ಉಡುಪಿ: ಈಗಾಗಲೇ ಶ್ರೀಕೃಷ್ಣನಿಗೆ ಗೀತಾಧ್ಯಾಯ ಭಾವ ಪರಿಚಯ ಕೃತಿಯನ್ನು ಸಮರ್ಪಿಸಿರುವ ನಾವು ಗೀತಾನ್ವೇಷಣೆಯ ಸಂಕಲ್ಪವನ್ನು ಮಾಡಿದ್ದೇವೆ. ನೈಜವಾದ ಗೀತಾಸ್ವರೂಪವನ್ನು ಸಜ್ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಗೀತಾಪಾಠ-ಪ್ರವಚನವನ್ನು ಪ್ರಾರಂಭಿಸುತ್ತಿದ್ದೇವೆ. ಶ್ರೀ ಮಧ್ವಾಚಾರ್ಯರು ಕರುಣಿಸಿರುವ ಭಾಷ್ಯದ ನೆರಳಲ್ಲಿ ಹೊಸ ದೃಷ್ಟಿಕೋನದಿಂದ ವಿಮರ್ಶಾತ್ಮಕವಾದ ಪಾಠವನ್ನು ಸಂಕಲ್ಪಿಸಿದ್ದೇವೆ ಎಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಹೇಳಿದರು.
ಶ್ರೀಕೃಷ್ಣನು ಗೀತೆಯಲ್ಲಿ ತಿಳಿಸಿದಂತೆ ಗೀತೆಯ ಉಪದೇಶವನ್ನು ಮೊದಲು ಸ್ವೀಕರಿಸಿದವನು ಸೂರ್ಯ. "ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಂ" ಎಂದು. ಅದಕ್ಕೆ ಸಂವಾದಿಯಂಬಂತೆ ಪಾಠದ ಮೊದಲ ದಿನವೇ ಶ್ರೀಕೃಷ್ಣ "ಸೂರ್ಯ ಪಾರ್ಥಸಾರಥಿ" ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾನೆ. ಆದ್ದರಿಂದ ಶ್ರೀಕೃಷ್ಣನ ಪರಮಾನುಗ್ರಹದಿಂದ ಪಾಠವು ನಿರ್ವಿಘ್ನವಾಗಿ ನಡೆಯಲಿ ಎಂದು ಶ್ರೀಗಳು ಪ್ರಾರ್ಥಿಸಿದರು.
ವಿಶ್ವ ಗೀತಾ ಪರ್ಯಾಯದ ಅವಧಿಯಲ್ಲಿ ಹಮ್ಮಿಕೊಂಡಿರುವ ಜ್ಞಾನ ಯಜ್ಞದ ಅಂಗವಾಗಿ ಭಗವದ್ಗೀತಾ ಪಾಠವನ್ನು ಸರ್ವಜ್ಞ ಪೀಠದಿಂದ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಉಪಸ್ಥಿತರಿದ್ದರು. ಶತಾವಧಾನಿಗಳಾದ ಉಡುಪಿ ರಾಮನಾಥ ಆಚಾರ್ಯ, ಡಾ. ಬಿ.ಗೋಪಾಲಾಚಾರ್ಯ, ವಿದ್ವಾನ್ ವೇದವ್ಯಾಸ ಪುರಾಣಿಕ್, ಮುಂತಾದವರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ