ಹಾಸನ: ಶಾಲೆಯ ಎಲ್ಲಾ ಮಕ್ಕಳ ಹಿತರಕ್ಷಣೆ ಶಿಕ್ಷಕರ ಮತ್ತು ಪೋಷಕರ ಸಮಾನ ಜವಾಬ್ದಾರಿಯಾಗಿದೆ. ಮಗು ಬೆಳಿಗ್ಗೆ ಶಾಲೆಗೆ ಬಂದಾಗಿನಿಂದ ಹಿಂತಿರುಗಿ ಸಂಜೆ ಮನೆಗೆ ಹೋಗುವವರೆಗೂ ಶಿಕ್ಷಕರು ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳುವ ಜೊತೆ ಜೊತೆಗೆ ಮಗುವಿನ ಕಲಿಕೆ, ಆರೋಗ್ಯ, ಬೌದ್ಧಿಕ ಸಾಮರ್ಥ್ಯ ಬೆಳವಣಿಗೆಯತ್ತ ಗಮನ ಹರಿಸುತ್ತಿದ್ದಾರೆ ಎಂದು ಉಪಪ್ರಾಂಶುಪಾಲ ಮಂಜುನಾಥ್ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರಧಾನ) ಪ್ರೌಢಶಾಲಾ ವಿಭಾಗ ಇಲ್ಲಿ ಆಯೋಜನೆಗೊಂಡಿದ್ದ ಮಾಸಿಕ ಶಿಕ್ಷಕ - ಪೋಷಕರ ಸಭೆ ಮತ್ತು ತಾಯಂದಿರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಕರು ಎಷ್ಟು ಜವಾಬ್ದಾರಿಯಿಂದ ಮಗುವಿನ ಕಡೆ ನಿಗಾ ವಹಿಸುತ್ತಾರೋ ಅಷ್ಟೇ ಪ್ರಮಾಣದಲ್ಲಿ ಪೋಷಕರೂ ಸಹ ತಮ್ಮ ಮಕ್ಕಳ ಕಡೆ ಗಮನ ಹರಿಸಿ ಮಕ್ಕಳನ್ನು ಅಧ್ಯಯನದಲ್ಲಿ ತೊಡಗಿಸಿದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ನಾವು ಮನುಜರು ಎಂಬ ವಿಶ್ವ ಮಟ್ಟದ ಪರಿಕಲ್ಪನೆಯನ್ನು ಮೂಡಿಸಬೇಕು ಎಂದರು.
ಶಾಲೆಯ ಸಹ ಶಿಕ್ಷಕರಾದ ಕೆ.ಎನ್.ಚಿದಾನಂದ ರವರು ಮಾತನಾಡಿ ಹತ್ತನೇ ತರಗತಿ ಪರೀಕ್ಷೆಗಳು ಬಹಳಷ್ಟು ಕಟ್ಟುನಿಟ್ಟಾಗಿ ನಡೆಯುತ್ತವೆ. ವಿದ್ಯಾರ್ಥಿಗಳು ಶಿಸ್ತುಬದ್ಧ ಅಧ್ಯಯನದ ಮೂಲಕ ವರ್ಷದ ಪ್ರಾರಂಭದಿಂದಲೇ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆ ಮೂಲಕ ಶಾಲೆಯೂ ಗುಣಮಟ್ಟದ ಫಲಿತಾಂಶ ಪಡೆಯುತ್ತದೆ. ಅಧ್ಯಯನದ ಜೊತೆ ಜೊತೆಗೆ ಮಕ್ಕಳಿಗೆ ಕ್ರೀಡೆಗಳು , ಸಂಗೀತದ ಕ್ಷೇತ್ರಗಳು ಉತ್ತಮ ಫಲಿತಾಂಶಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಒಟ್ಟಾರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ ನಮ್ಮ ಶಿಕ್ಷಣದ ಮೂಲ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ಉಚಿತ ಸೌಲಭ್ಯಗಳಾದ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆ, ಕ್ಷೀರಭಾಗ್ಯ, ಮಧ್ಯಾನ್ನದ ಬಿಸಿಯೂಟ ಯೋಜನೆಗಳು ನಿರಂತರವಾಗಿ ಅನುಷ್ಠಾನದಲ್ಲಿವೆ. ಅನುಭವಿ ಶಿಕ್ಷಕರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಲ್ಲಿ ಕಲಿಕಾ ಉತ್ಸಾಹ ಹೆಚ್ಚಿಸಲು ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಶಾಲೆಯ ಹಿರಿಯ ಶಿಕ್ಷಕರಾದ ಹೆಚ್. ಪಿ. ಮಂಜುಳ ಮಾತನಾಡಿ, ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿ ಸರಿಯಾದ ಮಾರ್ಗಕ್ಕೆ ತರುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳ ಕಲಿಕೆಯ ವಿಚಾರದಲ್ಲಿ ಪೋಷಕರು ಮುಕ್ತವಾಗಿ ಶಿಕ್ಷಕರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿಕೊಳ್ಳುವುದರಿಂದ ಮಕ್ಕಳ ಕಲಿಕೆಯಲ್ಲಿ ಧನಾತ್ಮಕ ಬದಲಾವಣೆ ಕಂಡುಬರುತ್ತದೆ. ಎಂದು ಶಾಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಧನಾತ್ಮಕ ಬೆಳವಣಿಗೆಯ ನಿದರ್ಶನಗಳನ್ನು ಪ್ರಸ್ತಾಪಿಸಿದರು.
ಏತನ್ಮಧ್ಯೆ 2024-25 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗರತ್ನ ಮತ್ತು ಸದಸ್ಯರು, ವಿಜ್ಞಾನ ಶಿಕ್ಷಕರಾದ ಪಿ. ಮಧು, ಗಣಿತ ಶಿಕ್ಷಕರಾದ ಎಸ್. ಕೆ. ಪೂರ್ಣಿಮಾ, ಆಂಗ್ಲ ಭಾಷಾ ವಿಷಯ ಶಿಕ್ಷಕರಾದ ಎಂ.ಆರ್. ರಂಗಾಮಣಿ, ಸಮಾಜ ವಿಜ್ಞಾನ ಶಿಕ್ಷಕರಾದ ಚಿದಾನಂದ, ಉರ್ದು ಭಾಷಾ ವಿಷಯ ಶಿಕ್ಷಕರಾದ ತೈಬಾ ಕೌಸರ್, ಅತಿಥಿ ಶಿಕ್ಷಕರಾದ ಚಾಂದಿನಿ ರವರು ಹಾಜರಿದ್ದು ಪೋಷಕರೊಂದಿಗೆ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸಿದರು. ಹಿಂದಿ ಭಾಷಾ ಶಿಕ್ಷಕರಾದ ಎ.ವಿ.ಗೀತಾರಾಣಿ ಯವರು ಸರ್ವರನ್ನು ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ