ನಿಮ್ಮ ಆಡಳಿತ ವರ್ಗವು ನೆಪ ಹೇಳದೇ, ಲಂಚ ಕೇಳದೇ, ಜನಪರವಾಗಿ, ನ್ಯಾಯಯುತವಾಗಿ ಕೆಲಸ ಮಾಡುವುದನ್ನು ಮಾತ್ರ ಬಯಸುತ್ತೇವೆ.

* ನೀರು ಹರಿದಂತೆ ತೆರಿಗೆ ಹಣವನ್ನು ಪ್ರಶ್ನಿಸದೇ ಕೊಡಲು ತಯಾರಿದ್ದೇವೆ. ಆದರೆ ನಿಮ್ಮ ಆಸುಪಾಸಿನಲ್ಲಿ ನೀರಿನಂತೆ ಹರಿಯುತ್ತಿರುವ ಲಂಚದ ಹೊಳೆಗೆ ಕಡಿವಾಣ ಹಾಕುವುದನ್ನು ಬಯಸುತ್ತೇವೆ.

* ನೀವು ಮಂಡಿಸುವ ಬಜೆಟ್‌ನ್ನು ಪ್ರಶ್ನಿಸದೇ ಯಥಾವತ್ತು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ ಮೂರು ಬಿಟ್ಟವರಂತೆ ಸರ್ಕಾರದ ಖಜಾನೆಯನ್ನು ಲೂಟಿ ಮಾಡಲು ಅವಕಾಶ ಕೊಡದಿರುವುದನ್ನು ನೋಡಲು ಇಷ್ಟಪಡುತ್ತೇವೆ.


* ನೀವು ಹೇಳಿದಷ್ಟು, ಕೇಳಿದಷ್ಟು ಎಲ್ಲ ರೀತಿಯ ತೆರಿಗೆ ಕೊಡಲು ನೂರಕ್ಕೆ ನೂರರಷ್ಟು ಇರಾದೆಯಿದೆ. ಆದರೆ ಸಾಮಾಜಿಕ ಭದ್ರತೆ ಹೆಸರಲ್ಲಿ ಅನರ್ಹರಿಗೆ ಉಚಿತ ಯೋಜನೆಗಳನ್ನು ಹಂಚುವುದನ್ನು ನಿಯಂತ್ರಿಸಿ ಎಂದಷ್ಟೇ ಕೇಳುತ್ತೇವೆ.


* ನಾವು ಉದ್ಯೋಗಸ್ಥ ಆದಾಯ ತೆರಿಗೆದಾರರು ಯಾವುದೇ ಅಡೆತಡೆಯಿಲ್ಲದ ಆಧಾರ್‌-ಪಾನ್‌ ಜೋಡಣೆ ಮಾಡಿ ಎಲ್ಲವನ್ನೂ ಕಾನೂನು ಬದ್ಧವಾಗಿ ವ್ಯವಹಾರ ಮಾಡುತ್ತಲೇ ಬಂದಿದ್ದೇವೆ. ಅದೇ ರೀತಿ ಈ ದೇಶದ ಲೂಟಿಕೋರರ ಬೇನಾಮಿ ಆಸ್ತಿಗಳಿಗೂ ಇದೇ ವೇಗದಲ್ಲಿ ಆಧಾರ್‌-ಪಾನ್‌ ಜೋಡಣೆ ಆಗುವುದನ್ನು ಇಚ್ಛಿಸುತ್ತೇವೆ. ಕೃಷಿ ಆದಾಯದಿಂದ ಸಾಮ್ರಾಜ್ಯ ಕಟ್ಟುವವರ ಅಸಲಿ ಮುಖ ಬಯಲಾಗುವುದನ್ನು ನೋಡಬಯಸುತ್ತೇವೆ. 


* ಚಿನ್ನವಷ್ಟೇ ಅಲ್ಲ, ನಾಳೆ ಕಿರಾಣಿ ಅಂಗಡಿಯಲ್ಲಿ ಸಾಮಾನು ಖರೀದಿಗೂ ಪಾನ್‌-ಆಧಾರ‌ ಕಾರ್ಡ್‌ ಕೊಡಲು ಸಿದ್ಧರಿದ್ದೇವೆ. ಆದರೆ ಲೂಟಿಕೋರರ ಐಷಾರಾಮಿ ಖರೀದಿಗೂ ಇದು ಅನ್ವಯವಾಗುವುದನ್ನು ಬಯಸುತ್ತೇವೆ.


ಹೀಗೆ ಪಟ್ಟಿ ಮಾಡಿದರೆ ನೂರಾರು ಅಂಶಗಳು ಸೇರಿಸಬಹುದು, ನೀವು ಓದುಗರು ಕೂಡ ನಿಮ್ಮ ಆಸೆಯನ್ನು ಸೇರಿಸಬಹುದು. ಇಂತಹ ಕಾರಣದಿಂದಲೇ ನೋಟು ಅಮಾನ್ಯೀಕರಣ ಸೇರಿ ಸಾಕಷ್ಟು ಸುಧಾರಣಾ ಕ್ರಮವನ್ನು ದೊಡ್ಡ ಆಸೆಯಿಂದ ಭಾರತದ ಮಧ್ಯಮ ವರ್ಗವು ಮೋದಿ ಸರ್ಕಾರದ ಜತೆಗಿತ್ತು. ಶಾಲೆಗಳ ಶುಲ್ಕ ಕಡಿಮೆಯಾಗುತ್ತದೆ, ಕಪ್ಪು ಹಣಕ್ಕೆ ತೆರೆ ಬೀಳಲಿದೆ, ರೀಯಲ್‌ ಎಸ್ಟೇಟ್‌ ಉದ್ಯಮವು ನಿಜವಾದ ಮಾರುಕಟ್ಟೆ ದರಕ್ಕೆ ಬರಲಿದೆ ಎಂದೆಲ್ಲ ನಂಬಲಾಗಿತ್ತು. ಆದರೆ ಇದ್ಯಾವುದೂ ಸತ್ಯವಾಗದ ಕಾರಣದಿಂದ ಇಂದು ಮಧ್ಯಮ ವರ್ಗದ ಆಕ್ರೋಶ ಹೆಚ್ಚುತ್ತಲೇ ಇದೆ. ಮಧ್ಯಮ ವರ್ಗವು ಬಯಸುತ್ತಿರುವುದು ಈ ಮೇಲೆ ಹೇಳಿದ ಸುಧಾರಣಾ ಕ್ರಮಗಳೇ ಹೊರತು, ಇನ್ಯಾವುದೇ ಪುಕ್ಕಟೆ ಯೋಜನೆಗಳನ್ನಲ್ಲ. ಮೋದಿ ಬದಲು ರಾಹುಲ್ ಬಜೆಟ್ ಮಂಡಿಸಿದ್ದಾರೆ ಏನಾಗುತ್ತಿತ್ತು ಎಂದು ಒಮ್ಮೆ ಆಲೋಚಿಸಿಕೊಂಡು, ಇದಕ್ಕೆ ತೃಪ್ತಿ ಪಡಿ ಎಂದು ಬುದ್ಧಿವಾದ ಹೇಳುವವರಿದ್ದಾರೆ. ಮೋದಿ ಹಾಗೂ ರಾಹುಲ್ಗೆ ವ್ಯತ್ಯಾಸವಿದೆ ಎನ್ನುವ ಕಾರಣಕ್ಕೆ ಮೂರನೇ ಬಾರಿಗೆ ಅಧಿಕಾರ ಕೊಟ್ಟಿರುವುದನ್ನು ಮರೆಯಬೇಡಿ. ಹೀಗಾಗಿ ಪ್ರಶ್ನಿಸಿದ ಮಧ್ಯಮ ವರ್ಗವನ್ನು ʼಬುಲ್‌ಶಿಟ್‌ʼ ಎಂದು ಆಡಿಕೊಳ್ಳುವುದನ್ನು ಮೊದಲು ನಿಲ್ಲಿಸಿ. ಇಲ್ಲವಾದಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಎಲ್ಲವೂ ತಲೆಕೆಳಗೆ ಮಾಡುವ ತಾಕತ್ತು ಇದೇ ವರ್ಗಕ್ಕಿದೆ. 


ಕೊನೆಯದಾಗಿ: ನಾನಿಲ್ಲಿ ಉಲ್ಲೇಖಿಸಿರುವ ಅಂಶವು ನರೇಂದ್ರ ಮೋದಿ ಸರ್ಕಾರಕ್ಕೆ ಸೀಮಿತವಾಗಿಲ್ಲ. ಕೇಂದ್ರದಿಂದ ಹಿಡಿದು, ನಮ್ಮ ಪಂಚಾಯತ್‌ವರೆಗೂ ಇದೇ ರೀತಿಯ ಅಸಡ್ಡೆ ಹಾಗೂ ಅಹಂಕಾರವೂ ಆಳುವವರ ಮನದಲ್ಲಿದೆ. ಇದೇ ಕಾರಣದಿಂದ ಜನರಲ್ಲಿ ಅಸಹನೆ ಬೇರೂರುತ್ತಿದೆ. ನೀವು ಹೇಳಿದಷ್ಟು ತೆರಿಗೆ ಕೊಡಲು ನಾವು ಸಿದ್ಧರಿದ್ದೇವೆ, ಆದರೆ ನಾವು ಕೇಳಿದ ಅರ್ಧದಷ್ಟು ಅಥವಾ ನೀವು ನೀಡಿದ ಭರವಸೆಯ ಶೇ.೧೦ರಷ್ಟಾದರೂ ಕೆಲಸ ಮಾಡಿ ತೋರಿಸಿ. ಆಗ ನಾವು ಇನ್ನಷ್ಟು ಖುಷಿಯಿಂದ ಹಬ್ಬ ಮಾಡಿಕೊಂಡು ತೆರಿಗೆ ಕಟ್ಟುತ್ತೇವೆ. ಆಗ ಆ ತೆರಿಗೆ ಹಣವು ನಮ್ಮ ಶಾಪದಿಂದ ಮುಕ್ತವಾಗಿರುತ್ತದೆ.



- ರಾಜೀವ ಹೆಗಡೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top